ಬೆಂಗಳೂರು: ಅನಂತಕುಮಾರ್ ಪ್ರತಿಷ್ಠಾನದ (Ananthkumar Foundation) ‘ದೇಶ ಮೊದಲು’ ೧೦ನೇ ಸಂವಾದ ಕಾರ್ಯಕ್ರಮದ ಭಾಗವಾಗಿ ಕೊಲ್ಯಾಬೊರೇಟಿವ್ ಇನೋವೇಷನ್ (Collaborative Innovation: Win-Win for all not Zero sum game) ವಿಷಯದ ಕುರಿತ ವೆಬಿನಾರ್ ನಡೆಸಲಾಯಿತು. ವೆಬಿನಾರ್‌ನಲ್ಲಿ ದಿ ಅಗ್ರಿ ಕೊಲ್ಯಾಬೊರೇಟರಿ ಸಂಸ್ಥೆ ಸ್ಥಾಪಕ ನಿಪುಣ್ ಮೆಹ್ರೋತ್ರ, ಹಿರಿಯ ಪತ್ರಕರ್ತ, ಹಿಂದು ಬಿಜಿನೆಸ್ ಲೈನ್ ನಿವೃತ್ತ ಸಂಪಾದಕ ರಾಘವನ್ ಶ್ರೀನಿವಾಸನ್ ಹಾಗೂ ಎಐಸಿಟಿಇ ಮುಖ್ಯ ಸಮನ್ವಯ ಅಧಿಕಾರಿ ಡಾ. ಬುದ್ಧ ಚಂದ್ರಶೇಖರ್ ಭಾಗಿಯಾಗಿದ್ದರು.
ಪ್ರಾರಂಭದಲ್ಲಿ ಮಾತನಾಡಿದ ಅದಮ್ಯ ಚೇತನ ಸಂಸ್ಥೆಯ ಮುಖ್ಯಸ್ಥೆ ಡಾ. ತೇಜಸ್ವಿನಿ ಅನಂತಕುಮಾರ್, ಹತ್ತು ವರ್ಷಗಳಲ್ಲಿ ಭಾರತವು ಅಭಿವೃದ್ಧಿ ಹೊಂದಿದ ದೇಶಗಳ ಸಾಲಿಗೆ ಸೇರಲು ಪೂರಕವಾಗಿ ಹೊಸ ಹೊಸ ಆವಿಷ್ಠಾರಗಳು ನಡೆಯಬೇಕೆಂದು ಪ್ರಧಾನಿ ನರೇಂದ್ರ ಮೋದಿಯವರು ನೀಡಿದ ಕರೆಗೆ ಅನುಗುಣವಾಗಿ ಚಿಂತನಾ ನಾಯಕತ್ವ (Thought Leadership) ರೂಪಿಸಲು ಪ್ರತಿಷ್ಠಾನವು ಅನೇಕ ಕಾರ್ಯಕ್ರಮಗಳನ್ನು ಕೈಗೊಂಡಿದೆ ಎಂದರು.
ಬಳಿಕ ಸಂವಾದಲ್ಲಿ ಮಾತನಾಡಿದ ದಿ ಅಗ್ರಿ ಕೊಲ್ಯಾಬೊರೇಟರಿ ಸಂಸ್ಥೆ ಸ್ಥಾಪಕ ನಿಪುಣ್ ಮೆಹ್ರೋತ್ರ, ದೇಶದ ಶೇ. 80ರಷ್ಟು ನೀರನ್ನು ಬಳಸಿಕೊಳ್ಳುವ, ಶೇ. 50ರಷ್ಟು ಶ್ರಮಿಕರನ್ನು ತೊಡಗಿಸಿಕೊಳ್ಳುವ ಕೃಷಿ ಕ್ಷೇತ್ರದಲ್ಲಿ ವಾರ್ಷಿಕವಾಗಿ ಸುಮಾರು 92,000 ಕೋಟಿ ರೂಪಾಯಿಗಳ ಆಹಾರ ಸಾಮಗ್ರಿ ವ್ಯರ್ಥವಾಗುತ್ತಿದೆ. ಈ ಕ್ಷೇತ್ರದಲ್ಲಿ ಹಣಕಾಸು ಮತ್ತು ಕೌಶಲ್ಯಗಳು ಮುಕ್ತವಾಗಿ ದೊರೆಯುತ್ತಿಲ್ಲ.
