Site icon Vistara News

Metro service | ನಿಮ್ದು ಎಲೆಕ್ಟ್ರಿಕ್‌ ಆಟೋನಾ? ಹಾಗಿದ್ದರೆ ಮೆಟ್ರೋ ಸ್ಟೇಷನ್‌ನಲ್ಲಿ ಬ್ಯಾಟರಿ ಎಕ್ಸ್‌ಚೇಂಜ್‌ ಮಾಡಿಕೊಳ್ಳಬಹುದು!

metro battery service

ಬೆಂಗಳೂರು: ಬೆಂಗಳೂರಿನ ಎಲೆಕ್ಟ್ರಿಕ್‌ ಆಟೋ ರಿಕ್ಷಾ ಚಾಲಕರಿಗೆ ಇಲ್ಲಿದೆ ಸಿಹಿ ಸುದ್ದಿ. ರಾಜಧಾನಿಯ ಹಲವು ಮೆಟ್ರೋ ಸ್ಟೇಷನ್‌ಗಳಲ್ಲಿ ಬ್ಯಾಟರಿ ವಿನಿಮಯ ಕೇಂದ್ರವನ್ನು ತೆರೆಯಲಾಗಿದೆ. ನಿಮಗೆ ಬ್ಯಾಟರಿಯಲ್ಲಿ ಚಾರ್ಜ್‌ ಕಡಿಮೆ ಇದೆ ಅನಿಸಿದರೆ ತಕ್ಷಣವೇ ಸಮೀಪದ ಮೆಟ್ರೋ ಸ್ಟೇಷನ್‌ಗೆ ಹೋಗಿ ನಿಮ್ಮ ಬ್ಯಾಟರಿಯನ್ನು ಚಾರ್ಜಿಗೆ ಇಟ್ಟು ಫುಲ್‌ ಚಾರ್ಜ್‌ ಆಗಿರುವ ಹೊಸ ಬ್ಯಾಟರಿಯನ್ನು ಎಕ್ಸ್‌ಚೇಂಜ್‌ ಮಾಡಿಕೊಳ್ಳಬಹುದು.

ಹೌದು, ಹೋಂಡಾ ಮೋಟರ್ ಕಂಪನಿ ಲಿಮಿಟೆಡ್‌ನ ಬ್ಯಾಟರಿ ವಿನಿಮಯ ಸೇವೆಯ ಅಂಗ ಸಂಸ್ಥೆಯಾಗಿರುವ ಹೋಂಡಾ ಪವರ್ ಪ್ಯಾಕ್ ಎನರ್ಜಿ ಇಂಡಿಯಾ ಪ್ರೈವೇಟ್ ಲಿಮಿಟೆಡ್ (ಎಚ್ಇಐಡಿ) ಮತ್ತು ಬೆಂಗಳೂರು ಮೆಟ್ರೊ ರೈಲ್ ಕಾರ್ಪೊರೇಷನ್ ಲಿಮಿಟೆಡ್ (ಬಿಎಂಆರ್ಸಿಎಲ್) ಸಹಯೋಗದಲ್ಲಿ ಎಲ್ಲ ಮೆಟ್ರೊ ನಿಲ್ದಾಣಗಳಲ್ಲಿ ‘ಎಚ್ಇಐಡಿ’ನಿಂದ ನಿರ್ವಹಿಸಲ್ಪಡುವ ಹೋಂಡಾ ಇ: ಬ್ಯಾಟರಿ ವಿನಿಮಯ ಸೇವೆಯನ್ನು ಆರಂಭಿಸಿದೆ.

