- – ಅರವಿಂದ ಸಿಗದಾಳ್, ಮೇಲುಕೊಪ್ಪ
ಪ್ರಾರಂಭದಲ್ಲಿ ಕೇಂದ್ರ ವಲಯ (Arecanut Insurance) ಯೋಜನೆಯಾದ ಪ್ರಧಾನ ಮಂತ್ರಿ ಫಸಲ್ ಭೀಮಾ ಯೋಜನೆ (PMFBY) ಅಡಿಯಲ್ಲಿ ಬಹುತೇಕ ಎಲ್ಲಾ ಬೆಳೆಗಳನ್ನು ವಿಮಾ ವ್ಯಾಪ್ತಿಗೆ ತರಲಾಗಿತ್ತು. ತದನಂತರ ಬೆಳೆ ವಿಮೆ PMFBYಯನ್ನು ಮರು ವಿನ್ಯಾಸಗೊಳಿಸಿ, ಪ್ರಧಾನ ಮಂತ್ರಿ ಫಸಲ್ ಭೀಮಾ ಯೋಜನೆ (PMFBY) ಮತ್ತು ನಿರ್ಬಂಧಿತ ಹವಾಮಾನ ಆಧಾರಿತ ಬೆಳೆ ವಿಮೆ ಯೋಜನೆ (RWBCIS) ಎಂದು ಎರಡು ವಿಭಾಗಗಳಲ್ಲಿ ಅನುಷ್ಠಾನ ಗೊಳಿಸಲಾಗುತ್ತಿದೆ. ಈಗ ಪ್ರಧಾನಮಂತ್ರಿ ಫಸಲ್ ಭೀಮಾ ಯೋಜನೆಯನ್ನು (PMFBY) ಕೃಷಿ ಇಲಾಖೆಯೂ, ಹವಾಮಾನ ಆಧಾರಿತ ಬೆಳೆ ವಿಮಾ ಯೋಜನೆಯನ್ನು (RWBCIS) ತೋಟಗಾರಿಕೆ ಇಲಾಖೆಯೂ ಅನುಷ್ಠಾನಗೊಳಿಸುತ್ತಿದೆ. PMFBY ಇಳುವರಿಯನ್ನು ಆಧರಿಸಿದ್ದರೆ, RWBCIS ಹವಾಮಾನದ (ಮಳೆ, ತಾಪಮಾನ, ಆರ್ದ್ರತೆ) ವನ್ನು ಆಧರಿಸಿದೆ. RWBCISನಲ್ಲಿ ರೈತರಿಗೆ ಹೆಚ್ಚಿನ ಮಳೆ, ತಾಪಮಾನ ಮತ್ತು ಆರ್ದ್ರತೆಯಂತಹ ಪ್ರತಿಕೂಲ ಹವಾಮಾನ ಪರಿಸ್ಥಿತಿಗಳ ವಿರುದ್ಧ ವಿಮೆ ರಕ್ಷಣೆಯನ್ನು ಒದಗಿಸಲಾಗಿದೆ. ಮಲೆನಾಡು ಮತ್ತು ಕರಾವಳಿಯ ಪ್ರಮುಖ ಬೆಳೆಯಾದ ಅಡಿಕೆ ಮತ್ತು ಕಾಳು ಮೆಣಸು ಬೆಳೆಗಳು ಹವಾಮಾನ ಆಧಾರಿತ ಬೆಳೆ ವಿಮಾ ಯೋಜನೆ (RWBCIS) ಅಡಿಯಲ್ಲಿ ತೋಟಗಾರಿಕೆ ಇಲಾಖೆಯ ವ್ಯಾಪ್ತಿಗೆ ಬರುತ್ತದೆ.
ಅಡಿಕೆ ಮತ್ತು ಕಾಳು ಮೆಣಸಿಗೆ ಪ್ರೀಮಿಯಮ್ ಕಟ್ಟುವ ಅವಧಿ ಮುಗಿಯಿತೆ?
