Site icon Vistara News

ತರಗತಿ ಬಹಿಷ್ಕಾರ, ದೂರು: ಬೆಂಗಳೂರು ವಿಶ್ವವಿದ್ಯಾಲಯ ಸಂಪೂರ್ಣ ಸ್ತಬ್ಧ

student

ಬೆಂಗಳೂರು: ಭಾರತ್ ಬಂದ್, ಕರ್ನಾಟಕ ಬಂದ್ ನೋಡಿದ್ವಿ ಈಗ ವಿವಿ ಬಂದ್ ಸರದಿ. ವಿದ್ಯಾರ್ಥಿಗಳಿಂದಲೇ ಬಂದ್ ಗೆ ಕರೆ ಹಿನ್ನೆಲೆಯಲ್ಲಿ ಸೋಮವಾರ ಬೆಂಗಳೂರು ವಿಶ್ವವಿದ್ಯಾಲಯ ಸಂಪೂರ್ಣ ಬಂದ್‌ ಆಗಿದೆ. ಕಳೆದ ಕೆಲ ದಿನಗಳ ಹಿಂದೆ ವಿವಿ ಕುಲಪತಿ ಪರವಾಗಿ ಪ್ರಭಾರ ವಿತ್ತಾಧಿಕಾರಿ ದೂರು ನೀಡಿದ್ದು, ಜ್ಞಾನಭಾರತಿ ಪೊಲೀಸ್ ಠಾಣೆಯಲ್ಲಿ ವಿದ್ಯಾರ್ಥಿಗಳ ವಿರುದ್ಧ ದೂರು ದಾಖಲಾಗಿದೆ.

ಸಂಶೋಧನಾ ಮತ್ತು ಸ್ನಾತಕೋತ್ತರ ವಿದ್ಯಾರ್ಥಿಗಳ ಒಕ್ಕೂಟದಿಂದ ಧರಣಿ ನಡೆಸಲಾಗುತ್ತಿದೆ. ತರಗತಿ ಬಹಿಷ್ಕರಿಸಿ ಅಹೋರಾತ್ರಿ ಹೋರಾಟಕ್ಕೆ ನಿರ್ಧಾರ ಮಾಡಲಾಗಿದೆ.

ಭಾನುವಾರ ವಿದ್ಯಾರ್ಥಿಗಳ ವಿರುದ್ಧ ವಿತ್ತಾಧಿಕಾರಿ ಜಯಲಕ್ಷ್ಮೀ ಜ್ಞಾನಭಾರತಿಯ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದಾರೆ. ವಿತ್ತಾಧಿಕಾರಿ ಮತ್ತು ಕುಲಪತಿ ವೇಣುಗೋಪಾಲ್ ದೂರು ಹಿಂಪಡೆಯಬೇಕು ಎಂದು ವಿದ್ಯಾರ್ಥಿಗಳು ಧರಣಿ ನಡೆಸುತ್ತಿದ್ದಾರೆ. ವಿದ್ಯಾರ್ಥಿಗಳು ಸೋಮವಾರ ಬೆಳಗ್ಗೆ 10 ಗಂಟೆಗೆ ಪ್ರತಿಭಟನೆ ನಡೆಸಲು ಮುಂದಾಗಿದ್ದಾರೆ.

ವಿವಿ ಪ್ರಭಾರ ವಿತ್ತಾಧಿಕಾರಿ ಆರ್.ಜಯಲಕ್ಷ್ಮಿ ವಿದ್ಯಾರ್ಥಿಗಳ ವಿರುದ್ಧ ನೀಡಿರುವ ದೂರು ಹಿಂಪಡೆಯುವವರೆಗೂ ಧರಣಿ ನಿಲ್ಲಿಸದಿರಲು ವಿದ್ಯಾರ್ಥಿಗಳು ಯೋಜಿಸಿದ್ದಾರೆ. 50ಕ್ಕೂ ಹೆಚ್ಚು ವಿದ್ಯಾರ್ಥಿಗಳ ವಿರುದ್ಧ ದೂರು ದಾಖಲಾಗಿದೆ. ಇದೇ ಬೆನ್ನಲ್ಲೇ ವಿತ್ತಾಧಿಕಾರಿ ಮತ್ತು ಕುಲಪತಿ ಪ್ರೊ. ವೇಣುಗೋಪಾಲ್ ವಿರುದ್ಧ ವಿದ್ಯಾರ್ಥಿಗಳು ದೂರು ನೀಡಿದ್ದಾರೆ. ನಿನ್ನೆ ಇವರಿಬ್ಬರ ವಿರುದ್ಧ ವಿವಿ ವಿದ್ಯಾರ್ಥಿ ಒಕ್ಕೂಟ ದೂರು ನೀಡಿದೆ. ಬೆಂಗಳೂರು ವಿವಿಯ 7 ಸಾವಿರಕ್ಕೂ ಅಧಿಕ ವಿದ್ಯಾರ್ಥಿಗಳು ಪ್ರತಿಭಟನೆಯಲ್ಲಿ ಭಾಗಿಯಾಗಲಿದ್ದಾರೆ. ಸುಮಾರು 52 ವಿಭಾಗಗಳನ್ನು ಬಂದ್ ಮಾಡಿ ಪ್ರತಿಭಟನೆಗೆ ಕರೆ ನೀಡಲಾಗಿದೆ.

ವಿವಿಯಲ್ಲಿ ನೂತನ ಕಟ್ಟಡ ನಿರ್ಮಾಣಕ್ಕೆ ದಿಡೀರನೆ 28 ಕೋಟಿ ರೂಪಾಯಿ ಹಣ ಬಿಡುಗಡೆ ಮಾಡಿರುವುದರ ಹಿನ್ನೆಲೆಯಲ್ಲಿ ವಿದ್ಯಾರ್ಥಿಗಳ ಮುಷ್ಕರ ಆರಂಭವಾಗಿತ್ತು. ವಿತ್ತಾಧಿಕಾರಿ ಮತ್ತು ಕುಲಪತಿಯ ನಡೆಯನ್ನು ಆಕ್ಷೇಪಿಸಿರುವ ವಿದ್ಯಾರ್ಥಿಗಳು, ಪ್ರತಿಭಟನೆ ತಡೆಯಲು ಮುಂದಾದರೆ ಉಗ್ರ ಪ್ರತಿರೋಧದ ಎಚ್ಚರಿಕೆ ನೀಡಿದ್ದಾರೆ.

ಇದನ್ನೂ ಓದಿ| ಹಿಜಾಬ್ ವಿವಾದ: ಮಂಗಳೂರು ವಿವಿ ಉಪಕುಲಪತಿ ನೇತೃತ್ವದಲ್ಲಿ ಸಭೆ

Exit mobile version