ಬೆಂಗಳೂರು : ಹೆರಿಗೆ ನೋವಿನಿಂದ ಬಳಲುತ್ತಿದ್ದ ಮಹಿಳೆಗೆ ರೈಲ್ವೆ ಸಿಬ್ಬಂದಿ ಪ್ರಥಮ ಚಿಕಿತ್ಸೆ ನೀಡಿ, ಹೆರಿಗೆ ಮಾಡಿಸಿ ಮಾನವೀಯತೆ ಮೆರೆದಿದ್ದಾರೆ.
ಮೆಜೆಸ್ಟಿಕ್‌ನ ಸಂಗೊಳ್ಳಿ ರಾಯಣ್ಣ ರೈಲ್ವೆ ನಿಲ್ದಾಣದಲ್ಲಿ ಮಹಿಳೆಗೆ ಹೆರಿಗೆ ನೋವು ಕಾಣಿಸಿಕೊಂಡಿತ್ತು. ಫ್ಲಾಟ್‌ಫಾರ್ಮ್ 1ರಲ್ಲಿ ಬೆಂಗಳೂರಿನಿಂದ ಚಂಡಿಗಢ್‌ಗೆ ಮಹಿಳೆ ಹೊರಟಿದ್ದಳು. ಅದೇ ಸಮಯದಲ್ಲಿ ಮಹಿಳೆ ಹೆರಿಗೆ ನೋವಿನಿಂದ ಕುಸಿದು ಬಿದ್ದಿದ್ದರು. ತಕ್ಷಣ ಸ್ಥಳದಲ್ಲಿದ್ದ ಆರ್‌ಪಿಎಫ್ ಸಿಬ್ಬಂದಿ ಮೀನಾ ಅವರು ಕಾರ್ಯಪ್ರವೃತ್ತರಾಗಿ, ಮಹಿಳೆಯನ್ನು ಶುಶ್ರೂಷೆ ಮಾಡಿದ್ದಾರೆ. ಉಳಿದ ಪ್ರಯಾಣಿಕರ ಸಹಾಯದೊಂದಿಗೆ ಪ್ರಥಮ ಚಿಕಿತ್ಸೆ ಮಾಡಿದ್ದು, ಅಲ್ಲೇ ಮಹಿಳೆಗೆ ಹೆರಿಗೆ ಮಾಡಿಸಿದ್ದಾರೆ.
ಇದನ್ನೂ ಓದಿ | ಮಾನವೀಯತೆ ಮೆರೆದ ಪೊಲೀಸರು, ಪ್ರಜ್ಞೆ ತಪ್ಪಿ ಬಿದ್ದ ವ್ಯಕ್ತಿ ಆಸ್ಪತ್ರೆಗೆ
ನಂತರ ತಾಯಿ ಮತ್ತು ಮಗುವನ್ನು ಹೆಚ್ಚಿನ ಆರೈಕೆಗಾಗಿ ಮೀನಾ ಅವರು ಕೆಸಿ ಜೆನರಲ್ ಆಸ್ಪತ್ರೆಗೆ ದಾಖಲು ಮಾಡಿದ್ದಾರೆ. ತಕ್ಷಣ ಸ್ಪಂದಿಸಿದ ಮೀನಾ ಅವರ ಕಾರ್ಯವೈಖರಿಗೆ ಮೆಚ್ಚುಗೆ ವ್ಯಕ್ತವಾಗಿದೆ. ಹಿರಿಯ ಅಧಿಕಾರಿಗಳು ಮೀನಾ ಅವರನ್ನು ಶ್ಲಾಘಿಸಿದ್ದಾರೆ.