ಬೆಂಗಳೂರು: ದಂಡ ವಸೂಲಿ ಭರದಲ್ಲಿ ವೃದ್ಧ ದಂಪತಿಗೆ ಮಾನವೀಯತೆ ಮರೆತು ಕಿರುಕುಳ ನೀಡಲಾಗಿದೆ ಎಂದು ಜಯನಗರ ಸಂಚಾರಿ ಪೊಲೀಸರ ಮೇಲೆ ದೂರು ದಾಖಲಾಗಿದೆ.
ಆಸ್ಪತ್ರೆಗೆ ತೆರಳುತ್ತಿದ್ದ ವೃದ್ಧ ದಂಪತಿಯನ್ನು ತಡೆದು, ದಂಡ ಪಾವತಿಸಿ ಹೋಗಲು ಒತ್ತಾಯಿಸಲಾಗಿದೆ ಎಂದು ಆರೋಪಿಸಲಾಗಿದೆ. ಜೆಪಿ ನಗರದ ನಿವಾಸಿಗಳಾಗಿದ್ದ ಮಂಗಳ ಹಾಗೂ ಮಲ್ಲೇಶ್ ದಂಪತಿಯ ಪುತ್ರ ರಾಕೇಶ್ ಅವರು ಈ ಕುರಿತು ಜಯನಗರ ಪೊಲೀಸರಿಗೆ ದೂರು ನೀಡಿದ್ದಾರೆ.
ದಂಪತಿ 2ನೇ ತಾರೀಕಿನಂದು ದ್ವಿಚಕ್ರವಾಹನದಲ್ಲಿ ಆಸ್ಪತ್ರೆಗೆ ತೆರಳುತ್ತಿದ್ದರು. 45 ವರ್ಷದ ಮಂಗಳ ಅವರು ಸಕ್ಕರೆ ಕಾಯಿಲೆ ಹಾಗೂ ಬಿಪಿಯಿಂದ ಬಳಲುತ್ತಿದ್ದರು. ಈ ಸಂದರ್ಭ ಜಯನಗರ ಸಂಚಾರಿ ಪೊಲೀಸರು ತಡೆದು ವಾಹನದ ಮೇಲಿರುವ 5 ಸಾವಿರ ರೂ. ದಂಡ ಪಾವತಿಸಲು ಒತ್ತಾಯಿಸಿದ್ದಾರೆ. ಆದರೆ ದಂಪತಿ ಬಳಿ 2 ಸಾವಿರ ಮಾತ್ರ ಹಣವಿದ್ದು, ಅಷ್ಟು ಮಾತ್ರ ಕಟ್ಟುವುದಾಗಿ ಹೇಳಿದ್ದಾರೆ. ಆದರೆ ಶಿವಸ್ವಾಮಿ ಎಂಬ ಪೊಲೀಸ್ ಅಧಿಕಾರಿ 5 ಸಾವಿರ ಕಟ್ಟಲೇಬೇಕೆಂದು ಆಗ್ರಹಿಸಿದ್ದು ಮಾತ್ರವಲ್ಲದೆ ಅವಾಚ್ಯ ಶಬ್ದಗಳಿಂದ ನಿಂದಿಸಿದ್ದಾರೆ ಎಂದು ಆರೋಪಿಸಲಾಗಿದೆ.
ಇದರಿಂದ ನೊಂದ ದಂಪತಿ ವಾಹನ ಬಿಟ್ಟು 2 ಕಿಲೋಮೀಟರ್ ನಡೆದೇ ಮನೆಗೆ ತೆರಳಿ, ಹಣ ತಂದು ದಂಡ ಕಟ್ಟಿದ್ದಾರೆ. ಇದರಿಂದಾಗಿ ಕಾಯಿಲೆಯಿಂದ ಬಳಲುತ್ತಿದ್ದ ವೃದ್ಧೆ ಕುಸಿದು ಬಿದ್ದಿದ್ದಾರೆ. ವೃದ್ಧರು ಎಂಬ ಕಾಳಜಿಯೂ ಇಲ್ಲದೇ ಅಮಾನವಿಯವಾಗಿ ನಡೆದುಕೊಂಡಿದ್ದಾರೆ. ಅಧಿಕಾರಿಗಳ ಮೇಲೆ ಕ್ರಮ ಜರುಗಿಸುವಂತೆ ವೃದ್ಧ ದಂಪತಿಯ ಮಗ ರಾಕೇಶ್ ಬೆಂಗಳೂರಿನ ಸಂಚಾರಿ ಪೊಲೀಸ್ ಟ್ವಿಟರ್ ಪೇಜ್‌ನಲ್ಲಿ ಪೋಸ್ಟ್ ಮಾಡಿದ್ದಾರೆ.
ಇದನ್ನೂ ಓದಿ: Traffic Violation | ಕುಡಿದು ಜಾಲಿ ಡ್ರೈವಿಂಗ್; 20 ಸಾವಿರ ರೂ. ದಂಡ ಹಾಕಿ ಕಿಕ್ ಇಳಿಸಿದ ಟ್ರಾಫಿಕ್ ಪೊಲೀಸ್!