ಬೆಂಗಳೂರು: ರಾಜ್ಯದಲ್ಲಿ ನಡೆಯುತ್ತಿರುವ ವಿಜಯಪುರ, ಹಾಸನ ಸೇರಿ ವಿವಿಧ ವಿಮಾನ ನಿಲ್ದಾಣಗಳು ಮತ್ತು ಏರ್-ಸ್ಟ್ರಿಪ್ ಅಭಿವೃದ್ಧಿ ಯೋಜನೆಗಳ ಪ್ರಗತಿ ಪರಿಶೀಲನಾ ಸಭೆಯನ್ನು ಮೂಲಸೌಕರ್ಯ ಅಭಿವೃದ್ಧಿ ಸಚಿವ ಎಂ.ಬಿ. ಪಾಟೀಲ (MB Patil) ಶುಕ್ರವಾರ ನಡೆಸಿದರು.
ಹಲವು ಯೋಜನೆಗಳಿಗೆ ತಾಂತ್ರಿಕ ಅಡಚಣೆಗಳು ಎದುರಾಗಿವೆ. ಇನ್ನು ಕೆಲ ಯೋಜನೆಗಳಿಗೆ ಅಗತ್ಯ ಪ್ರಮಾಣದ ಭೂಮಿ ಸಿಕ್ಕಿಲ್ಲ. ಇವೆಲ್ಲವನ್ನೂ ತ್ವರಿತವಾಗಿ ಬಗೆಹರಿಸುವಂತೆ ಅಧಿಕಾರಿಗಳಿಗೆ ಸಚಿವರು ಕಟ್ಟುನಿಟ್ಟಿನ ಸೂಚನೆ ನೀಡಿದರು.
ಇದನ್ನೂ ಓದಿ: CM Siddaramaiah: ಕಾಮ್ರೇಡ್ ಸೂರ್ಯನಾರಾಯಣ್ ಸದನದ ಒಳಗೆ, ಹೊರಗೂ ಹೋರಾಟಗಾರರಾಗಿದ್ದರು: ಸಿದ್ದರಾಮಯ್ಯ
219 ಕೋಟಿ ರೂ. ವೆಚ್ಚದಲ್ಲಿ, 322 ಎಕರೆ ಜಾಗದಲ್ಲಿ ನಿರ್ಮಿಸಲು ಉದ್ದೇಶಿಸಿರುವ ರಾಯಚೂರು ಗ್ರೀನ್ ಫೀಲ್ಡ್ ವಿಮಾನ ನಿಲ್ದಾಣದ ಕಾಮಗಾರಿ ಆರಂಭಕ್ಕೆ ತಾಂತ್ರಿಕ ಅಡಚಣೆಗಳಿದ್ದು, ತಕ್ಷಣ ಅವುಗಳನ್ನು ಬಗೆಹರಿಸಲು ಅಧಿಕಾರಿಗಳಿಗೆ ಸೂಚಿಸಿದರು. ಅಗತ್ಯ ಬಿದ್ದರೆ ದೆಹಲಿಗೂ ಹೋಗಿ ಬರಬೇಕು ಎನ್ನುವ ಕಟ್ಟಾಜ್ಞೆ ಹೊರಡಿಸಿದರು.
ರಾಯಚೂರು ವಿಮಾನ ನಿಲ್ದಾಣ ಯೋಜನೆಗೆ ಈಗಾಗಲೇ ಡಿಪಿಆರ್ ಸಿದ್ಧವಾಗಿದೆ. ಯೋಜನೆಗೆ ಬೇಕಾಗಿರುವ ಪರಿಸರ ಇಲಾಖೆಯ ಅನುಮತಿಯನ್ನು ಕೂಡ ಬೇಗನೆ ಪಡೆಯಬೇಕು ಎಂದು ಅವರು ಹೇಳಿದ್ದಾರೆ.
ಹಾಸನ ವಿಮಾನ ನಿಲ್ದಾಣದ ಕಾಮಗಾರಿ ಚುರುಕಾಗಿ ಮುಗಿಸಬೇಕು. ಭೂಸ್ವಾಧೀನದ ಸಮಸ್ಯೆ ಇದ್ದು ತಕ್ಷಣ ಬಗೆಹರಿಸಲು ಸಚಿವರು ಸೂಚಿಸಿದರು.
