ಬೆಂಗಳೂರು: ವೃತ್ತಿಪರ ಕೋರ್ಸ್‌ಗಳಿಗೆ ನಡೆದ ಸಿಇಟಿ-2024 ಪರೀಕ್ಷೆಯಲ್ಲಿ (CET 2024 exam) ಔಟ್ ಆಫ್ ಸಿಲಬಸ್ ಪ್ರಶ್ನೆಗಳನ್ನು ಕೇಳಲಾಗಿತ್ತು. ಹೀಗಾಗಿ ಇದನ್ನೂ ಖಂಡಿಸಿ ಎವಿಬಿಪಿ ಸಂಘಟನೆ ಕರ್ನಾಟಕ ಪರೀಕ್ಷಾ ಪ್ರಾಧಿಕಾರದ ಎದುರು ಪ್ರತಿಭಟನೆ ನಡೆಸಿತು. ಈ ವೇಳೆ ಎವಿಬಿಪಿ ಕಾರ್ಯಕರ್ತರು ಕೆಇಎ ಕಚೇರಿಗೆ ನುಗ್ಗಲು ಯತ್ನಿಸಿದಾಗ ಪೊಲೀಸರು ಹಾಗೂ ಕಾರ್ಯಕರ್ತರ ನಡುವೆ ವಾಗ್ವಾದ ನಡೆಯಿತು.
ಗಲಾಟೆ ವಿಕೋಪಕ್ಕೆ ತಿರುಗಿದ ಕಾರಣಕ್ಕೆ ಎವಿಬಿಪಿ ಕಾರ್ಯಕರ್ತರನ್ನು ಪೊಲೀಸರು ವಶಕ್ಕೆ ಪಡೆಯಲು ಮುಂದಾದರು. ರಸ್ತೆ ತಡೆಯಲು ಹೋದ ಕಾರ್ಯಕರ್ತರನ್ನು ಪೊಲೀಸರು ಬಸ್‌ನಲ್ಲಿ ಕಂಡೊಯ್ಯುವಾಗ ಒಬ್ಬರನ್ನೊಬ್ಬರು ಕುತ್ತಿಗೆ ಹಿಡಿದು ನೂಕಾಡಿ ಹೊಡೆದಾಡಿಕೊಂಡಿದ್ದಾರೆ.
ಇದನ್ನೂ ಓದಿ: Murder Case : ಟೈಂ ಆಯ್ತು ಬಾರ್ ಕ್ಲೋಸ್ ಎಂದಿದ್ದಕ್ಕೆ ಕ್ಯಾಶಿಯರ್‌ನ ಕೊಲೆ ಮಾಡಿದ ಕುಡುಕ
ಏನಿದು ಔಟ್ ಆಫ್ ಸಿಲಬಸ್ ಗೊಂದಲ?
ರಾಜ್ಯದಲ್ಲಿ ಕರ್ನಾಟಕ ಪರೀಕ್ಷಾ ಪ್ರಾಧಿಕಾರದಿಂದ ಪ್ರತಿ ವರ್ಷ ವೃತ್ತಿಪರ ಕೋಸ್‌ಗಳಿಗೆ ಸಾಮಾನ್ಯ ಪ್ರವೇಶ ಪರೀಕ್ಷೆಯನ್ನು ನಡೆಸಲಾಗಿತ್ತು. ಈ ಬಾರಿಯ ಪರೀಕ್ಷೆಯಲ್ಲಿ 4 ವಿಷಯಗಳಿಂದ ಸುಮಾರು 40ಕ್ಕೂ ಹೆಚ್ಚು ಔಟ್ ಆಫ್ ಸಿಲಬಸ್ (Out of Syllabus) ಪ್ರಶ್ನೆಗಳು ಕೇಳಲಾಗಿದೆ. Out of Syllabus ಪ್ರಶ್ನೆಗಳಿಂದ ಪ್ರಾಮಾಣಿಕವಾಗಿ ಪರೀಕ್ಷೆಯನ್ನು ಬರೆದಿರುವ ವಿದ್ಯಾರ್ಥಿಗಳಿಗೆ ಭಾರೀ ಮೋಸವಾಗುತ್ತದೆ. ರಾಜ್ಯದ ವಿದ್ಯಾರ್ಥಿಗಳಿಗೆ ಯಾವುದೇ ರೀತಿಯ ತೊಂದರೆ ಆಗಬಾರದು ಎಂದು ಎಬಿವಿಪಿ ಪ್ರತಿಭಟಿಸಿತು. ಈ ಗೊಂದಲದಿಂದ ಶಿಕ್ಷಣ ಇಲಾಖೆಗೂ ಮತ್ತು ಪ್ರಾಧಿಕಾರಕ್ಕೂ ಯಾವುದೇ ತಾಳ-ಮೇಳ ಇಲ್ಲ ಎನ್ನವುದು ಮೇಲ್ನೋಟಕ್ಕೆ ಕಂಡು ಬಂದಿದೆ ಎಂದು ಕಿಡಿಕಾರಿದರು.
