ಬೆಂಗಳೂರು: ರಾಜಧಾನಿ ಬೆಂಗಳೂರಿನ ಟ್ರಾಫಿಕ್ (Bangalore Traffic) ಸಮಸ್ಯೆ ವರ್ಲ್ಡ್‌ಗೆಲ್ಲ ಫೇಮಸ್ ಆಗಿದೆ. ದೂರಾದೂರಿಗೆ ಬೇಕಾದರೂ ಹೋಗಿ ಬರಬಹುದು, ಆದರೆ ಬೆಂಗಳೂರಿನ ಟ್ರಾಫಿಕ್‌ಗೆ ಸಿಲುಕಿದರೆ ಮುಗಿದೆ ಹೋಯಿತು ಎಂಬ ಪರಿಸ್ಥಿತಿ ನಿರ್ಮಾಣವಾಗಿದೆ. ಟ್ರಾಫಿಕ್ ಎಂಬ ಚಕ್ರವ್ಯೂಹಕ್ಕೆ ಒಮ್ಮೆ ಸಿಲುಕಿದರೆ ಅದರಿಂದ ಹೊರಬರುವಷ್ಟರಲ್ಲಿ ಸಾಕಾಪ್ಪ ಜೀವನ ಎಂದೇನಿಸಿ ಬಿಡುತ್ತದೆ. ಸದ್ಯ ಸಿಟಿಯಲ್ಲಿನ ಟ್ರಾಫಿಕ್ (Bangalore Traffic) ಕಂಟ್ರೋಲ್‌ಗೆ ನಗರ ಸಂಚಾರಿ ಪೊಲೀಸರು ಟ್ರಾಫಿಕ್ ಸಿಗ್ನಲ್‌ಗಳಲ್ಲಿ ಜಿಪಿಎಸ್ (GPS) ಅಳವಡಿಸಲು ಯೋಜನೆ ರೂಪಿಸಿದ್ದಾರೆ.
ಇತ್ತೀಚೆಗೆ ಸಿಟಿಯಲ್ಲಿನ ಟ್ರಾಫಿಕ್ (Bangalore Traffic) ಕಂಟ್ರೋಲ್‌ಗೆ ನಗರ ಸಂಚಾರಿ ಪೊಲೀಸರು ಡ್ರೋನ್ (Drone Camera) ಹಾರಿಸಿ ಕಂಟ್ರೋಲ್‌ಗೆ ತರಲು ಮುಂದಾಗಿದ್ದರು. ಜೂ.19ರಂದು ಪ್ರಾಯೋಗಿಕವಾಗಿ ಹೆಬ್ಬಾಳ ಮೇಲ್ಸೇತುವೆ, ಸಿಲ್ಕ್ ಬೋರ್ಡ್ ಜಂಕ್ಷನ್, ಕೆ.ಆರ್.ಪುರ ಮೇಲ್ಸೇತುವೆ, ಮಾರತ್‌ಹಳ್ಳಿ ಹಾಗೂ ಸಾರಕ್ಕಿ ಜಂಕ್ಷನ್, ಬನಶಂಕರಿ ಬಸ್ ನಿಲ್ದಾಣ, ಇಬ್ಬಲೂರು ಜಂಕ್ಷನ್, ಟ್ರಿನಿಟಿ ಜಂಕ್ಷನ್ ಬಳಕೆ ಮಾಡಲಾಗಿತ್ತು. ಡ್ರೋನ್ ಮೂಲಕ ಎಲ್ಲೆಲ್ಲಿ ಟ್ರಾಫಿಕ್ ಜಾಂ ಆಗಿರುತ್ತದೆಯೋ ಅದನ್ನು ನೋಡಿ ಕಮಾಂಡ್ ಸೆಂಟರ್‌ನ ಮೂಲಕ ಮುಂದಿನ ಜಂಕ್ಷನ್‌ಗಳಿಗೆ ಮಾಹಿತಿ ನೀಡುವುದು ಇದರ ಉದ್ದೇಶವಾಗಿತ್ತು.
