ಬೆಂಗಳೂರು: ಜಯನಗರದಲ್ಲಿ ಯುವಕ ಸಂಘದ ಫ್ರೀ ಸ್ಪೇಸ್ ಪ್ರಕಲ್ಪದಡಿಯಲ್ಲಿ ಆಯೋಜಿಸಿದ್ದ ʼಸ್ಟುಡೆಂಟ್ ಲಿಟ್ ಫೆಸ್ಟ್ʼ (Student Lit Fest 2024-ವಿದ್ಯಾರ್ಥಿ ಸಾಹಿತ್ಯ ಸಂಭ್ರಮ) 2ನೇ ದಿನವಾದ ಶುಕ್ರವಾರ ವಿವಿಧ ಸಮಾನಾಂತರ ಗೋಷ್ಠಿಗಳು, ಮಾಸ್ಟರ್ ಕ್ಲಾಸ್, ಚರ್ಚಾ ಸ್ಪರ್ಧೆಗಳು, ವ್ಯಂಗ್ಯ ಚಿತ್ರ ಕಾರ್ಯಾಗಾರ ಹಾಗೂ ಸಮಾರೋಪ ಸಮಾರಂಭ ನಡೆಯಿತು.
ಕಾರ್ಯಕ್ರಮದಲ್ಲಿ ನಟ, ನಿರ್ದೇಶಕ, ಹಾಗೂ ಕಾದಂಬರಿ ರಚನೆಕಾರ ಎಸ್.ಎನ್. ಸೇತುರಾಮ್ ಅವರು ಮಾತನಾಡಿ, ಸಮಾಜದಲ್ಲಿ ಇರುವ ಒಳ್ಳೆಯ ವಿಚಾರ ನಡೆ ನುಡಿಗಳನ್ನು ಅಳವಡಿಸಿಕೊಂಡು ಸುಸ್ಥಿರ ಮತ್ತು ಸುಸಂಸ್ಕೃತ ಸಮಾಜ ನಿರ್ಮಾಣ ಮಾಡುವುದು ನಿಮ್ಮೆಲ್ಲರ ಆದ್ಯ ಕರ್ತವ್ಯ. ಇದಕ್ಕಾಗಿ ಸಾಹಿತ್ಯ, ಕಲೆಯಂತಹ ಕ್ಷೇತ್ರಗಳಲ್ಲಿ ತೊಡಗಿಸಿಕೊಳ್ಳಬೇಕು ಎಂದು ವಿದ್ಯಾರ್ಥಿಗಳಿಗೆ ಮಾರ್ಗದರ್ಶನ ಮಾಡಿದರು.
ಖ್ಯಾತ ನಿರ್ದೇಶಕರಾದ ಯೋಗರಾಜ್ ಭಟ್ ಅವರು ಮಾತನಾಡಿ, ಇಂದು ನಾವು ಪ್ರತಿನಿತ್ಯ ಹಲವಾರು ಸನ್ನಿವೇಶಗಳಲ್ಲಿ ಪಾತ್ರಧಾರಿಗಳಾಗಿರುತ್ತೇವೆ. ಹಾಗೇಯೆ ಪ್ರತಿಯೊಂದು ವಸ್ತು, ಜೀವಗಳ ಮೇಲೆ ಕಥೆಯನ್ನು ರಚಿಸಬಲ್ಲೆವು. ಕಥೆಯನ್ನು ರಚಿಸುವ ಕಲೆಗಾರರಾಗಬೇಕು ಎಂದು ವಿದ್ಯಾರ್ಥಿಗಳಿಗೆ ಮಾರ್ಗದರ್ಶನ ಮಾಡಿದರು.
