ಬೆಂಗಳೂರು: ರಾಜಧಾನಿಯಲ್ಲಿ ಮಾಲ್ಡೀವ್ಸ್ ಪ್ರಜೆಯೊಬ್ಬರು ತಮ್ಮ ಬ್ಯಾಗ್, ಅದರಲ್ಲಿದ್ದ ಹಣ, ಪಾಸ್‌ಪೋರ್ಟ್ ಮತ್ತಿತರ ಪ್ರಮುಖ ದಾಖಲೆಗಳನ್ನು ಕಳೆದುಕೊಂಡಿದ್ದು, ಕೆಲವೇ ಗಂಟೆಗಳಲ್ಲಿ ಅದನ್ನು ಮರಳಿ ಪಡೆದದ್ದು ವರದಿಯಾಗಿದೆ. ಇದಕ್ಕೆ ನೆರವಾದದ್ದು ಬೆಂಗಳೂರಿನ ಪೊಲೀಸರ (Bangalore police) ಹೊಸದೊಂದು ತಂತ್ರಜ್ಞಾನ. ಅದೇ ಸೇಫ್ಟಿ ಐಲ್ಯಾಂಡ್ (Safety Island).
ಬೆಂಗಳೂರಿನಲ್ಲಿ ಹೊಸದಾಗಿ ಸ್ಥಾಪಿಸಲಾದ ಈ ಸುರಕ್ಷತಾ ದ್ವೀಪಗಳ ಸಹಾಯದಿಂದ ಎಲ್ಲವನ್ನೂ ಮರುಪಡೆಯಲಾಗಿದೆ. ಘಟನೆ ನಡೆದ ಕೆಲವೇ ಗಂಟೆಗಳಲ್ಲಿ ಬೆಂಗಳೂರು ಪೊಲೀಸರು ಆತನ ಸಾಮಗ್ರಿಗಳನ್ನು ಪತ್ತೆ ಹಚ್ಚಿ ಸೋಮವಾರ ಆತನಿಗೆ ಮರಳಿಸಿದ್ದಾರೆ.
ದಕ್ಷಿಣ ಏಷ್ಯಾ ಫುಟ್ಬಾಲ್ ಫೆಡರೇಶನ್ ಚಾಂಪಿಯನ್‌ಶಿಪ್‌ಗಾಗಿ ಮಾಲ್ಡೀವ್ಸ್‌ನಿಂದ ಫುಟ್‌ಬಾಲ್ ತಂಡವೊಂದು ಬೆಂಗಳೂರಿಗೆ ಆಗಮಿಸಿತ್ತು. ತಂಡದ ಛಾಯಾಗ್ರಾಹಕರೊಬ್ಬರು ಒಂದು ಆಟೋ ಬಾಡಿಗೆ ಮಾಡಿ ಎಂಜಿ ರಸ್ತೆಯ ಬಳಿಯ ಗರುಡಾ ಮಾಲ್‌ಗೆ ಪ್ರಯಾಣಿಸಿದ್ದಾರೆ. ಇಳಿಯುವಾಗ ತಮ್ಮ ವಸ್ತುಗಳನ್ನು ಸಂಗ್ರಹಿಸಲು ಮರೆತರು. ಹಣ, ದಾಖಲೆ ಪತ್ರಗಳು ಹಾಗೂ ಕ್ಯಾಮೆರಾ ಉಪಕರಣಗಳಿದ್ದ ಬ್ಯಾಗ್ ಕಳೆದುಕೊಂಡ ಬಳಿಕ ಅವರ ಅರಿವಿಗೆ ಬಂದಿದ್ದು, ಅಲ್ಲೇ ಇದ್ದ ಕೆಲವರ ಸೂಚನೆಯಂತೆ ಗರುಡಾ ಮಾಲ್ ಬಳಿ ಅಳವಡಿಸಲಾದ ಸೇಫ್ಟಿ ಐಲ್ಯಾಂಡ್ ಬಳಸಿ ಪೊಲೀಸ್ ನಿಯಂತ್ರಣ ಕೊಠಡಿಗೆ ಪರಿಸ್ಥಿತಿಯನ್ನು ವಿವರಿಸಿದ್ದರು. ಅಶೋಕ್ ನಗರ ಪೊಲೀಸರು ಕೆಲವೇ ಗಂಟೆಗಳಲ್ಲಿ ಆಟೋ ಪತ್ತೆಹಚ್ಚಿ ಕೆಲವೇ ಗಂಟೆಗಳಲ್ಲಿ ಕಳೆದುಕೊಂಡಾತನಿಗೆ ಅದನ್ನು ಒಪ್ಪಿಸಿದ್ದಾರೆ.
ಏನಿದು ಸೇಫ್ಟಿ ಐಲ್ಯಾಂಡ್?
ಸೇಫ್ಟಿ ಐಲ್ಯಾಂಡ್‌ಗಳೆಂದರೆ ಬೆಂಗಳೂರಿನ ವಿವಿಧ ಜಂಕ್ಷನ್‌ಗಳಲ್ಲಿ ಸ್ಥಾಪಿಸಲಾದ ನೀಲಿ ಬಣ್ಣದ ಟೆಲಿಫೋನ್ ಬೂತ್‌ಗಳು. ಸಂಕಷ್ಟದಲ್ಲಿರುವವರು, ಹತ್ತಿರದ ಪೊಲೀಸ್ ಠಾಣೆಗಳನ್ನು ಸಂಪರ್ಕಿಸಲು ಈ ಸುರಕ್ಷತಾ ದ್ವೀಪಗಳನ್ನು ಬಳಸಬಹುದು. ಬೆಂಗಳೂರು ಪೊಲೀಸರ ಪ್ರಕಾರ, ನಗರದಾದ್ಯಂತ ಸುಮಾರು 30 ಸುರಕ್ಷತಾ ದ್ವೀಪ ಸಾಧನಗಳನ್ನು ಅಳವಡಿಸಲಾಗಿದೆ. ಮಹಿಳೆಯರ ಹೆಚ್ಚಿನ ಓಡಾಟ ಇರುವ ಜನನಿಬಿಡ ಜಂಕ್ಷನ್‌ಗಳನ್ನು ಪೊಲೀಸರು ಆಯ್ಕೆ ಮಾಡಿ ಈ ಸಾಧನಗಳನ್ನು ಅಳವಡಿಸಿದ್ದಾರೆ.
ಇದನ್ನೂ ಓದಿ: Public safety: ಸಿಟಿಗೆ ಸೇಫ್ಟಿ ಐಲ್ಯಾಂಡ್ ಎಂಟ್ರಿ; ಬಟನ್ ಒತ್ತಿದ್ದರೆ ಪೊಲೀಸರು ಬರೋದು ಗ್ಯಾರಂಟಿ