Site icon Vistara News

Bengaluru News: ಇಂದಿನ ಮಕ್ಕಳಿಗೆ ಉದ್ದಿಮೆದಾರರಾಗುವಲ್ಲಿ ಮಾರ್ಗದರ್ಶನ ಅತ್ಯಗತ್ಯ: ಮಂಜುನಾಥ್ ಎಚ್.ಎಸ್

Inauguration of a two day boot camp at AMC Engineering College Bengaluru

ಬೆಂಗಳೂರು: ಇಂದಿನ ಮಕ್ಕಳಿಗೆ ಅನ್ವೇಷಣೆ, ಅಭಿವೃದ್ಧಿ ಮತ್ತು ಉದ್ದಿಮೆದಾರರಾಗುವಲ್ಲಿ ಮಾರ್ಗದರ್ಶನ ಅತ್ಯಗತ್ಯ. ಈ ನಿಟ್ಟಿನಲ್ಲಿ ಕೈಜೆನ್‌ ತಂತ್ರಗಳು ಸದ್ಭಳಕೆಯಾಗಲಿವೆ ಎಂದು ಟೊಯೋಟಾ ಕಿರ್ಲೋಸ್ಕರ್ ಮೋಟಾರ್ಸ್ ಪ್ರೈವೇಟ್ ಲಿಮಿಟೆಡ್‌ನ ಜನರಲ್ ಮ್ಯಾನೇಜರ್ ಹಾಗೂ ಇನ್ನೋವೇಶನ್‌ ಹೆಡ್ ಮಂಜುನಾಥ್ ಎಚ್.ಎಸ್. (Bengaluru News) ತಿಳಿಸಿದರು.

ನಗರದ ಎಎಂಸಿ ಎಂಜಿನಿಯರಿಂಗ್‌ ಕಾಲೇಜಿನಲ್ಲಿ ಶಿಕ್ಷಣ ಸಚಿವಾಲಯದ ಸಹಯೋಗದಲ್ಲಿ ಗುರುವಾರ ಹಮ್ಮಿಕೊಳ್ಳಲಾಗಿದ್ದ ಯುವಕರಲ್ಲಿ ಕ್ರಿಯಾಶೀಲಾತ್ಮಕ ಶಿಕ್ಷಣ ನೀಡುವ ನಿಟ್ಟಿನಲ್ಲಿ ಎರಡು ದಿನಗಳ ಬೂಟ್‌ ಕ್ಯಾಂಪ್‌ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.

ವಿದ್ಯಾರ್ಥಿಗಳು ಕೈಜೆನ್‌ ತಂತ್ರಗಳನ್ನು ಅಳವಡಿಸಿಕೊಳ್ಳಬೇಕು. ಕೈಜೆನ್‌ ತಂತ್ರಗಳೆಂದರೆ ಮನುಷ್ಯ ತನ್ನ ಶಕ್ತಿ ಮೀರಿ ಕೆಲಸ ಮಾಡುವುದಕ್ಕೆ ಮುಂದಾಗುವುದು. ಹಾಗಾದಾಗ ಮಾತ್ರ ಉತ್ತಮ ಫಲಿತಾಂಶ ಸಿಕ್ಕೇ ಸಿಗಲಿದೆ. ವಿದ್ಯಾರ್ಥಿಗಳು ಈ ನಿಟ್ಟಿನಲ್ಲಿ ಕಾರ್ಯನಿರತರಾದಲ್ಲಿ ಮಾತ್ರ ಯಶಸ್ಸು ಸಿಗಲು ಸಾಧ್ಯ ಎಂದು ಹೇಳಿದರು.

