Site icon Vistara News

Police medal |‌ ಅಪರಾಧ ನಿಯಂತ್ರಣಕ್ಕಾಗಿ ಪೊಲೀಸ್‌ ತಂತ್ರಜ್ಞಾನ ಬಲಪಡಿಸಲು ವಿಶೇಷ ಕಾರ್ಯಕ್ರಮ: ಸಿಎಂ ಬೊಮ್ಮಾಯಿ

karnataka state agrees to have one nation one police uniform concept

ಬೆಂಗಳೂರು: ಕಾನೂನು ಸುವ್ಯವಸ್ಥೆ ಕಾಪಾಡುವುದರ ಜತೆಗೆ ಅಪರಾಧ ನಿಯಂತ್ರಣ ಮಾಡುವುದು ಪೊಲೀಸರ ಜವಾಬ್ದಾರಿಯಾಗಿದೆ. ತಂತ್ರಜ್ಞಾನದ ಮೂಲಕ ಅಪರಾಧಗಳು ಹೆಚ್ಚಾಗುತ್ತಿವೆ. ಇವುಗಳನ್ನು ಬೇಧಿಸಲು ಅನುಕೂಲವಾಗುವಂತೆ ಪೊಲೀಸ್‌ ಇಲಾಖೆಯ ತಾಂತ್ರಿಕ ಕೌಶಲವನ್ನು ಹೆಚ್ಚಿಸಲು ಕ್ರಮ ಕೈಗೊಳ್ಳಲಾಗುವುದು ಎಂದು ಸಿಎಂ ಬಸವರಾಜ ಬೊಮ್ಮಾಯಿ ಹೇಳಿದರು. ಕರ್ನಾಟಕ ರಾಜ್ಯ ಪೊಲೀಸ್ ಇಲಾಖೆ ವತಿಯಿಂದ ಭಾನುವಾರ ಆಯೋಜಿಸಿದ್ದ ರಾಷ್ಟ್ರಪತಿಗಳ ಪೊಲೀಸ್ ಪದಕ ಪ್ರದಾನ (Police medal) ಸಮಾರಂಭ- 2022ರಲ್ಲಿ ಅವರು ಮಾತನಾಡಿದರು. ತಂತ್ರಜ್ಞಾನ ಹೆಚ್ಚಳ, ಪರಿಣಿತರ ಬಳಕೆ ಮಾಡಿಕೊಂಡು ಅಪರಾಧ ನಿಯಂತ್ರನ ಮಾಡಲು ಬೇಕಾದ ಅನುದಾನ ಮುಂದಿನ ಬಜೆಟ್‌ನಲ್ಲಿ ನೀಡಲಾಗುವುದು ಎಂದರು. ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್‌ ಅವರೂ ಉಪಸ್ಥಿತರಿದ್ದರು.

ಮಧ್ಯಮ ಹಂತದ ಪೊಲೀಸರಿಗೆ ವಿಶೇಷ ತರಬೇತಿ
ತಳ ಹಂತ ಪೊಲೀಸರು ಹಾಗೂ ಐಪಿಎಸ್ ಅಧಿಕಾರಿಗಳಿಗೆ ತರಬೇತಿ ಚೆನ್ನಾಗಿ ಆಗುತ್ತಿದೆ. ಆದರೆ, ಮಧ್ಯಮ ಹಂತದಲ್ಲಿ ಪೊಲೀಸರ ತರಬೇತಿ ಇನ್ನೂ ಪರಿಣಾಮಕಾರಿಯಾಗಿ ಆಗಬೇಕಿದೆ. ಇದಕ್ಕೆ ಪ್ರತ್ಯೇಕ ತರಬೇತಿ ಸಂಸ್ಥೆ, ಪಠ್ಯ ಹಾಗೂ ವಿವಿಧ ಕೋರ್ಸ್‌ಗಳ ಮೂಲಕ ಅವರು ದಕ್ಷತೆಯಿಂದ ಕರ್ತವ್ಯ ನಿರ್ವಹಿಸಲು ಸಹಾಯವಾಗುತ್ತದೆ. ಇದಕ್ಕಾಗಿ ರಾಷ್ಟ್ರೀಯ ರಕ್ಷಣಾ ಅಕಾಡೆಮಿ (ಎನ್‌ಡಿಎ) ಮಾದರಿಯಲ್ಲಿ ಮಧ್ಯಮ ಹಂತದ ಪೊಲೀಸರಿಗೆ ತರಬೇತಿ ನೀಡುವ ವ್ಯವಸ್ಥೆ ಜಾರಿಯಾಗಬೇಕು ಎಂದು ತಿಳಿಸಿದರು.