ಸಂಗೀತ ಕಲಾವಿದ ಪಂಡಿತ ಪ್ರವೀಣ ಗೋಡ್ಖಿಂಡಿ ಅವರು ವಿದ್ಯಾರ್ಥಿಗಳನ್ನುದ್ದೇಶಿಸಿ ಮಾತನಾಡಿ, ನಮ್ಮ ಅನಿಸಿಕೆ ಮತ್ತು ಆಲೋಚನೆಗಳನ್ನು ಸಾಹಿತ್ಯದ ಮೂಲಕ ವ್ಯಕ್ತಪಡಿಸುವುದನ್ನು ರೂಡಿಸಿಕೊಳ್ಳಬೇಕು ಹಾಗೂ ಎಷ್ಟೇ ನವೀನತೆಗೆ ಒಗ್ಗಿಕೊಂಡರೂ ನಮ್ಮ ಪರಂಪರೆ ಹಾಗೂ ನಮ್ಮ ಅಸ್ಮಿತೆಯನ್ನು ಉಳಿಸಿಕೊಳ್ಳಲೇಬೇಕು ಎಂದು ತಿಳಿಸಿದರು.
ಈ ಸ್ಟುಡೆಂಟ್ ಲಿಟ್ ಫೆಸ್ಟ್ 2024 ಕಾರ್ಯಕ್ರಮದಲ್ಲಿ ಕಾರ್ತಿಕ್ ಎಂಬ ವಿದ್ಯಾರ್ಥಿಯು ಬರೆದ ʼಅವತರಣʼ ಎಂಬ ಪುಸ್ತಕವನ್ನು ಬಿಡುಗಡೆಗೊಳಿಸಲಾಯಿತು. ಹೀಗೆ ಯುವಕ ಸಂಘದ ಫ್ರೀ ಸ್ಪೇಸ್ ಆಯೋಜಿಸುವ ʼಸ್ಟುಡೆಂಟ್ ಲಿಟ್ ಫೆಸ್ಟ್ʼ ಯುವ ಬರಹಗಾರರಿಗೆ ತಮ್ಮ ಪುಸ್ತಕಗಳನ್ನು ಪ್ರಕಟಿಸಲು ಹಾಗೂ ಸಾಹಿತ್ಯಾöಸಕ್ತವನ್ನು ಬೆಳೆಸಿಕೊಳ್ಳಲು ಇದೊಂದು ವೇದಿಕೆಯಾಗಿ ಹೊರಹೊಮ್ಮಿತು.
ಯುವಕ ಸಂಘದ ಆಡಳಿತ ಮಂಡಳಿ ಸದಸ್ಯರಾದ ಮೋಹನಕುಮಾರ ಶ್ರೀನಿವಾಸ ಮತ್ತಿತರರು ಉಪಸ್ಥಿತರಿದ್ದರು.
ಸಮಾನಾಂತರ ಗೋಷ್ಠಿಗಳು:
ʼಸಾಹಿತ್ಯದಲ್ಲಿ ರಸಾನಂದʼ ಎಂಬ ವಿಷಯದ ಕುರಿತು ಶತಾವಧಾನಿ ಡಾ. ಆರ್. ಗಣೇಶ ಅವರು ಸಾಹಿತ್ಯಕ್ಕೆ ಆನಂದವೇ ಸಾಹಿತ್ಯದ ಅಂತಿಮ ಗುರಿ ಹಾಗೂ ನಾಟ್ಯಶಾಸ್ತ್ರ ಹಾಗೂ ಪ್ರಾಚೀನ ಸಾಹಿತ್ಯಗಳ ಕುರಿತು ಮಾರ್ಗದರ್ಶನ ಮಾಡಿದರು.
ʼಧರ್ಮಗ್ರಂಥಗಳಲ್ಲಿ ಸಮಂಜಸʼ ವಿಷಯದ ಕುರಿತು ಶ್ರೀ ದುಷ್ಯಂತ್ ಶ್ರೀಧರ ಅವರು ರಾಮಾಯಣ ಹಾಗೂ ಮಹಾಭಾರತದ ಸಮಂಜಸದ ಕುರಿತು ಮಾತನಾಡಿದರು.