ಭಾರತದಲ್ಲಿ ವಿದ್ಯುತ್‌ಚಾಲಿತ ಆಟೊರಿಕ್ಷಾಗಳಿಗೆ ಬ್ಯಾಟರಿ ವಿನಿಮಯ ಸೇವೆ ಒದಗಿಸಲು 2021ರ ನವೆಂಬರ್‌ನಲ್ಲಿ ‘ಎಚ್ಇಐಡಿ’ ಸ್ಥಾಪಿಸಲಾಗಿದೆ. ದೇಶದ ಆಯ್ದ ನಗರಗಳಲ್ಲಿ ಆಟೊರಿಕ್ಷಾ ಚಾಲಕರು ಹತ್ತಿರದ ಬ್ಯಾಟರಿ ವಿನಿಮಯ ಕೇಂದ್ರಗಳಲ್ಲಿ ತಮ್ಮ ಬಳಿಯ ಡಿಸ್ಚಾರ್ಜ್ ಆದ ಬ್ಯಾಟರಿಗಳನ್ನು ಪೂರ್ಣ ಪ್ರಮಾಣದಲ್ಲಿ ಚಾರ್ಜ್ ಮಾಡಲಾದ ಬ್ಯಾಟರಿಗಳೊಂದಿಗೆ (ಹೋಂಡಾ ಮೊಬೈಲ್ ಪವರ್ ಪ್ಯಾಕ್ ಇ:) ವಿನಿಮಯ ಮಾಡಿಕೊಳ್ಳಲು ‘ಎಚ್ಇಐಡಿʼ ಅವಕಾಶ ನೀಡುತ್ತದೆ. ಈ ಸೇವೆಯನ್ನು ಬಳಸಿಕೊಳ್ಳುವುದರಿಂದ ವಿದ್ಯುತ್‌ ಚಾಲಿತ ವಾಹನ (ಇವಿ) ಖರೀದಿಸಲು ಚಾಲಕರು ಮಾಡುವ ಆರಂಭಿಕ ವೆಚ್ಚವ ಗಣನೀಯವಾಗಿ ಕಡಿಮೆ ಆಗಲಿದೆ. ಜೊತೆಗೆ ದೂರ ಕ್ರಮಿಸುವ ಆತಂಕ ಮತ್ತು ಬ್ಯಾಟರಿಗಳು ಖಾಲಿಯಾಗುವುದರ ಬಗೆಗಿನ ಚಾಲಕರ ಚಿಂತೆಯೂ ದೂರವಾಗಲಿದೆ.

ಬೆಂಗಳೂರಿನಲ್ಲಿ ಎಲ್ಲೆಲ್ಲಿ ಸೇವೆ ಲಭ್ಯ?
‘ಎಚ್ಇಐಡಿ‘ಯು ಈಗಾಗಲೇ ಬೆಂಗಳೂರಿನ 5 ಮೆಟ್ರೋ ಸ್ಟೇಷನ್‌ಗಳಲ್ಲಿ ಈ ಸೇವೆಯನ್ನು ಆರಂಭಿಸಿದೆ. ಕೆಆರ್ ಮಾರುಕಟ್ಟೆ, ನ್ಯಾಷನಲ್ ಕಾಲೇಜ್, ಬನಶಂಕರಿ, ಟ್ರಿನಿಟಿ, ಬೈಯಪ್ಪನಹಳ್ಳಿ ನಿಲ್ದಾಣಗಳಲ್ಲಿ– ಹೋಂಡಾ ಬ್ಯಾಟರಿ ವಿನಿಮಯ ಕೇಂದ್ರಗಳನ್ನು ತೆರೆಯಲಾಗಿದೆ.

2023ರ ಜುಲೈ ವೇಳೆಗೆ ಬೆಂಗಳೂರಿನಲ್ಲಿ 70ಕ್ಕೂ ಹೆಚ್ಚು ಇಂತಹ ಕೇಂದ್ರಗಳನ್ನು ಸ್ಥಾಪಿಸುವ ಮೂಲಕ ಬ್ಯಾಟರಿ ವಿನಿಮಯ ಕೇಂದ್ರಗಳ ಅತಿದೊಡ್ಡ ಜಾಲ ರೂಪಿಸುವುದು ‘ಎಚ್ಇಐಡಿ‘ಯ ಉದ್ದೇಶವಾಗಿದೆ. ಬೆಂಗಳೂರು ನಗರದ ಯಶಸ್ಸಿನ ಆಧಾರದ ಮೇಲೆ ಈ ಸೇವೆಯನ್ನು ದೇಶದ ಇತರ ಪ್ರಮುಖ ನಗರಗಳಿಗೆ ಹಂತ ಹಂತವಾಗಿ ವಿಸ್ತರಿಸಲಾಗುತ್ತದೆಯಂತೆ..