ಮಲೆನಾಡು, ಕರಾವಳಿಯ ಜಿಲ್ಲೆಗಳಿಗೆ ಅಡಿಕೆ ಮತ್ತು ಮೆಣಸು ಬೆಳೆಗಳಿಗೆ ಇನ್ಶೂರೆನ್ಸ್ ಪ್ರೀಮಿಯಮ್ ಕಟ್ಟಲು ಇನ್ನು ಮೂರು ದಿನ ಮಾತ್ರ ಬಾಕಿ ಇವೆ ಎಂಬ ತಪ್ಪು ಮಾಹಿತಿಗಳು ಹರಿದಾಡುತ್ತಿವೆ. ಅಡಿಕೆ ಮತ್ತು ಮೆಣಸು ಬೆಳೆಗಳಿಗೆ ಇನ್ಶೂರೆನ್ಸ್ ಪ್ರೀಮಿಯಮ್ ಕಟ್ಟಿಸಿಕೊಳ್ಳುವ ಬಗ್ಗೆ ಇಲಾಖೆಗಳಿಗೆ, ಬ್ಯಾಂಕ್‌ಗಳಿಗೆ, ಸಹಕಾರಿ ಸಂಘಗಳಿಗೆ ಇನ್ನೂ ಅಧಿಕೃತ ನೋಟಿಫಿಕೇಷನ್/ಆದೇಶಗಳ ಇನ್ನೂ ಬಂದಿಲ್ಲ, ಸದ್ಯದಲ್ಲೇ ಬರಲಿದೆ. ವಿಮಾ ಕಂತನ್ನು ಆದೇಶ ಬಂದ ಮೇಲೆ ಕಟ್ಟಿಸಿಕೊಳ್ಳವ ಪ್ರಕ್ರಿಯೆ ಆರಂಭವಾಗುತ್ತದೆ.
ಅದಲ್ಲದೆ, ಕಳೆದ ವರ್ಷ ಜುಲೈ 20ರಂದು (ಎಂಟು ಜಿಲ್ಲೆಗಳಿಗೆ ಕೊನೆಯಲ್ಲಿರುವ ಪಟ್ಟಿ ಗಮನಿಸಿ) ಆದೇಶ ಪ್ರಕಟವಾಗಿ, ಆಗಸ್ಟ್ ಮೊದಲ ವಾರದವರೆಗೂ ಪ್ರೀಮಿಯಮ್ ಕಟ್ಟಿಸಿಕೊಳ್ಳಲಾಗಿತ್ತು. ಆ ಪ್ರೀಮಿಯಮ್ ಕಟ್ಟಿದ ಇನ್ಶೂರೆನ್ಸ್ ಪಾಲಿಸಿ ಆಗಸ್ಟ್ 1, 2023 ರಿಂದ ಜುಲೈ 31 2024ರವರೆಗೂ ಅಸ್ತಿತ್ವದಲ್ಲಿರುತ್ತದೆ. ಅಂದರೆ, ಈಗಾಗಲೆ ಅಡಿಕೆ ಮತ್ತು ಕಾಳು ಮೆಣಸು ಬೆಳೆಗೆ ಕಟ್ಟಿರುವ ಪಾಲಿಸಿ ಅವಧಿ 1 ಆಗಸ್ಟ್ 2023 ರಿಂದ 31 ಜುಲೈ 2024ರವರೆಗೆ ಚಾಲ್ತಿಯಲ್ಲಿರುತ್ತದೆ. ಹೊಸ ಪಾಲಿಸಿ 1 ಆಗಸ್ಟ್ 2024ಕ್ಕೆ ಪ್ರಾರಂಭವಾಗಬೇಕು ಮತ್ತು ಈ ದಿನಾಂಕದೊಳಗೆ ಪ್ರೀಮಿಯಮ್ ಕಟ್ಟುವ ಅವಕಾಶ ಆಗಬೇಕು. ಹಾಗಾಗಿ, ಪ್ರೀಮಿಯಮ್ ಕಟ್ಟಿಸಿ ಕೊಳ್ಳುವ ದಿನಾಂಕ ಜುಲೈನಲ್ಲೇ ಪ್ರಾರಂಭವಾಗಬಹುದು ಮತ್ತು ಜುಲೈ ಕೊನೆಯವರೆಗೂ ಪ್ರೀಮಿಯಮ್ ಕಟ್ಟಲು ಅವಕಾಶ ಇರಬಹುದು.
ಈಗ ಹರಿದಾಡುತ್ತಿರುವ, ಪ್ರೀಮಿಯಮ್ ಕಟ್ಟಲು ಕೇವಲ ಮೂರ್ನಾಲ್ಕು ದಿನಗಳು ಮಾತ್ರ ಇವೆ ಎಂಬ ಮಾಹಿತಿಯು ಸತ್ಯಕ್ಕೆ ದೂರವಾಗಿದೆ.
