ಬೆಂಗಳೂರು: ರಸ್ತೆಯಲ್ಲಿ ನಡೆದು ಹೋಗುತ್ತಿದ್ದ ದಂಪತಿ ಮೇಲೆ ಕಾರು ಹರಿಸಿದ (Road Accident) ನಟ ನಾಗಭೂಷಣ್ (Actor Nagabhushana) ವಿರುದ್ಧ ಕುಟುಂಬಸ್ಥರು ಹಿಡಿಶಾಪ ಹಾಕಿದ್ದಾರೆ. ಆತ ಜೈಲಿಗೆ ಹೋದರೂ ಪರವಾಗಿಲ್ಲ, ಯಾವುದೇ ಕಾರಣಕ್ಕೂ ಬಿಡಬೇಡಿ ಎಂದು ಮೃತ ಪ್ರೇಮಾ ಅವರ ಪುತ್ರಿ ಯಶಸ್ವಿನಿ ಆಕ್ರೋಶ ಹೊರಹಾಕಿದ್ದಾರೆ.
ನಮ್ಮ ಅಪ್ಪ- ಅಮ್ಮ ಮೊನ್ನೆಯಷ್ಟೇ ನಾಗಭೂಷಣ್ ಅವರ ನಟನೆಯನ್ನು ನೋಡಿ ಮೆಚ್ಚಿದ್ದರು. ಆದರೆ ಈಗ ಅವರೇ ನಮ್ಮ ತಾಯಿಗೆ ಯಮನಂತೆ ಬಂದು ಕೊಂದಿದ್ದಾರೆ. ನಮಗೆ ನ್ಯಾಯ ಬೇಕು. ಮೊದಮೊದಲು ನಮ್ಮ ತಾಯಿನೇ ಕಾರಿಗೆ ಅಡ್ಡ ಬಂದಿದ್ದಾಗಿ ಸುಳ್ಳು ಹೇಳಿದರು. ಅನಂತರ ನಾನು ಅಪಘಾತವೇ ಮಾಡಿಲ್ಲ ಎಂದರು.
ಇಷ್ಟೆಲ್ಲ ಆದ್ಮೆಲೆ ಅವರ ಇರುವಿಕೆ ಬಗ್ಗೆ ಒಮ್ಮೊಮ್ಮೆ ಒಬ್ಬೊಬ್ಬರು ಒಂದೊಂದು ರೀತಿಯಲ್ಲಿ ಮಾತನಾಡಿದ್ದರು. ಮೊದಲು ಅವರು ಲಂಡನ್‌ನಲ್ಲಿ ಇದ್ದಾರೆ ಎಂದು ಹೇಳಿದ್ದರು. ಹಾಗಾದರೆ ಲಂಡನ್‌ನಲ್ಲಿದ್ದವರು ಕೇವಲ ಎರಡೇ ಗಂಟೆಗೆ ಬೆಂಗಳೂರಿಗೆ ಬಂದರಾ? ಎಂದು ಮಗಳು ಯಶಸ್ವಿನಿ ಪ್ರಶ್ನೆ ಮಾಡಿದ್ದಾರೆ. ಗಳಿಗೆಗೊಂದು ಮಾತಾಡುವ ಇಂತಹವರು ಎರಡು ನಾಲಿಗೆ ಹೊಂದಿರಬೇಕು ಎಂದರು.
ಕಿಮ್ಸ್ ಆಸ್ಪತ್ರೆ ಶವಾಗಾರದ ಮುಂದೆ ಮಗ ಪಾರ್ಥ, ಮಗಳು ಯಶಸ್ವಿನಿಯ ಆಕ್ರಂದನ ಮುಗಿಲು ಮುಟ್ಟಿತ್ತು. ನಾಗಭೂಷಣ್ ಕಾರು ಓಡಿಸುವಾಗ ಕನ್ನಡಕ ಹಾಕಿದರೂ ಕಣ್ಣು ಕಾಣಲಿಲ್ಲ ಅಲ್ವಾ? ಇವರಿಂದ ನಮ್ಮ ತಾಯಿ ಜೀವ ಕಳೆದುಕೊಂಡರು. ಅವರ ಕಣ್ಣನ್ನೇ ಕಿತ್ತು ಹಾಕುತ್ತೇವೆ, ಇನ್ನು ಮುಂದೆ ಯಾರನ್ನೂ ಸಾಯಿಸಬೇಡ ಎಂದು ಕಿಡಿಕಾರಿದರು. ನಮಗೆ ಆದ ಅನ್ಯಾಯ ಇನ್ನು ಯಾರಿಗೂ ಆಗುವುದು ಬೇಡ ಎಂದರು.
ಇದನ್ನೂ ಓದಿ: Actor Nagabhushana: ನಾಗಭೂಷಣ ಕಾರು ಅಪಘಾತ; ಸ್ಟೇಷನ್ ಬೇಲ್ ಮೇಲೆ ಬಿಡುಗಡೆ!
ಏನಿದು ಘಟನೆ?
