ಬೆಂಗಳೂರು: ವರನಟ ಡಾ.ರಾಜಕುಮಾರ್ ಅವರಂತೆ ಪವರ್ ಸ್ಟಾರ್ ಪುನೀತ್ ರಾಜಕುಮಾರ್ (Puneeth Rajkumar) ಅವರು ಅಭಿಮಾನಿಗಳನ್ನು ದೇವರಂತೆ ಕಾಣುತ್ತಿದ್ದರು. ಇದೀಗ ಅವರ ಹಾದಿಯಲ್ಲೇ ಪತ್ನಿ ಅಶ್ವಿನಿ ಅವರೂ ಸಾಗುತ್ತಿದ್ದಾರೆ. ಅಪ್ಪು ಅವರ ಪುಟ್ಟ ಅಭಿಮಾನಿಯ ಆಸೆಯೊಂದನ್ನು ಅಶ್ವಿನಿ ಅವರು ಈಡೇರಿಸುವ ಮೂಲಕ ಮಾನವೀಯತೆ ತೋರಿದ್ದು, ಕ್ಯಾನ್ಸರ್ನಿಂದ ಬಳಲುತ್ತಿರುವ ಬಾಲಕನಿಗೆ ಧೈರ್ಯ ತುಂಬಿದ್ದಾರೆ.
ಚಿತ್ರದುರ್ಗ ಮೂಲದ 6 ವರ್ಷದ ಹರ್ಷ ಎಂಬ ಬಾಲಕ ಕ್ಯಾನ್ಸರ್ನಿಂದ ಬಳಲುತ್ತಿದ್ದಾನೆ. ಮಗನನ್ನು ಉಳಿಸಿಕೊಳ್ಳಲು ತಂದೆ-ತಾಯಿ ಎಲ್ಲ ರೀತಿಯ ಪ್ರಯತ್ನ ಮಾಡುತ್ತಿದ್ದು, ಹೊಟ್ಟೆಪಾಡಿಗಾಗಿ ಬೆಂಗಳೂರಿನಲ್ಲೇ ನೆಲೆಸಿದ್ದಾರೆ. ಆದರೆ, ಬಾಲಕನಿಗೆ ಪುನೀತ್ ರಾಜಕುಮಾರ್ ಅವರ ಮನೆ ನೋಡುವ ಆಸೆ ಹೊಂದಿದ್ದ. ಮಗನ ಆಸೆ ಈಡೇರಿಸಲು ಪಾಲಕರು, ಆಪ್ತರ ಮೂಲಕ ಅಶ್ವಿನಿ ಪುನೀತ್ ರಾಜಕುಮಾರ್ ಅವರಿಗೆ ವಿಷಯ ತಿಳಿಸಿದ್ದರು. ಹೀಗಾಗಿ ಬಾಲಕನನ್ನು ಮನೆಗೆ ಕರೆಸಿಕೊಂಡು ಅಶ್ವಿನಿ ಅವರು ಆತ್ಮಸ್ಥೈರ್ಯ ತುಂಬಿದ್ದಾರೆ.
ಮನೆಯಲ್ಲಿ ರಾಜಕುಮಾರ್ ದಂಪತಿ ಮತ್ತು ಪುನೀತ್ ರಾಜಕುಮಾರ್ ಅವರ ಭಾವಚಿತ್ರದ ಜತೆ ಫೋಟೊ ತೆಗೆಸಿಕೊಂಡು ಬಾಲಕ ಖುಷಿ ಪಟ್ಟಿದ್ದಾನೆ. ಬಾಲಕನ ಯೋಗಕ್ಷೇಮ ವಿಚಾರಿಸಿರುವ ಅಶ್ವಿನಿ ಅವರು, ಧೈರ್ಯವಾಗಿ ಇರಬೇಕು ಎಂದು ಹೇಳಿದ್ದಾರೆ.
ಇದನ್ನೂ ಓದಿ | Bowling League; ಬರ್ತಿದೆ ಬೌಲಿಂಗ್ ಲೀಗ್: ಆಟಕ್ಕೆ ಸಜ್ಜಾದ ಸ್ಯಾಂಡಲ್ವುಡ್ ಸ್ಟಾರ್ಸ್!
ಪವರ್ ಸ್ಟಾರ್ ಪುನೀತ್ ರಾಜಕುಮಾರ್ ಅವರಿಗೆ ಕೋಟ್ಯಂತರ ಅಭಿಮಾನಿಗಳು ಇದ್ದಾರೆ. ಸಾವಿರಾರು ಮಕ್ಕಳಿಗೆ ಉಚಿತ ಶಿಕ್ಷಣ, ಅನಾಥಾಶ್ರಮ, ವೃದ್ಧಾಶ್ರಮಗಳಿಗೆ ನೆರವು ಸೇರಿ ಹಲವು ಸಮಾಜಸೇವಾ ಕಾರ್ಯಗಳನ್ನು ಅವರು ಮಾಡಿದ್ದರು. ಅಭಿಮಾನಿಗಳು ಕಷ್ಟದಲ್ಲಿದ್ದರೆ ಸಹಾಯಹಸ್ತ ಚಾಚಿದ್ದರು. ಈಗ ಅವರ ಹಾದಿಯಲ್ಲೇ ಪತ್ನಿ ಅಶ್ವಿನಿ ಅವರೂ ಸಾಗುತ್ತಿದ್ದಾರೆ.
ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