ಬೆಂಗಳೂರು: ತಾಯಿಯ ಋಣವನ್ನು ತೀರಿಸಲು ಅಸಾಧ್ಯ. ಆದರೆ ತಾಯಿಯಂತೆ ನಮ್ಮನ್ನು ಪೊರೆಯುವ ಗೋಮಾತೆಯ ಋಣವನ್ನು ತೀರಿಸಲು ಖಂಡಿತಾ ಸಾಧ್ಯ ಎಂದು ನಟ, ನಿರ್ಮಾಪಕ ಹಾಗೂ ಗೋಪ್ರೇಮಿ ಮಹೇಂದ್ರ ಮುನ್ನೋತ್ ತಿಳಿಸಿದರು.
ನಗರದ ಕನಕಪುರ ರಸ್ತೆಯ ದಿಣ್ಣೆಪಾಳ್ಯದಲ್ಲಿರುವ ಅಮೃತಧಾರಾ ಗೋಶಾಲೆಯಲ್ಲಿ ಹಮ್ಮಿಕೊಂಡಿದ್ದ ಗೋಪೂಜೆಯಲ್ಲಿ ಪಾಲ್ಗೊಂಡು ಅವರು ಮಾತನಾಡಿದರು.
ನಮ್ಮ ತಂದೆ-ತಾಯಿಯ ಋಣವನ್ನು ತೀರಿಸಲು ಅಸಾಧ್ಯ. ಆದರೆ ಜೀವನಪೂರ್ತಿ ಪಂಚಾಮೃತವನ್ನು ನೀಡುವ ಗೋಮಾತೆಯ ಋಣವನ್ನು ಖಂಡಿತಾ ತೀರಿಸಬಹುದು. ಅಲ್ಲದೇ ಗೋವು ನಮ್ಮ ಸನಾತನ ಪರಂಪರೆಯ ದೈವೀಮೂರ್ತಿ ಮಾತ್ರವಲ್ಲ ಒಂದು ರೀತಿಯ ಪಾಪನಾಶಿನಿ. ಅಲ್ಲದೇ ಭಾರತೀಯ ಕೃಷಿ ವ್ಯವಸ್ಥೆಯ ಮಹಾಪಾತ್ರ ಮತ್ತು ಅನ್ನದಾತನ ಜೀವಬಂಧು. ಅಂತಹ ಗೋವನ್ನು ಉಳಿಸಿದರೆ ಕೇವಲ ಗ್ರಾಮ ಮಾತ್ರವಲ್ಲ ಇಡೀ ದೇಶ ಸಮೃದ್ಧಿ, ಸಂಪದ್ಭರಿತ ಭೂಮಿಯಾಗುತ್ತದೆ. ಈ ನಂಬಿಕೆಯನ್ನು ಪ್ರತಿಯೊಬ್ಬ ಭಾರತೀಯನೂ ಅರ್ಥೈಸಿಕೊಳ್ಳಬೇಕಿದೆ ಎಂದು ತಿಳಿಸಿದರು.
