ಬೆಂಗಳೂರು: ಬೆಂಗಳೂರಿನ ಸರ್ಜಾಪುರ ರಸ್ತೆಯಲ್ಲಿ ಕಾರು ಚಾಲಕನೊಬ್ಬ ಚಾಲನೆಯ ವೇಳೆ ಅಸ್ವಸ್ಥಗೊಂಡ ಪರಿಣಾಮ ಕಾರು ವೇಗವಾಗಿ ಹಾಗೂ ಅಡ್ಡಾದಿಡ್ಡಿಯಾಗಿ ಚಲಿಸಿ ಸರಣಿ ಅಪಘಾತ ಸಂಭವಿಸಿದೆ. ಪರಿಣಾಮ ಸ್ವಿಗ್ಗಿ ಡೆಲಿವರಿ ಹುಡುಗನೊಬ್ಬ ಗಂಭೀರವಾಗಿ ಗಾಯಗೊಂಡಿದ್ದಾನೆ. ಎಂಟು ವಾಹನಗಳು ಜಖಂ ಆಗಿವೆ. ಹಲವಾರು ಮಂದಿ ಪ್ರಾಣಾಪಾಯದಿಂದ ಪಾರಾಗಿದ್ದಾರೆ.
ಇದ್ದಕ್ಕಿದ್ದಂತೆ ಫೀಟ್ಸ್ ಅಟ್ಯಾಕ್ ಉಂಟಾದ ಕಾರಣ ಚಾಲಕ ಕಾರು ನಿಯಂತ್ರಿಸಲಾಗದೆ ಆಕ್ಸಿಲರೇಟರ್ ಮೇಲೆ ಬಲವಾಗಿ ಕಾಲಿಟ್ಟು ಕಾರಿನ ಸ್ಟಿಯರಿಂಗ್ ಅನ್ನು ಬಿಗಿಯಾಗಿ ಹಿಡಿದುಕೊಂಡಿದ್ದ. ಪರಿಣಾಮ ಕಾರು ನಿಯಂತ್ರಣವಿಲ್ಲದೆ ಚಲಿಸಿತ್ತಲ್ಲದೆ, ಮುಂದೆ ಹೋಗುತ್ತಿದ್ದ ಕಾರಿಗೆ ಡಿಕ್ಕಿ ಹೊಡೆದು ಮುನ್ನುಗ್ಗಿ ಮತ್ತಷ್ಟು ಬೈಕ್ ಕಾರುಗಳಿಗೆ ಉಜ್ಜಿಕೊಂಡು ಹೋಗಿದೆ.
ಸುಮಾರು ಅರ್ಧ ಕಿ.ಮೀ ದೂರ ಹೀಗೆ ಸಿಕ್ಕ ಸಿಕ್ಕ ವಾಹನಗಳಿಗೆ ಡಿಕ್ಕಿ ಹೊಡೆದು ಮುನ್ನುಗ್ಗಿದ ಕಾರು ಬಳಿಕ ಸರ್ಜಾಪುರ ರಸ್ತೆಯ ವಿಪ್ರೋ ಕಂಪನಿ ಗೇಟ್ ಬಳಿ ನಿಂತಿತ್ತು. ಕೊನೆಗೂ ಸಿಕ್ಕಿ ಬಿದ್ದ ಕಾರು ಚಾಲಕನನ್ನು ಹಿಡಿದು ತದುಕೋಣ ಎಂದು ದೌಡಾಯಿಸಿದವರಿಗೆ ಚಾಲಕನ ಸ್ಥಿತಿ ಕಂಡು ಬಂದಿದ್ದ ಕೋಪವೂ ಹೊರಟುಹೋಗಿದೆ. ಜಗಳಕ್ಕೆ ಹೋದಔರು ಆಂಬ್ಯುಲೆನ್ಸ್ ಕರೆಸಿ ಚಾಲಕನನ್ನು ಆಸ್ಪತ್ರೆಗೆ ಸೇರಿಸಿದ್ದಾರೆ.
ಇದೆಲ್ಲದಕ್ಕೂ ಕಾರಣವಾಗಿದ್ದು, ಕಾರು ಚಾಲಕನಿಗೆ ಬಂದಿದ್ದ ಮೂರ್ಛೆ ರೋಗ. ಅಪಘಾತದಲ್ಲಿ ಬರೋಬರಿ ಎಂಟು ಗಾಡಿಗಳು ಡ್ಯಾಮೇಜ್ ಆಗಿವೆ. ಹಲವು ಬೈಕ್ ಸವಾರರು ಹಾಗೂ ಪಾದಚಾರಿಗಳು ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಸ್ವಿಗ್ಗಿ ಡೆಲವರಿ ಬಾಯ್‌ಗೆ ಗಂಭೀರವಾದ ಗಾಯವಾಗಿದ್ದು, ಏಳು ಜನರಿಗೆ ಸಣ್ಣ ಪುಟ್ಟ ಗಾಯಗಳಾಗಿವೆ. ಸದ್ಯ ಜಖಂಗೊಂಡ ಕಾರುಗಳ ಮಾಲೀಕರು ಇನ್ಸೂರೆನ್ಸ್ ಮೊರೆ ಹೋಗಿದ್ದು, ಹೆಚ್‌ಎಸ್‌ಆರ್ ಲೇಔಟ್ ಸಂಚಾರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಇದನ್ನೂ ಓದಿ | Road Accident | ಹಲವರ ಬಾಳಲ್ಲಿ ಕತ್ತಲೆ ತಂದ ಹೊಸ ವರ್ಷದ ಮೊದಲ ದಿನ; ವಿವಿಧೆಡೆ ಅಪಘಾತಗಳಿಗೆ 10 ಮಂದಿ ಸಾವು