ಬೆಂಗಳೂರು: ಅ. ನ. ಕೃ. ಪ್ರತಿಷ್ಠಾನ ವತಿಯಿಂದ ಕಾದಂಬರಿ ಸಾರ್ವಭೌಮ ಅ. ನ. ಕೃ. ಪ್ರಶಸ್ತಿ ಪ್ರದಾನ ಸಮಾರಂಭವನ್ನು ಮೇ 19ರಂದು ಬೆಳಗ್ಗೆ 10ಗಂಟೆಗೆ ನಗರದ ಬಸವನಗುಡಿಯ ನ್ಯಾಷನಲ್ ಕಾಲೇಜಿನ ಎಚ್. ಎನ್. ಮಲ್ಟಿಮೀಡಿಯಾ ಸಭಾಂಗಣದಲ್ಲಿ ಹಮ್ಮಿಕೊಳ್ಳಲಾಗಿದೆ. 2022ನೇ ಸಾಲಿನ ಅ. ನ. ಕೃ. ಪ್ರಶಸ್ತಿಯನ್ನು ನಾಡೋಜ ಡಾ. ಎಸ್. ಆರ್. ರಾಮಸ್ವಾಮಿ ಹಾಗೂ 2023ನೇ ಸಾಲಿನ ಅ. ನ. ಕೃ. ಪ್ರಶಸ್ತಿಯನ್ನು ಡಾ. ಬಿ. ಎಸ್. ಸ್ವಾಮಿ ಅವರಿಗೆ ಪ್ರದಾನ (Award Ceremony) ಮಾಡಲಾಗುತ್ತದೆ.
ಪ್ರಶಸ್ತಿ ಪುರಸ್ಕೃತರಾದ ನಾಡೋಜ ಡಾ. ಎಸ್. ಆರ್. ರಾಮಸ್ವಾಮಿ ಅವರು ರಾಷ್ಟೋತ್ಥಾನ ಸಾಹಿತ್ಯದ ಗೌರವ ಪ್ರಧಾನ ಸಂಪಾದಕರಾಗಿದ್ದು, ಡಾ. ಬಿ. ಎಸ್. ಸ್ವಾಮಿ ಅವರು ಆಕಾಶವಾಣಿಯ ವಿಶ್ರಾಂತ ಕಾರ್ಯಕ್ರಮ ನಿರ್ವಾಹಕರಾಗಿದ್ದಾರೆ.
ಪ್ರಜಾವಾಣಿ ದಿನಪತ್ರಿಕೆ ಕಾರ್ಯನಿರ್ವಾಹಕ ಸಂಪಾದಕರಾದ ರವೀಂದ್ರ ಭಟ್ ಅವರು ಪ್ರಶಸ್ತಿ ಪ್ರದಾನ ಮಾಡಲಿದ್ದು, ಬಹುಶ್ರುತ ವಿದ್ವಾಂಸರಾದ ಶತಾವಧಾನಿ ಡಾ. ಆರ್. ಗಣೇಶ್, ಲೇಖಕ, ಉಪನ್ಯಾಸಕ ಡಾ. ಬಂಡ್ಲಹಳ್ಳಿ ವಿಜಯಕುಮಾರ್ ಅವರು ಅಭಿನಂದನಾ ನುಡಿಗಳನ್ನಾಡಲಿದ್ದಾರೆ.
ಇದನ್ನೂ ಓದಿ | ದಶಮುಖ ಅಂಕಣ: ಮರುಳಿಗೆ ಅರಳುವ ಅರ್ಥಗಳನ್ನು ಹುಡುಕುತ್ತಾ…
ಡಾ. ಕೆ.ಆರ್. ಸಂಧ್ಯಾರೆಡ್ಡಿ, ಶಾ.ಮಂ. ಕೃಷ್ಣರಾವ್, ಎಂ. ವೆಂಕಟೇಶ್ ಅವರು ಉಪಸ್ಥಿತರಿರಲಿದ್ದು, ಮಾಜಿ ಅಡ್ವೊಕೇಟ್ ಜನರಲ್ ಹಾಗೂ ನ್ಯಾಯವಾದಿ ಅಶೋಕ್ ಹಾರನಹಳ್ಳಿ ಅವರು ಅಧ್ಯಕ್ಷತೆ ವಹಿಸಲಿದ್ದಾರೆ. ಅ. ನ. ಕೃ. ಪ್ರತಿಷ್ಠಾನದ ಗೌರವ ಕಾರ್ಯದರ್ಶಿ ಗೌತಮ್ ಅ. ನ. ಕೃ, ಪ್ರತಿಷ್ಠಾನದ ಪದಾಧಿಕಾರಿಗಳು, ಸದಸ್ಯರು ಉಪಸ್ಥಿತರಿರಲಿದ್ದಾರೆ.
