Site icon Vistara News

ಕರ್ನಾಟಕ ಮಾಧ್ಯಮ ಅಕಾಡೆಮಿಯಲ್ಲಿ ಅಭಿಮನ್ಯು ಪತ್ರಿಕೆಯ ಹೆಸರಿನಲ್ಲಿ ಪ್ರಶಸ್ತಿ ಸ್ಥಾಪನೆ

ಅಭಿಮನ್ಯು

ಬೆಂಗಳೂರು: ನಗರದಿಂದ ಪ್ರಕಟವಾಗುತ್ತಿರುವ ‘ಅಭಿಮನ್ಯು’ ಕನ್ನಡ ಪಾಕ್ಷಿಕ ಪತ್ರಿಕೆಯು ಕರ್ನಾಟಕ ಮಾಧ್ಯಮ ಅಕಾಡೆಮಿಯಲ್ಲಿ ‘ಅಭಿಮನ್ಯು’ ಹೆಸರಿನಲ್ಲಿ ಪ್ರಶಸ್ತಿ ಆರಂಭಿಸಲು ದತ್ತಿನಿಧಿಯೊಂದನ್ನು ಸ್ಥಾಪಿಸಿದೆ.

ಪ್ರತಿವರ್ಷ ರಾಜ್ಯದ ವಿವಿಧ ಪತ್ರಿಕೆಗಳಲ್ಲಿ ಪ್ರಕಟವಾದ ದಮನಿತ ಸಮುದಾಯಗಳ ಪರ ದನಿಯಾದ ಅತ್ಯುತ್ತಮ ಲೇಖನ, ಅಂಕಣ, ಸಂಪಾದಕೀಯ ಮತ್ತು ಪರಿಣಾಮಕಾರಿ ವರದಿಗೆ ರೂ.11,000 ನಗದು ಪ್ರಶಸ್ತಿ ನೀಡಿ ಗೌರವಿಸಬೇಕೆಂದು ಅಕಾಡೆಮಿಗೆ ಪತ್ರಿಕೆಯು ಮನವಿ ಸಲ್ಲಿಸಿದೆ.

ಶುಕ್ರವಾರ ಅಕಾಡೆಮಿಯಲ್ಲಿ ನಡೆದ ಸರಳ ಸಮಾರಂಭದಲ್ಲಿ ಪತ್ರಿಕೆಯ ಸಂಪಾದಕ ಬಿ.ಎನ್‌. ರಮೇಶ್‌ ದತ್ತಿ ಪ್ರಶಸ್ತಿ ಸ್ಥಾಪನೆ ಕೋರಿಕೆಯ ಪತ್ರ ಹಾಗೂ ದತ್ತಿನಿಧಿ ಚೆಕ್ಅನ್ನು ಅಕಾಡೆಮಿ ಅಧ್ಯಕ್ಷರಾದ ಸದಾಶಿವ ಶಣೈ ಅವರಿಗೆ ಸಲ್ಲಿಸಿದರು. ಈ ಸಂದರ್ಭದಲ್ಲಿ ಅಕಾಡೆಮಿ ಕಾರ್ಯದರ್ಶಿಗಳಾದ ರೂಪ ಮತ್ತು ಮುನಿರಾಜು ಇದ್ದರು.

ಈ ವೇಳೆ ಉಪಸ್ಥಿತರಿದ್ದ ಅಕಾಡೆಮಿಯ ಸದಸ್ಯ ಕಂ.ಕ.ಮೂರ್ತಿ ಪತ್ರಿಕೆ ಸದಾ ಶೋಷಿತರ ಪರ ಕಾಳಜಿ ಹೊಂದಿದ್ದು, ಇದೀಗ ದತ್ತಿ ಪ್ರಶಸ್ತಿ ಮೂಲಕ ತನ್ನ ಜನಪರ ನಿಲುವನ್ನು ಮುಂದುವರೆಸಿದೆ ಎಂದರು. ಮತ್ತೋರ್ವ ಸದಸ್ಯ ಎಸ್.ಲಕ್ಷ್ಮೀನಾರಾಯಣ ಪತ್ರಿಕೆ ತನ್ನ ಹೆಸರಿನಲ್ಲಿ ದತ್ತಿ ಪ್ರಶಸ್ತಿ ಸ್ಥಾಪಿಸುತ್ತಿರುವುದು ಸ್ತುತ್ಯಾರ್ಹ ಕೆಲಸವಾಗಿದೆ ಎಂದು ಹೇಳಿದರು.

