ಬೆಂಗಳೂರು: ದ್ವೈತ ಮತ ಸಿದ್ಧಾಂತ ಪ್ರತಿಪಾದಿಸಿದ ಆಚಾರ್ಯ ಶ್ರೀ ಮಧ್ವರ ತತ್ವ ಮತ್ತು ಸಂದೇಶಗಳು ಎಲ್ಲ ದೇಶ- ಕಾಲಕ್ಕೂ ಅನ್ವಯ ಎಂದು ಉಡುಪಿ ಭಂಡಾರಕೇರಿ ಮಠಾಧೀಶ ಶ್ರೀ ವಿದ್ಯೇಶತೀರ್ಥ ಸ್ವಾಮೀಜಿ (Sri Vidyesha Thirtha Swamiji) ಹೇಳಿದರು.
ಮಧ್ವ ನವಮಿ ಅಂಗವಾಗಿ ಗಿರಿನಗರದ ಭಾಗವತ ಕೀರ್ತಿಧಾಮದಲ್ಲಿ ಹಮ್ಮಿಕೊಂಡಿದ್ದ ವಿಶೇಷ ಕಾರ್ಯಕ್ರಮದಲ್ಲಿ ಅವರು ವಿವಿಧ ರಂಗದ ಗಣ್ಯರಿಗೆ ಪ್ರಶಸ್ತಿ ಪ್ರದಾನ ಮಾಡಿ ಆಶೀರ್ವಚನ ನೀಡಿದರು.
ಶ್ರೀ ಮಧ್ವರ (ಆನಂದತೀರ್ಥರ) ಸಿದ್ಧಾಂತದಲ್ಲಿ ತತ್ವಜ್ಞಾನದೊಂದಿಗೆ ವೈಜ್ಞಾನಿಕ ಅಂಶಗಳು ಹೇರಳವಾಗಿವೆ. ಅವರ
ಸಂದೇಶಗಳನ್ನು ಸಂರಕ್ಷಣೆ ಮಾಡಿ ಮುಂದಿನ ಪೀಳಿಗೆಗೆ ತಲುಪಿಸುವ ಮಹತ್ತರವಾದ ಜವಾಬ್ದಾರಿ ನಮ್ಮ ಮೇಲಿದೆ.
ಮಧ್ವರು ಮಹಾಭಾರತಕ್ಕೆ 10 ವಿಶೇಷ ಅರ್ಥಗಳನ್ನು ಹೇಳಿದ್ದಾರೆ. 10 ಉಪನಿಷತ್ತುಗಳ ಅರ್ಥ ಜಗತ್ತಿಗೆ ತಿಳಿಯುವಂತೆ ಭಾಷ್ಯ ಬರೆದಿದ್ದಾರೆ. 10 ಯತಿಗಳಿಗೆ ಸನ್ಯಾಸ ದೀಕ್ಷೆಯೊಂದಿಗೆ ಧರ್ಮದ ಉಪದೇಶ ನೀಡಿ ಪರಂಪರೆ ಬೆಳೆಸಿದ್ದಾರೆ. ಹಾಗಾಗಿ ಅವರಿಗೆ ದಶಪ್ರಮತಿ ಮತ್ತು ಪೂರ್ಣಪ್ರಜ್ಞ ಎಂಬ ಹೆಸರುಗಳು ಅನ್ವರ್ಥವಾಗಿವೆ ಎಂದು ತಿಳಿಸಿದರು.
ಇದನ್ನೂ ಓದಿ | ಧವಳ ಧಾರಿಣಿ ಅಂಕಣ: ಗಂಧವತಿಗೆ ಸಿರಿಗಂಧಲೇಪನನ ಆಗಮನ
ಲೋಕಕ್ಕೆ ಆನಂದಕರವಾದ ಶಾಸ್ತ್ರ, ವ್ಯಾಖ್ಯಾನ ಮತ್ತು ನಿರ್ಣಯಗಳನ್ನು ನೀಡಿದ ಕಾರಣಕ್ಕಾಗಿ ಅವರಿಗೆ ಆನಂದತೀರ್ಥ ಎಂಬ ನಾಮವೂ ಭೂಷಣಪ್ರಾಯವಾಗಿದೆ ಎಂದು ಶ್ರೀ ವಿದ್ಯೇಶತೀರ್ಥರು ಹೇಳಿದರು.
ಭಾರತೀಯ ವೇದಾಂತ ರಂಗದಲ್ಲಿ ಆಚಾರ್ಯ ಮಧ್ವರು ದುಂಬಿಯಂತೆ ಶ್ರಮಿಸಿ, ವೇದಗಳಲ್ಲಿ ಅಡಗಿರುವ ಭಗವಂತನ ಗುಣ ಎಂಬ ಮಧುವನ್ನು ಗ್ರಹಣ ಮಾಡಿ ‘ಸರ್ವಮೂಲ’ ಎಂಬ ಕೋಶದಲ್ಲಿ ಸಂಗ್ರಹಿಸಿ ವಿಶ್ವಕ್ಕೆ ‘ಪೂರ್ಣ ಪ್ರಜ್ಞ’ ದೃಷ್ಟಿಯನ್ನು ದಯಪಾಲಿಸಿದ್ದು ಮಹೋನ್ನತ ಕಾರ್ಯ. ಇಂಥ ಮಧುವನ್ನು ನೀಡಿದ ಕಾರಣಕ್ಕಾಗಿ ಅವರು ಮಧ್ವರಾದರು. ಹಾಗಾಗಿಯೇ ಅವರ ಪ್ರತಿಮೆಗೆ ಸ್ಮರಣಾರ್ಥವಾಗಿ ಮಧು ಅಭಿಷೇಕ ಮಾಡುವುದು ಧನ್ಯತೆ ಸಮರ್ಪಣೆಯ ಸಂಕೇತ ಎಂದು ಶ್ರೀ ವಿದ್ಯೇಶತೀರ್ಥರು ವ್ಯಾಖ್ಯಾನಿಸಿದರು.