ಇದನ್ನೂ ಓದಿ: Kalaburagi News: ಪಂಢರಪುರ, ತುಳಜಾಪುರ ಮಾದರಿಯಲ್ಲಿ ಗಾಣಗಾಪುರ ಕ್ಷೇತ್ರ ಅಭಿವೃದ್ಧಿ
ಬೆಂಗಳೂರಿನ ವಿಜಯನಗರ ಮಾರುತಿ ಮೆಡಿಕಲ್ಸ್‌ನ, ಗೋಸೇವಕ ಮಹೇಂದ್ರ ಮುನ್ನೋತ್, ಗೋಶಾಲೆಗಳ ಉಳಿವಿಗಾಗಿ ಮತ್ತು ಗೋವುಗಳ ಸಂರಕ್ಷಣೆಗಾಗಿ ದೇಣಿಗೆ ನೀಡುವ ಮೂಲಕ ಇತರರಿಗೆ ಸ್ಫೂರ್ತಿಯಾಗಿದ್ದಾರೆ. ತಮ್ಮ ವ್ಯಾಪಾರದಲ್ಲಿ ಸಂಗ್ರಹಿಸಿದ ಬಹುಪಾಲು ಹಣವನ್ನು ಗೋವುಗಳ ರಕ್ಷಣೆಗೆ, ಪಾಲನೆಗಾಗಿ ವ್ಯಯಿಸುತ್ತಿರುವ ಮಹೇಂದ್ರ ಮನ್ನೋತ್ ಅವರ ಕುಟುಂಬ. ಕಳೆದ ಹದಿನಾಲ್ಕು ವರ್ಷಗಳಿಂದ ಪ್ರತೀ ವರ್ಷ ಗೋಶಾಲೆಗಳಿಗೆ ಲಕ್ಷಾಂತರ ರೂಪಾಯಿಗಳನ್ನು ದೇಣಿಗೆ ನೀಡುತ್ತಾರೆ. ಈ ವರ್ಷ ಅವರು ನಾಡಿನ ವಿವಿಧ ಗೋಶಾಲೆಗಳಿಗೆ 51 ಲಕ್ಷ ರೂಪಾಯಿಗಳನ್ನು ದೇಣಿಗೆ ನೀಡಿದ್ದಾರೆ.
ನಾಡಿನಲ್ಲಿ ಅಕ್ರಮವಾಗಿ ಸಾಗಿಸಲ್ಪಡುವ ಗೋವುಗಳನ್ನು ಕಾನೂನಾತ್ಮಕವಾಗಿ ರಕ್ಷಿಸಿದ ನಂತರ ಆ ಗೋವುಗಳನ್ನು ಈ ಗೋಶಾಲೆಗಳಿಗೆ ತಂದು ಬಿಡಲಾಗುತ್ತದೆ. ಅಂತಹ ಗೋವುಗಳನ್ನು ಪೊರೆಯಲು ಗೋಶಾಲೆಗಳಿಗೆ ಶಕ್ತಿಯನ್ನು ತುಂಬವ ಕೆಲಸವನ್ನು ಮಹೇಂದ್ರ ಮುನ್ನೋತ್ ಅವರು ತಮ್ಮ ಮಾತಾಪಿತೃಗಳ ಪುಣ್ಯಸ್ಮರಣೆಯ ಹೆಸರಿನಲ್ಲಿ ಈ ಸೇವೆಯನ್ನು ಮಾಡಿಕೊಂಡು ಬಂದಿದ್ದಾರೆ.
ಕನಕಪುರ ರಸ್ತೆಯ ದಿಣ್ಣೆಪಾಳ್ಯದಲ್ಲಿರುವ ಅಮೃತಧಾರಾ ಗೋಶಾಲೆಯಲ್ಲಿ 20ಕ್ಕೂ ಹೆಚ್ಚು ಗೋಶಾಲೆಯ ಮುಖ್ಯಸ್ಥರಿಗೆ ಚೆಕ್ ರೂಪದಲ್ಲಿ ಹಣವನ್ನು ನೀಡಲಾಯಿತು.
ಇದನ್ನೂ ಓದಿ: PGCET 2024: ಪಿಜಿಸಿಇಟಿ ಪರೀಕ್ಷೆ ಮುಂದೂಡಿಕೆ; ಶೀಘ್ರದಲ್ಲೇ ಹೊಸ ದಿನಾಂಕ ಪ್ರಕಟ
ಈ ವೇಳೆ ಮಹೇಂದ್ರ ಮುನ್ನೋತ್ ಅವರ ಪತ್ನಿ ಸುರಕ್ಷಾ ಹಾಗೂ ಕುಟುಂಬದ ಸದಸ್ಯರು, ಗೋಶಾಲೆಯಲ್ಲಿ ನೂರಕ್ಕೂ ಹೆಚ್ಚು ಸಸಿಗಳನ್ನು ನೆಡುವುದರೊಂದಿಗೆ ಗೋಪೂಜೆಯನ್ನೂ ಮಾಡಲಾಯಿತು.