Site icon Vistara News

ನಿವೃತ್ತ ಪತ್ರಕರ್ತರ ಮಾಸಾಶನ ಹೆಚ್ಚಳ: ಸಿಎಂ ಬಸವರಾಜ ಬೊಮ್ಮಾಯಿ ಭರವಸೆ

ಬಸವರಾಜ ಬೊಮ್ಮಾಯಿ

ಬೆಂಗಳೂರು: ಪತ್ರಕರ್ತರಿಗೆ ಸಾಮಾಜಿಕ, ಆರ್ಥಿಕ ಭದ್ರತೆಯ ಅವಶ್ಯಕತೆ ಇದೆ. ನಿವೃತ್ತ ಪತ್ರಕರ್ತರಿಗೆ ಮಾಸಾಶನ ಹೆಚ್ಚಿಸಲು ಸಮಿತಿ ರಚಿಸಲು ಆದೇಶ ಹೊರಡಿಸಿ, ಅದಕ್ಕಿರುವ ನಿಯಮಗಳನ್ನು ಸರಳೀಕರಣಗೊಳಿಸಲಾಗುವುದು ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಭರವಸೆ ನೀಡಿದ್ದಾರೆ.

ನಗರದ ಪ್ರೆಸ್ ಕ್ಲಬ್‌ನಲ್ಲಿ ಬುಧವಾರ ಆಯೋಜಿಸಲಾಗಿದ್ದ ಬಿಸ್ನೆಸ್‌ ಐಕಾನ್ ಅವಾರ್ಡ್ಸ್ ಕಾರ್ಯಕ್ರಮದಲ್ಲಿ ಮಾತನಾಡಿ, ವಿಧಾನಸಭೆಯ ಹತ್ತಿರವೇ ಪ್ರೆಸ್ ಕ್ಲಬ್ ಇದೆ. ಪತ್ರಕರ್ತರು ಶಕ್ತಿಸ್ಥಳ ಭಾಗವಾಗಿದ್ದು, ನಾಡು ಕಟ್ಟಲು ನಿಮ್ಮ ಶಕ್ತಿ ಬಳಕೆಯಾಗಲಿ. ಹೊಗಳಿಕೆ ತೆಗಳಿಕೆಗಳನ್ನು ಸಮಾನವಾಗಿ ಸ್ವೀಕರಿಸುವ ಸ್ಥಿತಪ್ರಜ್ಞತೆ ಇದ್ದಾಗ ರಾಜಕಾರಣಿ ಯಶಸ್ವಿಯಾಗಲು ಸಾಧ್ಯ. ಇಂತಹ ಕಾರ್ಯಕ್ರಮಗಳನ್ನು ಪ್ರೆಸ್ ಕ್ಲಬ್ ಹೆಚ್ಚಾಗಿ ಮಾಡಬೇಕು ಎಂದರು.

ಇದನ್ನೂ ಓದಿ | ನ್ಯಾಯಾಂಗ ತನಿಖೆಯಾಗದಿದ್ದರೆ 40% ಕಮಿಷನ್‌ ನಿಜ ಎಂದರ್ಥ: ಮಾಜಿ ಸಿಎಂ ಸಿದ್ದರಾಮಯ್ಯ

ಪ್ರೆಸ್ ಕ್ಲಬ್ ಸಾಮಾನ್ಯವಾಗಿ ಪತ್ರಿಕಾ ರಂಗದಲ್ಲಿ ಸಾಧನೆ ಮಾಡಿದವರನ್ನು ಗುರುತಿಸುತ್ತದೆ. ಆದರೆ ಈ ಬಾರಿ ಬಿಸ್ನೆಸ್‌ ಐಕಾನ್ ಅವಾರ್ಡ್ ಕೊಡುತ್ತಾರೆ ಎಂದಾಗ ಆಶ್ಚರ್ಯವಾಯಿತು. ಪ್ರೆಸ್ ಕ್ಲಬ್ ತನ್ನ ಸಾಮಾಜಿಕ ಹೊಣೆಗಾರಿಕೆಯನ್ನು ಹೆಚ್ಚಿಸಿಕೊಂಡಿದೆ. ಬಿಸ್ನೆಸ್‌ನಲ್ಲಿ ವಿಶೇಷ ಸಾಧನೆ ಮಾಡಿರುವವರನ್ನು ಗುರುತಿಸಿ ಅವಾರ್ಡ್ ಕೊಡುವುದು ವಿಶೇಷ ಎಂದು ತಿಳಿಸಿ ಪ್ರಶಸ್ತಿ ಪಡೆದವರಿಗೆ ಅಭಿನಂದನೆಗಳನ್ನು ಸಲ್ಲಿಸಿದರು. ಇದು ವಿಶೇಷ ಪ್ರಶಸ್ತಿ, ಟೀಕೆಗಾರರಿಂದ ಪ್ರಶಸ್ತಿ ಪಡೆಯುವುದು ಸುಲಭವಲ್ಲ. ಅವರಿಂದ ಪ್ರಶಸ್ತಿ ಪಡೆದಿರುವುದು ನಿಮ್ಮ ಕ್ಷೇತ್ರದಲ್ಲಿ ಸಾಧನೆ ಮಾಡಿದ್ದೀರಿ ಎಂದು ನಿರೂಪಿಸುತ್ತದೆ ಎಂದರು.