ಖಾಸಗಿ ಶಿಕ್ಷಣ ಸಂಸ್ಥೆಗಳ ನಾಭಿ ಮತ್ತು ಹಸ್ತಕ್ಷೇಪ ಶಿಕ್ಷಣ ಇಲಾಖೆ ಮತ್ತು ಪ್ರಾಧಿಕಾರಗಳಲ್ಲಿ ಇರುವುದರಿಂದ ಈ ರೀತಿಯ ಸಮಸ್ಯೆಗಳಿಗೆ ಕಾರಣವಾಗುತ್ತಿದೆ ಎಂದು ಎವಿಬಿಪಿ ಕಿಡಿಕಾರಿದೆ. ಆದ್ದರಿಂದ ರಾಜ್ಯ ಸರ್ಕಾರ ಮತ್ತು ಇಲಾಖೆ ರಾಜ್ಯದ ವಿದ್ಯಾರ್ಥಿಗಳಿಗೆ ಕ್ಷಮೆಯನ್ನು ಯಾಚಿಸಬೇಕು. ಅಲ್ಲದೇ ಸಮಸ್ಯೆಗೆ ಕಾರಣವಾಗಿರುವವರನ್ನು ಕಠಿಣ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದೆ. ರಾಜ್ಯದಲ್ಲಿ ಮತ್ತೊಮ್ಮೆ ಸಿ.ಇ.ಟಿ – 2024 ಪರೀಕ್ಷೆಗಳನ್ನು ನಡೆಸಬೇಕೆಂದು ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ ಆಗ್ರಹಿಸಿದೆ.
ಕೆಇಎ ಹೇಳೋದೇನು?
