ಬೆಂಗಳೂರು: ಮೆಟ್ರೋ ಟ್ರೈನ್‌ನಲ್ಲಿ (Bangalore Metro) ಪ್ರಯಾಣಿಸುತ್ತಿದ್ದ ವ್ಯಕ್ತಿಯೊಬ್ಬರು ಕುಸಿದು ಬಿದ್ದು ಮೃತಪಟ್ಟ ಘಟನೆ ಕಳೆದ ಜು.20 ರಂದು ನಡೆದಿತ್ತು. ಚಾಮರಾಜನಗರ ನಿವಾಸಿ ತಿಮ್ಮೇಗೌಡ (67) ಮೃತ ದುರ್ದೈವಿ. ಇದೀಗ ತಿಮ್ಮೇಗೌಡ ಕುಟುಂಬಸ್ಥರು ಪೊಲೀಸ್ ಠಾಣೆ ಮೆಟ್ಟಿಲೇರಿದ್ದು, ಮೆಟ್ರೋ ಅಧಿಕಾರಿಗಳ ನಿರ್ಲಕ್ಷ್ಯದ ವಿರುದ್ಧ (Negligence of metro staff) ದೂರು ದಾಖಲಿಸಿದ್ದಾರೆ.
ಬೈಯ್ಯಪ್ಪನಹಳ್ಳಿ ಠಾಣೆಯಲ್ಲಿ ತಿಮ್ಮೆಗೌಡ ಮಗ ಮುತ್ತುರಾಜ್ ಅವರು ದೂರು ನೀಡಿದ್ದಾರೆ. ಮೆಟ್ರೋದಲ್ಲಿ ಪ್ರಯಾಣಿಕರ ಆರೋಗ್ಯ ಏರುಪೇರಾದರೂ ಆಸ್ಪತ್ರೆಗೆ ದಾಖಲು ಮಾಡದೆ ನಿರ್ಲಕ್ಷ್ಯವನ್ನು ತೋರಿದ್ದಾರೆ. ನಮ್ಮ ತಂದೆಯವರು ಕುಸಿದು ಬಿದ್ದರೂ, ಯಾರು ಕೂಡ ಕ್ಯಾರೆ ಎಂದಿಲ್ಲ. ಮಾತ್ರವಲ್ಲದೆ ಹೃದಯಘಾತವಾಗಿ 40 ನಿಮಿಷ ಕಳೆದರೂ ಮೆಟ್ರೋನ ಯಾವ ಸಿಬ್ಬಂದಿಯೂ ಸಹಾಯಕ್ಕೆ ಬಂದಿಲ್ಲ. ಸರಿಯಾದ ಸಮಯಕ್ಕೆ ಪ್ರಥಮ ಚಿಕಿತ್ಸೆ ನೀಡಿ ಆಸ್ಪತ್ರೆಗೆ ದಾಖಲು ಮಾಡಿಲ್ಲ. ಮೆಟ್ರೋದಲ್ಲಿ ಪ್ರಯಾಣಿಸುವ ಪ್ರಯಾಣಿಕರ ಆರೋಗ್ಯದಲ್ಲಿ ಏರುಪೇರಾದರೆ ಯಾರು ಹೊಣೆ ಎಂದು ಪ್ರಶ್ನಿಸಿದ್ದಾರೆ.
ಕಳೆದ 20ರಂದು ಬೆಳಗ್ಗೆ ಬೈಯಪ್ಪನಹಳ್ಳಿ ಮೆಟ್ರೋ ನಿಲ್ದಾಣದಲ್ಲಿ ತಿಮ್ಮೆಗೌಡರು ರೈಲು ಹತ್ತಿದ್ದರು. ಬಳಿಕ ಸ್ವಾಮಿ ವಿವೇಕಾನಂದ ಮೆಟ್ರೋ ನಿಲ್ದಾಣ ತಲುಪುವ ವೇಳೆಗೆ ಅವರಿಗೆ ಎದೆ ನೋವು ಕಾಣಿಸಿಕೊಂಡು ಕುಸಿದು ಬಿದ್ದಿದ್ದರು. ಕೂಡಲೇ ಅಲ್ಲಿದ್ದ ಸಹ ಪ್ರಯಾಣಿಕರು ಮೆಟ್ರೊ ಸಿಬ್ಬಂದಿಗೆ ಮಾಹಿತಿ ನೀಡಿದ್ದಾರೆ. ಆದರೆ ಅವರು ಯಾವುದಕ್ಕೂ ಸ್ಪಂದಿಸದೇ ಇದ್ದಾಗ ಸಹ ಪ್ರಯಾಣಿಕರೇ ಸಹಾಯಕ್ಕೆ ಬಂದಿದ್ದಾರೆ. ಅಷ್ಟರಲ್ಲಿ ಮೆಟ್ರೋ ಎಂಜಿ ರಸ್ತೆ ಮೆಟ್ರೋ ನಿಲ್ದಾಣಕ್ಕೆ ಬಂದಾಗ ರೈಲಿನಿಂದ ತಿಮ್ಮೆಗೌಡರನ್ನು ಹೊರಗೆ ಕರೆತಂದು ಫ್ಲಾಟ್ ಫಾರಂ ಮೇಲೆ ಇರಿಸಿದ್ದಾರೆ. ಸುಮಾರು ನಿಮಿಷಗಳ ಕಾಲ ಸಿಬ್ಬಂದಿ ಫ್ಲಾಟ್ ಫಾರಂ ಮೇಲೆಯೇ ಹಾಗೆ ಬಿಟ್ಟಿದ್ದಾರೆ.
ಮೆಟ್ರೋ ಸಿಬ್ಬಂದಿ ನಿರ್ಲಕ್ಷ್ಯ ಕಂಡು ಸಾರ್ವಜನಿಕರೇ ಅಲ್ಲಿಂದ ಇನ್ಫೆಂಟ್ರಿ ರಸ್ತೆಯ ಸ್ಪರ್ಶ್ ಆಸ್ಪತ್ರೆಗೆ ಕರೆದುಕೊಂಡು ಹೋಗಿ ದಾಖಲು ಮಾಡಿದ್ದಾರೆ. ತಡವಾಗಿ ಆಸ್ಪತ್ರೆಗೆ ದಾಖಲು ಮಾಡಿದ್ದರಿಂದ ತಿಮ್ಮೆಗೌಡರು ಮೃತಪಟ್ಟಿದ್ದಾಗಿ ದೂರಿನಲ್ಲಿ ಉಲ್ಲೇಖಿಸಿದ್ದಾರೆ. ಸದ್ಯ ದೂರಿನ ಅನ್ವಯ ಕೇಸ್ ದಾಖಲು ಮಾಡಿರುವ ಪೊಲೀಸರು ಬಿಎಂಆರ್‌ಸಿಎಲ್ ಚೀಫ್ ಸೆಕ್ಯುರಿಟಿ ಆಫೀಸರ್ ಸೆಲ್ವಂಗೆ ನೋಟಿಸ್ ನೀಡಿದ್ದಾರೆ.
ರಾಜ್ಯದ ಇನ್ನಷ್ಟು ಸುದ್ದಿಗಾಗಿ ಈ ಲಿಂಕ್ ಕ್ಲಿಕ್ ಮಾಡಿ