ಬೆಂಗಳೂರು: ಬೈಯಪ್ಪನಹಳ್ಳಿ-ಕೆ.ಆರ್.ಪುರ ಮೆಟ್ರೋ (Bengaluru Metro) ಮಾರ್ಗವು ಜುಲೈ 15ರೊಳಗೆ ಶುರುವಾಗುವ ಸಾಧ್ಯತೆ ಇದೆ. ಬೈಯಪ್ಪನಹಳ್ಳಿ-ಕೆ.ಆರ್.ಪುರ ನಡುವೆ ಸುಮಾರು 2 ಕಿ.ಮೀ. ಮೆಟ್ರೋ ಮಾರ್ಗದ ಕಾಮಗಾರಿ ಪ್ರಗತಿಯಲ್ಲಿದೆ. ಈ ಮಾರ್ಗದಲ್ಲಿನ ಬೆನ್ನಿಗಾನಹಳ್ಳಿ ಮೆಟ್ರೋ ರೈಲು ನಿಲ್ದಾಣ ಕಾಮಗಾರಿ ಜೂನ್ ವೇಳೆಗೆ ಮುಗಿಯಲಿದ್ದು, ನಂತರ ಬೈಯಪ್ಪನಹಳ್ಳಿ-ಕೆ.ಆರ್.ಪುರ ಮೆಟ್ರೋ ನಿಲ್ದಾಣಗಳ ನಡುವೆ ಸಂಪರ್ಕ ಏರ್ಪಡಲಿದೆ.
ಈ ಮಾರ್ಗ ಪೂರ್ಣಗೊಂಡರೆ ಬೈಯಪ್ಪನಹಳ್ಳಿ- ಕೆಆರ್‌ಪುರ ನಡುವೆ ಫೀಡರ್ ಬಸ್‌ಗಳನ್ನು ಅವಲಂಬಿಸಬೇಕಾದ ಅಗತ್ಯ ಇರುವುದಿಲ್ಲ. ಸದ್ಯ ಬೈಯಪ್ಪನಹಳ್ಳಿಯಿಂದ ಬೆನ್ನಿಗಾನಹಳ್ಳಿ ಮಾರ್ಗದಲ್ಲಿ ಟ್ರ್ಯಾಕ್ ಲೇಯಿಂಗ್ ಕಾರ್ಯ ಪ್ರಗತಿಯಲ್ಲಿದೆ. ಮೇ ತಿಂಗಳ ಅಂತ್ಯದೊಳಗೆ ಇದು ಪೂರ್ಣಗೊಳ್ಳುವ ನಿರೀಕ್ಷೆ ಇದೆ.
ಕೆ.ಆರ್.ಪುರಂ ಮೆಟ್ರೋ ನಿಲ್ದಾಣದಲ್ಲಿ ಕೆಲವು ಕೆಲಸಗಳು ಬಾಕಿ ಉಳಿದಿವೆ. ಇವುಗಳಲ್ಲಿ ಗಾಜಿನ ಫಿಕ್ಸಿಂಗ್ ಮತ್ತು ಸೂಚನಾ ಫಲಕ ನಿರ್ವಹಣೆಯಂತಹ ಕೆಲವು ಸಿವಿಲ್ ಕೆಲಸಗಳು ಸೇರಿವೆ. ಹೀಗಾಗಿ ಆದಷ್ಟು ಬೇಗ ಈ ಕೆಲಸವನ್ನು ಪೂರ್ಣಗೊಳಿಸಲಾಗುವುದು ಎಂದು ಅಧಿಕಾರಿಯೊಬ್ಬರು ಮಾಹಿತಿ ನೀಡಿದ್ದಾರೆ. ವಾಣಿಜ್ಯ ಸಂಚಾರಕ್ಕೆ ಮೆಟ್ರೋ ರೈಲ್ವೆ ಸುರಕ್ಷತಾ ಆಯುಕ್ತರು ಬಿಎಂಆರ್‌ಸಿಎಲ್‌ಗೆ ಸುರಕ್ಷತಾ ಕ್ಲಿಯರೆನ್ಸ್ ನೀಡಬೇಕಿದೆ. ಇದಕ್ಕಾಗಿ ಜೂನ್ ಅಂತ್ಯದಲ್ಲಿ ಪ್ರಾಯೋಗಿಕ ಸಂಚಾರ ನಡೆಯಲಿದ್ದು, ಇದರಲ್ಲಿ ಯಾವುದೇ ಸಮಸ್ಯೆಗಳು ಇಲ್ಲದ ಇದ್ದರೆ ಜುಲೈ 15ರೊಳಗೆ ವಾಣಿಜ್ಯ ಸಂಚಾರ ಆರಂಭವಾಗಲಿದೆ.
ಇದನ್ನೂ ಓದಿ: Murder Case: ಮೈಸೂರಲ್ಲಿ ರೌಡಿಶೀಟರ್ ಮರ್ಡರ್; ಮುಖ್ಯರಸ್ತೆಯಲ್ಲೇ ಮಾರಕಾಸ್ತ್ರಗಳಿಂದ ಕೊಚ್ಚಿ ಕೊಲೆ
ಮೆಟ್ರೋ ಕಾಮಗಾರಿಗೂ ಟ್ರಾಫಿಕ್ ಎಫೆಕ್ಟ್
ಮೆಟ್ರೋ ನಿಲ್ದಾಣದ ಮುಂಭಾಗ ಕಾಮಗಾರಿ ಪೂರ್ಣಗೊಳಿಸಲು ಟ್ರಾಫಿಕ್ ಕಿರಿಕಿರಿ ಉಂಟು ಮಾಡುತ್ತಿದೆ. ಟಿನ್ ಫ್ಯಾಕ್ಟರಿ ಪ್ರದೇಶದಲ್ಲಿ ಜನದಟ್ಟಣೆ ಹೆಚ್ಚಿರುವುದರಿಂದ ಇಲ್ಲಿ ನಿಲ್ದಾಣದ ಕೆಲಸವನ್ನು ಮಾಡಲು ಸಂಚಾರಿ ಪೊಲೀಸರ ಅನುಮತಿ ಬೇಕಿದೆ. ಅನುಮತಿ ನೀಡುವಲ್ಲಿ ವಿಳಂಬವಾಗುತ್ತಿದ್ದು, ಸಿಕ್ಕ ಕೂಡಲೇ ನಿಲ್ದಾಣದ ಕಾಮಗಾರಿಯನ್ನು ಮುಗಿಸುವುದಾಗಿ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ. ಇನ್ನು ಈ ಮಾರ್ಗ ಪೂರ್ಣಗೊಂಡರೆ ಪ್ರಯಾಣಿಕರ ಸಂಖ್ಯೆ ಏರಿಕೆ ಆಗುವ ಸಾಧ್ಯತೆ ಇದೆ.
ರಾಜ್ಯದ ಪ್ರಮುಖ ಸುದ್ದಿಗಾಗಿ ಈ ಲಿಂಕ್ ಕ್ಲಿಕ್ ಮಾಡಿ