Site icon Vistara News

Chakravarthy Sulibele: ಮೈಸೂರಿನಲ್ಲಿ ಇಂದು ಸಂಜೆ ಚಕ್ರವರ್ತಿ ಸೂಲಿಬೆಲೆಗೆ ವೀರ ಸಾವರ್ಕರ್‌ ಸಮ್ಮಾನ್‌ ಪ್ರಶಸ್ತಿ ಪ್ರದಾನ

chakravarthy sulibele

ಮೈಸೂರು: ಭಾಷಣ ಹಾಗೂ ಲೇಖನಗಳಿಂದ ಯುವ ಪೀಳಿಗೆಯ ಜನರಲ್ಲಿ ದೇಶಭಕ್ತಿ ಜಾಗೃತಗೊಳಿಸುವ ಕಾರ್ಯದ ಜತೆಗೆ ವಿವಿಧ ಸಮಾಜ ಸೇವಾ ಕಾರ್ಯಗಳಲ್ಲಿ ತೊಡಗಿರುವ ಯುವ ಬ್ರಿಗೇಡ್ ಮಾರ್ಗದರ್ಶಕ, ಚಿಂತಕ ಚಕ್ರವರ್ತಿ ಸೂಲಿಬೆಲೆ (Chakravarthy Sulibele) ಅವರು ವೀರ ಸಾವರ್ಕರ್ ಪ್ರತಿಷ್ಠಾನದಿಂದ ನೀಡುವ ‘ವೀರ ಸಾವರ್ಕರ್ ಸಮ್ಮಾನ್’ ಪ್ರಶಸ್ತಿಗೆ ಆಯ್ಕೆಯಾಗಿದ್ದು, ಇಂದು (ಮೇ 28) ಸಂಜೆ 5.30ಕ್ಕೆ ನಗರದ ಕಲಾಮಂದಿರದಲ್ಲಿ ಆಯೋಜಿಸಿರುವ 141ನೇ ಸಾವರ್ಕರ್‌ ಜಯಂತಿಯಲ್ಲಿ ಪ್ರಶಸ್ತಿ ಪ್ರದಾನ ಮಾಡಲಾಗುತ್ತದೆ.

ಈ ಬಗ್ಗೆ ಸುದ್ದಿಗೋಷ್ಠಿಯಲ್ಲಿ ವೀರ ಸಾವರ್ಕರ್ ಪ್ರತಿಷ್ಠಾನದ ಸದಸ್ಯ ರಾಕೇಶ್ ಭಟ್ ಅವರು ಮಾಹಿತಿ ನೀಡಿದ್ದಾರೆ. ಪ್ರತಿಷ್ಠಿತ ವೀರ ಸಾವರ್ಕರ್ ಸಮ್ಮಾನ್ ಪ್ರಶಸ್ತಿಯು ಒಂದು ಲಕ್ಷ ನಗದು, ವೀರ ಸಾವರ್ಕರ್ ಅವರ ಪುತ್ಥಳಿ ಹಾಗೂ ಪ್ರಶಸ್ತಿ ಪತ್ರವನ್ನು ಒಳಗೊಂಡಿದೆ.

ಯುವ ಜನರಲ್ಲಿ ದೇಶಭಕ್ತಿ ಜಾಗೃತಿ, ನದಿ ಸ್ವಚ್ಛತೆ, ದೇಗುಲ ಜೀರ್ಣೋದ್ದಾರ, ಗೋಪಾಲನೆ, ಬಡವರಿಗೆ ಮನೆ ನಿರ್ಮಾಣ, ಸರ್ಕಾರಿ ಶಾಲೆಗಳಿಗೆ ಸುಣ್ಣ-ಬಣ್ಣ ಸೇರಿ ಸೇವಾ ಕ್ಷೇತ್ರದೆಡೆಗೆ ಆಕರ್ಷಿಸಿ ಯುವ ಬ್ರಿಗೇಡ್ ಸಂಘಟನೆಯನ್ನು ಕಟ್ಟುತ್ತಿರುವ ಚಕ್ರವರ್ತಿ ಸೂಲಿಬೆಲೆ ಅವರಿಗೆ ಈ ವರ್ಷದ ವೀರ ಸಾವರ್ಕರ್ ಸಮ್ಮಾನ್ ಪ್ರಶಸ್ತಿ – 2024ಯನ್ನು ನೀಡಲಾಗುತ್ತಿದೆ ಎಂದು ತಿಳಿಸಿದ್ದಾರೆ.

