ಬೆಂಗಳೂರು: ಕನ್ನಡ ಚಿತ್ರರಂಗದೊಂದಿಗೆ (appu cup badminton) ಒಂದು ದಶಕದಿಂದ ಒಡನಾಟ ಹೊಂದಿರುವ ಚೇತನ್ ಸೂರ್ಯ ಅವರ ಸ್ಟೆಲ್ಲರ್ ಸ್ಟುಡಿಯೋ ಮತ್ತು ಇವೆಂಟ್ ಮ್ಯಾನೇಜ್‌ಮೆಂಟ್ ಸಂಸ್ಥೆ (STELLER STUDIO & EVENT MANAGEMENT) ಮತ್ತು ಪಿಆರ್‌ಕೆ ಆಡಿಯೋ (PRK Audio) ಸಂಸ್ಥೆಯ ಸಹಯೋಗದಲ್ಲಿ ಆಯೋಜಿಸಿರುವ ʼಅಪ್ಪು ಕಪ್ ಸೀಸನ್ 2ʼ (ಶಟಲ್ ಬ್ಯಾಡ್ಮಿಂಟನ್ ಟೂರ್ನಿ) ಜುಲೈ ಅಂತ್ಯದಲ್ಲಿ ನಡೆಯಲಿದ್ದು, ಈ ಟೂರ್ನಿಯ ಟೀಮ್ ಬಿಲ್ಡಿಂಗ್ ಇವೆಂಟ್ ಈಚೆಗೆ (Bengaluru News) ನಡೆಯಿತು.
ಕಾರ್ಯಕ್ರಮದಲ್ಲಿ ಅಶ್ವಿನಿ ಪುನೀತ್ ರಾಜಕುಮಾರ್ ಮುಖ್ಯ ಅತಿಥಿಯಾಗಿ ಪಾಲ್ಗೊಂಡು ಶುಭ ಕೋರಿದರು. ಸಾಯಿ ಗೋಲ್ಡ್ ಪ್ಯಾಲೇಸ್ ಮಾಲೀಕರು ಹಾಗೂ ವಿಧಾನ ಪರಿಷತ್ ಸದಸ್ಯ ಟಿ.ಎ. ಶರವಣ ಸೇರಿದಂತೆ ಅನೇಕ ಗಣ್ಯರು ಈ ವೇಳೆ ಉಪಸ್ಥಿತರಿದ್ದರು.
ಸತತವಾಗಿ ಮೂರು ವರ್ಷಗಳ ಕಾಲ ಗೆದ್ದ ತಂಡಕ್ಕೆ ಅಪ್ಪು ಅವರ ಭಾವಚಿತ್ರವುಳ್ಳ ಬೆಳ್ಳಿಯ ಐದು ಕೆಜಿ ತೂಕದ ಟ್ರೋಫಿ ನೀಡಲಾಗುವುದು ಎಂದು ತಿಳಿಸಿದ ರೋಲಿಂಗ್ ಟ್ರೋಫಿ ಪ್ರಯೋಜಕರಾಗಿರುವ ಶ್ರೀಸಾಯಿ ಗೋಲ್ಡ್ ಪ್ಯಾಲೆಸ್‌ನ ಮಾಲೀಕರು ಹಾಗೂ ವಿಧಾನ ಪರಿಷತ್ ಸದಸ್ಯ ಶರವಣ ಅವರು, ಈ ಬಾರಿ ಮೊದಲ ವಿಜೇತರಿಗೆ ನೂರು ಗ್ರಾಮ್ ಚಿನ್ನ, ಎರಡನೇ ವಿಜೇತರಿಗೆ ಐವತ್ತು ಗ್ರಾಮ್ ಚಿನ್ನ ಹಾಗೂ ಮೂರನೇ ವಿಜೇತರಿಗೆ ಇಪ್ಪತ್ತೈದು ಗ್ರಾಮ್ ಚಿನ್ನ ನೀಡುವುದಾಗಿ ಈ ವೇಳೆ ತಿಳಿಸಿದರು.