ಇದನ್ನೂ ಓದಿ | Future Leaders | ವಿಶ್ವಸಂಸ್ಥೆಯಲ್ಲಿ ಇಂಪ್ಯಾಕ್ಟ್ ಪ್ರಾಜೆಕ್ಟ್ ಮಂಡಿಸಲಿದ್ದಾರೆ ಬೆಂಗಳೂರಿನ 14 ವಿದ್ಯಾರ್ಥಿಗಳು

ರಾಜ್ಯದ ಪ್ರತಿ ಪ್ರದೇಶದಲ್ಲಿ ಎರಡು ಫಾರೆನ್ಸಿಕ್ ಲ್ಯಾಬ್
ಪೊಲೀಸ್ ವ್ಯವಸ್ಥೆಯನ್ನು ಬಹಳ ಆಧುನೀಕರಣ ಮಾಡಿದ್ದೇವೆ. ಫಾರೆನ್ಸಿಕ್ ಲ್ಯಾಬ್ ಆಧುನಿಕರಣ ಮಾಡಲಾಗಿದೆ. ಅಪರಾಧ ಶೋಧನೆಯಲ್ಲಿ ಆಧುನಿಕ ಫಾರೆನ್ಸಿಕ್ ಲ್ಯಾಬ್‌ನ ಅವಶ್ಯಕತೆಯಿದ್ದು, ಹುಬ್ಬಳ್ಳಿ ಮತ್ತು ಬಳ್ಳಾರಿಯಲ್ಲಿ ವಿಧಿ ವಿಜ್ಞಾನ ಪ್ರಯೋಗಾಲಯಗಳನ್ನು ಮಾಡಲಾಗಿದೆ. ರಾಜ್ಯದ ಪ್ರತಿಯೊಂದು ಪ್ರದೇಶದಲ್ಲಿ ಕನಿಷ್ಠ ಎರಡು ಫಾರೆನ್ಸಿಕ್ ಲ್ಯಾಬ್ ಸ್ಥಾಪಿಸಬೇಕು. ಶೀಘ್ರ ಅಪರಾಧ ಪತ್ತೆಗೆ ಈ ಕ್ರಮ ಆಗಲೇಬೇಕು ಎಂದರು.

ಪೊಲೀಸ್ ನೇಮಕಾತಿ ಅಪರಾಧ ತಡೆಯಲು ಕಠಿಣ ಕ್ರಮ
ಪೊಲೀಸ್ ನೇಮಕಾತಿಯಲ್ಲಿ ಆಗುತ್ತಿರುವ ಅಪರಾಧ ತಡೆಯಲು ಇನ್ನಷ್ಟು ಕನಿಷ್ಠ ಕ್ರಮ ಕೈಗೊಳ್ಳಲೇಬೇಕು. ಪೊಲಿಸ್ ನೇಮಕಾತಿಯಲ್ಲಿಯೇ ಅಕ್ರಮ ನಡೆದರೆ ಬೇರೆ ಅಪರಾಧ ತಡೆಯುವುದು ಸಾಧ್ಯವಿದೆಯೇ? ಈ ಬಗ್ಗೆ ಹಿರಿಯ ಪೊಲೀಸ್ ಅಧಿಕಾರಿಗಳು ಗಮನಹರಿಸಬೇಕು. ಅದಕ್ಕೆ ಬೇಕಾದ ಅಗತ್ಯ ಕ್ರಮ ತೆಗೆದುಕೊಳ್ಳಬೇಕೆಂದು ಅಧಿಕಾರಿಗಳಿಗೆ ಸೂಚಿಸಿದರು.

