Site icon Vistara News

Book Release : ಅಧ್ಯಾತ್ಮದ ಸ್ಪರ್ಶವಿಲ್ಲದ ಜ್ಞಾನ ಅಪ್ರಯೋಜಕ: ಧಮ್ಮಪದ ಕೃತಿ ಬಿಡುಗಡೆ ಮಾಡಿದ ಭಿಕ್ಕು ಬುದ್ಧದತ್ತ

Buddha Dhamma book

#image_title

ಬೆಂಗಳೂರು: ಎರಡೂವರೆ ಸಾವಿರ ವರ್ಷಗಳ ಹಿಂದೆ ಭಗವಾನ್ ಬುದ್ಧ ಹೇಳಿದ ಸರಳತೆ, ಜ್ಞಾನ, ಚಿತ್ತನಿಯಂತ್ರಣ, ಸತ್ಯ, ಧರ್ಮಗಳ ಮೇಲಿನ ಬೋಧನೆಗಳು ಇಂದಿಗೂ ಪ್ರಸ್ತುತ. ಬುದ್ಧನ ಧರ್ಮವನ್ನು ಅನುಸರಿಸುತ್ತೇವೆನ್ನುವವರು ಎಲ್ಲರೂ ಧಮ್ಮಪದದ ಒಂದೊಂದು ಗಾಹೆಯನ್ನೂ ಓದಿ ಅರ್ಥೈಸಿಕೊಂಡು ಬದುಕಿನಲ್ಲಿ ಅಳವಡಿಸಿಕೊಳ್ಳಬೇಕು ಎಂದು ಮಹಾಬೋಧಿ ಸಂಶೋಧನ ಕೇಂದ್ರದ ನಿರ್ದೇಶಕ ಭಿಕ್ಕು ಬುದ್ಧದತ್ತ ಹೇಳಿದರು.

ಸುಚಿತ್ರ ಫಿಲ್ಮ್ ಸೊಸೈಟಿಯ ಸಭಾಂಗಣದಲ್ಲಿ ಅಯೋಧ್ಯಾ ಪಬ್ಲಿಕೇಶನ್ಸ್ ಭಾನುವಾರ ಪ್ರಕಟಿಸಿದ ಪುಸ್ತಕಗಳ ಲೋಕಾರ್ಪಣೆ ಕಾರ್ಯಕ್ರಮದಲ್ಲಿ ಮಾತನಾಡಿದರು. ಬುದ್ಧ ಅಧ್ಯಾತ್ಮದ ಮಹಾನ್ ಸಾಧಕ. ಅಧ್ಯಾತ್ಮದ ಸ್ಪರ್ಶವಿಲ್ಲದ ಜ್ಞಾನದಿಂದ ಹೆಚ್ಚೇನೂ ಲಾಭವಿಲ್ಲ. ಬುದ್ಧ ಪ್ರೇಮದ ಸಂದೇಶವನ್ನು ಜಗತ್ತಿಗೆಲ್ಲ ಸಾರಿದ. ಆತನು ಜೇತವನದಲ್ಲಿ ಶ್ರಮಣರಿಗೆ ನೀಡಿದ ಸಂದೇಶಗಳ ಸಾರಸಂಗ್ರಹವೇ ಧಮ್ಮಪದ. ಇದರಲ್ಲಿರುವ ಒಂದೊಂದು ಗಾಹೆಯೂ ಮನನ ಮತ್ತು ಅನುಸರಣೆಗೆ ಯೋಗ್ಯವಾದುದು. ಜಗತ್ತಿನ ವ್ಯಕ್ತಿಗಳೆಲ್ಲರೂ ಧಮ್ಮಪದದ ಗಾಹೆಗಳನ್ನು ಅನುಸಂಧಾನ ಮಾಡಿಕೊಂಡು ಬಾಳುವೆ ಮಾಡಿದರೆ ಜಗತ್ತಿನ ಸಮಸ್ಯೆಗಳೆಲ್ಲ ನಿವಾರಣೆಯಾಗುತ್ತವೆ ಎಂದು ಅವರು ಅಭಿಪ್ರಾಯಪಟ್ಟರು.

