ಬೆಂಗಳೂರು: ಗೋವಾ ಸರ್ಕಾರ (Goa Government) ಮತ್ತೆ ಕನ್ನಡಿಗರ ಮನೆಗಳನ್ನು ಕೆಡವಿ ಒಕ್ಕಲೆಬ್ಬಿಸುತ್ತಿದ್ದು, ರಾಷ್ಟ್ರಪತಿಗಳು ಕೂಡಲೇ ಮಧ್ಯಪ್ರವೇಶಿಸಿ ಗೋವಾ ಸರ್ಕಾರವನ್ನು ವಜಾಗೊಳಿಸಿ, ಕನ್ನಡಿಗರಿಗೆ ನ್ಯಾಯ ಒದಗಿಸಬೇಕು ಎಂದು ಕರ್ನಾಟಕ ರಕ್ಷಣಾ ವೇದಿಕೆಯ ರಾಜ್ಯಾಧ್ಯಕ್ಷ ಟಿ.ಎ.ನಾರಾಯಣಗೌಡ (Bengaluru News) ಆಗ್ರಹಿಸಿದ್ದಾರೆ.
ಈ ಕುರಿತು ಪತ್ರಿಕಾ ಪ್ರಕಟಣೆ ನೀಡಿರುವ ಅವರು, ಉತ್ತರ ಗೋವಾದ ಸಂಗೋಲ್ಡಾ ಪ್ರದೇಶದಲ್ಲಿ ಭಾನುವಾರ 15ಕ್ಕೂ ಹೆಚ್ಚು ಕನ್ನಡಿಗರ ಮನೆಗಳನ್ನು ಜೆಸಿಬಿ ಬಳಿಸಿ ಧ್ವಂಸಗೊಳಿಸಲಾಗಿದೆ. ಅವರಿಗೆ ಅನ್ನ ನೀರು ಸೂರು ಇಲ್ಲದಂತೆ ಮಾಡಿರುವುದನ್ನು ಯಾವುದೇ ಕಾರಣಕ್ಕೂ ಸಹಿಸಿಕೊಳ್ಳಲು ಸಾಧ್ಯವಿಲ್ಲ. ಕಳೆದ ನಾಲ್ಕು ದಶಕಗಳಿಂದ ಅಲ್ಲಿ ವಾಸವಾಗಿದ್ದ ಕನ್ನಡಿಗರನ್ನು ಏಕಾಏಕಿ ತೆರವುಗೊಳಿಸಲಾಗಿದೆ. ಹದಿನೈದು ಕನ್ನಡಿಗರ ಕುಟುಂಬಗಳು ಬೀದಿಪಾಲಾಗಿವೆ. ಸಂತ್ರಸ್ಥ ಕುಟುಂಬಗಳಿಗೆ ಯಾವುದೇ ಪುನರ್ವಸತಿ ನೀಡಲಾಗಿಲ್ಲ. ಸಿರಿಯಾ, ಲೆಬೆನಾನ್ ದೇಶಗಳಲ್ಲಿ ನಡೆಯುತ್ತಿರುವುದು ಗೋವಾದಲ್ಲಿ ನಡೆಯುತ್ತಿದೆ ಎಂದು ಆರೋಪಿಸಿದ್ದಾರೆ.
ಇದನ್ನೂ ಓದಿ: MS Dhoni : ನೋವಿನಲ್ಲೂ ಸಿಕ್ಸರ್ ಬಾರಿಸುತ್ತಿದ್ದಾರೆ ಧೋನಿ; ದಿಗ್ಗಜನ ಬದ್ಧತೆಗೆ ಸಿಎಸ್ಕೆ ಕೋಚ್ ಮೆಚ್ಚುಗೆ
ಗೋವಾದಲ್ಲಿ ಹೀಗೆ ಕನ್ನಡಿಗರನ್ನು ಗುರಿಯಾಗಿಟ್ಟುಕೊಂಡು ಅಲ್ಲಿನ ಸರ್ಕಾರ ತೆರವು ಕಾರ್ಯಾಚರಣೆ ಮಾಡುತ್ತಿರುವುದು ಇದೇ ಮೊದಲೇನಲ್ಲ. ಆರನೇ ಬಾರಿ ಇಂಥ ದುಷ್ಕೃತ್ಯವನ್ನು ಎಸಗುತ್ತಿದೆ. ಇದು ನಿಸ್ಸಂಶಯವಾಗಿ ಜನಾಂಗೀಯ ದ್ವೇಷದ ಕುಕೃತ್ಯ ಎಂದು ಆರೋಪಿಸಿರುವ ಅವರು, ಈ ಹಿನ್ನಲೆಯಲ್ಲಿ ಕೂಡಲೇ ಗೋವಾ ಸರ್ಕಾರವನ್ನು ವಜಾಗೊಳಿಸಬೇಕು ಎಂದು ಆಗ್ರಹಿಸಿದ್ದಾರೆ.