ಇದರ ಬೆನ್ನಲ್ಲೇ ಇದೀಗ ಟ್ರಾಫಿಕ್ ಸಿಗ್ನಲ್‌ನಲ್ಲಿ ಜಪಾನ್ ತಂತ್ರಜ್ಞಾನಾಧಾರಿತ ಜಿಪಿಎಸ್ ಅಳವಡಿಸಿ, ಅದರ ಮೂಲಕ ಸಂಚಾರ ದಟ್ಟನೆಯನ್ನು ನಿಯಂತ್ರಿಸಲು ತಯಾರಿ ನಡೆದಿದೆ. ಇದರೊಂದಿಗೆ ಬೆಂಗಳೂರಿನ ಟ್ರಾಫಿಕ್ ಕಂಟ್ರೋಲ್‌ಗೆ ಫ್ಲೈವರ್ ಜತೆಗೆ ಸುರಂಗ ರಸ್ತೆಗಳನ್ನು ನಿರ್ಮಾಣ ಮಾಡಲು ರಾಜ್ಯ ಸರ್ಕಾರ ಪ್ಲ್ಯಾನ್ ಮಾಡುತ್ತಿದೆ.
ಜಿಪಿಎಸ್ ಮೂಲಕ ಟ್ರಾಫಿಕ್ ಕಂಟ್ರೋಲ್ ಹೇಗೆ?
ಬೆಂಗಳೂರಿನ ವಾಹನ ದಟ್ಟನೆಯನ್ನು ನಿಯಂತ್ರಿಸಲು ನಗರ ಸಂಚಾರಿ ಪೊಲೀಸರು ಆತ್ಯಾಧುನಿಕ ತಂತ್ರಜ್ಞಾನದ ಮೊರೆ ಹೋಗುತ್ತಿದ್ದಾರೆ. ಟ್ರಾಫಿಕ್ ಕಂಟ್ರೋಲ್‌ಗೆ ಜಪಾನ್ ತಂತ್ರಜ್ಞಾನ ಬಳಕೆ ಮಾಡಿಕೊಂಡು ಸಂಚಾರ ದಟ್ಟಣೆ ತಪ್ಪಿಸಲು ಮುಂದಾಗಿದ್ದಾರೆ. ಟ್ರಾಫಿಕ್ ಸಿಗ್ನಲ್‌ಗಳಲ್ಲಿ ವಾಹನಗಳ ದಟ್ಟಣೆಯನ್ನು ಆಧರಿಸಿ ಸಿಗ್ನಲಿಂಗ್ ವ್ಯವಸ್ಥೆಯನ್ನು ನಿಯಂತ್ರಣ ಮಾಡುವ ತಂತ್ರಜ್ಞಾನ ಇದಾಗಿದೆ.
ಬೆಂಗಳೂರು ನಗರದ ಎಲ್ಲಾ ಪ್ರಮುಖ 28 ಟ್ರಾಫಿಕ್ ಸಿಗ್ನಲ್‌ಗಳಿಗ ಇಂಟರ್‌ನೆಟ್ ಸಂಪರ್ಕ ಹಾಗೂ ಜಿಪಿಎಸ್ ವ್ಯವಸ್ಥೆ ಅಳವಡಿಕೆ ಮಾಡಲಾಗುತ್ತದೆ. ಇದರ ನೇರ ಸಂಪರ್ಕ ಬೆಂಗಳೂರಿನ ಸಂಚಾರ ಮಾಹಿತಿ ಕೇಂದ್ರಕ್ಕೆ ರವಾನೆ ಆಗುತ್ತೆ. ಇದಕ್ಕಾಗಿ ಎಚ್‌ಎಸ್‌ಆರ್ ಲೇಔಟ್‌ನಲ್ಲಿ ಈ ಕೇಂದ್ರವನ್ನು ಸ್ಥಾಪನೆ ಮಾಡಲಾಗಿದೆ.
ಈ ಕೇಂದ್ರದಲ್ಲಿರುವ ಸಿಬ್ಬಂದಿ ಸಿಗ್ನಲ್‌ಗಳ ಮೇಲೆ ನಿಗಾ ವಹಿಸುತ್ತಾರೆ. ಯಾವುದಾರೂ ಜಂಕ್ಷನ್‌ನಲ್ಲಿ ಸಾಲುಗಟ್ಟಿ ವಾಹನಗಳು ನಿಂತಿದ್ದರೆ ಕೂಡಲೇ ಹಸಿರು ಬಣ್ಣಕ್ಕೆ ತಿರುಗುತ್ತದೆ. ಈ ಮೂಲಕ ವಾಹನಗಳು ಗಂಟೆಗಟ್ಟಲೆ ಸಿಗ್ನಲ್‌ನಲ್ಲಿ ಕಾದು ನಿಲ್ಲೋದು ತಪ್ಪುತ್ತದೆ.