2022ರ ಪ್ರಶಸ್ತಿ ಪುರಸ್ಕೃತರು: ನಾಡೋಜ ಡಾ. ಎಸ್. ಆರ್. ರಾಮಸ್ವಾಮಿ
ಆರೂವರೆ ದಶಕಗಳ ಕಾಲ ಪತ್ರಿಕೋದ್ಯಮ, ಸಾಹಿತ್ಯ ಮತ್ತು ಸಮಾಜಕಾರ್ಯ ಕ್ಷೇತ್ರಗಳಲ್ಲಿ ಸೇವೆ ಸಲ್ಲಿಸಿರುವ ಎಸ್. ಆರ್. ರಾಮಸ್ವಾಮಿ ಅವರು (ಜನನ: 29-10-1937) ಕಳೆದ 45 ವರ್ಷಗಳಿಂದ ‘ಉತ್ಥಾನ’ ಮಾಸಪತ್ರಿಕೆ ಮತ್ತು ‘ರಾಷ್ಟ್ರೋತ್ಥಾನ ಸಾಹಿತ್ಯ’ ಪ್ರಕಾಶನದ ಪ್ರಧಾನ ಸಂಪಾದಕರಾಗಿದ್ದಾರೆ.
ಸುಭಾಷ್‌ಚಂದ್ರ ಬೋಸ್ ಅವರ ಸಮಗ್ರ ಜೀವನಚರಿತ್ರೆ ‘ಕೋಲ್ಮಿಂಚು’ ಜಯಪ್ರಕಾಶ್ ನಾರಾಯಣ್ ವಲ್ಲಭಭಾಯಿ ಪಟೇಲ್, ಮೋಕ್ಷಗುಂಡಂ ವಿಶ್ವೇಶ್ವರಯ್ಯ, ಸ್ವಾಮಿ ವಿವೇಕಾನಂದ, ಭಗಿನಿ ನಿವೇದಿತಾ ಮೊದಲಾದ ಇಪ್ಪತ್ತಕ್ಕೂ ಹೆಚ್ಚು ಜೀವನಚರಿತ್ರೆಗಳೂ ಸೇರಿ ಸುಮಾರು 60 ಗ್ರಂಥಗಳನ್ನು ಬರೆದಿದ್ದಾರೆ. ‘ಭಾರತದಲ್ಲಿ ಸಮಾಜಕಾರ್ಯ’, ‘ಸ್ವಾತಂತ್ರ್ಯೋದಯದ ಮೈಲಿಗಲ್ಲುಗಳು’ ಮೊದಲಾದ ಹಲವಾರು ಪ್ರತಿಷ್ಠಿತ ಕೃತಿಗಳಿಗೆ ವಿಸ್ತತ ಸ್ವತಂತ್ರ ಅವಲೋಕನ ಪ್ರಬಂಧಗಳನ್ನು ಬರೆದು ಸಂಪಾದನ ಮಾಡಿದ್ದಾರೆ.
ಅಭ್ಯುದಯ ಅರ್ಥಶಾಸ್ತ್ರದಲ್ಲಿ ಆಳವಾದ ಪರಿಶ್ರಮ ಮಾಡಿರುವ ಇವರು ಜಾಗತೀಕರಣದ ಹಿನ್ನೆಲೆಯಲ್ಲಿ ಬರೆದ ‘ಆರ್ಥಿಕತೆಯ ಎರಡು ಧ್ರುವ’ ಅರ್ಥಶಾಸ್ತ್ರ ಕ್ಷೇತ್ರದ ಒಂದು ಉನ್ನತ ಕೃತಿಯೆಂದು ಪರಿಗಣಿತವಾಗಿದೆ. ಸ್ವಾತಂತ್ರ್ಯೋತ್ತರ ಭಾರತದ ಅರ್ಥಿಕ ಯೋಜನೆಗಳನ್ನು ತಲಸ್ಪರ್ಶಿಯಾಗಿ ವಿಶ್ಲೇಷಿಸಿರುವ ರಾಮಸ್ವಾಮಿಯವರ ‘ಶತಮಾನದ ತಿರುವಿನಲ್ಲಿ ಭಾರತ’ ಸಮಾಜವಿಜ್ಞಾನ ಕ್ಷೇತ್ರದ ಆ ವರ್ಷದ ಶ್ರೇಷ್ಠ ಕೃತಿಯೆಂದು ಕರ್ನಾಟಕ ಸಾಹಿತ್ಯ ಅಕಾಡೆಮಿಯ ಬಹುಮಾನ ಪಡೆದಿದೆ. ಬ್ರಿಟಿಷ್-ಪೂರ್ವ ಭಾರತದ ಉನ್ನತ ಸ್ಥಿತಿ ಕುರಿತ ಖ್ಯಾತ ಸಂಶೋಧಕ ಧರ್ಮಪಾಲ್ ಅವರ ಕೃತಿಗಳನ್ನು ಇವರು ಕನ್ನಡಕ್ಕೆ ಪರಿಚಯಿಸಿದ್ದಾರೆ. ಸ್ವದೇಶೀ ಚಿಂತನೆಯ ಪ್ರತಿಪಾದಕಗಳಾದ ಇವರ ಹಲವಾರು ಕೃತಿಗಳು ಪಥದರ್ಶಕವೆನಿಸಿವೆ.
