ಬೆಂಗಳೂರು: ರೈನ್‌ಬೋ ಲೇಔಟ್‌ನಲ್ಲಿ ನಡೆಸಲಾದ ಒತ್ತುವರಿ ತೆರವು ಮಾಡಲು ನೀಡಲಾಗಿದ್ದ 7 ದಿನಗಳ ಗಡುವುದು ಮುಗಿದಿದೆ. ಆದರೆ ಬಿಬಿಎಂಪಿ ಕಡೆಯಿಂದ ಯಾವುದೇ ಕಾರ್ಯಾಚರಣೆ ಕಾಣಿಸುತ್ತಿಲ್ಲ. ಬಡವರ ಮನೆಗಳಿಗೆ ಬುಲ್ಡೋಜರ್ ನುಗ್ಗಿಸಿದಂತೆ, ವಿಲ್ಲಾಗಳಿಗೂ ನುಗ್ಗಿಸುತ್ತಾರೆಯೇ ಎಂಬುದು ಈಗ ಪ್ರಶ್ನೆಯಾಗಿದೆ.
ರೈನ್ ಬೋ ಡ್ರೈವ್ ಲೇಔಟ್‌ನ 13ಕ್ಕೂ ಹೆಚ್ಚು ವಿಲ್ಲಾಗಳಿಂದ ರಾಜಕಾಲುವೆ ಒತ್ತುವರಿಯಾಗಿತ್ತು. ಬೆಂ. ಪೂರ್ವ ವಲಯದ ತಹಶೀಲ್ದಾರರು ಸೆ.12ರಂದು ನೋಟಿಸ್ ನೀಡಿದ್ದರು. ನೋಟಿಸ್ ನೀಡಿ 7 ದಿನಗಳ ಗಡುವು ನೀಡಲಾಗಿತ್ತು. ಇಂದಿಗೆ ಆ ಒಂದು ವಾರದ ಡೆಡ್‌ಲೈನ್ ಮುಕ್ತಾಯವಾಗಿದೆ.
ಮಳೆ ನೀರು ನಿಂತು ರೈನ್ ಬೋ ಡ್ರೈವ್ ಲೇಔಟ್ ಸಾಕಷ್ಟು ಸುದ್ದಿಯಾಗಿತ್ತು. ರಾಜಕಾಲುವೆ ಒತ್ತುವರಿ ಜಾಗ ತೆರವುಗೊಳಿಸುವಂತೆ ರೈನ್ ಬೋ ವಿಲ್ಲಾಗಳಿಗೆ ನೋಟಿಸ್ ನೀಡಲಾಗಿತ್ತು. ಒತ್ತುವರಿ ಜಾಗವನ್ನು ತೆರವು ಮಾಡದಿದ್ದರೆ ನಾವೇ ಮಾಡುತ್ತೇವೆ, ತೆರವು ಕಾರ್ಯಾಚರಣೆ ವೆಚ್ಚ ನೀವೇ ಭರಿಸಬೇಕು ಎಂದು 13ಕ್ಕೂ ಹೆಚ್ಚು ವಿಲ್ಲಾಗಳಿಗೆ ತಹಶೀಲ್ದಾರ್ ನೋಟಿಸ್ ನೀಡಿದ್ದರು.
ರೈನ್ ಬೋ ಡ್ರೈವ್ ಲೇಔಟ್‌ನಲ್ಲಿ ಜಿಲ್ಲಾಡಳಿತ ಸರ್ವೆ ನಡೆಸಿತ್ತು. ರಾಜಕಾಲುವೆ ಒತ್ತುವರಿ ಮಾಡಿ ವಿಲ್ಲಾಗಳನ್ನು ನಿರ್ಮಿಸಿರುವುದು ಬಹಿರಂಗವಾಗಿತ್ತು. ಕೂಡಲೇ ವಿಲ್ಲಾಗಳನ್ನ ತೆರವುಗೊಳಿಸುವಂತೆ ಮಾಲೀಕರಿಗೆ ನೋಟಿಸ್ ನೀಡಲಾಗಿತ್ತು. ನೋಟಿಸ್ ಕೊಟ್ಟು ಒಂದು ವಾರವಾದರೂ ತೆರವು ಆಗಿಲ್ಲ. ಮೊದಲ ದಿನ ಅಬ್ಬರಿಸಿ ಬೊಬ್ಬಿರಿದಿದ್ದ ಬಿಬಿಎಂಪಿ ಜೆಸಿಬಿಗಳು ವಾರಾಂತ್ಯದಲ್ಲಿ ಸೈಲೆಂಟ್ ಆಗಿವೆ.
ಇದನ್ನೂ ಓದಿ | Encroachment | ಒತ್ತುವರಿದಾರರಿಗೆ ಶಾಕ್; ರೈನ್ ಬೋ ಡ್ರೈವ್ ನಿವಾಸಿಗಳಿಗೆ ಮನೆ ತೆರವು ನೋಟಿಸ್!