ಬೆಂಗಳೂರು: ಓಕಳಿಪುರಂ ಸಮೀಪದ ಸುಜಾತ ಟಾಕೀಸ್ ಬಳಿ ರಸ್ತೆ ಗುಂಡಿ ತಪ್ಪಿಸಲು ಹೋಗಿ ಬೈಕ್‌ನಿಂದ ಕೆಳಗೆ ಬಿದ್ದಿದ್ದರಿಂದ ಮಹಿಳೆಯೊಬ್ಬರು ಗಂಭೀರವಾಗಿ ಗಾಯಗೊಂಡಿದ್ದ ಘಟನೆ ಸೋಮವಾರ ಬೆಳಗ್ಗೆ ನಡೆದಿತ್ತು. ಈ ಹಿನ್ನೆಲೆಯಲ್ಲಿ ಸಾರ್ವಜನಿಕರ ಆಕ್ರೋಶ ಹೆಚ್ಚಾಗಿದ್ದು, ನಗರದ ರಸ್ತೆಗಳ ಅವ್ಯವಸ್ಥೆ ಬಗ್ಗೆ ಟೀಕೆಗಳು ಕೇಳಿಬರುತ್ತಿವೆ. ದುರ್ಘಟನೆಗೆ ರಸ್ತೆಯಲ್ಲಿನ ‘ಯಮ’ ಗುಂಡಿಗಳೇ ಕಾರಣ ಎಂದು ಸುಜಾತ ಟಾಕೀಸ್ ಬಳಿ ಆಮ್ ಆದ್ಮಿ ಪಾರ್ಟಿ ಹಾಗೂ ಕನ್ನಡಪರ ಸಂಘಟನೆಗಳ ಕಾರ್ಯಕರ್ತರು ಸೋಮವಾರ ಪ್ರತಿಭಟನೆ ನಡೆಸಿದರು.
ನಗರದಲ್ಲಿ ಹಾಳಾದ ರಸ್ತೆಗಳಿಂದ ನಿತ್ಯ ಹಲವು ಅಪಘಾತಗಳು ಸಂಭವಿಸುತ್ತಿವೆ. ಅಪಘಾತ ನಡೆದು ಗಂಭೀರವಾಗಿ ಗಾಯಗೊಂಡರೂ ಅಧಿಕಾರಿಗಳು ಸ್ಥಳಕ್ಕೆ ಬಂದಿಲ್ಲ ಎಂದು ಪ್ರತಿಭಟನಾಕಾರರು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದರು. ಈ ವೇಳೆ ಪೊಲೀಸರು ಪ್ರತಿಭಟನಾಕಾರರನ್ನು ವಶಕ್ಕೆ ಪಡೆದುಕೊಂಡಿದ್ದರು.
ಇನ್ನು ನಗರದಲ್ಲಿ ರಸ್ತೆಗಳ ನಿರ್ವಹಣೆ ಬಗ್ಗೆ ಸಾಮಾಜಿಕ ಜಾಲತಾಣಗಳಲ್ಲಿ ಟೀಕೆಗಳು ವ್ಯಕ್ತವಾಗಿವೆ. ದೇಶದಲ್ಲೇ ಅತಿ ಹೆಚ್ಚು ರಸ್ತೆ ತೆರಿಗೆ ಪಾವತಿಸುವ ನಗರಗಳಲ್ಲಿ ಬೆಂಗಳೂರು ನಗರವೂ ಒಂದಾಗಿದೆ. ಆದಾಗ್ಯೂ ರಸ್ತೆಗಳನ್ನು ಸಮರ್ಪಕವಾಗಿ ದುರಸ್ತಿ ಮಾಡದ ಬಿಬಿಎಂಪಿ, ರಾಜ್ಯ ಸರ್ಕಾರ ಹಾಗೂ ರಸ್ತೆ ಗುತ್ತಿಗೆದಾರರಿಗೆ ನಾಚಿಕೆಯಾಗಬೇಕು. ಅಧಿಕಾರಿಗಳು, ಜನಪ್ರತಿನಿಧಿಗಳು ಭ್ರಷ್ಟಾಚಾರ ಕಡಿಮೆ ಮಾಡಿ, ರಸ್ತೆಗಳ ಅಭಿವೃದ್ಧಿ ಕೆಲಸ ಮಾಡಬೇಕು ಎಂದು ಸಾರ್ವಜನಿಕರು ಒತ್ತಾಯಿಸಿದ್ದಾರೆ.
ಮಳೆ ಬಿಡುವು ಕೊಟ್ಟರೆ ರಸ್ತೆಗಳ ದುರಸ್ತಿ: ಸಚಿವ ಆರ್.ಅಶೋಕ್
ಬೆಂಗಳೂರಿನಲ್ಲಿ ಮಹಿಳೆಗೆ ಅಪಘಾತವಾಗಿರುವ ಬಗ್ಗೆ ಕಂದಾಯ ಸಚಿವ ಆರ್.ಅಶೋಕ್ ಪ್ರತಿಕ್ರಿಯಿಸಿ, ಸಮಸ್ಯೆ ನಮಗೂ ಅರ್ಥವಾಗಿದೆ. ಕೂಡಲೇ ಬಿಬಿಎಂಪಿ ಆಯುಕ್ತರ ಜತೆ ಚರ್ಚೆ ಮಾಡುತ್ತೇವೆ. ನಗರಕ್ಕೆ ಸಿಎಂ 6 ಸಾವಿರ ಕೋಟಿ ರೂಪಾಯಿ ಅನುದಾನ ಕೊಟ್ಟಿದ್ದಾರೆ. ಮಳೆ ಹಿನ್ನೆಲೆಯಲ್ಲಿ ಹಾಕಿದ ಟಾರ್ ಕಿತ್ತುಹೋಗುತ್ತಿದೆ. ಮಳೆ ಬಿಡುವು ಕೊಟ್ಟರೆ ರಸ್ತೆಗಳ ದುರಸ್ತಿ ಕಾರ್ಯ ಪೂರ್ತಿಗೊಳಿಸುತ್ತೇವೆ. ಜತೆಗೆ ರಾಜಕಾಲುವೆಗಳ ಒತ್ತುವರಿ ತೆರವು ಮಾಡಲು ಕ್ರಮ ಕೈಗೊಳ್ಳುತ್ತೇವೆ ಎಂದು ತಿಳಿಸಿದರು.
ಇದನ್ನೂ ಓದಿ | Road tragedy | ರಾಜಧಾನಿಯ ರಸ್ತೆ ಗುಂಡಿಗೆ ಮಹಿಳೆ ಬಲಿ, ಗುಂಡಿ ತಪ್ಪಿಸಲು ಹೋದಾಗ ಹಿಂದಿನಿಂದ ಗುದ್ದಿದ ಬಸ್