ಇದನ್ನೂ ಓದಿ: Sanchar Saathi: ಅಕಸ್ಮಾತ್‌ ನಿಮ್ಮ ಸ್ಮಾರ್ಟ್ ಫೋನ್ ಕಳೆದು ಹೋದರೆ ತಕ್ಷಣ ಹೀಗೆ ಮಾಡಿ…

ಕಾರ್ಯಕ್ರಮದಲ್ಲಿ ಶಿಕ್ಷಣ ಸಚಿವಾಲಯದ ಆವಿಷ್ಕಾರ ವಿಭಾಗದ ಸಹ ನಿರ್ದೇಶಕ ಪ್ರದೀಪ್‌ ಧಾಗೆ ಮಾತನಾಡಿ, ಈ ಶಿಬಿರವು ಆರಂಭಿಕ ಹಂತದಲ್ಲಿ ಒಂಬತ್ತು ಪ್ರಮುಖ ನಗರಗಳಲ್ಲಿ ನಡೆಯುತ್ತಿದೆ. ಮುಂದಿನ ದಿನಗಳಲ್ಲಿ 15 ನಗರಗಳಿಗೆ ವಿಸ್ತರಿಸಲಿದ್ದು, ಸುಮಾರು 40 ಕೋಟಿ ವಿದ್ಯಾರ್ಥಿಗಳಿಗೆ ಅನುಕೂಲವಾಗಲಿದೆ. ಅನೇಕ ಖಾಸಗಿ ಸಂಸ್ಥೆಗಳು ಅತ್ಯಾಧುನಿಕ ತಂತ್ರಜ್ಞಾನಗಳನ್ನು ಹೊಂದಿದ್ದು, ಕಾರ್ಯಕ್ರಮದ ಯಶಸ್ಸಿಗೆ ಖಾಸಗಿ ಸಂಸ್ಥೆಗಳು ಕೈಜೋಡಿಸಬೇಕು ಎಂದು ತಿಳಿಸಿದರು.

ಎಎಂಸಿ ಎಂಜಿನಿಯರಿಂಗ್ ಕಾಲೇಜಿನ ಪ್ರಾಂಶುಪಾಲ ಡಾ.ಕುಮಾರ್ ಕೆ. ಮಾತನಾಡಿ, ಇಂದಿನ ಮಕ್ಕಳ ಬದುಕಿಗೆ ಉತ್ತಮ ಮಾರ್ಗದರ್ಶನ ಬೇಕಿದೆ. ಈ ಮೂಲಕ ಅವರಲ್ಲಿ ಸೃಜನಶೀಲತೆ ಮತ್ತು ಹೊಸತನವನ್ನು ಅಭಿವೃದ್ಧಿಪಡಿಸುವುದು ಮುಖ್ಯ. ಅನೇಕ ಮಕ್ಕಳು ಉದ್ಯಮಿಗಳಾಗುವ ಆಲೋಚನೆಯನ್ನು ಹೊಂದಿರುತ್ತಾರೆ. ಆದರೆ ಅವರ ಆಲೋಚನೆಗಳಿಗೆ ತಕ್ಕಂತೆ ನಿರ್ದಿಷ್ಟ ತರಬೇತಿ ಅತ್ಯಗತ್ಯ.

ಇದನ್ನೂ ಓದಿ: Money Guide: ಹೆಲ್ತ್‌ ಇನ್ಶೂರೆನ್ಸ್‌ ಖರೀದಿಗೆ ಮುನ್ನ ಈ ಅಂಶ ನಿಮ್ಮ ಗಮನದಲ್ಲಿರಲಿ

ತಂತ್ರಜ್ಞಾನವು ನಿರಂತರವಾಗಿ ಅಭಿವೃದ್ಧಿ ಹೊಂದುತ್ತಿದೆ, ಅದನ್ನು ನಾವು ಅಳವಡಿಸಿಕೊಳ್ಳುವುದು ಅನಿವಾರ್ಯವಾಗಿದೆ. ಈ ಪ್ರಯತ್ನವು ಶಾಲಾ ಹಂತದಲ್ಲಿಯೇ ನಿರ್ಮಾಣವಾಗಬೇಕು ಎಂದು ತಿಳಿಸಿದರು.