ʼಚರಿತ್ರೆಗಳ ಪರಿಣಾಮಕಾರಿಯಲ್ಲಿ ಜನರು ಮತ್ತು ಸಮಾಜವನ್ನು ರೂಪಿಸುವಲ್ಲಿ ಇತಿಹಾಸಕಾರರುʼ ಎಂಬ ವಿಷಯದ ಕುರಿತು ಪತ್ರಕರ್ತ, ಲೇಖಕರಾದ ಚಂದ್ರಚೂರ್ ಘೋಷ್ ಹಾಗೂ ಅನುಜ ಧರ್ ಅವರು ಸಮಾಜವನ್ನು ರೂಪಿಸುವಲ್ಲಿ ಲೇಖಕರ ಪಾತ್ರದ ಕುರಿತು ವಿದ್ಯಾರ್ಥಿಗಳಿಗೆ ವಿವರಿಸಿದರು.
ಮಾಸ್ಟರ್ ಕ್ಲಾಸ್
ಪ್ಯಾಲಿಯೋಗ್ರಫಿ ಮತ್ತು ಹಸ್ತಪ್ರತಿಗಳು, ಪುಸ್ತಕಗಳ ಪ್ರಕಟಣೆ ಹಾಗೂ ಕಾಪಿ ರೈಟ್ಸ್, AI ಯುಗದಲ್ಲಿ ಸಾಹಿತ್ಯಿಕ ಅಭಿವ್ಯಕ್ತಿಯ ಕಲೆಯನ್ನು ಕರಗತ ಮಾಡಿಕೊಳ್ಳುವುದು, ಸಾಹಿತ್ಯ ಹಾಗೂ ಕಾದಂಬರಿ ರಚನೆ, ಬರವಣಿಗೆ ಕಾರ್ಯಾಗಾರಗಳ ಕುರಿತು ಮಾಸ್ಟರ್ ಕ್ಲಾಸ್ ನಡೆದವು.
ಚರ್ಚಾ ಸ್ಪರ್ಧೆಗಳು
ಕಾಲೇಜು ವಿದ್ಯಾರ್ಥಿಗಳಿಗಾಗಿ ಗುರುವಾರ ಪ್ರಾಥಮಿಕ ಹಂತದ ಚರ್ಚಾ ಸ್ಪರ್ಧೆಯನ್ನು ಮುಗಿಸಿ ಇಂದು ಅಂತಿಮ ಹಂತದ ಸಾಹಿತ್ಯಕ್ಕೆ ಸಂಬಂಧಿಸಿದ ವಿಷಯಗಳ ಕುರಿತು ಚರ್ಚಾ ಸ್ಪರ್ಧೆಯನ್ನು ಆಯೋಜಿಸಲಾಗಿತ್ತು.
ವ್ಯಂಗ್ಯ ಚಿತ್ರ ಕಾರ್ಯಾಗಾರ
ಚಿತ್ರಕಲಾ ವಿದ್ಯಾರ್ಥಿಗಳಿಗಾಗಿ ಸಾಹಿತ್ಯ ಕ್ಷೇತ್ರದಲ್ಲಿ ತಮ್ಮನ್ನು ತಾವು ತೊಡಗಿಸಿಕೊಳ್ಳಲು ವ್ಯಂಗ್ಯಚಿತ್ರಗಳ ಕಾರ್ಯಾಗಾರವನ್ನು ವ್ಯಂಗ್ಯ ಚಿತ್ರ ಕಲಾವಿದರಾದ ನಾಗನಾಥ ಗೌರಿಪುರ ಅವರು ವಿವಿಧ ವ್ಯಂಗ್ಯ ಚಿತ್ರಗಳನ್ನು ಬಿಡಿಸಿ ಕಾರ್ಯಾಗಾರವನ್ನು ನಡೆಸಿಕೊಟ್ಟರು.
ಇದನ್ನೂ ಓದಿ | Raja Marga Column : ರಾಮನ ಕಥೆ ಕಾಲ್ಪನಿಕ ಅಲ್ವೇ ಅಲ್ಲ, ಅಯೋಧ್ಯೆಯಲ್ಲಿದೆ ನೂರಾರು ಸಾಕ್ಷಿ!