ಬೆಂಗಳೂರು: ಕನ್ನಡ ನಾಡಿಗೆ ಜ್ಞಾನಪೀಠ ಪ್ರಶಸ್ತಿ, ಅಪರೂಪದ ಸಾಹಿತ್ಯವನ್ನು ನೀಡಿದವರಿಗೆ ಹಾಗೂ ಸಂಗೀತ ಕ್ಷೇತ್ರದಲ್ಲಿ ಸಾಧನೆ ಮಾಡಿದವರಿಗೆ ಬಯಲು ವಸ್ತು ಸಂಗ್ರಹಾಲಯ (Open Air Museum) ಸ್ಥಾಪಿಸಿ ಅವರ ಪ್ರತಿಮೆಗಳನ್ನು ಅಳವಡಿಸುವ ಬಗ್ಗೆ ಚಿಂತನೆ ಮಾಡಲಾಗುವುದು ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಿಳಿಸಿದರು.
ನಗರದಲ್ಲಿ ಗುರುವಾರ ಆಯೋಜಿಸಿದ್ದ ಸುಗಮ ಸಂಗೀತ ಗಾಯಕ ಶಿವಮೊಗ್ಗ ಸುಬ್ಬಣ್ಣ ಅವರ ನುಡಿನಮನ, ಮೊದಲು ಮಾನವನಾಗು ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿ, ಸಾಮಾನ್ಯವಾಗಿ ರಾಜಕಾರಣಿಗಳ ಪ್ರತಿಮೆಗಳನ್ನು ಸ್ಥಾಪಿಸಲಾಗುತ್ತದೆ. ಆದರೆ ಸಾಹಿತಿಗಳ ಪ್ರತಿಮೆ ಅಪರೂಪ. ವಸ್ತು ಸಂಗ್ರಹಾಲಯದಲ್ಲಿ ಶಿವಮೊಗ್ಗ ಸುಬ್ಬಣ್ಣ ಅವರಿಗೆ ವಿಶೇಷವಾದ ಸ್ಥಾನವಿರಲಿದೆ. ವಿಭಿನ್ನ ವ್ಯಕ್ತಿಯಾಗಿದ್ದ ಸುಬ್ಬಣ್ಣ ಅವರ ವ್ಯಕ್ತಿತ್ವ, ಧ್ವನಿ, ಆತ್ಮೀಯತೆ, ಚಿಂತನೆ, ತತ್ವಾದರ್ಶಗಳು ತಮ್ಮದೇ ಆದ ಮೆರುಗನ್ನು ಹೊಂದಿವೆ. ಇನ್ನೊಬ್ಬ ಸುಬ್ಬಣ್ಣ ಇರಲು ಸಾಧ್ಯವಿಲ್ಲ. ಹಾಗಾಗಿ ಸುಬ್ಬಣ್ಣ ಅವರನ್ನು ಎಲ್ಲರೂ ಚಿರಕಾಲ ಸ್ಮರಿಸುವ ಕೆಲಸವನ್ನು ಸರ್ಕಾರ ಮಾಡಲಿದೆ ಎಂದರು.
ಇದನ್ನೂ ಓದಿ | J.P. Nadda | ಕರ್ನಾಟಕದಲ್ಲಿ ಕಾಂಗ್ರೆಸ್ ಉಸಿರಾಟವನ್ನು ನಿಲ್ಲಿಸಿ: ಕೊಪ್ಪಳದಲ್ಲಿ ಬಿ.ಎಸ್. ಯಡಿಯೂರಪ್ಪ ಕರೆ
ಗಾಯನದ ಉತ್ಕೃಷ್ಟತೆ
