ರಾಯಚೂರು: ರಾಯಚೂರಿನಲ್ಲಿ ಇಂಡಿಯನ್ ಗ್ಯಾಸ್ ಸಿಲಿಂಡರ್ ಸ್ಫೋಟಗೊಂಡಿದ್ದು, ಮೂವರಿಗೆ ಗಂಭೀರ ಗಾಯಗಳಾಗಿವೆ. ಪಟ್ಟಣದ ನೇತಾಜಿ ನಗರದ ಮನೆಯೊಂದರಲ್ಲಿ ಈ ಅವಘಡ ಸಂಭವಿಸಿದೆ.
ಸಿಲಿಂಡರ್ ಸ್ಫೋಟವಾದ ದೃಶ್ಯ ಸಿಸಿಟಿವಿ ಕ್ಯಾಮರಾದಲ್ಲಿ ಸೆರೆಯಾಗಿದ್ದು, ಸ್ಫೋಟದ ತೀವ್ರತೆಗೆ ಗಾಳಿಯಲ್ಲಿ ಮಹಿಳೆಯೊಬ್ಬರು ಗಾಳಿಯಲ್ಲಿ ಹಾರಿ ನೆಲಕಚ್ಚಿರುವುದು ಕಂಡುಬಂದಿದೆ. ಶಂಶುದ್ದೀನ್ ಎಂವವರ ಮನೆಯಲ್ಲಿ ಸಿಲಿಂಡರ್ ಸ್ಫೋಟವಾಗಿದೆ. ಮನೆಯಲ್ಲಿದ್ದ ಅಂಜುಮ್, ನಪೀಜಾ ಬಾನು ಹಾಗೂ ಪದ್ಮಾವತಿ ಎಂಬವರು ಗಾಯಗೊಂಡಿದ್ದಾರೆ.
ಗಾಯಾಳುಗಳಿಗೆ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಸಿಲಿಂಡರ್‌ನಲ್ಲಿ ಸೇಫ್ಟಿ ಪಿನ್ ಇಲ್ಲದ ಪರಿಣಾಮ ಸ್ಫೋಟಗೊಂಡಿದೆ. ಏಜೆನ್ಸಿಯವರು ನಿರ್ಲಕ್ಷ್ಯ ವಹಿಸಿದ್ದಾರೆ ಎಂದು ಮನೆಯವರು ಆರೋಪಿಸಿದ್ದಾರೆ. 10 ದಿನಗಳ ಹಿಂದೆ ಗ್ಯಾಸ್ ಡೆಲಿವರಿ ಮಾಡಲಾಗಿತ್ತು. ಗ್ಯಾಸ್ ಬದಲಿಸಲು ಮುಂದಾದಾಗ ಸ್ಫೋಟ ಸಂಭವಿಸಿದೆ. ಮನೆಯಲ್ಲಿದ್ದ ವಸ್ತುಗಳು ಛಿದ್ರ ಛಿದ್ರವಾಗಿವೆ. ನೇತಾಜಿ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ನಡುರಸ್ತೆಯಲ್ಲೇ ಹೊತ್ತಿ ಉರಿದ ಸರಕು ತುಂಬಿದ್ದ ಲಾರಿ
ಬೆಂಗಳೂರು: ಬೆಂಗಳೂರಿನ ನಾಗವಾರ ರಿಂಗ್ ರಸ್ತೆಯಲ್ಲಿ ಸರಕು ತಬಿದ್ದ ಲಾರಿಯೊಂದು ಇದ್ದಕ್ಕಿದ್ದಂತೆ ಹೊತ್ತಿ ಉರಿದ ಘಟನೆ ನಡೆದಿದೆ.
ತಡರಾತ್ರಿ 2 ಗಂಟೆ ಸುಮಾರಿಗೆ ಘಟನೆ ನಡೆದಿದೆ. ರಸ್ತೆಯಲ್ಲಿ ಸಾಗುತ್ತಿದ್ದ ಲಾರಿಯ ಹಿಂಬದಿ ಬೆಂಕಿ ಇದ್ದುದನ್ನು ಕಂಡು ಸ್ಥಳೀಯರು ಚಾಲಕನ ಗಮನಕ್ಕೆ ತಂದು ಲಾರಿಯನ್ನು ನಿಲ್ಲಿಸಿದ್ದರು. ಅದೃಷ್ಟವಶಾತ್ ಚಾಲಕ ಪ್ರಾಣಾಪಾಯದಿಂದ ಪಾರಾಗಿದ್ದಾನೆ. ಕ್ಷಣಾರ್ಧದಲ್ಲಿ ಲಾರಿಯನ್ನು ಬೆಂಕಿಯ ಕೆನ್ನಾಲಿಗೆ ಆವರಿಸಿದೆ. ಬಳಿಕ ಅಗ್ನಿಶಾಮಕ ದಳಕ್ಕೆ ಮಾಹಿತಿ ನೀಡಿದ್ದು, ಸ್ಥಳಕ್ಕೆ ಆಗಮಿಸಿದ ಅಗ್ನಿಶಾಮಕ ಸಿಬ್ಬಂದಿ ಬೆಂಕಿ ನಂದಿಸಿದ್ದಾರೆ. ಲಾರಿಯಲ್ಲಿ ಸ್ಕ್ರಾಪ್ ತುಂಬಿತ್ತು.
ಇದನ್ನೂ ಓದಿ: Viral Video: ಭಾರಿ ಬೆಂಕಿಯಿಂದ ಹೊತ್ತಿ ಉರಿದ ಸ್ಲಮ್ ಏರಿಯಾ; ಕೈಯಿಗೆ ಸಿಕ್ಕಿದ್ದನ್ನೆಲ್ಲ ಎತ್ತಿಕೊಂಡು ಓಡಿದ ಜನ