ಮನವಿ ಪತ್ರ ಸ್ವೀಕರಿಸಿ ಮಾತನಾಡಿದ ಮಾಧ್ಯಮ ಅಕಾಡೆಮಿ ಅಧ್ಯಕ್ಷ ಸದಾಶಿವ ಶೆಣೈ, ಕಳೆದ ಎರಡು ದಶಕಗಳಿಂದ ಅಭಿಮನ್ಯು ಪತ್ರಿಕೆಯು ಕನ್ನಡ ಮಾಧ್ಯಮ ಲೋಕದಲ್ಲಿ ಜನಪರ ಮತ್ತು ಶೋಷಿತರ ಪರ ಕೆಲಸ
ಮಾಡುತ್ತಿದೆ. ಇದರ ಮುಂದುವರಿದ ಭಾಗವಾಗಿ ಇದೀಗ ಪ್ರಶಸ್ತಿ ಸ್ಥಾಪನೆಗೆ ಮನವಿ ಸಲ್ಲಿಸಿದೆ. ಅಕಾಡೆಮಿ ಇದನ್ನು ಪ್ರೀತಿಯಿಂದ ಸ್ವಾಗತಿಸಿ, ಅತ್ಯಂತ ಜವಾಬ್ದಾರಿಯುತವಾಗಿ ಸಂಸ್ಥೆಯ ಸದುದ್ದೇಶವನ್ನು ಈಡೇರಿಸಲು ಪ್ರಯತ್ನ ನಡೆಸಲಿದೆ. ಪ್ರಶಸ್ತಿಗೆ ಅರ್ಹರ ಆಯ್ಕೆ ಜವಾಬ್ದಾರಿಯನ್ನೂ ಅಕಾಡೆಮಿಗೆ ಪತ್ರಿಕೆ ನೀಡಿದೆ. ಅಕಾಡೆಮಿ ಇದನ್ನು ಸವಾಲು ಹಾಗೂ ಗೌರವವೆಂದು ಭಾವಿಸಿ ಕೆಲಸ ನಿರ್ವಹಿಸಲಿದೆ ಎಂದರು.

ದತ್ತಿ ಪ್ರಶಸ್ತಿ ಕೋರಿಕೆ ಸಂದರ್ಭದಲ್ಲಿ ಅಕಾಡೆಮಿಯ ಸದಸ್ಯರಾದ ಎಂ.ಶಿವರಾಜ್, ಗೋಪಾಲ್ ಯಡಗೆರೆ, ಅಭಿಮನ್ಯು ಬಳಗದ ಸದಸ್ಯರಾದ ಆರ್.ಎಚ್. ನಟರಾಜ್, ಬಿ.ವಿ. ರಾಜ್‌ಗೋಪಾಲ್ ಮತ್ತು ಚೇತನ್ ಆರ್, ಉಪಸ್ಥಿತರಿದ್ದರು.

ಇದನ್ನೂ ಓದಿ | KUWJ Awards | ವಿಸ್ತಾರ ನ್ಯೂಸ್‌ನ ಮಾರುತಿ ಪಾವಗಡ ಸೇರಿದಂತೆ ಹಲವರಿಗೆ ಪತ್ರಕರ್ತರ ಸಂಘದ ಪ್ರಶಸ್ತಿ

Exit mobile version