ಬೆಂಗಳೂರು: ಬುಧವಾರ ರಾತ್ರಿ ರಾಜಧಾನಿಯಲ್ಲಿ ಸುರಿದ ಮಳೆ (Bangalore Rain) ಸಹಕಾರ ನಗರ ಬಡಾವಣೆಯಲ್ಲಿ ಅನಾಹುತವನ್ನೇ ಸೃಷ್ಟಿಸಿದೆ. ಮನೆಗಳಿಗೆ ನೀರು (water clogging) ನುಗ್ಗಿದ್ದು, ರಸ್ತೆಗಳು ಕೆರೆಗಳಂತಾಗಿವೆ. ಇದರಿಂದ ಆಕ್ರೋಶಿತಗೊಂಡ ನಿವಾಸಿಗಳು ಬಿಬಿಎಂಪಿ ವಿರುದ್ಧ ರಸ್ತೆ ತಡೆದು ಪ್ರತಿಭಟಿಸಿದರು.
ಮಳೆ ಸುರಿದ ಪರಿಣಾಮ ಸಹಕಾರ ನರದ ಜೆ ಬ್ಲಾಕ್‌ನ ಮನೆಗಳು, ಅಂಗಡಿ ಮುಂಗಟ್ಟುಗಳು ಸಂಪೂರ್ಣ ಜಲಾವೃತವಾದವು. ಮಾರ್ಕೆಟ್ ಹಿಂಭಾಗದ ಮನೆಗಳಿಗೂ ನೀರು ನುಗ್ಗಿತು. ಬುಧವಾರ ರಾತ್ರಿ ಕೆಲವೆಡೆ ರಸ್ತೆಯಲ್ಲಿ ಐದಾರು ಅಡಿಗಳಷ್ಟು ಮಳೆ ನೀರು ನಿಂತಿತ್ತು. ಚರಂಡಿಗಳು ಬ್ಲಾಕ್ ಆಗಿ ಕೊಳಚೆ ನೀರು ಕೂಡ ಮನೆಗಳಿಗೆ ನುಗ್ಗಿದೆ. ಮನೆ ಮುಂದೆ ನಿಂತಿದ್ದ ಕಾರು, ಬೈಕ್‌ಗಳು ಕೂಡ ಜಖಂ ಆಗಿವೆ.
ಇದರಿಂದ ಕಿಡಿಕಿಡಿಯಾದ ನಿವಾಸಿಗಳು ಸೇರಿ ನಗರಪಾಲಿಕೆ ವಿರುದ್ಧ ಧಿಕ್ಕಾರ ಕೂಗಿದರು. ನಂತರ ಪೊಲೀಸರು ಪ್ರತಿಭಟನಾನಿರತರನ್ನು ಸಮಾಧಾನ ಮಾಡಿ ವಾಪಸ್ ಕಳಿಸಿದರು. ಸ್ಥಳೀಯರ ಆಕ್ರೋಶಕ್ಕೆ ಎಚ್ಚತ್ತುಕೊಂಡ ಬಿಬಿಎಂಪಿ ಬಿಬಿಎಂಪಿ ಸಿಬ್ಬಂದಿಗಳು, ಅಗ್ನಿಶಾಮಕ ಸಿಬ್ಬಂದಿಗಳು ಸ್ಥಳಕ್ಕೆ ಧಾವಿಸಿ, ರಾತ್ರಿಯೇ ನೀರನ್ನು ತೆರವು ಮಾಡಿದರು.
ಬಾಡಿಗೆದಾರರು ಖಾಲಿ
ಏರ್‌ಪೋರ್ಟ್ ರಸ್ತೆ ಪಕ್ಕದಲ್ಲೇ ಇರುವ ಸಹಕಾರ ನಗರ ಏರಿಯಾ ಕಳೆದೆರಡು ದಿನದಿಂದ ಮಳೆಗೆ ಜಲಾವೃತವಾಗಿ ತೊಂದರೆ ಅನುಭವಿಸುತ್ತಿದೆ. ಪ್ರತಿ ಮಳೆಗೂ ಮೋರಿ ನೀರು ಮನೆಯೊಳಗೆ ನುಗ್ಗುತ್ತಿದೆ. ಮಳೆ ನೀರಿನ ಕಾಟದಿಂದ ಬೇಸತ್ತ ಸ್ಥಳೀಯ ನಿವಾಸಿಗಳಲ್ಲಿ ಅನೇಕರು ರಾತ್ರೋ ರಾತ್ರಿ ಮನೆ ಖಾಲಿ ಮಾಡಿದ್ದಾರೆ.
ಪ್ರತಿ ಬಾರಿ ಮಳೆಯಾಗುವಾಗಲೂ ಮನೆ ಮುಳುಗಡೆಯಾಗುತ್ತಿರುವ ಹಿನ್ನೆಲೆಯಲ್ಲಿ ಬಾಡಿಗೆದಾರರು ಆತಂಕದಿಂದ ಈಗಾಗಲೇ ಮನೆ ಖಾಲಿ ಮಾಡಿದ್ದಾರೆ. ಸ್ವಂತ ಮನೆ ಇದ್ದವರೂ ಬೇರೆಡೆ ಬಾಡಿಗೆಗೆ ಸ್ಥಳಾಂತರವಾಗುವ ಯೋಚನೆಯಲ್ಲಿದ್ದಾರೆ.
ಬಿಬಿಎಂಪಿ ವಿರುದ್ಧ ಪ್ರತಿಭಟನೆಯ ಮೂಲಕ ಆಕ್ರೋಶ ಹೊರಹಾಕಿರುವ ಸಹಕಾರ ನಗರದ ಜನತೆ, ಶಾಶ್ವತ ಪರಿಹಾರಕ್ಕೆ ಆಗ್ರಹಿಸಿದ್ದಾರೆ. ʼಪ್ರತಿ ಬಾರಿ ನೀರು ತುಂಬಿ ಅಪಾರ ಹಾನಿಯಾಗುತ್ತಿದೆ. ನಮ್ಮ ಪರಿಸ್ಥಿತಿಗೆ ಬಿಬಿಎಂಪಿ ಅಧಿಕಾರಿಗಳು ಸ್ಪಂದಿಸುತ್ತಿಲ್ಲ. ರಾಜಕಾಲುವೆ ಒತ್ತುವರಿ ತೆರವು ಮಾಡಿದ್ದರೆ ಈ ಪರಿಸ್ಥಿತಿ ಬರುತ್ತಿರಲಿಲ್ಲ. ಮಳೆ ನೀರು ಸಾಗಲು ಸಮರ್ಪಕ ವ್ಯವಸ್ಥೆ ಮಾಡಬೇಕುʼ ಎಂದು ಒತ್ತಾಯಿಸಿದ್ದಾರೆ.
ಇದನ್ನೂ ಓದಿ: Bangalore Rain: ರಾಜಧಾನಿಯಲ್ಲಿ ವರುಣನ ಆರ್ಭಟ; ರಸ್ತೆಗಳು ಜಲಾವೃತ, ಹಲವೆಡೆ ಮನೆಗಳಿಗೆ ನುಗ್ಗಿದ ನೀರು