ಉಡಾನ್ ಯೋಜನೆ ಸ್ಥಗಿತವಾಗಿರುವ ಕಾರಣ ಬೀದರ್ ವಿಮಾನ ನಿಲ್ದಾಣದಿಂದ ವಿಮಾನಗಳ ಹಾರಾಟ ನಿಲ್ಲಿಸಲಾಗಿದೆ. ಈ ಸಂಬಂಧ ವಿಮಾನಯಾನ ಸಂಸ್ಥೆಗಳ ಜತೆ ಮಾತುಕತೆ ನಡೆಸಿ, ಪರ್ಯಾಯ ಕ್ರಮಗಳ ಬಗ್ಗೆ ತೀರ್ಮಾನಿಸಬೇಕು. ಪುನಃ ಉಡಾನ್ ಯೋಜನೆ ಚಾಲನೆಗೆ ಏನೆಲ್ಲ ಕ್ರಮ ತೆಗೆದುಕೊಳ್ಳಬೇಕು ಎಂಬುದರ ಬಗ್ಗೆ ತಕ್ಷಣ ಕ್ರಮ ತೆಗೆದುಕೊಳ್ಳುವಂತೆ ಸಚಿವರು ಸೂಚಿಸಿದರು.
ಇದನ್ನೂ ಓದಿ: Bengaluru Power Cut: ಗಮನಿಸಿ, ಬೆಂಗಳೂರಿನ ಈ ಪ್ರದೇಶಗಳಲ್ಲಿ ನಾಳೆ ಕರೆಂಟ್ ಇರಲ್ಲ!
ವಿಜಯಪುರ ವಿಮಾನ ನಿಲ್ದಾಣ ನಿರ್ಮಾಣ ಕಾಮಗಾರಿ ಬಹುತೇಕ ಪೂರ್ಣವಾಗಿದ್ದು ಅಗತ್ಯ ಇರುವ ಅಗ್ನಿಶಾಮಕ ವಾಹನಗಳನ್ನು ಖರೀದಿಸಲು ತ್ವರಿತವಾಗಿ ಕ್ರಮ ತೆಗೆದುಕೊಳ್ಳಲು ಸಚಿವರು ಅಧಿಕಾರಿಗಳಿಗೆ ಸೂಚಿಸಿದರು. ಇದೇ ಸಂದರ್ಭದಲ್ಲಿ ವಿಮಾನ ನಿಲ್ದಾಣಕ್ಕೆ ಸಂಪರ್ಕ ಕಲ್ಪಿಸುವ ರಸ್ತೆ ನಿರ್ಮಾಣಕ್ಕೆ ಭೂಸ್ವಾಧೀನಕ್ಕೂ ಸೂಕ್ತ ಕ್ರಮ ತೆಗೆದುಕೊಳ್ಳುವಂತೆ ಸಲಹೆ ನೀಡಿದರು.
ಏರ್-ಸ್ಟ್ರಿಪ್ಸ್ ಅಭಿವೃದ್ಧಿಗೆ ಭೂಮಿ ಗುರುತಿಸಿ
ಪ್ರವಾಸೋದ್ಯಮವನ್ನು ಪರಿಗಣಿಸಿ ಚಿಕ್ಕಮಗಳೂರು, ಕೊಡಗು, ಧರ್ಮಸ್ಥಳ ಮತ್ತು ಹಂಪಿಯಲ್ಲಿ ಏರ್-ಸ್ಟ್ರಿಪ್ ನಿರ್ಮಿಸುವುದಾಗಿ ಘೋಷಿಸಲಾಗಿದೆ. ಈ ಪೈಕಿ ಕೊಡಗು ಮತ್ತು ಧರ್ಮಸ್ಥಳದಲ್ಲಿ 140 ಎಕರೆ ಭೂಮಿ ಅಗತ್ಯವಿದೆ. ಸ್ಥಳೀಯ ಶಾಸಕರು ಮತ್ತು ಜಿಲ್ಲಾಡಳಿತದ ಜತೆ ವ್ಯವಹರಿಸಿ, ಈ ಪ್ರಕ್ರಿಯೆ ಮುಗಿಸಬೇಕು ಎಂದು ಸಚಿವರು ತಿಳಿಸಿದರು.