ಅನೇಕ ಹಿರಿಯ ಸಾಹಿತಿಗಳ ಒಡನಾಟದಲ್ಲಿದ್ದ ರಾಮಸ್ವಾಮಿಯವರು, ಡಿ.ವಿ.ಗುಂಡಪ್ಪ, ಸೀತಾರಾಮಯ್ಯ, ರಾಕ್ಲಪಲ್ಲಿ ಅನಂತಕೃಷ್ಣಶರ್ಮ, ವೀರಕೇಸರಿ ಸೀತಾರಾಮಶಾಸ್ತ್ರಿ, ತಿ. ತಾ. ಶರ್ಮ, ಪಿ. ಕೋದಂಡರಾವ್, ತೋಟಗಾರಿಕೆ ಋಷಿ ಎಂ. ಎಚ್. ಮರಿಗೌಡ ಮೊದಲಾದ ಧೀಮಂತರನ್ನು ಕುರಿತು ಬರೆದ ‘ದೀವಟಿಗೆಗಳು’, ‘ದೀಪ್ತಿಮಂತರು’ ಮತ್ತು ‘ದೀಪ್ತಶೃಂಗಗಳು’ – ಇವು ಅನುಪಮ ವ್ಯಕ್ತಿಚಿತ್ರಮಾಲಿಕೆಗಳಾಗಿವೆ. ಈಗಿನ ಜಗದ್‌ವ್ಯಾಪಿ ತುಮುಲಗಳ ಬೇರುಗಳಿರುವುದು ಎರಡು ಭಿನ್ನ ಜೀವನದೃಷ್ಟಿಗಳಲ್ಲಿ – ಎಂದು ಅವರ ‘ನಾಗರಿಕತೆಗಳ ಸಂಘರ್ಷ’ ಕೃತಿ ಪ್ರತಿಪಾದಿಸಿದೆ. ಅವರ ‘ಕೆಲವು ಇತಿಹಾಸ-ಪರ್ವಗಳು’ ಮತ್ತು ‘ಮರೆಯಬಾರದ ಇತಿಹಾಸಾಧ್ಯಾಯಗಳು’ ಮೈಲಿಗಲ್ಲುಗಳೆಂದು ಅಂಕಿತಗೊಂಡಿರುವ ಕೆಲವು ಇತಿಹಾಸ ಘಟನಾಸರಣಿಗಳ ಪರಾಮರ್ಶನೆಯಾಗಿವೆ. ಭಾರತದ ಈಚಿನ ಇತಿಹಾಸಕ್ಕೆ ನಿರ್ಣಾಯಕ ತಿರುವನ್ನಿತ್ತ ರಾಜಾ ರಾಮಮೋಹನರಾಯ್ ಅವರಿಂದ ಜಯಪ್ರಕಾಶ ನಾರಾಯಣ್ ವರೆಗಿನ ಹತ್ತಾರು ಮಹನೀಯರ ಜೀವಿತಕಥನಗಳು `ನವೋತ್ಥಾನದ ಅಧ್ವರ್ಯುಗಳು’ ಮತ್ತು ‘ಹಲವರು ರಾಷ್ಟ್ರಾರಾಧಕರು’. ರಾಮಸ್ವಾಮಿಯವರ ‘ಕವಳಿಗೆ’ ಮತ್ತು ‘ಸಾಹಿತ್ಯ ಸಾನ್ನಿಹಿತ್ಯ ಉನ್ನತಮಟ್ಟದ ಸಾಹಿತ್ಯ ಪರಾಮರ್ಶಕ ಕೃತಿಗಳಾಗಿವೆ. ರಾಮಸ್ವಾಮಿಯವರು ಕಳೆದ ಅರವತ್ತು ವರ್ಷಗಳಲ್ಲಿ ವಿವಿಧ ಪತ್ರಿಕೆಗಳಲ್ಲಿ 2000ಕ್ಕೂ ಹೆಚ್ಚು ಅಧ್ಯಯನಪೂರ್ಣ ಲೇಖನಗಳನ್ನು ಬರೆದಿದ್ದಾರೆ.
