ಬೆಂಗಳೂರು: ಕೃಪಾನಿಧಿ ಸಮೂಹ ಸಂಸ್ಥೆಗಳ (ಕೃಪಾನಿಧಿ ಗ್ರೂಪ್ ಆಫ್ ಇನ್‌ಸ್ಟಿಟ್ಯೂಷನ್ಸ್) ವತಿಯಿಂದ ಮಾದಕ ದ್ರವ್ಯಗಳ ದುರುಪಯೋಗ ಹಾಗೂ ಅಕ್ರಮ ಸಾಗಾಟಕ್ಕೆ ಸಂಬಂಧಿಸಿದಂತೆ ವಿಶೇಷ ಜಾಗೃತಿ ಕಾರ್ಯಕ್ರಮ (Bengaluru News) ನಡೆಯಿತು.
ಬೆಂಗಳೂರು ಪೊಲೀಸ್ ವೈಟ್ ಫೀಲ್ಡ್ ವಿಭಾಗ ಹಾಗೂ ಮಾರತಹಳ್ಳಿ ಉಪವಿಭಾಗದ ಸಹಯೋಗದಲ್ಲಿ ಹಮ್ಮಿಕೊಳ್ಳಲಾಗಿದ್ದ ಕಾರ್ಯಕ್ರಮದಲ್ಲಿ ಅಕ್ರಮ ಸಾಗಾಟಕ್ಕೆ ತಳುಕು ಹಾಕಿಕೊಂಡಂತೆ ಇರುವ ಅಪಾಯಗಳು ಹಾಗೂ ಮಾದಕವಸ್ತು ಮುಕ್ತ ಪ್ರಪಂಚದ ಪ್ರಾಮುಖ್ಯದ ಬಗ್ಗೆ ಸಾರ್ವಜನಿಕರಿಗೆ ಅರಿವು ಮೂಡಿಸಲು ಕಾರ್ಯಕ್ರಮ ಆಯೋಜಿಸಲಾಗಿತ್ತು.
ಕಾರ್ಯಕ್ರಮದಲ್ಲಿ ವೈಟ್‌ಫೀಲ್ಡ್ ವಿಭಾಗದ ಉಪ ಪೊಲೀಸ್ ಆಯುಕ್ತ ಡಾ. ಶಿವಕುಮಾರ್, ಮಾರತಹಳ್ಳಿ ಉಪವಿಭಾಗದ ಸಹಾಯಕ ಪೊಲೀಸ್ ಆಯುಕ್ತೆ ಪ್ರಿಯದರ್ಶಿನಿ ಈಶ್ವರ್ ಸಾನಿಕೋಪ್ ಹಾಗೂ ವರ್ತೂರು ಪೊಲೀಸ್ ಠಾಣೆಯ ಇನ್‌ಸ್ಪೆಕ್ಟರ್ ಯೋಗಾನಂದ್ ಸೋನಾರ್ ಉಪಸ್ಥಿತರಿದ್ದರು.
ಇದನ್ನೂ ಓದಿ: Press Day: ಸುಳ್ಳು ಸುದ್ದಿಗಳ ಮೇಲೆ ನಿಗಾ ಇಡಲು ಪ್ರತೀ ಜಿಲ್ಲೆಗಳಲ್ಲೂ ವಿಶೇಷ ಘಟಕ: ಸಿದ್ದರಾಮಯ್ಯ
ವಿಶೇಷ ಜಾಗೃತಿ ಕಾರ್ಯಕ್ರಮ
ಇನ್ನು ಕೃಪಾನಿಧಿ ಸಮೂಹ ಸಂಸ್ಥೆಗಳ ವಿದ್ಯಾರ್ಥಿಗಳು ದೀರ್ಘ ನಡಿಗೆಯನ್ನು ಹಮ್ಮಿಕೊಂಡಿದ್ದರು. ಆ ಮೂಲಕ ಮಾದಕವಸ್ತು ಮುಕ್ತ ಸಮಾಜಕ್ಕೆ ತಮ್ಮ ಬದ್ಧತೆಯನ್ನು ಪ್ರದರ್ಶಿಸಿದರು. ಇದೇ ಕಾರ್ಯಕ್ರಮದ ಅಂಗವಾಗಿ ಸ್ಕೆಚ್ ಬಿಡಿಸುವುದು ಹಾಗೂ ರಂಗೋಲಿ ಸ್ಪರ್ಧೆಗಳನ್ನು ನಡೆಸಲಾಯಿತು. ಮಾದಕ ವಸ್ತುಗಳ ಸೇವನೆ ಹಾಗೂ ಅಕ್ರಮ ಸಾಗಣೆಯಿಂದ ಆಗುವ ದುಷ್ಪರಿಣಾಮಗಳ ಬಗ್ಗೆ ವಿದ್ಯಾರ್ಥಿಗಳು ತಮ್ಮ ಕಲಾ ಪ್ರೌಢಿಮೆಯ ಮೂಲಕ ಪ್ರಮುಖ ಸಂದೇಶಗಳನ್ನು ನೀಡಿದರು. ಈ ಸ್ಪರ್ಧೆಗಳಲ್ಲಿ ಉತ್ತೇಜನಕಾರಿ ಆದಂಥ ಕಲಾಕೃತಿಗಳ ಪ್ರದರ್ಶನ ನಡೆಯಿತು. ಅದು ಪುನರ್ವಸತಿಯ ಬಗ್ಗೆ ಆಶಾವಾದ ಮತ್ತು ಮಾದಕ ದ್ರವ್ಯಗಳಿಂದ ಮುಕ್ತವಾದ ಭವಿಷ್ಯ ಹಾಗೂ ಮಾದಕ ವ್ಯಸನದ ಕಠಿಣ ವಾಸ್ತವವನ್ನು ಚಿತ್ರಿಸಿದವು.
