ಬೆಂಗಳೂರು: ಕಬ್ಬನ್ ಪಾರ್ಕ್‌ನಲ್ಲಿ ಮೈಗೆ ಮೈ ಒತ್ತಿಕೊಂಡು ಕೂರುವ ಪ್ರೇಮಿಗಳಿಗೆ ಆಡಳಿತ ಮಂಡಳಿ ಶಾಕ್ ನೀಡಿದೆ. ಇನ್ನು ಮುಂದೆ ಪ್ರೇಮಿಗಳು ಇಲ್ಲಿ ಮನಸ್ಸಿಗೆ ಬಂದಂತೆ ವರ್ತಿಸುವಂತಿಲ್ಲ.
ಪ್ರೇಮಿಗಳ ವಿಹಾರ ತಾಣವಾಗಿದ್ದ ಕಬ್ಬನ್ ಪಾರ್ಕ್‌ನಲ್ಲಿ ಇಷ್ಟು ದಿನ ಮರದ ಬುಡದಲ್ಲಿ, ಮರದ ಮೇಲೆ, ಬಂಡೆಗಳ ಮರೆಯಲ್ಲಿ ಕುಳಿತುಕೊಳ್ಳುತ್ತಿದ್ದ ಪ್ರೇಮಿಗಳು ಕದ್ದು ಮುಚ್ಚಿ ಕುಚ್ಚಿಕೂ ನಡೆಸುತ್ತಿದ್ದರು. ಸದ್ಯ ಪಾರ್ಕ್‌ನಲ್ಲಿ ಮೈಮರೆತು ವರ್ತಿಸುವ ಜೋಡಿಗಳ ಮೇಲೆ ಕಣ್ಣಿಟ್ಟಿರುವ ಆಡಳಿತ ಮಂಡಳಿ, ಅಸಭ್ಯವಾಗಿ ವರ್ತಿಸದಂತೆ ಮೈಕ್‌ನಲ್ಲಿ ಅನೌನ್ಸ್ ಮಾಡಿಸುತ್ತಿದೆ.
ಸಾರ್ವಜನಿಕ ಉದ್ಯಾನದಲ್ಲಿ ಪ್ರೇಮಿಗಳು ದೂರ ದೂರ ಕುಳಿತು ಮಾತನಾಡಬೇಕು; ಮೈಗೆ ಮೈ ತಾಗಿಸಿ ಕುಳಿತಿದ್ದರೆ ಕೂಡಲೇ ಸೆಕ್ಯುರಿಟಿ ಹತ್ತಿರ ಬಂದು ಲಾಠಿ ಝಳಪಿಸಲಿದ್ದಾರೆ. ಇಲ್ಲಿ ಬರುವ ಹಲವು ಜೋಡಿಗಳು ಅಸಭ್ಯವಾಗಿ ವರ್ತಿಸುತ್ತಿದ್ದಾರೆ ಎಂದು ಕಬ್ಬನ್ ಪಾರ್ಕ್‌ಗೆ ಬರುವ ಕುಟುಂಬಗಳು ದೂರು ನೀಡಿರುವ ಹಿನ್ನೆಲೆಯಲ್ಲಿ ಈ ಕ್ರಮ ಕೈಗೊಳ್ಳಲಾಗಿದೆ.
ಸದ್ಯ ಕಬ್ಬನ್ ಪಾರ್ಕ್ ಪ್ರವೇಶಿಸಲು ಯಾವುದೇ ಪ್ರವೇಶ ಶುಲ್ಕ ಇಲ್ಲವಾದ್ದರಿಂದ ಬೆಂಗಳೂರಿನ ಉದ್ಯಾನ ವಿಹಾರ ಪ್ರೇಮಿಗಳು ಇಲ್ಲಿಗೆ ಆಗಮಿಸುತ್ತಾರೆ. ಪ್ರೇಮಿಗಳಿಗೆ ಕೂಡ ಸೇರಲು ಇದು ಸುರಕ್ಷಿತ ತಾಣವಾಗಿದೆ. ಹಗಲು ಹೊತ್ತು ಜೋಡಿಗಳು ಇಲ್ಲಿ ವಿಹರಿಸುವುದನ್ನು ಕಾಣಬಹುದು. ಕೆಲವೊಮ್ಮೆ ಇವರ ಸರಸ ಸಲ್ಲಾಪ ಸಭ್ಯತೆಯ ಎಲ್ಲೆ ಮೀರುವುದನ್ನು ಇಲ್ಲಿ ಬರುವ ಸಭ್ಯ ವಿಹಾರಿಗಳು ಸಹಿಸಿಕೊಂಡಿದ್ದರು. ಇದೀಗ ದೂರು ನೀಡಿದ್ದಾರೆ.
ಸದ್ಯ ಇಂಥದ್ದು ಕಂಡರೆ ಸೆಕ್ಯುರಿಟಿಯವರು ಅನೌನ್ಸ್ ಮಾಡುತ್ತಿದ್ದು, ನಂತರವೂ ಯಾರಾದರೂ ಅಸಭ್ಯವಾಗಿ ವರ್ತಿಸಲು ಮುಂದಾದರೆ ಅಂತಹವರನ್ನು ಕಬ್ಬನ್ ಪಾರ್ಕ್‌ನಿಂದ ಹೊರಗಡೆ ಕಳಿಸಲಾಗುತ್ತಿದೆ. ಇದರ ನಡುವೆ ಕೆಲವು ಟ್ರಾನ್ಸ್‌ಜೆಂಡರ್ ಸಮುದಾಯದ ವ್ಯಕ್ತಿಗಳು ಕೂಡ ಪಾರ್ಕ್ ಅನ್ನು ಅಸಭ್ಯ ಚಟುವಟಿಕೆ ನಡೆಸಲು ಬಳಸಿಕೊಳ್ಳುತ್ತಿದ್ದಾರೆ ಎಂಬ ದೂರುಗಳಿವೆ.
ಇದನ್ನೂ ಓದಿ: ಕಬ್ಬನ್ ಪಾರ್ಕ್‌ಗೆ ಹೋಗುವವರೇ ಎಚ್ಚರ; ಪೊಲೀಸ್ ವೇಷದಲ್ಲಿದ್ದು ಹಣ ದೋಚ್ತಾರೆ ಖದೀಮರು !