ಕೌಸಲ್ಯಾ ಸುಪ್ರಜಾ ರಾಮ ಚಿತ್ರದಲ್ಲಿ ನಟಿಸಿರುವ ನಟ ನಾಗಭೂಷಣ ಅವರ (Actor Nagabhushana) ಕಾರು ದಂಪತಿಗೆ ಡಿಕ್ಕಿಯಾಗಿದ್ದು, ಮಹಿಳೆಯೊಬ್ಬರು ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಬೆಂಗಳೂರಿನ ವಸಂತನಗರ ಮುಖ್ಯರಸ್ತೆಯ ಬಳಿ ಶನಿವಾರ ರಾತ್ರಿ (ಸೆಪ್ಟೆಂಬರ್ 30) ದಂಪತಿ ಫುಟ್‌ಪಾತ್ ಮೇಲೆ ನಡೆದುಕೊಂಡು ಹೋಗುವಾಗ ನಾಗಭೂಷಣ ಅವರ ಕಾರು ಡಿಕ್ಕಿಯಾಗಿದೆ. ಅಪಘಾತಕ್ಕೆ ಸಂಬಂಧಿಸಿದಂತೆ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಲಾಗಿದೆ.
ಕೃಷ್ಣ (58) ಹಾಗೂ ಅವರ ಪತ್ನಿ ಪ್ರೇಮಾ (48) ಅವರು ರಾತ್ರಿ ವಾಕಿಂಗ್ ಮಾಡುವಾಗ ನಟ ನಾಗಭೂಷಣ ಅವರು ಚಲಾಯಿಸುತ್ತಿದ್ದ ಕಾರು ಡಿಕ್ಕಿಯಾಗಿದೆ. ಮೊದಲು ವಿದ್ಯುತ್ ಕಂಬಕ್ಕೆ ಕಾರು ಡಿಕ್ಕಿಯಾಗಿದ್ದು, ನಂತರ ಫುಟ್‌ಪಾತ್ ಮೇಲೆ ನಡೆದುಕೊಂಡು ಹೋಗುತ್ತಿದ್ದ ದಂಪತಿಗೆ ಕಾರು ಡಿಕ್ಕಿಯಾಗಿದೆ. ಅಪಘಾತದ ತೀವ್ರತೆಗೆ ಪ್ರೇಮಾ ಅವರು ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಇನ್ನು ಗಂಭೀರವಾಗಿ ಗಾಯಗೊಂಡಿರುವ ಕೃಷ್ಣ ಅವರು ಬನ್ನೇರುಘಟ್ಟದಲ್ಲಿರುವ ಫೋರ್ಟಿಸ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ಉತ್ತರಹಳ್ಳಿ ಕೋಣನಕುಂಟೆ ಕ್ರಾಸ್ ದಾರಿಯ ಮಧ್ಯೆ ರಾತ್ರಿ 9.45ರ ಸುಮಾರಿಗೆ ಅಪಘಾತ ಸಂಭವಿಸಿದೆ. ಕೃಷ್ಣ ಹಾಗೂ ಪ್ರೇಮಾ ದಂಪತಿಯ ಪುತ್ರ ಪಾರ್ಥ ಎಂಬುವರು ಕುಮಾರಸ್ವಾಮಿ ಸಂಚಾರ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದಾರೆ. ಅಪಾರ್ಟ್‌ಮೆಂಟ್ ಬಳಿಯ ಫುಟ್‌ಪಾತ್ ಮೇಲೆ ವಾಕಿಂಗ್ ಮಾಡುವಾಗ ವೇಗವಾಗಿ ಬಂದ ಕಾರು ಡಿಕ್ಕಿಯಾಗಿದೆ ಎಂದು ದೂರಿನಲ್ಲಿ ಉಲ್ಲೇಖಿಸಿದ್ದಾರೆ.
ಕೃಷ್ಣ ಅವರ ಪರಿಸ್ಥಿತಿಯೂ ಗಂಭೀರವಾಗಿದೆ ಎಂದು ಅವರ ಕುಟುಂಬದ ಮೂಲಗಳು ತಿಳಿಸಿವೆ. ಕೃಷ್ಣ ಅವರ ಕೈ, ಕಾಲು ಹಾಗೂ ಬೆನ್ನಿಗೆ ಗಂಭೀರವಾಗಿ ಗಾಯಗಳಾಗಿವೆ ಎಂದು ತಿಳಿದುಬಂದಿದೆ. ಮೃತ ಪ್ರೇಮಾ ಅವರ ಶವವನ್ನು ಕಿಮ್ಸ್ ಆಸ್ಪತ್ರೆಗೆ ಮರಣೋತ್ತರ ಪರೀಕ್ಷೆಗೆ ಕಳುಹಿಸಲಾಗಿದೆ.
ರಾಜ್ಯದ ಇನ್ನಷ್ಟು ಸುದ್ದಿಗಾಗಿ ಈ ಲಿಂಕ್ ಕ್ಲಿಕ್ ಮಾಡಿ