ಈ ಸಂದರ್ಭದಲ್ಲಿ ಟೂರ್ನಿಯ ಆಯೋಜಕ ಚೇತನ್ ಸೂರ್ಯ ಮಾತನಾಡಿ, ನಾನು ಕಳೆದ ಹನ್ನೆರಡು ವರ್ಷಗಳಿಂದ ಕಿರುತೆರೆ ಹಾಗೂ ಹಿರಿತೆರೆ ಎರಡರಲ್ಲೂ ಸಕ್ರಿಯನಾಗಿದ್ದೇನೆ. ನಾಲ್ಕು ಸಿನಿಮಾಗಳಲ್ಲಿ ನಾಯಕನಾಗೂ ನಟಿಸಿರುವ ನನಗೆ, ಸಾಕಷ್ಟು ಇವೆಂಟ್‌ಗಳನ್ನು ಆಯೋಜಿಸಿರುವ ಅನುಭವವಿದೆ. ಪವರ್ ಸ್ಟಾರ್ ಪುನೀತ್ ರಾಜಕುಮಾರ್ ಅವರ ನೆನಪಿನಲ್ಲಿ ನಮ್ಮ ಸಂಸ್ಥೆಯ ಮೂಲಕ ಕಳೆದ ವರ್ಷ “ಅಪ್ಪು ಕಪ್” (ಶಟಲ್ ಬ್ಯಾಡ್ಮಿಂಟನ್ ಟೂರ್ನಿ) ಆಯೋಜಿಸಲಾಗಿತ್ತು. ಟೂರ್ನಿ ಬಹಳ ಯಶಸ್ವಿಯಾಗಿ ಎಲ್ಲರ ಮೆಚ್ಚುಗೆಗೆ ಪಾತ್ರವಾಯಿತು. ಅಶ್ವಿನಿ ಪುನೀತ್ ರಾಜಕುಮಾರ್ ಅವರು ಸಹ ” ಅಪ್ಪು ಕಪ್” ಬಗ್ಗೆ ಪ್ರಶಂಸೆಯ ಮಾತುಗಳಾಡಿ, ಈ ಟೂರ್ನಿಗೆ PRK audio ದ ಸಹಯೋಗವಿದೆ ಎಂದು ತಿಳಿಸಿದ್ದಾರೆ. ಈ ಬಾರಿಯ ಟೀಮ್ ಬಿಲ್ಡಿಂಗ್‌ಗೆ ಸಹ ಬಂದು ಶುಭ ಕೋರಿದ್ದು, ಅಶ್ವಿನಿ ಪುನೀತ್ ರಾಜಕುಮಾರ್ ಅವರಿಗೆ ಧನ್ಯವಾದ ತಿಳಿಸುತ್ತೇನೆ ಎಂದು ಅವರು ಹೇಳಿದರು.
ಇದನ್ನೂ ಓದಿ: Job Recruitment: ನಮ್ಮ ಮೆಟ್ರೋದಲ್ಲಿದೆ ಉದ್ಯೋಗ ಅವಕಾಶ; ಕೂಡಲೇ ಅರ್ಜಿ ಸಲ್ಲಿಸಿ
“ಅಪ್ಪು ಕಪ್” ಶಟಲ್ ಬ್ಯಾಡ್ಮಿಂಟನ್ ಟೂರ್ನಿಯಲ್ಲಿ ಒಟ್ಟು ಹತ್ತು ತಂಡಗಳಿರುತ್ತದೆ. ಒಂದೊಂದು ತಂಡದಲ್ಲಿ ಹದಿಮೂರು ಆಟಗಾರರಿರುತ್ತಾರೆ. ಹಿರಿತೆರೆ, ಕಿರುತೆರೆ ಹಾಗೂ ವಿವಿಧ ಕ್ಷೇತ್ರಗಳ ತಾರೆಯರು ಈ ತಂಡಗಳಲ್ಲಿರುತ್ತಾರೆ. ಪುನೀತ್ ಅವರಿಗೆ ಸಂಬಂಧಿಸಿದ ಹಾಗೆ ಹತ್ತು ತಂಡಗಳ ಹೆಸರುಗಳಿವೆ. ಹತ್ತು ತಂಡಗಳಿಗೂ ಮಾಲೀಕರಿರುತ್ತಾರೆ. ಈ ಬಾರಿ ಜುಲೈ 13 ರಂದು ಅದ್ದೂರಿ ಸಮಾರಂಭದ ಮೂಲಕ ಟೂರ್ನಿಗೆ ಚಾಲನೆ ನೀಡಲಾಗುವುದು. ಆದರೆ ಟೂರ್ನಿಯ ಪಂದ್ಯಗಳು ಜುಲೈ ಕೊನೆಯಲ್ಲಿ ನಡೆಯುವುದು ಎಂದು ಟೂರ್ನಿಯ ಆಯೋಜಕ ಚೇತನ್ ಸೂರ್ಯ ತಿಳಿಸಿದರು.