ಬೆಂಗಳೂರು: ನೂತನ ಮುಖ್ಯಮಂತ್ರಿ ಹಾಗೂ ಡಿಸಿಎಂ ಪ್ರಮಾಣ ವಚನ ಸ್ವೀಕಾರದ ದಿನ ಉಂಟಾಗಿದ್ದ ಟ್ರಾಫಿಕ್ ಜಾಮ್‌ನಲ್ಲಿ ಸಿಕ್ಕಿಹಾಕಿಕೊಂಡ ಸಿಇಟಿ ಪರೀಕ್ಷೆ ಬರೆಯಬೇಕಿದ್ದ ವಿದ್ಯಾರ್ಥಿಯನ್ನು ಸಕಾಲದಲ್ಲಿ ಹಾಲ್‌ಗೆ ತಲುಪಿಸಿ ಪೊಲೀಸರು ಸಮಯಪ್ರಜ್ಞೆ ಮೆರೆದ ಘಟನೆ ತಡವಾಗಿ ವರದಿಯಾಗಿದೆ.
ಪ್ರಮಾಣ ವಚನದ ಸಂದರ್ಭವೇ ಸಿಇಟಿ ಪರೀಕ್ಷೆ ನಡೆಯುತ್ತಿತ್ತು. ಆದರೆ ಸಿಇಟಿ ವಿದ್ಯಾರ್ಥಿಯೊಬ್ಬರು ಟ್ರಾಫಿಕ್ ಜಾಮ್‌ನಲ್ಲಿ ಸಿಕ್ಕಿಹಾಕಿಕೊಂಡಿದ್ದರು. ಕೋರಮಂಗಲ ಜೆಎನ್‌ಸಿ ಕಾಲೇಜಿಗೆ ಸಕಾಲಕ್ಕೆ ತಲುಪಲು ಸಾಧ್ಯವಿಲ್ಲ ಎಂಬ ಆತಂಕದಿಂದ ಟೆನ್ಷನ್ ಆಗಿದ್ದ ವಿದ್ಯಾರ್ಥಿ ಅಲ್ಲೇ ಇದ್ದ ಪೊಲೀಸ್ ಸಿಬ್ಬಂದಿಯ ಬಳಿ ಅಲವತ್ತುಕೊಂಡಿದ್ದ.
ಈ ಸಂದರ್ಭದಲ್ಲಿ ಅಲ್ಲಿದ್ದ ಕೊತ್ತನೂರು ಹೊಯ್ಸಳ ಪೊಲೀಸ್ ಸಿಬ್ಬಂದಿ, ವಿದ್ಯಾರ್ಥಿಯನ್ನು ಜೀಪಿನಲ್ಲಿ ಕೂರಿಸಿಕೊಂಡು, ಸೈರನ್ ಬಾರಿಸುತ್ತಾ ವೇಗವಾಗಿ ಚಲಾಯಿಸಿ ವಿದ್ಯಾರ್ಥಿಯನ್ನು ಪರೀಕ್ಷಾ ಕೇಂದ್ರಕ್ಕೆ ತಲುಪಿಸಿದರು. ಈ ಕಾರ್ಯ ಮಾಡಿದ ಹೊಯ್ಸಳ ಪೊಲೀಸ್ ಸಿಬ್ಬಂದಿಯಾದ ಗೌರೀಶ್ ಹಾಗು ಸೋಮಶೇಖರ್ ಕಾರ್ಯಕ್ಕೆ ಮೆಚ್ಚುಗೆ ವ್ಯಕ್ತವಾಗಿದೆ. ಕೇವಲ 15 ನಿಮಿಷಗಳಲ್ಲಿ, ಪರೀಕ್ಷೆ ಸಮಯಕ್ಕೆ ಸರಿಯಾಗಿ ಕೋರಮಂಗಲ ಜೆಎನ್‌ಸಿ ಕಾಲೇಜಿಗೆ ತನ್ನನ್ನು ತಲುಪಿಸಿದ ಹೊಯ್ಸಳ ಸಿಬ್ಬಂದಿಗೆ ವಿದ್ಯಾರ್ಥಿ ಧನ್ಯವಾದ ತಿಳಿಸಿದ್ದಾರೆ.
ಇದನ್ನೂ ಓದಿ: Viral Video : ಕರೀನಾ ಕಪೂರ್ ವರ್ತನೆ ಬಗ್ಗೆ ನಾರಾಯಣಮೂರ್ತಿ ಗರಂ; ನಟಿ ಪರ ನಿಂತ ಸುಧಾ ಮೂರ್ತಿ!