ಬೆಂಗಳೂರು: ಬೆಂಗಳೂರು ವಿದ್ಯುತ್ ಸರಬರಾಜು ಕಂಪನಿ (BESCOM) ತನ್ನ ಗ್ರಾಹಕರಿಗೆ ದೊಡ್ಡದೊಂದು ಶಾಕ್ ನೀಡಿದೆ. ಈಗಾಗಲೇ ಒಂದು ವರ್ಗಕ್ಕೆ ಫ್ರೀ ಕರೆಂಟ್ (Free Electricity) ಕೊಟ್ಟರೆ ಇನ್ನೊಂದು ವರ್ಗಕ್ಕೆ ವಿಪರೀತ ಬಿಲ್ ವಸೂಲಿ ಮಾಡಿ ದ್ರೋಹ ಮಾಡಲಾಗುತ್ತಿದೆ ಎಂಬ ಆರೋಪಕ್ಕೆ ಈ ಹೊಸ ಶಾಕ್ ಪೂರಕವಾಗಿದೆ.
ಬೆಸ್ಕಾಂ ತನ್ನ ಇಂಧನ ಮತ್ತು ವಿದ್ಯುತ್ ಖರೀದಿ ವೆಚ್ಚ ಹೊಂದಾಣಿಕೆ ಶುಲ್ಕ (ಎಫ್ಪಿಪಿಸಿಎ)ಯನ್ನು ದಿಢೀರ್ ಆಗಿ ಏರಿಸಿದ್ದು, ಇದುವರೆಗೆ ತಿಂಗಳಿಗೆ ಪ್ರತಿ ಯುನಿಟ್ಗೆ 50 ಪೈಸೆ ದರವನ್ನು ಸೆಪ್ಟೆಂಬರ್ ತಿಂಗಳಲ್ಲಿ ದಿಢೀರ್ ಆಗಿ 1.15 ರೂಪಾಯಿಗಳಿಗೆ ಏರಿಸಲಾಗಿದೆ. ಈ ಹೆಚ್ಚಳ ಉಚಿತ ವಿದ್ಯುತ್ ಪಡೆಯುವ ಗೃಹ ಜ್ಯೋತಿ ಫಲಾನುಭವಿಗಳಿಗೆ ಅನ್ವಯವಾಗುವುದಿಲ್ಲ ಆದರೆ, ಉಳಿದ ಫಲಾನುವಿಗಳಿಗೆ ದೊಡ್ಡ ಹೊಡೆತವಾಗಿದೆ. ಅದರಲ್ಲೂ ವಾಣಿಜ್ಯ ಬಳಕೆದಾರರಿಗೆ ಬರೆ ಬೀಳಲಿದೆ.
ಏನಿದು ವಿದ್ಯುತ್ ಖರೀದಿ ಹೊಂದಾಣಿಕೆ ಶುಲ್ಕ?
ಇದನ್ನು ಇಂಧನ ಮತ್ತು ವಿದ್ಯುತ್ ಖರೀದಿ ವೆಚ್ಚ ಹೊಂದಾಣಿಕೆ ಶುಲ್ಕ (Fuel and Power Purchase Cost Adjustment -FPPCA) ಎಂದು ಕರೆಯಲಾಗುತ್ತದೆ. ಕೆಇಆರ್ಸಿಯ ಆದೇಶದಂತೆ 2023ರ ಜನವರಿಯಿಂದ ಮಾ.31ರವರೆಗಿನ ವಿದ್ಯುತ್ ಖರೀದಿ ವೆಚ್ಚದಲ್ಲಿನ ವ್ಯತ್ಯಾಸಗಳನ್ನು ಸರಿಪಡಿಸಿಕೊಳ್ಳಲು ಜುಲೈನಿಂದ ಸೆಪ್ಟೆಂಬರ್ವರೆಗೆ ಪ್ರತಿ ತಿಂಗಳು ಯುನಿಟ್ಗೆ 101 ಪೈಸೆಯಂತೆ ಇಂಧನ ಹೊಂದಾಣಿಕೆ ವೆಚ್ಚದ ಹೆಸರಿನಲ್ಲಿ ಹೆಚ್ಚುವರಿ ಶುಲ್ಕ ವಿಧಿಸಲು ಬೆಸ್ಕಾಂಗೆ ಅವಕಾಶ ಕಲ್ಪಿಸಲಾಗಿದೆ.