ರಾಜಕಾರಣಿಗಳಿಗೂ ಮಾಧ್ಯಮದವರಿಗೂ ಅವಿನಾಭಾವ ಸಂಬಂಧ. ಅವರನ್ನು ಬಿಟ್ಟು ನಾವು, ನಮ್ಮನ್ನು ಬಿಟ್ಟು ಅವರು ಇರಲಾಗುವುದಿಲ್ಲ. ನಾವು ಮಾಡಿರುವ ಕೆಲಸಗಳು ಜನರಿಗೆ ತಿಳಿಯಲು ನಿಮ್ಮ ಅಗತ್ಯವಿದೆ. ಹೀಗಾಗಿ ನಮ್ಮ ನಿಮ್ಮ ಅನ್ಯೋನ್ಯ ಸಂಬಂಧ ಅವಶ್ಯಕ ಮತ್ತು ಅನಿವಾರ್ಯ ಎಂದರು. ಹಾಗಂತ ಅದು ಒಂದೇ ಮಾರ್ಗದ ಟ್ರಾಫಿಕ್ ಅಲ್ಲ. ನಮ್ಮನ್ನು ಬಿಟ್ಟರೆ ನಿಮಗೆ ಸುದ್ದಿಗಳಿಲ್ಲ. ನೀವು ಕ್ರೀಡೆ, ಸಿನಿಮಾ ಎಂದು ಸುದ್ದಿ ಹಾಕಿದರೂ ಮೊದಲ ಪುಟದಲ್ಲಿ ನಾವೇ ಬೇಕು. ರಾಜಕಾರಣವೇ ಇಲ್ಲದ ದಿನವನ್ನು ಕಲ್ಪಿಸಿಕೊಳ್ಳಲೂ ಅಸಾಧ್ಯ. ಇಲ್ಲಿದಿದ್ದರೆ ವಾಹಿನಿಗಳ ಟಿಆರ್‌ಪಿ ಹಾಗೂ ರಾಜಕಾರಣಿಗಳ ಮಹತ್ವ ಕಡಿಮೆಯಾಗುತ್ತದೆ ಎಂದರು. ನಾವು ಹೇಳಿ ಮಾಡಿಸಿದ ಜೋಡಿ. ಒಟ್ಟಿಗೇ ಬಾಳಬೇಕೆಂದು ತಿಳಿಸಿದರು.

ಅಂತಃಕರಣದಿಂದ ಕೆಲಸ ಮಾಡಿ
ಕಾಲ ಬದಲಾಗಿದೆ. ತಂತ್ರಜ್ಞಾನ ಮುಂದುವರಿದಿದೆ. ಜ್ಞಾನ, ವಿಜ್ಞಾನ, ತಂತ್ರಜ್ಞಾನ, ಈಗ ತಂತ್ರಾಂಶ ಜ್ಞಾನ ವಾಗಿದೆ. ಡಿಜಿಟಲ್ ಪ್ರಪಂಚಕ್ಕೆ ಬಂದಿದ್ದೇವೆ. ಈ ಸಂದರ್ಭದಲ್ಲಿ ನಾವು ಕೆಲವು ಮೂಲಭೂತ ವಿಷಯ ಮರೆಯಬಾರದು. ತತ್ವಜ್ಞಾನದಿಂದ ತಂತ್ರಾಂಶ ಜ್ಞಾನಕ್ಕೆ ಬದಲಾವಣೆ ಆಗಿದೆ. ಆದರೆ ತತ್ವಜ್ಞಾನದ ಮಾರ್ಗದರ್ಶನ ಹಾಗೂ ಅದರ ಮಹತ್ವವನ್ನು ಮರೆಯಬಾರದು. ಖಾಸಗೀಕರಣ, ಉದಾರೀಕರಣ ಹಾಗೂ ಜಾಗತೀಕರಣವಾಗಿದೆ. ಇವುಗಳ ಮಧ್ಯೆ ಅಂತಃಕರಣವನ್ನು ಕಡಿಮೆಯಾಗಿದೆ. ಅಂತಃಕರಣವನ್ನು ಇಟ್ಟುಕೊಂಡು ನಾವು ಕೆಲಸ ಮಾಡಬೇಕು. ಬಡವರಿಗಾಗಿ, ಮನಮಿಡಿಯುವ ಕೆಲಸಗಳನ್ನು ಮಾಡಬೇಕು ಎಂದರು.

ಇದನ್ನೂ ಓದಿ | 40 ಪರ್ಸೆಂಟ್ ಕಮಿಷನ್‌ ಸಾಕ್ಷ್ಯವಿದ್ದರೆ ಬಹಿರಂಗಪಡಿಸಲಿ : ಈಶ್ವರಪ್ಪ ಸೇರಿ ಬಿಜೆಪಿ ನಾಯಕರ ಕಿಡಿ

Exit mobile version