ಕೆಲವು ಪ್ರಮುಖ ಸಿಗ್ನಲ್‌ನಲ್ಲಿ ಸಾಲುಗಟ್ಟಿ ವಾಹನಗಳು ನಿಂತಿರುತ್ತವೆ. ಆಗ ಸ್ಥಳದಲ್ಲಿ ಟ್ರಾಫಿಕ್ ಪೊಲೀಸರು ಇರಲೇಬೇಕು ಎಂದೇನಿಲ್ಲ. ಅವರಿಲ್ಲದೇ ಕೇಂದ್ರದಲ್ಲೇ ಕುಳಿತು ಟ್ರಾಫಿಕ್ ಸಮಸ್ಯೆ ಉಂಟಾದರೆ ವಾಹನಗಳನ್ನು ಡೈವರ್ಟ್ ಮಾಡಬಹುದು. ಜತೆಗೆ ಸಂಚಾರ ದಟ್ಟಣೆ ಇದ್ದರೆ ಅಲ್ಲಿ ಪೊಲೀಸರನ್ನು ನಿಯೋಜನೆ ಮಾಡಬಹುದು. ಇಲ್ಲಿ ಡಿಜಿಟಲ್ ಬೋರ್ಡ್‌ಗಳನ್ನು ಅಳವಡಿಕೆ ಮಾಡಲಾಗುತ್ತದೆ. ಜನರಿಗೆ ಸಂಚಾರ ದಟ್ಟಣೆ ಇರುವ ರಸ್ತೆಗಳ ಬಗ್ಗೆ ಮಾಹಿತಿ ನೀಡಲಾಗುತ್ತೆ.
ಫ್ಲೈವರ್ ರಸ್ತೆ ಆಯ್ತು ಈಗ ಸುರಂಗ ರಸ್ತೆ
ಬೆಂಗಳೂರಿನ ಟ್ರಾಫಿಕ್ ನಿಯಂತ್ರಣಕ್ಕೆ ಬಹುತೇಕ ಕಡೆಗಳಲ್ಲಿ ಫ್ಲೈವರ್ ರಸ್ತೆ ನಿರ್ಮಾಣ ಮಾಡಲಾಗಿದೆ. ಜತೆಗೆ ಈಗಾಗಲೇ ಸಾಕಷ್ಟು ಅಂಡರ್‌ಪಾಸ್‌ಗಳು ಇವೆ. ಆದರೆ ಬೆಳೆಯುತ್ತಿರುವ ಬೆಂಗಳೂರಲ್ಲಿ ನಗರದಲ್ಲಿ ವಾಹನಗಳ ಸಂಖ್ಯೆ ಹೆಚ್ಚಾಗುತ್ತಿದೆ. ಇದಕ್ಕೆ ತಕ್ಕ ಹಾಗೆ ಸಂಪರ್ಕ ರಸ್ತೆಗಳ ಕೊರತೆ ಇದೆ.
ಹೀಗಾಗಿ ರಾಜ್ಯ ಸರ್ಕಾರವು ಬೆಂಗಳೂರಲ್ಲಿ ಸುರಂಗ ರಸ್ತೆಗಳನ್ನು ನಿರ್ಮಾಣ ಮಾಡಲು ಸಜ್ಜಾಗಿದೆ. ಬೆಂಗಳೂರಿನಲ್ಲಿ ಒಟ್ಟು 190 ಕಿ. ಮೀ. ಉದ್ದದ ಸುರಂಗ ರಸ್ತೆ ನಿರ್ಮಿಸುವ ಚಿಂತನೆ ಇದೆ. ಸುರಂಗ ರಸ್ತೆ ನಿರ್ಮಿಸಲು ಈಗಾಗಲೇ 8 ಕಂಪನಿಗಳು ಆಯ್ಕೆ ಆಗಿವೆ. ಕೆಲವೇ ದಿನಗಳಲ್ಲಿ ಈ ಸಂಬಂಧ ಟೆಂಡರ್ ಕರೆಯಲು ಸರ್ಕಾರ ಮುಂದಾಗಿದೆ.
ಎಲ್ಲಲ್ಲಿ ಸುರಂಗ ರಸ್ತೆ ನಿರ್ಮಾಣ?
