ದೇವನಹಳ್ಳಿ: ವಿಮಾನದಲ್ಲಿ ಸಿಗರೇಟ್ ಸೇದಿ ಸುರಕ್ಷತೆಗೆ ಅಡ್ಡಿಯಾದ ಆರೋಪದಲ್ಲಿ ಪ್ರಯಾಣಿಕನೊಬ್ಬನನ್ನು ಬಂಧಿಸಲಾಗಿದೆ.
ರಾಜಸ್ಥಾನ ಮೂಲದ ಪ್ರವೀಣ್ ಕುಮಾರ್ (56) ಬಂಧಿತ ಆರೋಪಿ. ಮಂಗಳವಾರ ಮಧ್ಯಾಹ್ನ 1 ಗಂಟೆ ಸುಮಾರಿಗೆ ಘಟನೆ ನಡೆದಿದೆ. ಅಹಮದಾಬಾದ್‌ನಿಂದ ಬೆಂಗಳೂರಿಗೆ ಬರುತ್ತಿದ್ದ ಆಕಾಶ್ QP- 1326 ವಿಮಾನದಲ್ಲಿ ವಿಮಾನಯಾನ ಕಾನೂನು ಉಲ್ಲಂಘಿಸಿ ಸಿಗರೇಟ್ ಸೇವನೆ ಮಾಡಿದ ಆರೋಪ ಈತನ ಮೇಲಿದೆ.
ಕೆಂಪೇಗೌಡ ವಿಮಾನ ನಿಲ್ದಾಣದ ಡ್ಯೂಟಿ ಮ್ಯಾನೇಜರ್ ವಿಜಯ್ ತಲ್ಲೂರು ಅವರಿಂದ ದೂರು ದಾಖಲಾಗಿದ್ದು, ದೂರು ದಾಖಲಿಸಿಕೊಂಡ ಕೆಐಎ ಪೊಲೀಸರಿಂದ ಆರೋಪಿಯ ಬಂಧನವಾಗಿದೆ. ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ವಿಮಾನದಲ್ಲಿ ಮದ್ಯ ಸೇವಿಸಿ ಅನುಚಿತವಾಗಿ ವರ್ತಿಸಿ ಮಹಿಳೆ
ಕೋಲ್ಕತ್ತ: ಇತ್ತೀಚೆಗೆ ವಿಮಾನದಲ್ಲಿ ಪ್ರಯಾಣಿಕರು ಮದ್ಯಪಾನ ಮಾಡಿ ಅವಾಂತರ ಸೃಷ್ಟಿಸಿದ ಹಲವು ಘಟನೆಗಳ ಬಗ್ಗೆ ಓದಿದ್ದೇವೆ. ಅಂಥದ್ದೇ ಮತ್ತೊಂದು ಘಟನೆ ಈಗ ದೆಹಲಿ-ಕೋಲ್ಕತ್ತ ಇಂಡಿಗೋ ವಿಮಾನ (IndiGo Flight)ದಲ್ಲಿ ನಡೆದಿದೆ. ಈ ಸಲ ಎಡವಟ್ಟು ಮಾಡಿದ್ದು ಒಬ್ಬಳು ಮಹಿಳಾ ಪ್ರಯಾಣಿಕಳು. ವಿಮಾನದಲ್ಲಿ ಮದ್ಯಪಾನ ಮಾಡಿದ ಮಹಿಳೆ ಉಳಿದ ಪ್ರಯಾಣಿಕರು, ವಿಮಾನ ಸಿಬ್ಬಂದಿಯೊಂದಿಗೆ ಅನುಚಿತವಾಗಿ ವರ್ತಿಸಿದ್ದಾಳೆ. ಬಳಿಕ ಕೋಲ್ಕತ್ತದ ನೇತಾಜಿ ಸುಭಾಷ್ ಚಂದ್ರ ಬೋಸ್ ವಿಮಾನ ನಿಲ್ದಾಣದಲ್ಲಿ ವಿಮಾನ ಲ್ಯಾಂಡ್ ಆಗುತ್ತಿದ್ದಂತೆ ಮಹಿಳೆಯನ್ನು ಕೇಂದ್ರ ಕೈಗಾರಿಕಾ ಭದ್ರತಾ ಪಡೆ ಸಿಬ್ಬಂದಿ (ಸಿಐಎಸ್ಎಫ್) ಬಂಧಿಸಿದ್ದಾರೆ.
