ಬೆಂಗಳೂರು: ಸುಂಕದಕಟ್ಟೆಯಲ್ಲಿ ಯುವತಿಯ ಮೇಲೆ ಆ್ಯಸಿಡ್ ದಾಳಿ ನಡೆಸಿ ತಲೆಮರೆಸಿಕೊಂಡಿರುವ ನಾಗೇಶ್‌ನನ್ನು ಬಂಧಿಸಲು ಪೊಲೀಸರಿಗೆ ಇನ್ನೂ ಸಾಧ್ಯವಾಗುತ್ತಿಲ್ಲ. ತಮಿಳುನಾಡಿನಲ್ಲಿದ್ದಾನೆ, ಮಹಾರಾಷ್ಟ್ರದಲ್ಲಿ ತಲೆಮರೆಸಿಕೊಂಡಿದ್ದಾನೆ ಎಂಬ ಸುದ್ದಿಗಳ ನಡುವೆ ಪೊಲೀಸರು ಹುಡುಕಾಡುತ್ತಿದ್ದಾರಾದರೂ ಆರೋಪಿ ಮಾತ್ರ ಕೈಗೆ ಸಿಕ್ಕಿಲ್ಲ. ಯುವತಿಯ ಮೇಲೆ ದಾಳಿ ಮಾಡಿದವನ ಮೇಲೆ ಜನಸಾಮಾನ್ಯರಷ್ಟೆ ಅಲ್ಲದೆ ಸ್ವತಃ ನಾಗೇಶನ ಮನೆಯವರೂ ಹಿಡಿಶಾಪ ಹಾಕುತ್ತಿದ್ದಾರೆ.
ಆ್ಯಸಿಡ್ ದಾಳಿ ಮಾಡಿದ ದಿನವೇ ಅಣ್ಣನಿಗೆ ನಾಗೇಶ್ ಕರೆ ಮಾಡಿದ್ದ. ತಾನು ಯುವತಿಯ ಮೇಲೆ ಆ್ಯಸಿಡ್ ಎರಚಿದ್ದೇನೆ ಎಂದು ಹೇಳಿದ್ದ. ಇದಕ್ಕೆ ಅಣ್ಣ ಸಿಟ್ಟಾಗಿದ್ದ. ಆದರೆ ಅಣ್ಣನ ಮಾತನ್ನೂ ಕೇಳಿಸಿಕೊಳ್ಳುವ ಹಂತದಲ್ಲಿಲ್ಲದ ನಾಗೇಶ, ತಿರುಗಿ ಕೂಗಾಡಿದ್ದ.
ಇದೀಗ ನಾಗೇಶನ ಮೇಲೆ ಅವನ ಇಡೀ ಕುಟುಂಬದವರು ಹಿಡಿ ಶಾಪ ಹಾಕುತ್ತಿದ್ದಾರೆ. ಅವನಿಗೆ ಏನಾದರೂ ಆಗಲಿ, ನಮಗೂ ಅವನಿಗೂ ಸಂಬಂಧವಿಲ್ಲ. ಅವನಿಂದ ನಮಗೆಲ್ಲಾ ತೊಂದರೆ. ಮನೆಗೆ ಬರುತ್ತಿಲ್ಲ. ಅಪ್ಪ ಅಮ್ಮನ ಜತೆಗೆ ಅವನೊಬ್ಬನೇ ವಾಸವಿದ್ದ. ನಮ್ಮ ಮನೆಗೆ ಬರುತ್ತಿರಲಿಲ್ಲ. ಅವರ ಅಕ್ಕನನ್ನು ಮದುವೆಯಾಗಿ ತಪ್ಪಾಗಿ ಹೋಗಿದೆ. ಈಗ ಪೊಲೀಸ್ ಠಾಣೆಗೆ ಅಲೆದಾಡುತ್ತಿದ್ದೇವೆ ಎಂದು ನಾಗೇಶ್ ಮಾವ ಕಷ್ಣಪ್ಪ ಅಳಲನ್ನು ತೋರಿಕೊಂಡರು.
ನಾಗೇಶ ಹತ್ತು ವರ್ಷಗಳ ಹಿಂದೆಯೇ ಬೆಂಗಳೂರಿಗೆ ಬಂದಿದ್ದ, ವಿದ್ಯಾಭ್ಯಾಸವನ್ನು ಮುಗಿಸಿದ್ದ. ಇಲ್ಲಿಯೇ ಮೊದಲು ಕೆಲಸಕ್ಕೆ ಸೇರಿದ್ದ, ಇತ್ತೀಚೆಗಷ್ಟೇ ಗಾರ್ಮೆಂಟ್ಸ್ ಓಪನ್ ಮಾಡಿದ್ದ ಎಂಬುದರ ಮಾಹಿತಿಯನ್ನು ಕೃಷ್ಣಪ್ಪ ಹೇಳಿದ್ದಾರೆ.