ಶಿಶುನಾಲ ಶರೀಫರು ಧರ್ಮದ ಚೌಕಟ್ಟನ್ನು ಮೀರಿ ತಮ್ಮ ತತ್ವಗಳನ್ನು ಮನಮುಟ್ಟುವಂತೆ ಹೇಳುತ್ತಿದ್ದ ಕವಿ. ಅವರು ದಿನನಿತ್ಯ ಮಾಡುವ ಕರ್ಮಗಳಲ್ಲಿ ತತ್ವಗಳನ್ನು ಅಳವಡಿಸಿದ್ದಾರೆ. ತತ್ವ ಮತ್ತು ಮಾರ್ಮಿಕತೆಗೆ ವಿಶೇಷ ಭಾವನೆಗಳನ್ನು ನೀಡಿದವರು ಶಿವಮೊಗ್ಗ ಸುಬ್ಬಣ್ಣ. ತಮ್ಮ ಭಾಗದಲ್ಲಿ ಪ್ರಸಿದ್ಧರಾಗಿದ್ದ ಶರೀಫರನ್ನು ಇಡೀ ರಾಜ್ಯ ಮತ್ತು ದೇಶಕ್ಕೆ ಶಿಶುನಾಳ ಶರೀಫರನ್ನು ಪರಿಚಯಿಸಿದ್ದು ಸುಬ್ಬಣ್ಣ. ಸಂತ ಶಿಶುನಾಳ ಶರೀಫರ ತತ್ವ ಹಾಗೂ ಸುಬ್ಬಣ್ಣನವರ ಗಾಯನದ ಉತ್ಕಷ್ಠತೆ ಅನನ್ಯವಾದುದು. ಇಂಥವರನ್ನು ನಾವು ಉಳಿಸಿಕೊಂಡು, ಚಿರಸ್ಮರಣೀಯವಾಗಿ ಇಟ್ಟುಕೊಂಡು ಮುಂದಿನ ಜನಾಂಗಕ್ಕೆ ಪರಿಚಯಿಸುವುದು ನಮ್ಮೆಲ್ಲರ ಕರ್ತವ್ಯ. ನಾನು ಸುಬ್ಬಣ್ಣ ಅವರ ಅಭಿಮಾನಿಯಾಗಿದ್ದು, ಕನ್ನಡ ನಾಡಿನ ಅದ್ಭುತ ಸಾಹಿತ್ಯ, ಸಂಗೀತದ ರಕ್ಷಣೆಗೆ ಸದಾ ಬದ್ಧ ಎಂದು ತಿಳಿಸಿದರು.
ಸಂಗೀತದ ಮೂಲಕ ಜನಮನದಲ್ಲಿ ಚಿರಸ್ಥಾಯಿ
ದ.ರಾ.ಬೇಂದ್ರೆ, ವಿ.ಕೃ.ಗೊಕಾಕ್, ಬಸವರಾಜ ರಾಜಗುರು, ಮಲ್ಲಿಕಾರ್ಜುನ ಮನ್ಸೂರು, ಗಂಗೂಬಾಯಿ ಹಾನಗಲ್ , ಕನಕದಾಸರು ಕೂಡ ನಮ್ಮ ಕ್ಷೇತ್ರದವರು. ಸಂಗೀತ ಸಾಹಿತ್ಯ ಕ್ಷೇತ್ರಕ್ಕೆ ನಮ್ಮ ಸರ್ಕಾರ ಏನಾದರೂ ಕೊಡುಗೆ ನೀಡುತ್ತದೆ. ಸುಬ್ಬಣ್ಣ ಅವರ ಹಾಡು ಸದಾಕಾಲ ಜೀವಂತವಾಗಿರುತ್ತದೆ. ಸ್ವಾಮಿ ವಿವೇಕಾನಂದರು ಹೇಳಿದಂತೆ ಸಾಧಕನಿಗೆ ಸಾವು ಅಂತ್ಯವಲ್ಲ, ಸಾವಿನ ನಂತರವೂ ಬದುಕುವವನು ಸಾಧಕ. ಸುಬ್ಬಣ್ಣನವರು ತಮ್ಮ ಸಂಗೀತ ಹಾಗೂ ಸಾಧನೆಗಳ ಮೂಲಕ ಜನಮನದಲ್ಲಿ ಚಿರಸ್ಥಾಯಿಯಾಗಿರುತ್ತಾರೆ ಎಂದು ಹೇಳಿದರು.
ಈ ಸಂದರ್ಭದಲ್ಲಿ ಕಂದಾಯ ಸಚಿವ ಆರ್. ಅಶೋಕ್, ಸಾಹಿತಿ ಚಂದ್ರಶೇಖರ ಕಂಬಾರ, ಕವಿ ಎಚ್.ಎಸ್. ವೆಂಕಟೇಶ ಮೂರ್ತಿ, ಲಹರಿ ವೇಲು ಹಾಗೂ ಮತ್ತಿತರರು ಹಾಜರಿದ್ದರು.
ಇದನ್ನೂ ಓದಿ | ಬಿ.ಎಸ್. ಯಡಿಯೂರಪ್ಪ ನಮ್ಮ ಪಿತಾಮಹ: ಹಾಡಿ ಹೊಗಳಿದ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ. ನಡ್ಡಾ