ಔಟ್ ಆಫ್ ಸಿಲಬಸ್ ಪ್ರಶ್ನೆ ಸಂಬಂಧ ವಿದ್ಯಾರ್ಥಿಗಳು ಕರ್ನಾಟಕ ಪರೀಕ್ಷಾ ಪ್ರಾಧಿಕಾರಕ್ಕೆ (KEA) ದೂರು ನೀಡಿದ್ದಾರೆ. ಅಲ್ಲದೆ, ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ಕೆಇಎ, ಗ್ರೇಸ್ ಮಾರ್ಕ್ಸ್ ಬಗ್ಗೆ ಬುಧವಾರ (ಏಪ್ರಿಲ್ 24) ಚರ್ಚಿಸಿ ತಜ್ಞರ ಸಮಿತಿಯನ್ನು ರಚನೆ ಮಾಡುವುದಾಗಿ ಹೇಳಿದೆ. ಗ್ರೇಸ್ ಮಾರ್ಕ್ಸ್ ನೀಡುವ ಬಗ್ಗೆ ಕೆಇಎ ಈವರೆಗೆ ಯಾವುದೇ ತೀರ್ಮಾನವನ್ನು ತೆಗೆದುಕೊಂಡಿಲ್ಲ. ಗ್ರೇಸ್ ಮಾರ್ಕ್ಸ್ ಬಗ್ಗೆ ಬುಧವಾರ ಚರ್ಚಿಸಿ ತಜ್ಞರ ಸಮಿತಿಯನ್ನು ರಚನೆ ಮಾಡಲಾಗುವುದು. ನಂತರ ಗ್ರೇಸ್ ಮಾರ್ಕ್ಸ್ ಬಗ್ಗೆ ತೀರ್ಮಾನ ಕೈಗೊಳ್ಳುವುದಾಗಿ ವಿಸ್ತಾರ ನ್ಯೂಸ್‌ಗೆ ಕೆಇಎ ಮಂಡಳಿ ಮಾಹಿತಿ ನೀಡಿದೆ. ಈ ಸಮಿತಿ ರಚನೆಯಾದ ಬಳಿಕ ಅಧ್ಯಯನ ಮಾಡಿ ಗ್ರೇಸ್ ಮಾರ್ಕ್ಸ್ ಕೊಡುವ ಬಗ್ಗೆ ನಿರ್ಧಾರವನ್ನು ಕೈಗೊಳ್ಳಲಾಗುವುದು.
ಏಪ್ರಿಲ್ 27ರವರೆಗೆ ಆಕ್ಷೇಪಣೆ ಸಲ್ಲಿಕೆಗೆ KEA ಅವಕಾಶ
ಈ ಬಾರಿ ಸಿಇಟಿಯಲ್ಲಿ ನೋಂದಣಿ ಮಾಡಿಕೊಂಡಿದ್ದ 3,49,637 ವಿದ್ಯಾರ್ಥಿಗಳ ಪೈಕಿ ಶೇ.92ರಷ್ಟು ಮಂದಿ ಪರೀಕ್ಷೆ ಬರೆದಿದ್ದಾರೆ ಎಂದು ಕರ್ನಾಟಕ ಪರೀಕ್ಷಾ ಪ್ರಾಧಿಕಾರ ತಿಳಿಸಿದೆ. ಅಲ್ಲದೆ, ಈಗ ಪ್ರಶ್ನೆ ಪತ್ರಿಕೆಯಲ್ಲಿನ ಪ್ರಶ್ನೆಗಳ ಬಗ್ಗೆ ಆಕ್ಷೇಪಣೆಗಳು ಇದ್ದರೆ, ಇದೇ ಏಪ್ರಿಲ್ 27ರೊಳಗೆ ದೂರು ಸಲ್ಲಿಸಲು ಅವಕಾಶವನ್ನು ನೀಡಲಾಗಿದೆ. ಪ್ರಶ್ನೆಪತ್ರಿಕೆಯಲ್ಲಿನ ಯಾವುದೇ ಪ್ರಶ್ನೆಗಳ ಬಗ್ಗೆ ಆಕ್ಷೇಪಣೆಗಳು ಇದ್ದರೆ, ವಿಷಯ, ವರ್ಷನ್ ಕೋಡ್, ಪ್ರಶ್ನೆ ಸಂಖ್ಯೆಗಳನ್ನು ನಮೂದಿಸಿ keaugcet24@gmail.com ಗೆ ಇ – ಮೇಲ್ ಮೂಲಕ ಸಂಜೆ 5.30ರ ಒಳಗೆ ದೂರು ಸಲ್ಲಿಸಲು ಕೆಇಎ ಸೂಚಿಸಿದೆ. ಇದಕ್ಕೆ ತಜ್ಞರ ಸಮಿತಿಯು ಪರಿಶೀಲಿಸಿ ಸೂಕ್ತ ಪರಿಹಾರವನ್ನು ನೀಡಲಿದೆ ಎಂದು ಕೆಇಎ ಸ್ಪಷ್ಟಪಡಿಸಿದೆ.
ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