ಮಾದಕವಸ್ತುಗಳ ಬಳಕೆ ವಿರುದ್ಧ ಹೋರಾಟದಲ್ಲಿ ಸಮುದಾಯ ಯಾಕೆ ಒಳಗೊಳ್ಳಬೇಕು ಹಾಗೂ ಜಾಗೃತಿ ಎಷ್ಟು ಮಹತ್ವವಾದದ್ದು ಎಂಬುದರ ಕುರಿತು ಡಾ. ಶಿವಕುಮಾರ್ ಹಾಗೂ ಪ್ರಿಯದರ್ಶಿನಿ ಈಶ್ವರ್ ಮಾತನಾಡಿದರು.
ನೃತ್ಯ ಮತ್ತು ಕಿರುನಾಟಕಗಳ ಪ್ರದರ್ಶನ
ಕಾರ್ಯಕ್ರಮದ ಪ್ರಮುಖ ಆಕರ್ಷಣೆಯಾಗಿ ಕೃಪಾನಿಧಿ ಕಾಲೇಜಿನ ವಿದ್ಯಾರ್ಥಿಗಳು ನೃತ್ಯ ಮತ್ತು ಕಿರುನಾಟಕಗಳ ಪ್ರದರ್ಶನ ನೀಡಿದರು. ಈ ಎಲ್ಲ ಪ್ರದರ್ಶನಗಳು ಸಹ ಮಾದಕದ್ರವ್ಯ ಬಳಕೆಯ ಅಡ್ಡ ಪರಿಣಾಮಗಳೇನು ಎಂಬುದನ್ನು ತಿಳಿಸುವಂತಿದ್ದವು ಹಾಗೂ ವ್ಯಸನಕ್ಕೆ ಬಿದ್ದಲ್ಲಿ ಅದರಿಂದ ಅನುಭವಿಸುವಂಥ ಸಮಸ್ಯೆಗಳು ಎಂಥವು ಎಂಬುದರ ಬಗ್ಗೆ ಕಣ್ತೆರೆಸುವಂತೆ ಇದ್ದವು.
ಇನ್ನು ಇಡೀ ಕಾರ್ಯಕ್ರಮದ ಪ್ರಮುಖ ಭಾಗವಾಗಿ ಬೆಂಗಳೂರು ನಗರ ಪೊಲೀಸ್ (ಮಾರತಹಳ್ಳಿ ಉಪವಿಭಾಗ) ಮತ್ತು ಕೃಪಾನಿಧಿ ವಿದ್ಯಾ ಸಂಸ್ಥೆಯ ಸಿಬ್ಬಂದಿ ಹಾಗೂ ವಿದ್ಯಾರ್ಥಿಗಳ ಮಧ್ಯೆ ಸೌಹಾರ್ದಯುತ ಕ್ರಿಕೆಟ್ ಪಂದ್ಯಾವಳಿ ನಡೆಯಿತು. ಆ ನಂತರದಲ್ಲಿ ಮಾರತಹಳ್ಳಿ ಉಪವಿಭಾಗ ವ್ಯಾಪ್ತಿಯ ಪೊಲೀಸ್ ಠಾಣೆಗಳ ಮಧ್ಯೆ ಕ್ರಿಕೆಟ್ ಪಂದ್ಯಾವಳಿ ನಡೆಯಿತು.
ಬೆಂಗಳೂರು ನಗರ ಪೊಲೀಸ್ ಆಯುಕ್ತ ಬಿ ದಯಾನಂದ, ಉಪ ಪೊಲೀಸ್ ಆಯುಕ್ತ ಡಾ. ಶಿವಕುಮಾರ್, ಸಹಾಯಕ ಪೊಲೀಸ್ ಆಯುಕ್ತೆ ಪ್ರಿಯದರ್ಶಿನಿ ಈಶ್ವರ್ ಸಾನಿಕೋಪ್ ಮತ್ತು ಕೃಪಾನಿಧಿ ಗ್ರೂಪ್ ಆಫ್ ಇನ್‌ಸ್ಟಿಟ್ಯೂಷನ್ಸ್ ನಿರ್ದೇಶಕ ಡಾ. ಸ್ಯಾಮ್ ಪಾಲ್ ಅವರ ಉಪಸ್ಥಿತಿಯಲ್ಲಿ ಸಮಾರೋಪ ಸಮಾರಂಭ ಜರುಗಿತು.
ಇದನ್ನೂ ಓದಿ: Karnataka Rain : ಮುಂದುವರಿದ ಮಳೆ ಅಬ್ಬರ; ಸಿಡಿಲು ಬಡಿದು ಹೊತ್ತಿ ಉರಿದ ಮನೆ, ಸೇತುವೆ ಮುಳುಗಡೆ
ಕ್ರಿಕೆಟ್ ಪಂದ್ಯಾವಳಿಯಲ್ಲಿ ವರ್ತೂರು ಪೊಲೀಸ್ ಠಾಣೆ ತಂಡಕ್ಕೆ ಅಗ್ರಸ್ಥಾನ ಮತ್ತು ಎಚ್‌ಎಎಲ್ ಪೊಲೀಸ್ ಠಾಣೆ ರನ್ನರ್ ಅಪ್ ಆಗಿ ಹೊರಹೊಮ್ಮಿದವು.