ಡಿಜಿಟಲ್ ತಂತ್ರಜ್ಞಾನ ಇನ್ನೂ ಈ ಕ್ಷೇತ್ರದಲ್ಲಿ ಸಾಕಷ್ಟು ತೊಡಗಿಕೊಂಡಿಲ್ಲ. ಕೃಷಿಯು ಲಾಭದ ಮೇಲೆ ಗಮನ ಹರಿಸುವುದಕ್ಕಿಂತ ಹೆಚ್ಚಾಗಿ ಸಹಯೋಗದ ಕಡೆ ಹೆಚ್ಚಿನ ಗಮನ ಹರಿಸಬೇಕಾಗಿದೆ. ಕೃಷಿ ಕ್ಷೇತ್ರವನ್ನು ಆರ್ಥಿಕವಾಗಿ ಲಾಭಹೀನ ಎಂದು ಪರಿಗಣಿಸುವಂತಿಲ್ಲ. ಡಿಜಿಟಲ್ ತಂತ್ರಜ್ಞಾನದ ಬಳಕೆಯಿಂದ 270 ರಿಂದ 300 ಬಿಲಿಯನ್ ಡಾಲರುಗಳ ಕ್ಷೇತ್ರದಲ್ಲಿ ವಾರ್ಷಿಕವಾಗಿ 50-60 ಬಿಲಿಯನ್ ಡಾಲರುಗಳ ಹೆಚ್ಚಳವನ್ನು ಸಾಧಿಸಬಹುದಾಗಿದೆ ಎಂದು ತಿಳಿಸಿದರು.
ರಾಘವನ್ ಶ್ರೀನಿವಾಸನ್ ಮಾತನಾಡುತ್ತ, ಕೃಷಿ ಕ್ಷೇತ್ರದ ಸಮಸ್ಯೆಗಳು ಕಳೆದ 25 ವರ್ಷಗಳಿಂದ ಹಾಗೆಯೇ ಉಳಿದುಕೊಂಡು ಬಂದಿವೆ. ಈ ಕ್ಷೇತ್ರದಲ್ಲಿ ಡಿಜಿಟಲ್ ಮೂಲಸೌಕರ್ಯಗಳ ಅಭಿವೃದ್ಧಿಯ ಪ್ರಮಾಣ ತುಂಬ ಕಡಿಮೆಯಿದೆ. ಡಿಜಿಟಲ್ ಕ್ಷೇತ್ರದಲ್ಲಿ ಸರ್ಕಾರ ಮತ್ತು ಖಾಸಗಿ ಸಹಭಾಗಿತ್ವದಲ್ಲಿ ಅಪಾರ ಸಾಧನೆ ಮಾಡಲಾಗಿದೆ. ಯುಪಿಐ, ಆರೋಗ್ಯ ಸೇತು ಮುಂತಾದ ಆವಿಷ್ಠಾರಗಳು ಹಾಗೂ ಕೋವಿಡ್ ಸಮಯದಲ್ಲಿ ನಡೆದ ಆವಿಷ್ಕಾರಗಳು ಇದಕ್ಕೆ ಉತ್ತಮ ಉದಾಹರಣೆ . ಸ್ಪರ್ಧಾತ್ಮಕತೆಯಿಂದ ಸಹಯೋಗದ ಕಡೆ ಮುನ್ನಡೆದಿರುವುದರಿಂದ ಇದು ಸಾಧ್ಯವಾಗಿದೆ. ಒಂದು ಸಾಮಾನ್ಯ ಉದ್ದೇಶಕ್ಕಾಗಿ ಎಲ್ಲರೂ ಒಂದುಗೂಡುವುದು ಇಂದಿನ ಅಗತ್ಯ ಎಂದರು.
37 ಲಕ್ಷ ಕೋಟಿ ರೂಪಾಯಿಗಳ ದುಡಿಯುವ ಬಂಡವಾಳ ಹೊಂದಿರುವ ಕೃಷಿಕ್ಷೇತ್ರದಲ್ಲಿ ಸರ್ಕಾರದ ಪಾಲುದಾರಿಕೆ ನಗಣ್ಯವೆಂಬಷ್ಟು ಕಡಿಮೆಯಿದೆ. ಖಾಸಗಿ ಪಾಲುದಾರಿಕೆಯೇ ಅಧಿಕವಾಗಿರುವ ಪರಿಸರ ವ್ಯವಸ್ಥೆಗೆ ಭಾರತೀಯ ರೈತರು ಒಗ್ಗಿಕೊಂಡಿದ್ದಾರೆ. ಭಾರತದಲ್ಲಿ ಕೋಳಿ ಸಾಕಣೆ, ಮೀನು ಸಾಕಣಿ, ಶ್ವೇತ ಕ್ರಾಂತಿ, ಹಸಿರು ಕ್ರಾಂತಿ ಯಶಸ್ವಿಯಾಗಲು ನವೀನ ಆವಿಷ್ಠಾರಗಳೇ ಕಾರಣ, ಇದು ಸಾಧ್ಯವಾಗಲು ರಾಜಕೀಯದಿಂದ ಹೊರತಾದ ಹೊಸ ಆರ್ಥಿಕ ಮಾದರಿಗಳ ಆವಿಷ್ಠಾರದ ಅಗತ್ಯವಿದೆ ಎಂದು ಅವರು ಹೇಳಿದರು.