ಮಧ್ವ ನವಮಿ ಉತ್ಸವ ಅಂಗವಾಗಿ ಅವರ ಮಹತ್ತರ ಕೃತಿಗಳನ್ನು ಅಧ್ಯಯನ ಮಾಡಬೇಕು. ವಿದ್ವಜ್ಜನರಿಗೆ ಗೌರವಿಸಬೇಕು. ಭಾರತೀಯ ಸನಾತನ ಪರಂಪರೆಯ ರಾಯಭಾರಿಗಳಾದ ಪಂಡಿತರಿಗೆ ಸನ್ಮಾನಿಸಬೇಕು. ಈ ಮೂಲಕ ಮಧ್ವ ಶಾಸ್ತ್ರ, ದಾಸ ಸಾಹಿತ್ಯ ಮತ್ತು ವಿದ್ಯೇಶ ವಿಠಲಾಂಕಿತ ಕೃತಿಗಳ ಪ್ರಚಾರ, ಪ್ರಸಾರಕ್ಕೆ ಬೆಂಬಲಿಸಬೇಕು. ಆಗ ಮಾತ್ರ ಉತ್ಸವ, ಗುರು ಸ್ಮರಣೆ, ಆರಾಧನೆಗಳು ಅರ್ಥಪೂರ್ಣವಾಗುತ್ತವೆ ಎಂದರು.
ಪ್ರಶಸ್ತಿ ಪ್ರದಾನ
ವೀಣಾ ವಿದುಷಿ, ಸಂಗೀತ ಸಂಯೋಜಕಿ ಮತ್ತು ಗಾಯಕಿ ವಿದುಷಿ ಶುಭಾ ಸಂತೋಷ್ ಅವರು ಸಂಗೀತ ಕ್ಷೇತ್ರಕ್ಕೆ ಸಲ್ಲಿಸಿದ ಅನುಪಮ ಸೇವೆ ಮತ್ತು ಅಯೋಧ್ಯೆಯಲ್ಲಿ ಶ್ರೀ ರಾಮನ ಮೂರ್ತಿ ಪ್ರತಿಷ್ಠಾಪನೆ ಸಂದರ್ಭದಲ್ಲೇ ವೀಣಾ ವಾದನ ಸೇವೆ ಸಮರ್ಪಿಸಿ ಕರ್ನಾಟಕದ ಕೀರ್ತಿಯನ್ನು ಬೆಳಗಿದ ಸವಿ ನೆನಪಿಗಾಗಿ ಅವರಿಗೆ ‘ರಾಮ ಲಾಲಿತ ವೀಣಾ ಮಾನ್ಯ’ ಪ್ರಶಸ್ತಿಯನ್ನು ಶ್ರೀಗಳು ಪ್ರದಾನ ಮಾಡಿ ಗೌರವಿಸಿದರು.
ಅದೇ ರೀತಿ ಬೆಂಗಳೂರಿನ ಪೂರ್ಣಪ್ರಜ್ಞ ವಿದ್ಯಾಪೀಠದ ಪ್ರಾಧ್ಯಾಪಕ, ವ್ಯಾಕರಣ, ನ್ಯಾಯ ಶಾಸ್ತ್ರ ಪಂಡಿತ ಕೆಂಪದಾಳಿಹಳ್ಳಿ ಕೃಷ್ಣಾಚಾರ್ಯ ಅವರಿಗೆ ‘ಮಧ್ವ ವಿದ್ಯಾಮಾನ್ಯ’ ಬಿರುದು ಪ್ರದಾನ ಮಾಡಿ ಸನ್ಮಾನಿಸಿದರು.
ಇದನ್ನೂ ಓದಿ | ದಶಮುಖ ಅಂಕಣ: …. ನೋಡಲಿಕ್ಕೆ ಹೋಗೋಣು ಬಾರೆ!
ಕೆಎಎಸ್ ಅಧಿಕಾರಿ ಅನಿಲ್ ಕುಮಾರ ಮರಳಿ, ಮಠದ ವಿದ್ವಾಂಸರು, ಪಂಡಿತರು ಮತ್ತು ನೂರಾರು ಭಕ್ತರು ಹಾಜರಿದ್ದರು. ನಂತರ ಗುರು ವಿಜಯ ಗೀತೆ ಸಾಮೂಹಿಕ ಪಾರಾಯಣ, ಶ್ರೀ ಕೃಷ್ಣನ ವಿಗ್ರಹ ಮತ್ತು ಪ್ರಾಣ ದೇವರ ವಿಗ್ರಹಗಳಿಗೆ ಮಧು ಅಭಿಷೇಕ, ಸುಮಧ್ವ ವಿಜಯ ಪಾರಾಯಣ, ಸಂಸ್ಥಾನ ಪೂಜೆ, ಪ್ರಸಾದ ವಿನಿಯೋಗ ನೆರವೇರಿತು.