ಆ್ಯಸಿಡ್ ದಾಳಿಗೆ ತುತ್ತಾದ ಯುವತಿಗೆ ಇಂದು ಮೊದಲ ಶಸ್ತ್ರ ಚಿಕಿತ್ಸೆ
ಘಟನೆಯ ಹಿನ್ನೆಲೆ
ಏಪ್ರಿಲ್ 28ರ ಗುರುವಾರ ಬೆಳಗ್ಗೆ 8-30ರ ವೇಳೆಯಲ್ಲಿ ಯುವತಿಯನ್ನು ಆಕೆಯ ತಂದೆ, ಸುಂಕದಕಟ್ಟೆಯ ಮುತ್ತೂಟ್ ಮಿನಿ ಫೈನಾನ್ಸ್ ಕಚೇರಿಗೆ ಡ್ರಾಪ್ ಮಾಡಿದರು. ಮೊದಲನೇ ಮಹಡಿಯಲ್ಲಿದ್ದ ಕಚೇರಿಗೆ ಮೆಟ್ಟಿಲು ಹತ್ತಿಕೊಂಡು ಹೋಗಬೇಕಿತ್ತು. ಕಚೇರಿಗೆ ಇನ್ನೂ ಯಾರೂ ಬಾರದೆ ಇದ್ದದ್ದರಿಂದ ಕಚೇರಿ ಬಾಗಿಲ ಹತ್ತಿರ ನಿಂತುಕೊಂಡಿದ್ದರು. ಈ ಸಮಯದಲ್ಲಿ ಆರೋಪಿ ನಾಗೇಶ್ ಹತ್ತಿರಕ್ಕೆ ಬಂದಿದ್ದಾನೆ. ಒಂದು ಕೈ ಕವರ್‌ನಲ್ಲಿ ಏನನ್ನೋ ಹಿಡಿದಿರುವುದಾಗಿ ಗಮನಿಸಿದ ಯುವತಿ ಕೆಳಗೆ ಓಡಲು ಪ್ರಯತ್ನಿಸಿದ ಕೂಡಲೆ ನಾಗೇಶ ಹಿಂಬಾಲಿಸಿಕೊಂಡು ಬಂದು ಆಸಿಡ್ ಅನ್ನು ಯುವತಿಯ ಮೈ ಮೇಲೆ ಹಾಕಿ ಓಡಿ ಹೋಗಿದ್ದ.ಎದೆ, ಕೈಗಳು , ಹಾಗು ಬೆನ್ನಿಗೆ ಆ್ಯಸಿಡ್ ಬಿದ್ದು ಗಾಯಗಳಾಗಿದ್ದು, ಯುವತಿ ಕೂಡಲೆ ತಂದೆಗೆ ಕರೆ ಮಾಡಿ ಸ್ಥಳಕ್ಕೆ ಬರಲು ತಿಳಿಸಿದ್ದಳು. ನಂತರ ಆ್ಯಂಬುಲೆನ್ಸ್ ಮೂಲಕ ಯುವತಿಯನ್ನು ಮೊದಲಿಗೆ ಸ್ಥಳೀಯ ಖಾಸಗಿ ಆಸ್ಪತ್ರೆಗೆ, ನಂತರ ಸೇಂಟ್ ಜಾನ್ಸ್ ಆಸ್ಪತ್ರೆಗೆ ದಾಖಲು ಮಾಡಲಾಯಿತು.ನಾಗೇಶ ಸುಮಾರು ಏಳು ವರ್ಷಗಳ ಹಿಂದೆ ಯುವತಿಯ ದೊಡ್ಡಮ್ಮನ ಮನೆಯಲ್ಲಿ ಬಾಡಿಗೆಗೆ ಇದ್ದ. ತನ್ನನ್ನು ಪ್ರೀತಿ ಮಾಡುವಂತೆ ಹಿಂಸೆ ಮಾಡುತ್ತಿದ್ದ. ಪ್ರೀತಿ ಮಾಡುವುದಿಲ್ಲ ಎಂದು ತಿಳಿಸಿದಾಗ ಸುಮ್ಮನಾಗಿದ್ದ. ಆದರೆ ಮತ್ತೆ ಒಂದು ವಾರದಿಂದ ಹಿಂಬಾಲಿಸಿಕೊಂಡು ಬಂದು, ಪ್ರೀತಿ ಮಾಡುವಂತೆ ಬಲವಂತ ಮಾಡುತ್ತಿದ್ದ. ಇದಕ್ಕೂ ಒಪ್ಪದಿದ್ದಾಗ ಆ್ಯಸಿಡ್ ದಾಳಿ ಮಾಡಿದ್ದಾನೆ ಎನ್ನಲಾಗಿದೆ.