ಟೆಂಡರ್ ಹಂತ ಮುಗಿದ ಕೂಡಲೇ ಕಾಮಗಾರಿಗೆ ಚಾಲನೆ ಸಿಗುವುದಿಲ್ಲ. ಬದಲಿಗೆ ಬೆಂಗಳೂರು ನಗರದ ಟ್ರಾಫಿಕ್ ಪರಿಸ್ಥಿತಿಯ ಕುರಿತು ಅಧ್ಯಯನ ನಡೆಸಲಿವೆ. ಕೆಲವು ಜಂಕ್ಷನ್‌ಗಳಲ್ಲಿ ಮೆಟ್ರೋ ಸುರಂಗ ಮಾರ್ಗ ಹಾದುಹೋಗಿವೆ. ಹೀಗಾಗಿ ಆ ಭಾಗದಲ್ಲಿ ಸುರಂಗ ರಸ್ತೆ ನಿರ್ಮಿಸುವುದು ಕಷ್ಟಸಾಧ್ಯ. ಜತೆಗೆ ಫ್ಲೈವರ್ ಇರುವ ಕಡೆಗೂ ಸುರಂಗ ಕೊರೆಯುವುದು ಅಸಾಧ್ಯ. ಹೀಗಾಗಿ ಸುರಂಗ ರಸ್ತೆ ಎಲ್ಲಿ ಆರಂಭವಾಗಿ ಎಲ್ಲಿ ಅಂತ್ಯ ಆಗಬೇಕು? ಟನಲ್ ರಸ್ತೆ ಎಲ್ಲೆಲ್ಲಿ ಮುಖ್ಯ ರಸ್ತೆಗೆ ಸಂಪರ್ಕ ಕಲ್ಪಿಸಬೇಕು? ಈ ರಸ್ತೆಯನ್ನು ಬೆಂಗಳೂರಿನಾದ್ಯಂತ ವಿಸ್ತರಣೆ ಮಾಡಬೇಕಾ? ಎಂಬ ಪ್ರಶ್ನೆಗಳಿಗೆ ಈ ಅಧ್ಯಯನ ಉತ್ತರ ಕಂಡು ಕೊಳ್ಳಲಿದೆ. ಟನಲ್ ರಸ್ತೆಯನ್ನು ಎಷ್ಟು ಪಥದಲ್ಲಿ ನಿರ್ಮಾಣ ಮಾಡಬೇಕು ಎಂಬುದೆಲ್ಲ ಚರ್ಚೆ ನಡೆಯಲಿದೆ.
ಬಳ್ಳಾರಿ ರಸ್ತೆ, ಹಳೇ ಮದ್ರಾಸ್ ರಸ್ತೆ, ಎಸ್ಟೀಮ್ ಮಾಲ್ ಜಂಕ್ಷನ್‌ನಿಂದ ಮೇಖ್ರಿ ವೃತ್ತ, ಮಿಲ್ಲರ್ ರಸ್ತೆ, ಚಾಲುಕ್ಯ ವೃತ್ತ, ಟ್ರಿನಿಟಿ ವೃತ್ತ, ಸರ್ಜಾಪುರ ರಸ್ತೆ, ಹೊಸೂರು ರಸ್ತೆ, ಕನಕಪುರ ರಸ್ತೆಯಿಂದ ಕೃಷ್ಣರಾವ್ ಪಾರ್ಕ್, ಮೈಸೂರು ರಸ್ತೆಯಿಂದ ಶಿರಸಿ ಸರ್ಕಲ್, ಮಾಗಡಿ ರಸ್ತೆ, ತುಮಕೂರು ರಸ್ತೆಯ ಯಶವಂತಪುರ ಜಂಕ್ಷನ್, ಹೊರ ವರ್ತುಲ ರಸ್ತೆಯಲ್ಲಿ ಗೊರಗುಂಟೆ ಪಾಳ್ಯ, ಕೆ. ಆರ್. ಪುರಂ, ಸಿಲ್ಕ್ ಬೋರ್ಡ್ ಪ್ರದೇಶಗಳಲ್ಲಿ ಟನಲ್ ರಸ್ತೆ ನಿರ್ಮಿಸುವ ಪ್ರಸ್ತಾಪ ಇದೆ.
ರಾಜ್ಯದ ಇನ್ನಷ್ಟು ಸುದ್ದಿಗಾಗಿ ಈ ಲಿಂಕ್ ಕ್ಲಿಕ್ ಮಾಡಿ