ನಂತರ ಮಾತನಾಡಿದ ಬುದ್ಧ ಚಂದ್ರಶೇಖರ್, ಭಾರತದ ಇತಿಹಾಸದಲ್ಲಿ ಸಾವಿರಾರು ವರ್ಷಗಳಿಂದಲೇ ನೂತನ ಅವಿಷ್ಕಾರಗಳು ನಡೆದಿರುವುದನ್ನು ಕಾಣಬಹುದು. ಸೊನ್ನೆ, ದಶಮಾನ ಪದ್ಧತಿ, ಪೈ ಸ್ಥಿರಾಂಕ, ಆಯುರ್ವೇದ, ಫ್ಲಶ್ ಶೌಚಾಲಯ, ಸತುವನ್ನು ಕರಗಿಸುವ ವಿಧಾನ ಮುಂತಾದ ಸಾವಿರಾರು ಆವಿಷ್ಕಾರಗಳನ್ನು ನಮ್ಮ ದೇಶದಲ್ಲಿ ಮಾಡಲಾಗಿದೆ. ಸಹಯೋಗದ ಮೂಲಕ ಆವಿಷ್ಕಾರದ ಗುಣ ಭಾರತೀಯ ಸಂಸ್ಕೃತಿಯಲ್ಲಿ ಅಂತರ್ಗತವಾಗಿದೆ ಎಂದು ಹೇಳಿದರು. ಮಕ್ಕಳಿಗೆ ಎಳೆಯ ವಯಸ್ಸಿನಲ್ಲಿಯೇ ಆವಿಷ್ಠಾರಗಳಿಗೆ ಸೂಕ್ತ ಪ್ರೋತ್ಸಾಹ ನೀಡುವ ನಿಟ್ಟಿನಲ್ಲಿ ಹೊಸ ಶಿಕ್ಷಣ ನೀತಿಯನ್ನು ರೂಪಿಸಲಾಗಿದೆ. ಈ ನೀತಿಯು ಸೃಜನಶೀಲತೆಗೆ ಒತ್ತು ನೀಡುತ್ತದೆ. ಹಲವು ಶಿಕ್ಷಣ ಕೇಂದ್ರಗಳು ಜತೆಗೂಡಿ ಆವಿಷ್ಠಾರದ ನೆಲೆಗಳನ್ನು ರೂಪಿಸಿಕೊಳ್ಳಲು ನೂತನ ಶಿಕ್ಷಣ ನೀತಿ ಪೂರಕವಾಗಿದೆ ಎಂದೂ ಅವರು ಹೇಳಿದರು.
ಅತ್ಯಂತ ಕುಗ್ರಾಮದಲ್ಲಿ ನೆಲೆಸಿರುವ ಜನರೂ ತಮ್ಮ ಉತ್ಪನ್ನಗಳನ್ನು ಜಾಗತಿಕ ಮಾರುಕಟ್ಟೆಯಲ್ಲಿ ಮಾರಲು ಅನುವಾಗುವಂತೆ ಡಿಜಿಟಲ್ ಇಂಡಿಯಾದ ಆವಿಷ್ಕಾರಗಳು ನಡೆಯಬೇಕಿವೆ. ಭಾರತವು ಮಾಹಿತಿ ತಂತ್ರಜ್ಞಾನದ ಕೇಂದ್ರವಾಗಿರುವಂತೆ ಆವಿಷ್ಕಾರಗಳ ಕೇಂದ್ರವೂ ಆಗಬೇಕೆಂದು ಟೀಮ್ ಇಂಡಿಯಾದ ಉದ್ದೇಶ ಎಂದೂ ಬುದ್ಧ ಚಂದ್ರಶೇಖರ್ ತಿಳಿಸಿದರು.
ಇದನ್ನೂ ಓದಿ | Cold Storage | ಅಂಡಗಿ ಗ್ರಾಮದಲ್ಲಿ ಕೃಷಿ ಉತ್ಪನ್ನ ಶೈತ್ಯಾಗಾರ; 9.5 ಕೋಟಿ ಅನುದಾನ ಮಂಜೂರು