ಪ್ರತಿ ತಿಂಗಳು 101 ಪೈಸೆ ಹೆಚ್ಚಳ ಮಾಡಿದರೆ ಗ್ರಾಹಕರಿಗೆ ಹೊರೆಯಾಗುತ್ತದೆ ಎಂಬ ಕಾರಣಕ್ಕೆ ಮೂರು ತಿಂಗಳ ಅವಧಿಯಲ್ಲಿ ಸಂಗ್ರಹಿಸಬೇಕಾಗಿದ್ದ ಶುಲ್ಕವನ್ನು ಆರು ತಿಂಗಳಿಗೆ ಹಂಚಿಕೆ ಮಾಡಲಾಗಿತ್ತು. ಇದರಡಿ ಬೆಸ್ಕಾಂ ಜುಲೈನಿಂದ ಸೆಪ್ಟೆಂಬರ್ವರೆಗೆ ಯುನಿಟ್ಗೆ 51 ಪೈಸೆ ಹಾಗೂ ಅಕ್ಟೋಬರ್ನಿಂದ ಡಿಸೆಂಬರ್ವರೆಗೆ ಯುನಿಟ್ಗೆ 50 ಪೈಸೆಯಂತೆ ಎರಡು ತ್ರೈಮಾಸಿಕಗಳಲ್ಲಿ ತಲಾ ಅರ್ಧದಷ್ಟುಶುಲ್ಕ ಸಂಗ್ರಹಿಸಲು ಅವಕಾಶ ನೀಡಲಾಗಿತ್ತು.
ಈ ಬಾರಿ ಏಕಾಏಕಿ ಏರಿಕೆ
ಹಿಂದಿನ ಕ್ರಮದಂತೆ ಸೆಪ್ಟೆಂಬರ್ ತಿಂಗಳಲ್ಲಿ ಬೆಸ್ಕಾಂ ಗ್ರಾಹಕರು ವಿದ್ಯುತ್ ಶುಲ್ಕದ ಜತೆಗೆ 51 ಪೈಸೆ ಮಾತ್ರ ಹೆಚ್ಚುವರಿ ಶುಲ್ಕ ಪಾವತಿಸಬೇಕಾಗಿತ್ತು. ಆದರೆ, ಬೆಸ್ಕಾಂ ಏಕಾಏಕಿಯಾಗಿ ತಿಂಗಳವಾರು ಇಂಧನ ಹೊಂದಾಣಿಕೆ ಶುಲ್ಕವನ್ನು ಪರಿಷ್ಕರಿಸಿದ್ದರಿಂದ ಸೆಪ್ಟೆಂಬರ್ನಲ್ಲಿ 1.15 ರೂ. ವಸೂಲಿಗೆ ಮುಂದಾಗಿದೆ. ಏಪ್ರಿಲ್ ತಿಂಗಳಲ್ಲಿ 27 ಪೈಸೆ, ಜೂನ್ ತಿಂಗಳಲ್ಲಿ 9 ಪೈಸೆ ಹಾಗೂ ಜುಲೈ ತಿಂಗಳಲ್ಲಿ 28 ಪೈಸೆ ಸೇರಿ 64 ಪೈಸೆಯಷ್ಟುಹೆಚ್ಚು ವಿದ್ಯುತ್ ಖರೀದಿ ವೆಚ್ಚ ತಗುಲಿರುವುದಾಗಿ ಹೇಳಿದೆ.
ಇದನ್ನೂ ಓದಿ: Rain News: ಬೆಂಗಳೂರಲ್ಲಿ ವೀಕೆಂಡ್ ಮಸ್ತಿಗೆ ಮಳೆ ಅಡ್ಡಿ ಸಾಧ್ಯತೆ; ರಾಜ್ಯದ ಹಲವೆಡೆಯೂ ವರುಣನ ಆರ್ಭಟ
ಹೀಗಾಗಿ ಈ ಬಾರಿ ಸೆಪ್ಟೆಂಬರ್ ಸೆಪ್ಟೆಂಬರ್ ತಿಂಗಳ ಬಳಕೆಯ ವಿದ್ಯುತ್ ಶುಲ್ಕದ ಜತೆಗೆ ಒಟ್ಟು 115 ಪೈಸೆ (1.15 ರು.) ಇಂಧನ ಮತ್ತು ವಿದ್ಯುತ್ ಖರೀದಿ ಹೊಂದಾಣಿಕೆ ಶುಲ್ಕ ಸಂಗ್ರಹಿಸುವುದಾಗಿ ತಿಳಿಸಿದೆ. ಆದರೆ, ಈ ಆದೇಶವು ಸೆಪ್ಟೆಂಬರ್ ತಿಂಗಳ ವಿದ್ಯುತ್ ಬಿಲ್ಗೆ ಸೀಮಿತವಾಗಲಿದೆ ಎಂದು ಬೆಸ್ಕಾಂ ಅಧಿಕಾರಿಗಳು ತಿಳಿಸಿದ್ದಾರೆ.
ಈ ನಡುವೆ ಬೆಸ್ಕಾಂ ಇನ್ನೊಂದು ಸ್ಪಷ್ಟೀಕರಣ ನೀಡಿದ್ದು, ಕಳೆದ ತಿಂಗಳು ಹೊಂದಾಣಿಕೆ ಶುಲ್ಕವಾಗಿ 2.15 ರೂ. ವಿಧಿಸಲಾಗಿತ್ತು. ಅದಕ್ಕೆ ಹೋಲಿಸಿದರೆ ಈ ಬಾರಿ 1.15 ರೂ. ಮಾತ್ರ ವಿಧಿಸಲಾಗಿದೆ. ಹೀಗಾಗಿ ಕಡಿಮೆ ಬಿಲ್ ಬರಲಿದೆ ಎಂದು ಬೆಸ್ಕಾಂ ಹೇಳಿಕೊಂಡಿದೆ.