Site icon Vistara News

ʼಯಾವ ಹೆಂಡತಿಯೂ ಪತಿಯನ್ನು ಕೊಲ್ಲಲ್ಲʼ ಎಂದು ದುಃಖಿಸಿದ ಅನಂತರಾಜು ಪತ್ನಿ ಸುಮಾ

ಬೆಂಗಳೂರು: ಬಿಜೆಪಿ ಮುಖಂಡ ಅನಂತರಾಜು ಆತ್ಮಹತ್ಯೆ ಪ್ರಕರಣದ ಹಿನ್ನೆಲೆಯಲ್ಲಿ ಪತ್ನಿ ಸುಮಾ ಸ್ಪಷ್ಟನೆ ನೀಡಿದ್ದಾರೆ. ಅನಂತರಾಜು ಅವರನ್ನು ಪತ್ನಿ ಸುಮಾ ಕೊಲೆ ಮಾಡಿದ್ದಾರೆ ಎಂಬ ಆರೋಪ ಕೇಳಿ ಬಂದ ಹಿನ್ನೆಲೆಯಲ್ಲಿ ಪ್ರತಿಕ್ರಿಯೆ ನೀಡಿರುವ ಸುಮಾ, ʼನಾನು ಗಂಡನ ಕೊಲೆ ಮಾಡಿಲ್ಲʼ ಎಂದು ವಾದಿಸಿದ್ದಾರೆ.

ಅನಂತರಾಜು ಮಾಡಿಕೊಂಡಿರುವುದು ಆತ್ಮಹತ್ಯೆಯೋ ಕೊಲೆಯೋ ಅಥವಾ ಆತ್ಮಹತ್ಯೆಗೆ ಪ್ರಚೋದನೆಯೋ ಎಂಬ ಬಗ್ಗೆ ವ್ಯಾಪಕ ಚರ್ಚೆ ನಡೆಯುತ್ತಿರುವ ಹಿನ್ನೆಲೆಯಲ್ಲಿ ಪತ್ನಿಯ ಹೇಳಿಕೆ ಮಹತ್ವ ಪಡೆದುಕೊಂಡಿದೆ. ಅನಂತರಾಜು ಅವರ ಪತ್ನಿ ಸುಮಾ ಹಾಗೂ ಅವರ ಪ್ರಿಯತಮೆ ರೇಖಾ ನಡುವಿನ ಫೋನ್‌ ಮಾತುಕತೆಯ ವಿಡಿಯೊ ಬಹಿರಂಗವಾಗಿತ್ತು. ಅವರಿಬ್ಬರ ನಡುವಿನ ಸಂಭಾಷಣೆಯಲ್ಲಿ ಸುಮಾ ತನ್ನ ಪತಿ ಅನಂತರಾಜು ಅವರನ್ನು ಕೊಲೆ ಮಾಡುವುದಾಗಿ ಹೇಳಿದ್ದರು. ಈ ವಿಡಿಯೊ ಹಿನ್ನೆಲೆಯಲ್ಲಿ ಪೊಲೀಸರು ಅವರನ್ನು ಹಲವು ಬಾರಿ ವಿಚಾರಣೆ ನಡೆಸಿದ್ದರು.

‘ನನ್ನ ಗಂಡನಿಗೆ ಬ್ಲ್ಯಾಕ್ ಮೇಲ್ ಮೆಸೆಜ್ ಕಳುಹಿಸಿದ್ದಳು. ಒಬ್ಬ ವಿಐಪಿಗೆ ಪೋಟೊ ವಿಡಿಯೋ ಕಳಿಸುವುದಾಗಿ ಬೆದರಿಕೆ ಹಾಕಿದ್ದಳು. ಮಗಳಿಗೆ ಮೆಡಿಕಲ್ ಓದುವಷ್ಟು ಹಣ ನೀಡಬೇಕು ಎಂದು ಡಿಮ್ಯಾಂಡ್ ಮಾಡಿದ್ದಳು. ಅನಂತರಾಜು ಅವಳ ಬಳಿ ಹೋಗದೆ ಇದ್ದಲ್ಲಿ ಬ್ಲ್ಯಾ ಕ್‌ ಮೇಲ್‌ ಮಾಡುತ್ತಿದ್ದಳು. ರೇಖಾ ನೀಡುತ್ತಿದ್ದ ಟಾರ್ಚರ್‌ ಕುರಿತಾಗಿ ಅನಂತರಾಜು ನನ್ನ ಬಳಿ ಹೇಳಿಕೊಂಡು ದುಃಖಿಸಿದ್ದರು’ ಎಂದು ಸುಮಾ ಹೇಳಿಕೊಂಡಿದ್ದಾರೆ.

‘ರೇಖಾ ಹಾಗೂ ಅನಂತರಾಜು ನಡುವಿನ ಸಂಬಂಧದ ಬಗ್ಗೆ ನನಗೆ ಮಾರ್ಚ್‌ 24ರ ರಾತ್ರಿ ಗೊತ್ತಾಯಿತು. ನನ್ನ ಗಂಡನನ್ನ ನಾನು ಅತಿಯಾಗಿ ಇಷ್ಟಪಡುತ್ತಿದ್ದೆ. ನನ್ನ ಗಂಡನನ್ನು ನಾನು ಗೃಹ ಬಂಧನದಲ್ಲಿ ಇರಿಸಿರಲಿಲ್ಲ. ರೇಖಾ ಪ್ರಕರಣದಿಂದ ಬೇಸರವಾಗಿ ನನ್ನ ಗಂಡನ ಜತೆ ಜಗಳ ಮಾಡಿದ್ದೇನೆ ವಿನಃ ಅವರಿಗೆ ನೋವು ಉಂಟು ಮಾಡಿಲ್ಲ. ಅನಂತರಾಜು ಆತ್ಮಹತ್ಯೆ ಮಾಡಿಕೊಂಡ ದಿನವೂ ನಾವಿಬ್ಬರು ಒಟ್ಟಿಗೇ ಹೊರಗೆ ಹೋಗಿ ಬಂದು ಸಂತೋಷದಿಂದ ಇದ್ದೆವು. ಯಾವ ಹೆಂಡತಿಯೂ ಪತಿಯನ್ನ ಕೊಲ್ಲುವುದಿಲ್ಲ’ ಎಂದು ಸುಮಾ ದುಃಖಿಸಿದ್ದಾರೆ.

ಇದನ್ನೂ ಓದಿ: ಅಕ್ರಮ ಸಂಬಂಧ ನಿಜ; ಅನಂತರಾಜು ಸಾವಿಗೆ ನಾನು ಕಾರಣಳಲ್ಲ ಎಂದ ರೇಖಾ

Exit mobile version