ಪತ್ರಿಕೋದ್ಯಮ ಸೇವೆಗಾಗಿ 2006ರಲ್ಲಿ ಇವರಿಗೆ ‘ಆರ್ಯಭಟ ಪ್ರಶಸ್ತಿ’ ದೊರೆತಿದೆ. ಸಾಹಿತ್ಯಸೇವೆಗಾಗಿ 2008ರಲ್ಲಿ ಕರ್ನಾಟಕ ರಾಜ್ಯ ಪ್ರಶಸ್ತಿ ಇವರಿಗೆ ದೊರೆತಿದೆ. 2011ರಲ್ಲಿ ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾಲಯ ಇವರ ಸುದೀರ್ಘ ಸಾಹಿತ್ಯಸೇವೆಗಾಗಿ ಗೌರವಾರ್ಥ ಡಾಕ್ಟರೇಟ್ ನೀಡಿದೆ. ದೀರ್ಘ ಪತ್ರಿಕೋದ್ಯಮ ಸೇವೆಗಾಗಿ ಕರ್ನಾಟಕ ಮಾಧ್ಯಮ ಅಕಾಡೆಮಿಯಿಂದ ‘ವರ್ಷದ ಶ್ರೇಷ್ಠ ವ್ಯಕ್ತಿ’ ಸಮ್ಮಾನ ದೊರೆತಿದೆ (2012). ಸಾಹಿತ್ಯ ಮತ್ತು ಪತ್ರಿಕೋದ್ಯಮ ಕ್ಷೇತ್ರಗಳ ಜೀವಮಾನ ಸಾಧನೆಗಾಗಿ 2015ರಲ್ಲಿ ಹಂಪಿ ಕನ್ನಡ ವಿಶ್ವವಿದ್ಯಾಲಯದಿಂದ ‘ನಾಡೋಜ’ ಪದವಿಯನ್ನು ಇವರಿಗೆ ನೀಡಲಾಗಿದೆ. ಕರ್ನಾಟಕ ಸರಕಾರವು 2022-23ರ ‘ಪಂಪಪ್ರಶಸ್ತಿ’ಯನ್ನು ನೀಡಿ ಗೌರವಿಸಿದೆ.
2023ರ ಪ್ರಶಸ್ತಿ ಪುರಸ್ಕೃತರು : ಡಾ. ಬಿ. ಎಸ್. ಸ್ವಾಮಿ
ಬಿ. ಸಿದ್ಧಲಿಂಗ ಸ್ವಾಮಿಯವರು ಮೂಲತಃ ಕೊಳ್ಳೇಗಾಲ ತಾಲೂಕಿನ ಮಧುವನಹಳ್ಳಿಯವರು. ವಿ. ಬಸವಲಿಂಗಪ್ಪ – ಶಿವನಾಗಮ್ಮ ದಂಪತಿಯ ಸುಪುತ್ರರಾದ ಇವರು ಎಂ. ಎ., ಪಿಎಚ್. ಡಿ. ಪದವೀಧರರು. ಐದು ವರ್ಷ ಪ್ರೌಢಶಾಲಾ ಶಿಕ್ಷಕರಾಗಿ ಸೇವೆ ಸಲ್ಲಿಸಿದ ನಂತರ ಬೆಂಗಳೂರು ಆಕಾಶವಾಣಿಯಲ್ಲಿ ಇಪ್ಪತ್ತು ವರ್ಷ ಕಾರ್ಯನಿರ್ವಹಿಸಿ ಅನಂತರ ಗುಲ್ಬರ್ಗ, ಬೆಂಗಳೂರು, ಮಂಗಳೂರು ಬಾನುಲಿಕೇಂದ್ರಗಳಲ್ಲಿ ಕಾರ್ಯಕ್ರಮ ನಿರ್ವಾಹಕರಾಗಿ ಹದಿನಾಲ್ಕು ವರ್ಷ ದುಡಿದು ನಿವೃತ್ತರಾದರು.
