ಬೆಂಗಳೂರು: ಅವೈಜ್ಞಾನಿಕ ರಸ್ತೆ ಕಾಮಗಾರಿ ಹಾಗೂ ರಸ್ತೆಗುಂಡಿಗಳಿಗೆ ರಾಜಧಾನಿಯಲ್ಲಿ ಎರಡು ಪ್ರತ್ಯೇಕ ಅಪಘಾತಗಳಲ್ಲಿ ಇಬ್ಬರು ಬಲಿಯಾಗಿದ್ದಾರೆ.
ರಸ್ತೆ ಗುಂಡಿಗಳನ್ನು ಮುಚ್ಚದೇ ಅಮಾಯಕರ ಪ್ರಾಣ ತೆಗೆಯುತ್ತಿರುವ ಬಿಬಿಎಂಪಿಯ ಉಡಾಫೆಗೆ ಆ.18ರಂದು ಸುಂಕದಕಟ್ಟೆ ಬಳಿ ನಡೆದ ಅಪಘಾತ ನಿದರ್ಶನವಾಗಿದೆ. ರಸ್ತೆ ಗುಂಡಿಗೆ ಚಕ್ರ ಇಳಿದು, ಅಪಘಾತವಾಗಿದ್ದು ಸಿಸಿ ಕ್ಯಾಮರಾದಲ್ಲಿ ಸೆರೆಯಾಗಿದೆ. ವಾಹನ ಸವಾರ 44 ವರ್ಷದ ಸುಪ್ರೀತ್ ಗಂಭೀರವಾಗಿ ಗಾಯಗೊಂಡಿದ್ದರು. ಅವರನ್ನು ಸ್ಥಳೀಯ ಸರ್ಕಾರಿ ಆಸ್ಪತ್ರೆಗೆ ದಾಖಲು ಮಾಡಲಾಗಿತ್ತು. ನಿನ್ನೆ ಚಿಕಿತ್ಸೆ ಫಲಕಾರಿಯಾಗದೇ ಖಾಸಗಿ ಆಸ್ಪತ್ರೆಯಲ್ಲಿ ಮೃತಪಟ್ಟಿದ್ದಾರೆ.
ಗುಂಡಿಯಿಂದಲೇ ನಮ್ಮ ಅಣ್ಣನ ಸಾವಾಗಿದೆ ಎಂದು ಕುಟುಂಬಸ್ಥರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಸಂಬಂಧಪಟ್ಟವರ ವಿರುದ್ಧ ಕೂಡಲೇ ಕ್ರಮ ತೆಗೆದುಕೊಳ್ಳಬೇಕು, ಇಲ್ಲದಿದ್ದರೆ ಕಾನೂನು ಹೋರಾಟ ಮುಂದುವರೆಸುತ್ತೇವೆ ಎಂದು ಬ್ಯಾಡರಹಳ್ಳಿ ಪೊಲೀಸ್ ಠಾಣೆಗೆ ಸುಪ್ರೀತ್ ಕುಟುಂಬದವರು ದೂರು ನೀಡಿದ್ದಾರೆ.
ಇನ್ನೊಂದು ಪ್ರಕರಣದಲ್ಲಿ ಮಹಿಳೆಯೊಬ್ಬರು ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಅವೈಜ್ಞಾನಿಕ ರಸ್ತೆಗೆ ಬಲಿಯಾಗಿದ್ದಾರೆ. ಎಲೆಕ್ಟ್ರಾನಿಕ್ ಸಿಟಿಯ ವೀರಸಂದ್ರ ಬಳಿ ಮೆಲ್ಸೇತುವೆಯ ಇಳಿಜಾರಿನಲ್ಲಿ ನಡೆಸಿದ ಅವೈಜ್ಞಾನಿಕ ರಸ್ತೆ ಕಾಮಗಾರಿಯಿಂದಾಗಿ ಅಪಘಾತ ಸಂಭವಿಸಿದೆ. ಆ.22ರಂದು ಗೂಡ್ಸ್ ಆಟೋಗೆ ಲಾರಿ ಗುದ್ದಿದ್ದು, ಗೂಡ್ಸ್ ಆಟೋದಲ್ಲಿದ್ದ ಮಹಿಳೆ ಕೆಳಗೆ ಬಿದ್ದು ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಮೃತರನ್ನು ಪ್ರಮೀಳ (42) ಎಂದು ಗುರುತಿಸಲಾಗಿದೆ. ಆಟೋದಲ್ಲಿದ್ದ ಬಾಲಕಿ ಸೇರಿ ಮೂವರಿಗೆ ಗಂಭೀರ ಗಾಯಗಳಾಗಿವೆ.
ಲಾರಿ ಚಾಲಕನ ಅತಿ ವೇಗವೂ ಅಪಘಾತಕ್ಕೆ ಕಾರಣವಾಗಿದೆ. ಗಾಯಾಳುಗಳನ್ನು ಖಾಸಗಿ ಆಸ್ಪತ್ರೆಗೆ ರವಾನಿಸಲಾಗಿದ್ದು, ಎಲೆಕ್ಟ್ರಾನಿಕ್ ಸಿಟಿ ಸಂಚಾರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಇದನ್ನೂ ಓದಿ: Bike Accident | ರಸ್ತೆ ಗುಂಡಿ ತಪ್ಪಿಸಲು ಹೋಗಿ ಬಿಎಂಟಿಸಿ ಬಸ್ ಅಡಿ ಸಿಲುಕಿ ಬೈಕ್ ಸವಾರ ಸ್ಥಳದಲ್ಲೇ ಸಾವು