ಬಂಧಿತ ಮಹಿಳೆ ಹೆಸರು ಪರಮ್ಜಿತ್ ಕೌರ್. ಈಕೆ ದೆಹಲಿಯಿಂದ ಕೋಲ್ಕತ್ತಕ್ಕೆ ಪ್ರಯಾಣ ಮಾಡುತ್ತಿದ್ದಳು. ಮದ್ಯ ಪಾನ ಮಾಡಿ ಅಮಲು ಏರಿಸಿಕೊಂಡ ಸ್ಥಿತಿಯಲ್ಲಿ ಕುಳಿತಿದ್ದಳು. ಅದನ್ನು ವಿಮಾನ ಪರಿಚಾರಕರು/ಗಗನಸಖಿಯರು ಗಮನಿಸಿದ್ದಾರೆ. ಆದರೆ ಕೆಲವೇ ಹೊತ್ತಲ್ಲಿ ಆಕೆ ತನ್ನ ಅಕ್ಕ-ಪಕ್ಕ ಕುಳಿತ ಪ್ರಯಾಣಿಕರೊಂದಿಗೆ ಅನುಚಿತ ವರ್ತನೆ ಶುರು ಮಾಡಿದ್ದಳು. ಈ ಫ್ಲೈಟ್ ರಾತ್ರಿ ಸಂಚಾರ ಮಾಡುತ್ತಿದ್ದರಿಂದ ಉಳಿದ ಪ್ರಯಾಣಿಕರು ನಿದ್ದೆ ಮಾಡುವ ಮೂಡ್ನಲ್ಲಿದ್ದರೂ, ಮಹಿಳೆ ಅಸಭ್ಯವಾಗಿ ವರ್ತನೆ ಮುಂದುವರಿಸಿದ್ದಳು. ಇದೆಲ್ಲ ನಡೆದಿದ್ದು ತಡರಾತ್ರಿ 1.10ರ ಹೊತ್ತಿಗೆ. ವಿಮಾನದಲ್ಲಿ ಇದ್ದಾಗಲೇ ಏರ್ಲೈನ್ ಅಧಿಕಾರಿಗಳಿಗೆ ಮಾಹಿತಿ ನೀಡಲಾಗಿತ್ತು. ಅವರು ಸಿಐಎಸ್ಎಫ್ ಸಿಬ್ಬಂದಿಗೆ ತಿಳಿಸಿದ್ದರು. ಹೀಗಾಗಿ ಕೋಲ್ಕತ್ತದಲ್ಲಿ ವಿಮಾನ ಲ್ಯಾಂಡ್ ಆಗುತ್ತಿದ್ದಂತೆ ಮಹಿಳೆಯ ಬಂಧನವಾಗಿದೆ. ಬುಧವಾರ ತಡರಾತ್ರಿ ಆಕೆಯನ್ನು ವಶಕ್ಕೆ ಪಡೆದ ಸಿಐಎಸ್ಎಫ್ ಸಿಬ್ಬಂದಿ ಗುರುವಾರ ಮುಂಜಾನೆ 7 ಗಂಟೆವರೆಗೂ ಆಕೆಯನ್ನು ಬಂಧನದಲ್ಲಿಯೇ ಇಟ್ಟುಕೊಂಡಿದ್ದರು. ನಂತರ ಅವಳನ್ನು ಏರ್ಪೋರ್ಟ್ ಪೊಲೀಸರ ವಶಕ್ಕೆ ಕೊಟ್ಟಿದ್ದಾರೆ.
ಇದನ್ನೂ ಓದಿ: Viral Video: ಒಂದೇ ವಿಮಾನದಲ್ಲಿ ತಾಯಿ-ಮಗಳು ಗಗನಸಖಿಯರು; ತಾಯಂದಿರ ದಿನದಂದು ಪ್ರಯಾಣಿಕರೂ ಭಾವುಕ