ಬೆಂಗಳೂರು: ಮಾದಿಗ ಸಮುದಾಯಕ್ಕೆ ಒಳಮೀಸಲಾತಿ ಕಲ್ಪಿಸುವ ಕುರಿತು ಈಗಾಗಲೇ ಆಯೋಗ ವರದಿ ಸಲ್ಲಿಸಿದೆ. ಆದರೆ, ಅದನ್ನು ಯಾವ ರೀತಿ ನಿರ್ವಹಣೆ ಮಾಡಬೇಕು ಎಂಬುದನ್ನು ಪರಿಶೀಲಿಸಲಾಗುತ್ತಿದೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಶುಕ್ರವಾರ ಹೇಳಿದ್ದಾರೆ.
ನ್ಯಾಷನಲ್ ಇಂಟಲೆಕ್ಚುವಲ್ ಫೋರಂ ಮತ್ತು ಕರ್ನಾಟಕ ಇಂಟಲೆಕ್ಚುವಲ್ ಫೋರಂ ಬೆಂಗಳೂರಿನಲ್ಲಿ ಆಯೋಜಿಸಿದ್ದ 4ನೇ ವಿಶ್ವ ಮಾದಿಗ ದಿನಾಚರಣೆ ಹಾಗೂ ಮಾದಿಗ ಸಮುದಾಯದ ಚಿಂತಕರ ಮತ್ತು ಬುದ್ದಿಜೀವಿಗಳ ಕಾರ್ಯಾಗಾರವನ್ನು ಉದ್ಘಾಟಿಸಿ ಮಾತನಾಡಿದರು.
ಪರಿಶಿಷ್ಟರ ಕಲ್ಯಾಣಕ್ಕಾಗಿ ಸರಕಾರ ಹಲವಾರು ಕಾಯ್ರಕ್ರಮ ರೂಪಿಸುತ್ತಿದೆ. ಶೈಕ್ಷಣಿಕ, ಔದ್ಯೋಗಿಕವಾಗಿ ಅವಕಾಶ ಕೊಟ್ಟು ಅವರ ಶಕ್ತಿ ಹೆಚ್ಚಿಸಲು ಕ್ರಮ ವಹಿಸಲಾಗುತ್ತಿದೆ. ಇದರ ಜತೆಗೆ ಹೊಸ ಯೋಜನೆಗಳ ಕುರಿತಾಗಿ ಸಲಹೆಗಳನ್ನು ನೀಡಿದರೆ ಅದನ್ನು ಪೂರ್ಣ ಪ್ರಮಾಣದಲ್ಲಿ ಅನುಷ್ಠಾನಗೊಳಿಸಲಾಗುವುದು.
ಬದಲಾಗುತ್ತಿರುವ ವ್ಯವಸ್ಥೆಗೆ ತಕ್ಕಂತೆ ಸಮಾಜವನ್ನು ಬದಲಾಯಿಸುವ ಕೆಲಸ ಮಾಡಬೇಕಾಗಿದೆ. ಮಾದಿಗ ಸಮುದಾಯಕ್ಕೆ ಒಳಮೀಸಲಾತಿ ಕಲ್ಪಿಸುವ ಕುರಿತು ಈಗಾಗಲೇ ಆಯೋಗ ವರದಿ ಸಲ್ಲಿಸಿದೆ. ಆದರೆ, ಅದನ್ನು ಯಾವ ರೀತಿ ನಿರ್ವಹಣೆ ಮಾಡಬೇಕು ಎಂಬುದನ್ನು ಪರಿಶೀಲಿಸಲಾಗುತ್ತಿದೆ. ಈ ಕುರಿತು ಇಂಟಲೆಕ್ಚುವಲ್ ಫೋರಂನವರು ಮಾರ್ಗದರ್ಶನ ಮಾಡಿದರೆ ಸಾಮಾಜಿಕ ಸಾಮರಸ್ಯದೊಂದಿಗೆ ಸಮಸ್ಯೆ ಬಗೆಹರಿಸಿ ಸಮುದಾಯಕ್ಕೆ ನ್ಯಾಯ ಒದಗಿಸಲು ಸರಕಾರ ಬದ್ಧ.
ಇದನ್ನೂ ಓದಿ | 46% ಇರುವ ಯುವಕರೇ ದೇಶದ ಆಸ್ತಿ: CM ಬಸವರಾಜ ಬೊಮ್ಮಾಯಿ
ಆ ನಿಟ್ಟಿನಲ್ಲಿ ಸಮುದಾಯದವರು ಶಿಕ್ಷಣ ಪಡೆಯಬೇಕು. ಶಿಕ್ಷಣ ಪಡೆದರೆ ಅವಕಾಶಗಳು ಸಿಗುತ್ತವೆ. ಉದ್ಯೋಗ ಲಭ್ಯವಾಗುತ್ತದೆ. ಇದರಿಂದ ಸ್ವಾವಲಂಬಿ ಮತ್ತು ಸ್ವಾಭಿಮಾನದ ಬದುಕು ಸಾಧ್ಯವಾಗುತ್ತದೆ ಎಂದರು.
ಬಸವಮೂರ್ತಿ ಮಾದಾರ ಚೆನ್ನಯ್ಯ ಸ್ವಾಮೀಜಿ, ಷಡಕ್ಷರ ಮುನಿ ದೇಶಿಕೇಂದ್ರ ಸ್ವಾಮೀಜಿ, ಪೂರ್ಣಾನಂದ ಭಾರತಿ ಸ್ವಾಮೀಜಿ, ಬಸವ ಹರಳಯ್ಯ ಸ್ವಾಮೀಜಿ, ಆನಂದ ಸ್ವಾಮೀಜಿ, ಕೇಂದ್ರ ಸಚಿವ ಎ. ನಾರಾಯಣಸ್ವಾಮಿ, ಜಲ ಸಂಪನ್ಮೂಲ ಸಚಿವ ಗೋವಿಂದ ಕಾರಜೋಳ, ಲೋಕೋಪಯೋಗಿ ಇಲಾಖೆ ಅಪರ ಮುಖ್ಯ ಕಾರ್ಯದರ್ಶಿ ಅನಿಲ್ ಕುಮಾರ, ಮಾಜಿ ಸಚಿವ ಎಚ್ ಆಂಜನೇಯ, ರಾಜ್ಯ ಸರ್ಕಾರದ ನಿವೃತ್ತ ಮುಖ್ಯ ಕಾರ್ಯದರ್ಶಿ ರತ್ನಪ್ರಭಾ ಮತತ್ತಿತರರು ಉಪಸ್ಥಿತರಿದ್ದರು.
ಇದನ್ನೂ ಓದಿ | ಕರ್ನಾಟಕಕ್ಕೆ ಯೂರಿಯಾ ಕೊರತೆ ಇಲ್ಲ: ಸಿಎಂ ಬಸವರಾಜ ಬೊಮ್ಮಾಯಿ