ಬಾನುಲಿಯ ಸುದೀರ್ಘ ಸೇವೆಯಲ್ಲಿ ಇವರು ಹೊಸ ಹೊಸ ಕಾರ್ಯಕ್ರಮಗಳನ್ನು ರೂಪಿಸಿ, ಪ್ರತಿಭಾವಂತರನ್ನು ಹುಡುಕಿ ಅವರನ್ನು ಆಕಾಶವಾಣಿಯ ಕಾರ್ಯಕ್ರಮಗಳಲ್ಲಿ ತೊಡಗಿಸಿ ಜನಾನುರಾಗಿಯಾದರು.
1967ರಲ್ಲಿ ಇವರ ಮೊದಲ ಕವನಸಂಗ್ರಹ ‘ಅಮೃತ’ ಪ್ರಕಟವಾಯಿತು. ಅಂದಿನಿಂದ ಇಂದಿನವರೆಗೆ ಆರು ದಶಕ ಲೇಖನಿಯನ್ನು ಕೆಳಗಿಡದೆ ಒಂದೇ ಸಮನೆ ಬರೆಯುತ್ತ ಸುಮಾರು ನಾಲ್ಕುನೂರು ಗ್ರಂಥಗಳನ್ನು ಪ್ರಕಟಿಸಿದ್ದಾರೆ. ಇವುಗಳಲ್ಲಿ ‘ಕಲಿ ಭಾರತ’, ‘ಅಲ್ಲಮಪ್ರಭು’, ‘ಅಕ್ಕಮಹಾದೇವಿ’, ‘ಬಸವಣ್ಣ’ ಮಹಾಕಾವ್ಯಗಳೂ, ‘ಬೆಂಕಿಯಲ್ಲಿ ಅರಳಿದ ಹೂವು’ ನಂತಹ ಆತ್ಮಕಥನವೂ ಸೇರಿದೆ.
ಇವರ ಸಾಹಿತ್ಯಸೃಷ್ಟಿಗೆ ಯಾವ ಸರಹದ್ದುಗಳೂ ಇಲ್ಲ. ಕಥೆ, ಕಾದಂಬರಿ, ಕವನ, ನಾಟಕ, ರೂಪಕ, ಪ್ರಬಂಧ, ವಿಮರ್ಶೆ, ಸಂಶೋಧನೆ, ಸಂಪಾದನೆ, ವೈಚಾಲಕ, ಹಾಸ್ಯ, ಜಾನಪದ, ಪ್ರವಾಸಕಥನ, ಜೀವನ ಚರಿತ್ರೆ, ವಚನಸಾಹಿತ್ಯ, ದಾಸಸಾಹಿತ್ಯ, ಮಕ್ಕಳ ಸಾಹಿತ್ಯ, ಬಿಡಿ ಬರೆಹಗಳು – ಹೀಗೆ ಸಾಹಿತ್ಯದ ಎಲ್ಲ ಪ್ರಕಾರಗಳಲ್ಲಿಯೂ ಕೈಯಾಡಿಸಿದ್ದಾರೆ. ಅನೇಕ ಸಾಮಾಜಿಕ, ಐತಿಹಾಸಿಕ ಕಾದಂಬರಿಗಳನ್ನು ಬರೆದ ಕೈಗಳಿಂದಲೇ ಜಾನಪದ ಸಾಹಿತ್ಯಚರಿತ್ರೆಯ ಹದಿನೈದು ಸಂಪುಟಗಳು, ಮಲೆ ಮಾದೇಶ್ವರ ಕಾವ್ಯ ಸಂಪಾದನೆ ಮಾಡಿದ್ದಾರೆ. ಜಾನಪದ ಕ್ಷೇತ್ರದಲ್ಲಿ ಒಂದು ವಿಶ್ವವಿದ್ಯಾಲಯ ಮಾಡುವಷ್ಟು ಕ್ಷೇತ್ರಕಾರ್ಯ, ಸಂಪಾದನೆ, ವಿಶ್ಲೇಷಣ, ಸಂಗ್ರಹ ಮಾಡಿದ್ದಾರೆ. ಶಿಷ್ಟಸಾಹಿತ್ಯದಲ್ಲಿ ಡಾ. ಸ್ವಾಮಿಯವರ ಕೊಡುಗೆ ಸಣ್ಣದಲ್ಲ. ಕಾಳಿದಾಸನ ಸಾಹಿತ್ಯದ ಕುರಿತು ಬರೆಯಬಲ್ಲ ಡಾ. ಸ್ವಾಮಿಯವರು ಸೂರದಾಸನ ಸಾಹಿತ್ಯದ ಬಗೆಗೂ ಬರೆಯಬಲ್ಲರು. ಹರಿದಾಸ ಪರಂಪರೆಯ ಕುರಿತು ಹಲವು ವರ್ಷ ಸಂಶೋಧನೆ ಮಾಡಿ ಒಂದು ಬೃಹತ್ ಗ್ರಂಥ ಪ್ರಕಟಿಸಿದ್ದಾರೆ. ಅದಕ್ಕಾಗಿ ಅವರು ಊರೂರು ಅಲೆದು ಹಲಕಥಾಕಾರರನ್ನು ಸಂದರ್ಶಿಸಿ, ವಾಚನಾಲಯಗಳಲ್ಲಿ ತಿಂಗಳುಗಟ್ಟಲೆ ಕುಳಿತು ಸಂಶೋಧನೆ ಮಾಡಿದ್ದಾರೆ.