ದೇಶದಲ್ಲಿಯೇ ಕರ್ನಾಟಕ ಪೊಲೀಸ್ ನಂಬರ್ ಒನ್
ಪೊಲೀಸ್ ಸೇವೆ ವಿಶಿಷ್ಟ ಸೇವೆಯಾಗಿದ್ದು, ಅವರು ತಮ್ಮ ಬದುಕಿನಲ್ಲಿ ಬಹಳ ರಾಜಿ ಮಾಡಿಕೊಳ್ಳಬೇಕಾಗುತ್ತದೆ. ಹತ್ತು ಹಲವಾರು ಒತ್ತಡಗಳ ನಡುವೆ ಕೆಲಸ ಮಾಡಬೇಕಾಗುತ್ತದೆ. ಎಲ್ಲ ಒತ್ತಡಗಳ ನಡುವೆ ಕರ್ನಾಟಕ ಪೊಲಿಸ್ ಉತ್ತಮ ಕೆಲಸ ಮಾಡುತ್ತಿದೆ. ದೇಶದಲ್ಲಿಯೇ ಕರ್ನಾಟಕ ಪೊಲೀಸ್ ನಂಬರ್ ಒನ್ ಆಗಿದ್ದು, ಶ್ರೇಷ್ಠ ಸೇವೆಯನ್ನು ಸಲ್ಲಿಸುತ್ತಿದೆ ಎಂಬ ಹೆಮ್ಮೆ ಇದೆ ಎಂದು ಸಿಎಂ ಬಸವರಾಜ ಬೊಮ್ಮಾಯಿ ಹೇಳಿದರು.

ಪೊಲೀಸರಿಗೆ ಕಾನೂನು ತಂದೆ ಇದ್ದಂತೆ, ಕರ್ತವ್ಯ ತಾಯಿ ಇದ್ದಂತೆ. ಕರ್ನಾಟಕ ಪೊಲೀಸರು ಯಾವುದೇ ಹೊಸ ತಂತ್ರಜ್ಞಾನದಿಂದ ಹೊರಗುಳಿಯಬಾರದು. ಈ ನಿಟ್ಟಿನಲ್ಲಿ ಸುಧಾರಣಾ ಕ್ರಮಗಳನ್ನು ತೆಗೆದುಕೊಳ್ಳಬೇಕು. ಸುದೀರ್ಘ ಸೇವೆಯಲ್ಲಿ ರಾಷ್ಟ್ರಪತಿಗಳು ನಿಮ್ಮನ್ನು ಗುರುತಿಸಿರುವುದು ರಾಜ್ಯಕ್ಕೆ ಹೆಮ್ಮೆಯ ವಿಷಯ. ತಾವು ಉತ್ತಮ ಕೆಲಸ ಮಾಡಿದಾಗ ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ಗುರುತಿಸುತ್ತವೆ‌. ಪ್ರಶಸ್ತಿ ಪಡೆದವರೆಲ್ಲರೂ ಈ ಪದಕಗಳಿಗೆ ಅರ್ಹರಾಗಿದ್ದು, ಅಭಿನಂದನೆಗಳನ್ನು ಸಲ್ಲಿಸುವುದಾಗಿ ತಿಳಿಸಿದರು.

ಗೃಹ ಸಚಿವ ಆರಗ ಜ್ಞಾನೇಂದ್ರ, ಗೃಹ ಇಲಾಖೆ ಅಪರ ಮುಖ್ಯ ಕಾರ್ಯದರ್ಶಿ ರಜನೀಶ್ ಗೋಯಲ್, ಡಿಜಿಪಿ ಪ್ರವೀಣ್ ಸೂದ್ ಮತ್ತಿತರರು ಉಪಸ್ಥಿತರಿದ್ದರು.

ಇದನ್ನೂ ಓದಿ | Hoysala Police Corruption | ಮಧ್ಯರಾತ್ರಿ ಪಾರ್ಟಿ ಮುಗಿಸಿ ಬರುತ್ತಿದ್ದ ದಂಪತಿಯನ್ನು ತಡೆದು ಹಣ ಸುಲಿಗೆ, ಇಬ್ಬರು ಹೊಯ್ಸಳ ಪೊಲೀಸರು ಮನೆಗೆ!

Exit mobile version