ಹಿಂದಿನ ದಿನಗಳಲ್ಲಿ ನಮಗೆ ಶಿಕ್ಷಣದ ಬಗ್ಗೆ ಸರಿಯಾದ ಮಾರ್ಗದರ್ಶನವಿರಲಿಲ್ಲ. ಆದರೆ ಈಗಿನ ಮಕ್ಕಳು ಈ ಬಗ್ಗೆ ಹೆಚ್ಚು ತಿಳಿಯುವಂತಾಗಬೇಕು, ಹಾಗಾದಾಗ ವಿದ್ಯಾರ್ಥಿಗಳು ಬದುಕಿನ ಬಗ್ಗೆ ಕನಸುಗಳನ್ನು ಕಾಣಲು ಸಾಧ್ಯ. ಅದಕ್ಕೆ ತಕ್ಕಂತೆ ಕೌಶಲ್ಯಗಳನ್ನು ಅಭಿವೃದ್ಧಿಪಡಿಸಿಕೊಳ್ಳಲು ದಾರಿಗಳು ತೆರೆದುಕೊಳ್ಳುತ್ತವೆ. ಹೀಗಾದಾಗ ಮಾತ್ರ ವಿದ್ಯಾರ್ಥಿಗಳಿಗೆ ಮುಂದಿನ ದಿನಗಳಲ್ಲಿ ಉದ್ದಿಮೆದಾರರಾಗಲು ಅನೇಕ ಅವಕಾಶಗಳು ದೊರೆಯಲಿವೆ ಎಂದರು.

ಈ ಶಿಬಿರವು ವಿದ್ಯಾರ್ಥಿಗಳ ಜೀವನವನ್ನು ಧನಾತ್ಮಕವಾಗಿ ಪರಿವರ್ತಿಸುವ ನಮ್ಮ ಆರಂಭಿಕ ಪ್ರಯತ್ನವಾಗಿದೆ. ಮುಂದಿನ ದಿನಗಳಲ್ಲಿ ಸರ್ಕಾರವು ವಿದ್ಯಾರ್ಥಿಗಳ ಒಳಿತಿಗಾಗಿ ಇನ್ನಷ್ಟು ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುವ ಆಲೋಚನೆ ಹೊಂದಿದೆ. ಈ ನಿಟ್ಟಿನಲ್ಲಿ ಖಾಸಗಿ ಕಾಲೇಜುಗಳು ಕಾರ್ಯಪ್ರವೃತ್ತರಾಗಬೇಕು ಎಂದು ಅವರು ತಿಳಿಸಿದರು.

ಇದನ್ನೂ ಓದಿ: Job Alert: ಬಿಎಂಟಿಸಿ 2,500 ಕಂಡಕ್ಟರ್ ಹುದ್ದೆಯ ಪರಿಷ್ಕೃತ ಅಧಿಸೂಚನೆ ಪ್ರಕಟ; ಇಲ್ಲಿ ಪರಿಶೀಲಿಸಿ

ಕಾರ್ಯಕ್ರಮದಲ್ಲಿ ಎಎಂಸಿ ಸಂಸ್ಥೆಯ ಅಧ್ಯಕ್ಷ ಡಾ. ಕೆ.ಆರ್.‌ ಪರಮಹಂಸ, ಎಎಂಸಿ ಸಂಸ್ಥೆಗಳ ಕಾರ್ಯನಿರ್ವಾಹಕ ಉಪಾಧ್ಯಕ್ಷ ರಾಹುಲ್ ಕಲ್ಲೂರಿ, ಎಎಂಸಿ ಎಂಜಿನಿಯರಿಂಗ್ ಕಾಲೇಜಿನ ನಿರ್ದೇಶಕ ಡಾ. ಮೋಹನ್ ಬಾಬು ಜಿ.ಎನ್., ಸಿಬ್ಬಂದಿ, ಶಿಕ್ಷಕರು ಮತ್ತು ವಿದ್ಯಾರ್ಥಿಗಳು ಉಪಸ್ಥಿತರಿದ್ದರು.

Exit mobile version