ಈ ಜಿಲ್ಲೆಗಳ ಅಡಿಕೆ ಮತ್ತು ಕಾಳು ಮೆಣಸು ಬೆಳೆಗಾರರಿಗೆ ಅನ್ವಯ: (ಕಳೆದ ವರ್ಷದ ಅನುಬಂಧ 1 ಆಧಾರದಲ್ಲಿ):
೧) ಉತ್ತರ ಕನ್ನಡ (ಅಡಿಕೆ, ಕಾಳುಮೆಣಸು)
೨) ವಿಜಯನಗರ (ಅಡಿಕೆ)
೩) ದಕ್ಷಿಣ ಕನ್ನಡ (ಅಡಿಕೆ, ಕಾಳುಮೆಣಸು)
೪) ಚಿಕ್ಕಮಗಳೂರು (ಅಡಿಕೆ, ಕಾಳುಮೆಣಸು)
೫) ಬೆಳಗಾವಿ (ಅಡಿಕೆ)
೬) ಕೊಡಗು (ಅಡಿಕೆ, ಕಾಳುಮೆಣಸು)
೭) ಹಾವೇರಿ (ಅಡಿಕೆ)
೮) ಶಿವಮೊಗ್ಗ (ಅಡಿಕೆ, ಕಾಳುಮೆಣಸು)
ಕಳೆದ 2022-23 ನೇ ಸಾಲಿನಲ್ಲಿ ಅಧಿಕ ಮಳೆಯಾಗಿ, ಅತೀವ ಸಂಕಷ್ಟಕ್ಕೆ ಒಳಗಾಗಿದ್ದ ಮಲೆನಾಡು ಮತ್ತು ಕರಾವಳಿಯ ಬಹುತೇಕ ರೈತರಿಗೆ ಉತ್ತಮ ರೀತಿಯಲ್ಲಿ ಬೆಳೆ ವಿಮೆ ಪರಿಹಾರ ಬಂದಿದ್ದನ್ನು ಇಲ್ಲಿ ಸ್ಮರಿಸಬಹುದು.
2023-24ರ ಪರಿಹಾರ 2024ರ ಅಕ್ಟೋಬರ್/ನವಂಬರ್‌ನಲ್ಲಿ ಪ್ರತಿ ಹೋಬಳಿ ಮತ್ತು ಗ್ರಾಮ ಪಂಚಾಯತಿಗಳಲ್ಲಿನ ದಾಖಲಿತ ಮಳೆ, ತಾಪಮಾನ ಮತ್ತು ಆರ್ದ್ರತೆಯ ಆಧಾರದ ಮೇಲೆ ಬರಬಹುದು.
ಆದೇಶ ಬಂದ ಮೇಲೆ ಪ್ರಕ್ರಿಯೆ ಆರಂಭ:
2024-25ರ ಅಡಿಕೆ ಮತ್ತು ಕಾಳುಮೆಣಸು ಬೆಳೆಗಳಿಗೆ RWBCISನ ಪ್ರೀಮಿಯಮ್‌ನ್ನು ಆದೇಶ ಬಂದ ಮೇಲೆ ಕಟ್ಟಿಸಿಕೊಳ್ಳುವ ಪ್ರಕ್ರಿಯೆ ಆರಂಭವಾಗಲಿದೆ. ಮಲೆನಾಡು ಮತ್ತು ಕರಾವಳಿಯ ವ್ಯಾಪ್ತಿಯಲ್ಲಿ ಅನಿಶ್ಚಿತತೆಯ ಹವಾಮಾನ ಇರುವುದರಿಂದ ಅಡಿಕೆ ಬೆಳೆಗಾರರು RWBCIS ನಲ್ಲಿ ವಿಮೆ ಮಾಡಿಸಿಕೊಳ್ಳುವುದು ಕ್ಷೇಮ.
ಅಡಿಕೆ ತೋಟದಲ್ಲೇ ಕಾಳು ಮೆಣಸು ಇದ್ದವರು, ಎರಡಕ್ಕೂ ಬೇರೆ ಬೇರೆಯಾಗಿ ಪ್ರೀಮಿಯಮ್ ಕಟ್ಟಬೇಕಾಗುತ್ತದೆ. ತೋಟಗಾರಿಕೆ, ಇನ್ಶೂರೆನ್ಸ್ ಕಂಪನಿ ಮತ್ತು ರೈತರ ಸಹಯೋಗದಲ್ಲಿ ರಚಿಸಿದ ಟರ್ಮ್‌ಶೀಟ್ ಪ್ರಕಾರ ಹವಾಮಾನ ವೈಪರೀತ್ಯ ಉಂಟಾದಲ್ಲಿ ಎರಡೂ ಬೆಳೆಗಳಿಗೆ ಬೇರೆ ಬೇರೆಯಾಗಿ ವಿಮಾ ಪರಿಹಾರ ಸಿಗುತ್ತದೆ.
ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