ಬೆಂಗಳೂರು: ಮುಲಕನಾಡು ಮಹಾಸಂಘ ಮತ್ತು ಅದಮ್ಯ ಚೇತನ ಹಾಗೂ ಅನಂತಕುಮಾರ್ ಪ್ರತಿಷ್ಠಾನ ಸಂಯುಕ್ತವಾಗಿ ಪುಸ್ತಕ ಲೋಕಾರ್ಪಣೆ, ಎಂಜಿನಿಯರ್ ದಿನಾಚರಣೆ, ದಿ. ಅನಂತಕುಮಾರ್ ಜನ್ಮದಿನಾಚರಣೆ, ಸನ್ಮಾನ ಹಾಗೂ ಪ್ರತಿಭಾ ಪುರಸ್ಕಾರ ಕಾರ್ಯಕ್ರಮವನ್ನು ಸೆಪ್ಟೆಂಬರ್ 21ರಂದು ಏರ್ಪಡಿಸಿವೆ.
ಬೆಂಗಳೂರಿನ ಕೆ.ಆರ್. ರಸ್ತೆಯಲ್ಲಿರುವ ಕರ್ನಾಟಕ ಜೈನ ಭವನದಲ್ಲಿ ಬುಧವಾರ ಸಂಜೆ 6 ಗಂಟೆಗೆ ಈ ಕಾರ್ಯಕ್ರಮ ನಡೆಯಲಿದ್ದು, ವಿಧಾನಸಭೆಯ ಸಭಾಧ್ಯಕ್ಷ ವಿಶ್ವೇಶ್ವರ ಹೆಗಡೆ ಕಾಗೇರಿ ಮುಖ್ಯ ಅತಿಥಿಗಳಾಗಿ ಭಾಗವಹಿಸಲಿದ್ದಾರೆ. ಅನಂತಕುಮಾರ್ ಪ್ರತಿಷ್ಠಾನದ ಅಧ್ಯಕ್ಷ ಪಿ.ವಿ. ಕೃಷ್ಣ ಭಟ್ ಈ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಲಿದ್ದಾರೆ.
ಈ ಕಾರ್ಯಕ್ರಮದಲ್ಲಿ ಬಿಡಬ್ಲ್ಯುಎಸ್‌ಎಸ್‌ಬಿಯ ನಿವೃತ್ತ ಮುಖ್ಯ ಎಂಜಿನಿಯರ್ ಎಸ್.ಆರ್. ಸತ್ಯನಾರಾಯಣ ಅವರಿಗೆ “ಸರ್ ಎಂ.ವಿ.ʼʼ ಪ್ರಶಸ್ತಿ ಹಾಗೂ ಬೆಂಗಳೂರಿನ ಐಐಎಂನ ಮಾಜಿ ನಿರ್ದೇಶಕ ಡಾ. ಕೆ.ಆರ್.ಎಸ್. ಮೂರ್ತಿ ಅವರಿಗೆ “ಅನಂತಕುಮಾರ್ ಪ್ರಶಸ್ತಿʼʼ ನೀಡಿ ಗೌರವಿಸಲಾಗುತ್ತದೆ.
ಈ ಸಂದರ್ಭದಲ್ಲಿ ಟಿ.ಎಸ್. ಗೋಪಾಲ್ ಬರೆದಿರುವ ಅನಂತಕುಮಾರ್‌ರವರ ಜೀವನಗಾಥೆ “ಅನಂತಯಾನʼʼವನ್ನು ಬಿಡುಗಡೆ ಮಾಡಲಾಗುತ್ತದೆ. ಈ ಪುಸ್ತಕವು ಮಾಜಿ ಕೇಂದ್ರ ಸಚಿವ ಅನಂತಕುಮಾರ್ ಅವರ 1959 ರಿಂದ1987ರ ವರೆಗಿನ ಅವರ ಜೀವನದ ಮಾಹಿತಿಯನ್ನು ಹೊಂದಿದ್ದು, ಇದು ಅವರ ಜೀವನಗಾಥೆಯ ಮೊದಲ ಭಾಗವಾಗಿದೆ. ನಂತರ ಪ್ರತಿಭಾ ಪುರಸ್ಕಾರ ಕಾರ್ಯಕ್ರಮಗಳೂ ನಡೆಯಲಿವೆ.
ಆಸಕ್ತರೆಲ್ಲರೂ ಈ ಕಾರ್ಯಕ್ರಮದಲ್ಲಿ ಭಾಗವಹಿಸಬೇಕೆಂದು ಅದಮ್ಯ ಚೇತನದ ಅಧ್ಯಕ್ಷೆ ಡಾ. ತೇಜಸ್ವಿನಿ ಅನಂತಕುಮಾರ್ ಮತ್ತು ಮುಲಕನಾಡು ಮಹಾಸಂಘದ ಅಧ್ಯಕ್ಷ ಡಾ. ಟಿ. ವಿ. ರವಿಶಂಕರ್ ಪ್ರಕಟಣೆಯಲ್ಲಿ ಕೋರಿದ್ದಾರೆ.
ಇದನ್ನೂ ಓದಿ | ಸೆ.22ಕ್ಕೆ ದಿ.ಅನಂತಕುಮಾರ್ 63ನೇ ಜನ್ಮದಿನ; ಪ್ರೇರಣಾದಾಯಿ ಕಾರ್ಯಕ್ರಮಗಳ ಆಯೋಜನೆ