ಚಿಕ್ಕಮಗಳೂರಿನಲ್ಲಿ ಈ ಯೋಜನೆಗೆ ಈಗಾಗಲೇ 120 ಎಕರೆ ಜಾಗ ಗುರುತಿಸಲಾಗಿದೆ. ಆದರೆ ಇದಕ್ಕೆ ಇನ್ನೂ 17.5 ಎಕರೆ ಅಗತ್ಯವಿದ್ದು, ಇದನ್ನು ಗುರುತಿಸಲು ನಿರ್ದೇಶಿಸಲಾಗಿದೆ. ಜತೆಗೆ ಈ ಸಂಬಂಧ ಡಿಪಿಆರ್ ಸಿದ್ಧಪಡಿಸಲು ಪವನ್ ಹನ್ಸ್ ಕಂಪನಿಗೆ ಹೇಳಲಾಗಿದೆ ಎಂದು ಸಚಿವರು ಮಾಹಿತಿ ನೀಡಿದರು.
ಕಾರವಾರದಲ್ಲಿ ಸಿವಿಲ್ ಎನ್ಕ್ಲೇವ್ ಅಭಿವೃದ್ಧಿಗೆ ಇನ್ನೂ 97 ಎಕರೆ ಭೂಮಿ ಬೇಕಾಗಿದೆ. ಇದಕ್ಕಾಗಿ ಈಗಾಗಲೇ 27.34 ಕೋಟಿ ರೂಪಾಯಿಗೂ ಹೆಚ್ಚು ಹಣ ಕೊಡಲಾಗಿದೆ ಎಂದು ಅವರು ತಿಳಿಸಿದರು.
ರಾಯಚೂರು ವಿಮಾನ ನಿಲ್ದಾಣಕ್ಕೆ ಸಂಬಂದಿಸಿದಂತೆ ಆ ಜಿಲ್ಲೆಯ ಉಸ್ತುವಾರಿ ಸಚಿವ ಡಾ. ಶರಣಪ್ರಕಾಶ ಪಾಟೀಲ, ಸಣ್ಣ ನೀರಾವರಿ ಸಚಿವ ಎನ್.ಎಸ್. ಬೋಸರಾಜು, ರಾಯಚೂರು ಸಂಸದ ಕುಮಾರ್ ನಾಯಕ್, ರಾಯಚೂರು ಜಿಲ್ಲಾಧಿಕಾರಿ ನಿತೇಶ ಸಭೆಯಲ್ಲಿ ಹಾಜರಿದ್ದರು.
ಇದನ್ನೂ ಓದಿ: Areca Nut Price: ದರ ಏರಿಳಿಕೆ; ಅಡಿಕೆ ಮಾರುಕಟ್ಟೆಯಲ್ಲೂ ಶುರುವಾಗಿದೆ ಷೇರುಪೇಟೆಯಂತೆ ಗೂಳಿ ಕಾಳಗ, ಕರಡಿ ಕುಣಿತ!
ಚಿಕ್ಕಮಗಳೂರು ಏರ್ ಸ್ಟ್ರಿಪ್‌ಗೆ ಸಂಬಂಧಿಸಿದಂತೆ ಅಲ್ಲಿನ ಶಾಸಕ ತಮ್ಮಯ್ಯ ಅವರೊಂದಿಗೆ ಸಚಿವರು ಸಭೆ ನಡೆಸಿದರು.ಈ ವೇಳೆ ಕೆಎಸ್ಐಐಡಿಸಿ ವ್ಯವಸ್ಥಾಪಕ ನಿರ್ದೇಶಕಿ ಖುಷ್ಬೂ ಗೋಯಲ್, ಮೂಲ ಸೌಕರ್ಯ ಇಲಾಖೆ ಹೆಚ್ಚುವರಿ ಕಾರ್ಯದರ್ಶಿ ಹೆಬ್ಸಿಬಾ ರಾಣಿ ಕೊರ್ಲಪಟ್ಟಿ ಮತ್ತಿತರ ಅಧಿಕಾರಿಗಳು ಸಭೆಯಲ್ಲಿ ಇದ್ದರು.