Site icon Vistara News

ಚಲನಚಿತ್ರ ಅಕಾಡೆಮಿ ಅಧ್ಯಕ್ಷರಾಗಿ ಅಶೋಕ್ ಕಶ್ಯಪ್ ಪದಗ್ರಹಣ

ಬೆಂಗಳೂರು: ಕರ್ನಾಟಕ ಚಲನಚಿತ್ರ ಅಕಾಡೆಮಿಯ ನೂತನ ಅಧ್ಯಕ್ಷರಾಗಿ ಕನ್ನಡ ಚಿತ್ರರಂಗದ ಖ್ಯಾತ ಸಿನಿಮಾಟೋಗ್ರಾಫರ್ ಅಶೋಕ್ ಕಶ್ಯಪ್ ಅವರು ನಂದಿನಿ ಬಡಾವಣೆಯಲ್ಲಿರುವ ಕರ್ನಾಟಕ ಚಲನಚಿತ್ರ ಅಕಾಡೆಮಿ ಕಚೇರಿಯಲ್ಲಿ ಸೋಮವಾರ ಅಧಿಕಾರ ಸ್ವೀಕರಿಸಿದರು.

ಈ ಹಿಂದಿನ ಅಧ್ಯಕ್ಷರ ಸುನೀಲ್ ಪುರಾಣಿಕ್ ಅವರಿಂದ ತೆರವಾಗಿದ್ದ ಸ್ಥಾನಕ್ಕೆ ರಾಜ್ಯ ಸರ್ಕಾರ ನ.5ರಂದು ಅಶೋಕ್ ಕಶ್ಯಪ್ ಅವರನ್ನು ನೇಮಿಸಿ ಆದೇಶಿಸಿತ್ತು. ಅಶೋಕ್ ಅಶ್ಯಪ್ ಕನ್ನಡ ಚಿತ್ರರಂಗದಲ್ಲಿ ಹಿರಿಯ ಸಿನಿಮಾಟೋಗ್ರಾಫರ್ ಆಗಿದ್ದು, ಅವರ ಶಾಪ ಚಿತ್ರದ ಛಾಯಾಗ್ರಾಹಣಕ್ಕೆ ರಾಜ್ಯ ಪ್ರಶಸ್ತಿ ದೊರೆತಿದೆ. ಭುವನಜ್ಯೋತಿ, ಶ್!!, ಕರುಣಿನಕೂಗು, ಸೂಪರ್, ಉಪ್ಪಿ-2, ಕಾಫಿತೋಟ ಸೇರಿದಂತೆ ವಿವಿಧ ಚಿತ್ರಗಳಿಗೆ ಸಿನಿಮಾಟೋಗ್ರಾಫರ್ ಆಗಿ ದುಡಿದಿದ್ದಾರೆ. ಅಲ್ಲದೆ, ಚಿತ್ರ ನಿರ್ದೇಶನ ಮತ್ತು ನಟನೆಯಲ್ಲಿ ಸಹ ಅವರು ಪ್ರತಿಭೆಯನ್ನು ತೋರಿದ್ದಾರೆ.

ಈ ಬಗ್ಗೆ ಅಶೋಕ್ ಕಶ್ಯಪ್ ಪ್ರತಿಕ್ರಿಯಿಸಿ, ಕನ್ನಡ ಚಿತ್ರರಂಗದ ತಾಂತ್ರಿಕ ವರ್ಗದಲ್ಲಿ ದುಡಿದ ತಮ್ಮನ್ನು ಸರ್ಕಾರ ಗುರುತಿಸಿ ಅಕಾಡೆಮಿ ಅಧ್ಯಕ್ಷರನ್ನಾಗಿ ನೇಮಿಸಿರುವುದು ಸಿನಿಮಾ ತಾಂತ್ರಿಕ ವರ್ಗಕ್ಕೆ ಖುಷಿ ತಂದಿದೆ. ಈ ಸಂದರ್ಭದಲ್ಲಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರಿಗೆ ಧನ್ಯವಾದಗಳನ್ನು ತಿಳಿಸುತ್ತೇನೆ ಹಾಗೂ ಕನ್ನಡ ಚಿತ್ರರಂಗದಲ್ಲಿ ಈವರೆಗೆ ದುಡಿದು ಪಡೆದ ತಮ್ಮ ಅನುಭವವನ್ನು ಅಕಾಡೆಮಿ ಹಾಗೂ ಕನ್ನಡ ಚಿತ್ರರಂಗದ ಬೆಳವಣಿಗೆಗೆ ಪೂರಕವಾಗಿ ಶ್ರಮಿಸುವುದಾಗಿ ತಿಳಿಸಿದರು.

ಹಿರಿಯ ನಿರ್ದೇಶಕರು ಹಾಗೂ ಅಕಾಡೆಮಿಯ ಹಿಂದಿನ ಅಧ್ಯಕ್ಷ ಟಿ.ಎಸ್.ನಾಗಾಭರಣ, ನಾಗತಿಹಳ್ಳಿ ಚಂದ್ರಶೇಖರ್, ಹಿರಿಯ ಸಿನಿಮಾಟೋಗ್ರಾಫರ್ ಬಸವರಾಜ್ ಸೇರಿದಂತೆ ಹಲವು ಗಣ್ಯರು, ಚಿತ್ರ ನಿರ್ದೇಶಕರು, ಅಭಿಮಾನಿಗಳು ಶುಭ ಕೋರಿದರು.

ಇದನ್ನೂ ಓದಿ | Kamal Haasan | 35 ವರ್ಷಗಳ ನಂತರ ಮತ್ತೆ ಒಂದಾದ ಮಣಿರತ್ನಂ-ಕಮಲ್‌ ಹಾಸನ್‌

Exit mobile version