ಬ್ಯಾಟರಿ ವಿನಿಮಯ ಕೇಂದ್ರಗಳ ಉದ್ಘಾಟನಾ ಸಮಾರಂಭವು 2022ರ ಡಿಸೆಂಬರ್ 7ರಂದು ನಡೆಯಿತು. ಅಂದು ಮಾತನಾಡಿದ ಹೋಂಡಾ ಪವರ್ ಪ್ಯಾಕ್ ಎನರ್ಜಿ ಇಂಡಿಯಾದ ಅಧ್ಯಕ್ಷ ಹಾಗೂ ಸಿಎಂಡಿ ಕಿಯೋಶಿ ಇಟೊ, ‘ಸಂಪೂರ್ಣ ಚಾರ್ಜ್ ಆಗಿರುವ ಮತ್ತು ವಿನಿಮಯವಾಗುವ ಪ್ರತಿಯೊಂದು ಬ್ಯಾಟರಿ ಮೇಲೆ ಸಮಗ್ರ ಸ್ವರೂಪದ ನಿಗಾ ಇರಿಸುವಿಕೆ, ವಿಶ್ವಾಸಾರ್ಹ ಸೇವೆಯ ಖಾತರಿಪಡಿಸುವಿಕೆ ಮತ್ತು ಹೋಂಡಾ ಮೊಬೈಲ್ ಪವರ್ ಪ್ಯಾಕ್–ಇ ಬಳಸುವ ವಿದ್ಯುತ್‌ ಚಾಲಿತ ವಾಹನ (ಇವಿ) ಅಭಿವೃದ್ಧಿಪಡಿಸುತ್ತಿರುವ ವಾಹನ ತಯಾರಕರಿಗೆ ಬೆಂಬಲ ನೀಡುವುದು– ಈ ಮೂರು ಸಂಗತಿಗಳಿಗೆ ‘ಎಚ್ಇಐಡಿ’ಯು ತನ್ನೆಲ್ಲ ಗಮನ ಕೇಂದ್ರೀಕರಿಸಲಿದೆ. ಹೋಂಡಾ ಇ: ವಿನಿಮಯ ಕೇಂದ್ರಗಳ ಜಾಲ ನಿರ್ಮಿಸಲು ‘ಬಿಎಂಆರ್ಸಿಎಲ್’ ಜೊತೆಗಿನ ಸಹಭಾಗಿತ್ವವು ಬೆಂಗಳೂರು ಮಹಾನಗರದ ಮೆಟ್ರೊ ಬಳಕೆದಾರರಿಗೆ ಮನೆ ಬಾಗಿಲಿನಿಂದ ನಿಲ್ದಾಣದವರೆಗೆ ಶುದ್ಧ ಮತ್ತು ಪರಿಸರ ಸ್ನೇಹಿ ಇಂಧನ ಬಳಸುವ ವಿದ್ಯುತ್ಚಾಲಿತ ವಾಹನಗಳ ಬಳಕೆಯ ಸೌಕರ್ಯವನ್ನು ಹೆಚ್ಚು ದಕ್ಷ ರೀತಿಯಲ್ಲಿ ಒದಗಿಸಲಿದೆ’ ಎಂದು ಹೇಳಿದ್ದಾರೆ.

ಅಂಜುಮ್‌ ಪರ್ವೇಜ್‌ ಹೇಳಿದ್ದೇನು?
5 ಮೆಟ್ರೊ ನಿಲ್ದಾಣಗಳಲ್ಲಿ ಅತ್ಯಾಧುನಿಕ ಹೋಂಡಾ ಇ–ವಿನಿಮಯ ಕೇಂದ್ರಗಳನ್ನು ಸ್ಥಾಪಿಸಲು ಹೋಂಡಾ ಪವರ್ ಪ್ಯಾಕ್ ಎನರ್ಜಿ ಇಂಡಿಯಾ ಪ್ರೈವೇಟ್ ಲಿಮಿಟೆಡ್ (ಎಚ್ಇಐಡಿ) ಜೊತೆಗೆ ‘ಬಿಎಂಆರ್ಸಿಎಲ್’ಯು ಪಾಲುದಾರಿಕೆ ಹೊಂದಲು ನಮಗೆ ಸಂತಸವಾಗುತ್ತಿದೆ. ಈ ಮೂಲಸೌಕರ್ಯವು ಮೆಟ್ರೊ ಪ್ರಯಾಣಿಕರು ತಮ್ಮ ಮನೆ ಬಾಗಿಲಿನಿಂದ ಮೆಟ್ರೊ ನಿಲ್ದಾಣದವರೆಗೆ ಪ್ರಯಾಣಿಸಲು ವಿದ್ಯುತ್ಚಾಲಿತ ವಾಹನಗಳನ್ನು ಬಳಸಿಕೊಳ್ಳಲು ಅಗತ್ಯವಾದ ನೆರವು ಕಲ್ಪಿಸಿಕೊಡಲಿದೆ ಎನ್ನುತ್ತಾರೆ ‘ಬಿಎಂಆರ್ಸಿಎಲ್’ನ ವ್ಯವಸ್ಥಾಪಕ ನಿರ್ದೇಶಕ ಅಂಜುಮ್ ಪರ್ವೇಜ್.

ಇದನ್ನೂ ಓದಿ | Namma Metro | ಮೆಟ್ರೊ ಪ್ರಯಾಣಿಕರಿಗೆ ಗುಡ್ ನ್ಯೂಸ್; ಕುಟುಂಬಸಮೇತ ಪ್ರಯಾಣಿಸುವಾಗ ಒಂದೇ ಟಿಕೆಟ್‌ ಸಾಕು!

Exit mobile version