ಇದನ್ನೂ ಓದಿ | ನನ್ನ ದೇಶ ನನ್ನ ದನಿ ಅಂಕಣ: ಚೀನಾ ದೇಶದ ಪ್ರಾಚೀನ ದೊರೆಗಳು ನಮಗೆ ಪ್ರೇರಣೆ ನೀಡಲಿ
ಇವರ ಸಾಹಿತ್ಯಸೇವೆಯನ್ನು ಗಮನಿಸಿ ಕನ್ನಡಿಗರು ಅವರಿಗೆ ‘ಮಧುವೃತ’ ಎಂಬ ಗೌರವಗ್ರಂಥ ಅರ್ಪಿಸಿದ್ದಾರೆ.
ಇವರ ‘ಕವಿಚಕ್ರೇಶ್ವರ’ ಕಾದಂಬರಿಗೆ ದೇವರಾಜ ಬಹದ್ದೂರ್ ಪ್ರಶಸ್ತಿ(1974), ‘ಜಾನಪದ ಕಥಾಸಂಗಮ’ಕ್ಕೆ ಕರ್ನಾಟಕ ಜಾನಪದ-ಯಕ್ಷಗಾನ ಅಕಾಡೆಮಿಯ ಬಹುಮಾನ(1987), ‘ಮಹಾಜ್ಯೋತಿ ಮಾದೇಶ್ವರ’ ಕೃತಿಗೆ ಮುದ್ದಣ- ರತ್ನಾಕರವರ್ಣಿ ಪ್ರಶಸ್ತಿ, ‘ಜಾನಪದ ಸೌರಭ’, ಅಕ್ಕಮ್ಮ ಗಿರಿಗೌಡ ರುದ್ರಪ್ಪ ಪ್ರಶಸ್ತಿ (1996), ‘ತುಳುನಾಡ ಐಸಿರಿ’ಗೆ ಗೊರೂರು ಪ್ರತಿಷ್ಠಾನದ ಪ್ರಶಸ್ತಿ (1997), ಕದಂಬೋತ್ಸವದಲ್ಲಿ ಅಭಿನಂದನೆ(1998), ‘ಸಮಗ್ರ ನಾಟಕಗಳು’ಗೆ ಆರ್ಯಭಟ ಪ್ರಶಸ್ತಿ, ಜಾನಪದ ಜ್ಞಾನ ವಿಜ್ಞಾನ ಪ್ರಶಸ್ತಿ(2002), ‘ನಾಟಕ ರೂಪಕ’ ಕೃತಿಗೆ ಅತ್ತಿಮಬ್ಬೆ ಸಾಹಿತ್ಯಪ್ರತಿಷ್ಠಾನದ ಪ್ರಶಸ್ತಿ, ‘ಜಾನಪದಶ್ರೀ’ಗೆ ಕರ್ನಾಟಕ ಜಾನಪದ ಅಕಾಡೆಮಿ ಬಹುಮಾನ, ಇಂಥ ಅನೇಕ ಸಂಘಸಂಸ್ಥೆಗಳ ಬಹುಮಾನಗಳು, ಪ್ರಶಸ್ತಿಗಳು ಇವರಿಗೆ ಸಂದಿವೆ.