ಸಾಲಭಂಜಿಕೆ ಅಂಕಣ: ಎರಡು ಕವಿತೆಗಳಲ್ಲಿ ಒಂದೇ ಹಾಡು

ಶತಾವಧಾನಿ ಡಾ. ಆರ್. ಗಣೇಶ್ ಮಾತನಾಡಿ, ಬುದ್ಧನ ಮಾತುಗಳಿಗೆ ಸಂವಾದಿಯಾದ ಮಾತುಗಳನ್ನು ವೇದ, ಉಪನಿಷತ್ತು, ಮಹಾಭಾರತ-ರಾಮಾಯಣ ಮಹಾಕಾವ್ಯಗಳು ಹಾಗೂ ಭಗವದ್ಗೀತೆಯಲ್ಲಿಯೂ ನೋಡಬಹುದು. ಬೌದ್ಧದರ್ಶನಕ್ಕೂ ಮತ್ತು ಸನಾತನಧರ್ಮಕ್ಕೂ ಶತಮಾನಗಳ ತಿಕ್ಕಾಟ, ಸಂಘರ್ಷವಿದೆ ಎಂದೇ ಬಿಂಬಿಸಲಾಗುತ್ತಿದೆ. ಇದು ಸಂಪೂರ್ಣ ಪೂರ್ವಗ್ರಹದ ಸುಳ್ಳುಕಥನ ಎಂಬುದು ಧಮ್ಮಪದವನ್ನು ಓದಿದರೆ ಗೊತ್ತಾಗುತ್ತದೆ. ಬುದ್ಧನ ಅನಾತ್ಮವಾದವು ಈಗಿನವರು ಹೇಳುವಂತೆ ಆತ್ಮದ ಅಸ್ತಿತ್ವವನ್ನು ನಿರಾಕರಿಸುವ ಸಿದ್ಧಾಂತವಲ್ಲ; ಬುದ್ಧನು ಆತ್ಮ, ಪುನರ್ಜನ್ಮ, ಪಾಪ-ಪುಣ್ಯ ಇತ್ಯಾದಿ ಅಂಶಗಳನ್ನು ಪುರಸ್ಕರಿಸಿದ್ದಾನೆ ಎಂದು ಅವರು ಹೇಳಿದರು.

ಧಮ್ಮಪದದ ಅನುವಾದಕ, ಚಿಂತಕ ಡಾ. ಜಿ. ಬಿ. ಹರೀಶ ಮಾತನಾಡಿ, ಬುದ್ಧನನ್ನು ಇಂದು ಭಾರತದವನಲ್ಲ ಎಂದು ಪ್ರಚಾರ ಮಾಡುವ ಹುನ್ನಾರ ನಡೆಯುತ್ತಿದೆ. ಚೀನಾ ದೇಶವು ವ್ಯವಸ್ಥಿತವಾಗಿ ಬುದ್ಧನನ್ನು ಹೈಜಾಕ್ ಮಾಡುವ ಪ್ರಯತ್ನ ಮಾಡುತ್ತ ಬಂದಿದೆ. ಕಮ್ಯುನಿಸ್ಟರು ಜಗತ್ತಿನೆಲ್ಲ ಭಾಗಗಳಲ್ಲಿ ಹಿಂಸಾಚಾರ ಮಾಡಿ ನಂತರ ತಾವು ಬುದ್ಧನ ಅನುಯಾಯಿಗಳು ಎಂದು ಹೇಳಿಕೊಳ್ಳುವುದು ವಿಡಂಬನೆ ಎಂದರು.

ಇದನ್ನೂ ಓದಿ : ವಿಸ್ತಾರ ಅಂಕಣ : ಅಭಿವೃದ್ಧಿಗೆ ನಮ್ಮದೇ ಮಾದರಿಯತ್ತ ನೋಡಲು ಮಡಿವಂತಿಕೆ ಏಕೆ?

