Site icon Vistara News

Bangalore Rain: ಅಂಡರ್‌ಪಾಸ್‌ನಲ್ಲಿ ಬಿದ್ದು ಮತ್ತೊಬ್ಬ ವ್ಯಕ್ತಿ ಬಲಿ, ಮುಂದುವರಿದ ಮಳೆ ಅವಾಂತರ

Bangalore-Rain-11

ಬೆಂಗಳೂರು: ರಾಜಧಾನಿಯಲ್ಲಿ ಸುರಿಯುತ್ತಿರುವ ಮಳೆಗೆ (Bangalore Rain) ಮತ್ತೊಂದು ಬಲಿಯಾಗಿದೆ. ಭಾನುವಾರ ಕೆ.ಆರ್‌ ಸರ್ಕಲ್‌ನ ಅಂಡರ್‌ಪಾಸ್‌ನಲ್ಲಿ ಕಾರು ಮುಳುಗಿ ಯುವತಿಯೊಬ್ಬಳು ಮೃತಪಟ್ಟಿದ್ದು ದೊಡ್ಡ ಸುದ್ದಿಯಾಗಿತ್ತು. ಸೋಮವಾರ ಮತ್ತೊಬ್ಬರು ಅಂಡರ್‌ಪಾಸ್‌ನಲ್ಲಿ ಸಾವಿಗೀಡಾದ ಪ್ರಕರಣ ತಡವಾಗಿ ಬೆಳಕಿಗೆ ಬಂದಿದೆ.

ಫಕ್ರುದ್ದೀನ್ ಎಂಬವರು ಮೃತ ದುರ್ದೈವಿ. ಕಾಚೋಹಳ್ಳಿಯ ಅಂಡರ್‌ಪಾಸ್‌ನಲ್ಲಿ ಘಟನೆ ನಡೆದಿದೆ. ಸೋಮವಾರ ಕೆಲಸ ಮುಗಿಸಿ ರಾಮನಗರ ಕಡೆ ತೆರಳುತ್ತಿದ್ದ ಫಕ್ರುದ್ದೀನ್, ಕಾಚೋಹಳ್ಳಿ ಅಂಡರ್‌ಪಾಸ್‌ನಲ್ಲಿ ಆಯತಪ್ಪಿ ಬಿದ್ದಿದ್ದರು. ಆಸ್ಪತ್ರೆಗೆ ಸಾಗಿಸುವ ದಾರಿ ಮಧ್ಯೆ ಮೃತಪಟ್ಟಿದ್ದಾರೆ. ಕಾಮಾಕ್ಷಿಪಾಳ್ಯ ಸಂಚಾರಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ನೀರು ನಿಂತು ಅವಾಂತರ

ಕಳೆದ ನಾಲ್ಕು ದಿನಗಳಿಂದ ಬೆಂಗಳೂರಿನಲ್ಲಿ ವರುಣನ ಅರ್ಭಟ ಜೋರಾಗಿದೆ. ಸಂಜೆಯಾಗುತ್ತಿದ್ದಂತೆ ಗುಡುಗು, ಮಿಂಚು ಬಿರುಗಾಳಿಯೊಂದಿಗೆ ಆರಂಭವಾಗುವ ಮಳೆ ಆಲಿಕಲ್ಲು ಸುರಿಸುತ್ತ ನಗರದಲ್ಲಿ ಸಾಕಷ್ಟು ಅವಾಂತರಗಳನ್ನ ಸೃಷ್ಟಿಸುತ್ತಿದೆ. ಮಂಗಳವಾರ ರಾತ್ರಿ ಒಂದು ಗಂಟೆ ಸುಧೀರ್ಘವಾಗಿ ಸುರಿದ ಮಳೆ ಬಹುತೇಕ ಕಡೆ ಅವಾಂತರ ಸೃಷ್ಟಿಸಿ ಜನರ ನಿದ್ದೆಗೆಡಿಸಿದೆ.

ನಗರದ ಶಿವಾನಂದ ರೈಲ್ವೇ ಅಂಡರ್ ಪಾಸ್, ಓಕಳಿಪುರಂ ಅಂಡರ್ ಪಾಸ್‌ನಲ್ಲಿ ನೀರು ನಿಂತು ವಾಹನ ಸವಾರರು ಪರದಾಡಿದರು. ಮತ್ತಿಕೆರೆ, ವಿಜಯನಗರ, ಸಂಜಯ್ ನಗರದ ತಗ್ಗು ಪ್ರದೇಶದ ಮನೆಗಳಿಗೆ ನೀರು ನುಗ್ಗಿದ್ದರಿಂದ ನಿವಾಸಿಗಳು ಅಡುಗೆ ಮಾಡಲಾರದೆ, ನಿದ್ರೆ ಮಾಡಲಾರದೆ ರಾತ್ರಿ ಇಡೀ ಜಾಗರಣೆ ಮಾಡಿದರು.

ದೇವರಚಿಕ್ಕನಹಳ್ಳಿ ಹಾಗೂ ಅನುಗ್ರಹ ಲೇಔಟ್‌ನ ನಿವಾಸಿಗಳು ರಾತ್ರಿ ಸುರಿದ ಮಳೆಗೆ ತತ್ತರಿಸಿ ಹೋದರು. ಇಲ್ಲಿನ ಎರಡು ಮೂರು ರಸ್ತೆಗಳು ಜಲಾವೃತವಾದವು. ರಸ್ತೆಯಲ್ಲಿ ನಿಂತ ವಾಹನಗಳು ಹಾಗೂ ಮನೆಗಳ ಪಾರ್ಕಿಂಗ್‌ನಲ್ಲಿದ್ದ ವಾಹನಗಳು ನೀರಿನಲ್ಲಿ ಮುಳುಗಿದವು. ಸುದ್ದಿ ತಿಳಿದು ಸ್ಥಳಕ್ಕಾಗಮಿಸಿದ ಬಿಬಿಎಂಪಿ ಬೊಮ್ಮನಹಳ್ಳಿ ವಲಯ ಜಂಟಿ ಆಯುಕ್ತ ಕೃಷ್ಣಮೂರ್ತಿ ಅಗ್ನಿಶಾಮಕ‌ ಸಿಬ್ಬಂದಿಗೆ ಮಾಹಿತಿ ನೀಡಿದರು. ಸ್ಥಳಕ್ಕಾಗಮಿಸಿದ ಅಗ್ನಿಶಾಮಕದಳ‌ ಸಿಬ್ಬಂದಿ ನೀರನ್ನು ಪಂಪ್ ಮಾಡಿ ರಾಜಕಾಲುವೆಗೆ ಹರಿಸಿದರು.

ಇದನ್ನೂ ಓದಿ: Bangalore Rain: ಬೆಂಗಳೂರಿನ ವಿವಿಧೆಡೆ ಭಾರಿ ಮಳೆ; ರಸ್ತೆ, ಅಂಡರ್‌ಪಾಸ್‌ಗಳು ಜಲಾವೃತ, ಮನೆಗಳಿಗೆ ನುಗ್ಗಿದ ನೀರು

Exit mobile version