ಭಾರತದ ಸಂವಿಧಾನದ 29 ಮತ್ತು 30ನೇ ವಿಧಿಗಳು ಸ್ಪಷ್ಟವಾಗಿ ಭಾಷಾ ಅಲ್ಪಸಂಖ್ಯಾತರಿಗೆ ರಕ್ಷಣೆ ನೀಡುತ್ತವೆ. ಗೋವಾದಲ್ಲಿ ನಡೆಯುತ್ತಿರುವುದು ಸಂವಿಧಾನ ವಿರೋಧಿ ಕಾರ್ಯಾಚರಣೆ. ದೇಶದ ಯಾವುದೇ ಭಾಗದಲ್ಲಿ ಸರ್ಕಾರವೇ ಮುಂದೆ ನಿಂತು ಭಾಷಾ ಸಮುದಾಯವನ್ನು ಬೀದಿಗೆ ತಳ್ಳಿದ ಉದಾಹರಣೆ ಇಲ್ಲ. 2005ರಲ್ಲಿ ವಾಸ್ಕೋದ ಬೈನಾದಲ್ಲಿದ್ದ 1,162 ಕನ್ನಡಿಗರ ಕುಟುಂಬಗಳನ್ನು ಬೀದಿಪಾಲು ಮಾಡಲಾಯಿತು. 2014ರಲ್ಲಿ 70 ಕುಟುಂಬ, 2015ರಲ್ಲಿ 157 ಕುಟುಂಬಗಳನ್ನು ಬೈನಾದಲ್ಲಿಯೇ ಕಾರ್ಯಾಚರಣೆ ನಡೆಸಿ ತೆರವುಗೊಳಿಸಲಾಯಿತು. 2017ರಲ್ಲಿ ಮಂಗೂರ್ ಹಿಲ್ಸ್‌ನಲ್ಲಿ ವಾಸಿಸುತ್ತಿದ್ದ 211 ಕುಟುಂಬಗಳನ್ನು, 2019 ರಲ್ಲಿ ಝರಿ ಪ್ರದೇಶದಲ್ಲಿದ್ದ 62 ಕುಟುಂಬಗಳನ್ನು ಗೋವಾ ಸರ್ಕಾರ ಒಕ್ಕಲೆಬ್ಬಿಸಿತ್ತು ಎಂದು ಅವರು ಆರೋಪಿಸಿದ್ದಾರೆ.
ಇದನ್ನೂ ಓದಿ: Gold price: 2000ರಲ್ಲಿ 4,400 ರೂ, 2024ರಲ್ಲಿ 71,414 ರೂ! ಚಿನ್ನ ದರ ಏರಿಕೆ ಹಾದಿ ಹೇಗಿದೆ ನೋಡಿ!
ಗೋವಾ ಸರ್ಕಾರಕ್ಕೆ ಕರ್ನಾಟಕ ಸರ್ಕಾರವು ಮನವಿ ಮಾಡಿದರೂ ಯಾವುದೇ ಪ್ರಯೋಜನವಾಗಿಲ್ಲ. ಹೀಗಾಗಿ ಗೋವಾ ಸರ್ಕಾರವನ್ನು ಕೂಡಲೇ ವಜಾಗೊಳಿಸಬೇಕು ಎಂದು ಟಿ.ಎ.ನಾರಾಯಣಗೌಡ ಆಗ್ರಹಿಸಿದ್ದಾರೆ.