ಭಾರತದಲ್ಲಿ ಒಂದು ಬುದ್ಧಿಜೀವಿ ವರ್ಗ ಬುದ್ಧನ ಬಗ್ಗೆ ನಿರಂತರವಾಗಿ ಅಪವ್ಯಾಖ್ಯಾನಗಳನ್ನು ಬರೆಯುತ್ತ ಬಂದಿದ್ದರ ಫಲವಾಗಿ ಇಂದು ಹಿಂದೂಗಳಲ್ಲೇ ಬುದ್ಧನ ಬಗ್ಗೆ ಅನಾದರವಿದೆ. ಆದರೆ ಬುದ್ಧನ ಬೋಧನೆಗಳೆಲ್ಲವೂ ಸನಾತನಧರ್ಮಕ್ಕೆ ಪೂರಕವಾಗಿಯೇ ಇವೆ. ಜಗತ್ತಿನ ಸಮಸ್ಯೆಗಳೆಲ್ಲವನ್ನೂ ಸಮಾಜದಲ್ಲಿರುವ ಆರ್ಥಿಕ ಅಸಮಾನತೆಯ ಹಿನ್ನೆಲೆಯಲ್ಲಿ ವಿಶ್ಲೇಷಿಸುವ ಕಮ್ಯುನಿಸ್ಟರು ತಮ್ಮ ಸಿದ್ಧಾಂತಕ್ಕೆ ತಕ್ಕಂತೆ ಬುದ್ಧನ ಬೋಧನೆಗಳನ್ನು ತಿರುಚಿ, ಆತ ಹಿಂದುಧರ್ಮದ ದ್ವೇಷಿಯೆಂದು ಬಿಂಬಿಸಿದರು ಎಂದು ಹರೀಶ ಟೀಕಿಸಿದರು.

ಲೇಖಕ ರೋಹಿತ್ ಚಕ್ರತೀರ್ಥ ಮಾತನಾಡಿ, ಪಠ್ಯಪುಸ್ತಕಗಳಲ್ಲಿ ಬರಗೂರು ರಾಮಚಂದ್ರಪ್ಪ ತಮ್ಮ ವೈಯಕ್ತಿಕ ಚಿಂತನೆಗಳನ್ನು ಹರಿಯಬಿಟ್ಟು ಬುದ್ಧನನ್ನು ವೇದವಿರೋಧಿಯಾಗಿ ಬಿಂಬಿಸಿದರು ಎಂದರು.

ಸುಚಿತ್ರ ಸಿನೆಮ ಮತ್ತು ಸಂಸ್ಕೃತಿ ಅಕಾಡೆಮಿಯ ಟ್ರಸ್ಟಿ ವೃಷಾಂಕ್ ಭಟ್ ಮಾತನಾಡಿ, ಬುದ್ಧನ ಮೂಲಬೋಧನೆಗಳನ್ನು ಇಂದು ಹೇಳಹೋದರೆ ಬುದ್ಧನ ಅನುಯಾಯಿಗಳೆಂದು ಕರೆದುಕೊಳ್ಳುವ ಕೆಲವರಿಂದ ಪ್ರಬಲ ವಿರೋಧ ಎದುರಿಸಬೇಕಾಗುತ್ತದೆ. ಅನುಯಾಯಿಗಳೆಂದು ಹೇಳಿಕೊಳ್ಳುವವರು ಯಾರೂ ಬುದ್ಧನ ಧಮ್ಮಪದವನ್ನು ಓದಿರುವಂತೆ ಕಾಣುವುದಿಲ್ಲ. ಬುದ್ಧ ಸಂಸಾರ ತ್ಯಜಿಸಿದ್ದು ಅವನ ರಾಜ್ಯದಲ್ಲಿ ಕ್ಷಾಮ ಕಾಣಿಸಿಕೊಂಡ ಕಾರಣಕ್ಕೆ ಎಂಬೆಲ್ಲ ಚಿತ್ರವಿಚಿತ್ರ ವಾದಗಳನ್ನು ದಿನನಿತ್ಯ ಹೊಸೆಯಲಾಗುತ್ತಿದೆ ಎಂದು ಬೇಸರ ವ್ಯಕ್ತಪಡಿಸಿದರು.

Exit mobile version