ಪ್ರಶಸ್ತಿ ಪ್ರದಾನ ಕಾರ್ಯಕ್ರಮದಲ್ಲಿ ಖ್ಯಾತ ಕಾದಂಬರಿಕಾರ ಡಾ.ಎಸ್.ಎಲ್. ಭೈರಪ್ಪ ಪಾಲ್ಗೊಳ್ಳಲಿದ್ದಾರೆ. ಸುವರ್ಣ ನ್ಯೂಸ್‌ನ ಮುಖ್ಯಸ್ಥ ಅಜಿತ್ ಹನುಮಕ್ಕನವರ್ ಮುಖ್ಯ ಭಾಷಣಕಾರರಾಗಿ ಆಗಮಿಸಲಿದ್ದಾರೆ. ಮಧ್ಯಾಹ್ನ 2 ಗಂಟೆಗೆ ಸಾವರ್ಕರ್ ವೇಷಭೂಷಣ, ಚಿತ್ರಕಲೆ ಹಾಗೂ ರಂಗೋಲಿ ಸ್ಪರ್ಧೆ ನಡೆಯಲಿದೆ. ಈಗಾಗಲೇ ಮೊಬೈಲ್ ಮೂಲಕ ಸಾವರ್ಕರ್ ಕುರಿತು ಮಾಡಿರುವ ರೀಲ್ಸ್‌ಗಳನ್ನು ಪಡೆಯಲಾಗುತ್ತಿದೆ. ಪ್ರತಿ ಸ್ಪರ್ಧೆಯ ವಿಜೇತರಿಗೆ ಪ್ರಥಮ ಬಹುಮಾನವಾಗಿ 5 ಸಾವಿರ ರೂ., ದ್ವಿತೀಯ ಬಹುಮಾನವಾಗಿ 3 ಸಾವಿರ ರೂ., ತೃತೀಯ ಬಹುಮಾನವಾಗಿ 1000 ರೂ. ನಗದು ಬಹುಮಾನದ ಜತೆಗೆ ನೆನಪಿನ ಕಾಣಿಕೆ ಹಾಗೂ ಪ್ರಶಸ್ತಿ ಪತ್ರ ನೀಡಲಾಗುತ್ತದೆ.

ಸಾವರ್ಕರ್ ಕುರಿತು ಅನೇಕ ಅಧ್ಯಯನ ಮಾಡಿ ಕೃತಿ ರಚಿಸಿರುವ ವಿಕ್ರಂ ಸಂಪತ್ ಅವರಿಗೆ ಕಳೆದ ವರ್ಷ ವೀರ ಸಾವರ್ಕರ್ ಸಮ್ಮಾನ್ ಪ್ರಶಸ್ತಿ- 2023ಯನ್ನು ನೀಡಲಾಗಿತ್ತು. ಸಾವರ್ಕರ್ ಪ್ರತಿಷ್ಠಾನ ಕಾರ್ಯಕ್ರಮಗಳ ಮೂಲಕ ಸಾವರ್ಕರ್ ವಿಚಾರಧಾರೆಯನ್ನು ಜನರ ಮುಂದಿಡುತ್ತಾ ಬಂದಿದೆ. ಸಾವರ್ಕರ್ ರಥಯಾತ್ರೆ ಮೈಸೂರು, ಚಾಮರಾಜನಗರ, ಮಂಡ್ಯ ಜಿಲ್ಲೆಗಳಲ್ಲಿ ಸಂಚರಿಸಿ ಸಾವರ್ಕರ್ ಕುರಿತ ಮಾಹಿತಿ, ಸಾಹಿತ್ಯ ಹಾಗೂ ಪುಸ್ತಕಗಳ ಮೂಲಕ 10 ಲಕ್ಷಕ್ಕೂ ಅಧಿಕ ಜನರನ್ನು ತಲುಪಿತು, ಸಾವರ್ಕರ್ ಕುರಿತ ಕನ್ನಡದ ನಾಟಕ ಕರಿನೀರ ವೀರ ರಾಜ್ಯಾದ್ಯಂತ ಅನೇಕ ಪ್ರದರ್ಶನ ನಡೆಸಿ ಜನಮನ ಗೆದ್ದಿದೆ, ವಿದ್ಯಾರ್ಥಿಗಳಿಗಾಗಿ ಸಾವರ್ಕರ್ ಪ್ರಬಂಧ, ಭಾಷಣ, ಚಿತ್ರಕಲೆ ಹೀಗೆ ಅನೇಕ ಸ್ಪರ್ಧೆಗಳನ್ನು ಹಲವಾರು ಶಾಲಾ ಕಾಲೇಜು ಗಳಲ್ಲಿ ಆಯೋಜಿಸಿ ಅವರುಗಳಲ್ಲಿ ಸಾವರ್ಕರ್ ವ್ಯಕ್ತಿ ಹಾಗೂ ವಿಚಾರಗಳನ್ನು ಪರಿಚಯಿಸುವ ಕೆಲಸಗಳನ್ನು ಸಾವರ್ಕರ್ ಪ್ರತಿಷ್ಠಾನ ಮಾಡುತ್ತಿದೆ ಎಂದು ಅವರು ತಿಳಿಸಿದ್ದಾರೆ.

ಇದನ್ನೂ ಓದಿ | ಧವಳ ಧಾರಿಣಿ ಅಂಕಣ: ಗೌತಮ ಬುದ್ಧ; ಭಾರತೀಯ ತತ್ತ್ವಶಾಸ್ತ್ರದ ಮುನ್ನುಡಿ

ಕಾರ್ಯಕ್ರಮದ ಕುರಿತು ಹೆಚ್ಚಿನ ಮಾಹಿತಿಗೆ ರಾಕೇಶ್‌ ಭಟ್ ಮೊ. 99162 21184, ರಜತ್ 63634 43699, ಶಿವಕುಮಾರ್ 86602 19746 ಸಂಪರ್ಕಿಸಬುಹುದು ಎಂದು ಮಾಹಿತಿ ನೀಡಿದ್ದಾರೆ.

Exit mobile version