Site icon Vistara News

DCET 2024 : ಡಿಸಿಇಟಿ ಫಲಿತಾಂಶ ಪ್ರಕಟಿಸಿದ ಕರ್ನಾಟಕ ಪರೀಕ್ಷಾ ಪ್ರಾಧಿಕಾರ

DCET 2024

ಬೆಂಗಳೂರು: ಡಿಸಿಇಟಿ-2024ರ (DCET 2024) ಪರೀಕ್ಷೆ ಫಲಿತಾಂಶವನ್ನು (Result) ಕೆಇಎ (KEA) ಶನಿವಾರ ಮಧ್ಯಾಹ್ನ ತನ್ನ ವೆಬ್ ಸೈಟಿನಲ್ಲಿ ಪ್ರಕಟಿಸಿದೆ. ಒಟ್ಟು 17,483 ಅಭ್ಯರ್ಥಿಗಳು ಪರೀಕ್ಷೆ ತೆಗೆದುಕೊಂಡಿದ್ದರು. ಡಿಪ್ಲೊಮಾ ಪರೀಕ್ಷೆಯಲ್ಲಿ ನಿಗದಿತ ಅರ್ಹತೆ ಹೊಂದಿದ್ದು, ಡಿಸಿಇಟಿ ಪರೀಕ್ಷೆಗೆ ಹಾಜರಾಗಿ ರ‍್ಯಾಂಕ್ ಪ್ರಕಟವಾಗಿರದಿದ್ದರೆ ಅಂತಹ ಅಭ್ಯರ್ಥಿಗಳು ಡಿಪ್ಲೊಮಾ ಅಂಕ ಮತ್ತು ಅಂಕಪಟ್ಟಿಯನ್ನು ಪಿಡಿಎಫ್ ಫಾರ್ಮ್ಯಟ್‌ನಲ್ಲಿ ಪ್ರಾಧಿಕಾರದ ಇಮೇಲ್ ಸಲ್ಲಿಸಿದಲ್ಲಿ ಅರ್ಹತೆಯನ್ನು ಪರಿಶೀಲಿಸಿ, ನಿಯಮಾನುಸಾರ ರ‍್ಯಾಂಕ್ ನೀಡಲಾಗುತ್ತದೆ.

ಡಿಸಿಇಟಿ: ಜು.2ರಿಂದ 4ರವರೆಗೆ ದಾಖಲಾತಿ ಪರಿಶೀಲನೆ

ಬೆಂಗಳೂರು: ಮೂರನೇ ಸೆಮಿಸ್ಟರ್ ಇಂಜಿನಿಯರಿಂಗ್ ಕೋರ್ಸುಗಳ ಪ್ರವೇಶಾತಿಗೆ ಹಾಗು ಮೊದಲನೇ ವರ್ಷದ ಆರ್ಕಿಟೆಕ್ಚರ್ ಕೋರ್ಸಿಗೆ ಅರ್ಹತೆಯನ್ನು ಪಡೆಯುವುದಕ್ಕಾಗಿ ಜು.2ರಿಂದ 4ವರೆಗೆ ಸರ್ಕಾರಿ ಮತ್ತು ಅನುದಾನಿತ ಪಾಲಿಟೆಕ್ನಿಕ್ ಕಾಲೇಜುಗಳಲ್ಲಿ ಡಿಸಿಇಟಿ ರ‍್ಯಾಂಕ್‌ ಪಡೆದ ಅಭ್ಯರ್ಥಿಗಳ ದಾಖಲೆಗಳ ಪರಿಶೀಲನೆ ನಡೆಸಲಾಗುತ್ತದೆ ಎಂದು ಕರ್ನಾಟಕ ಪರೀಕ್ಷಾ ಪ್ರಾಧಿಕಾರದ ಕಾರ್ಯನಿರ್ವಾಹಕ ನಿರ್ದೇಶಕ ಎಚ್. ಪ್ರಸನ್ನ ತಿಳಿಸಿದ್ದಾರೆ.

ದಾಖಲಾತಿ ಪರಿಶೀಲನೆ ನಡೆಸುವ ಕಾಲೇಜುಗಳ ಪಟ್ಟಿಯನ್ನು ಕೆಇಎ ವೆಬ್ ಸೈಟ್ ನಲ್ಲಿ ಪ್ರಕಟಿಸಿದ್ದು, ಅಭ್ಯರ್ಥಿಗಳು ತಮಗೆ ಹತ್ತಿರ ಇರುವ ಯಾವುದಾದರೊಂದು ಕಾಲೇಜಿಗೆ ಖುದ್ದು ಹೋಗಬೇಕು. ಆನ್ ಲೈನ್ ಅರ್ಜಿ ಸಲ್ಲಿಸುವಾಗ ಕೋರಿರುವ ಕ್ಲೇಮುಗಳಿಗೆ ಪೂರಕವಾದ ಎಲ್ಲಾ ಶೈಕ್ಷಣಿಕ ಮೂಲ ದಾಖಲೆಗಳನ್ನು ಮತ್ತು ವಿಶೇಷ ಪ್ರವರ್ಗದ (ಎನ್ ಸಿಸಿ, ಕ್ರೀಡೆ, ಸೈನಿಕರು, ಮಾಜಿ ಸೈನಿಕರು, ಸಿಎಪಿಎಫ್, ಮಾಜಿ-ಸಿಎಪಿಎಫ್- ಕ್ಲೇಮ್ ಮಾಡಿದ್ದಲ್ಲಿ ಮಾತ್ರ ಅರ್ಹತೆ) ಪ್ರಮಾಣ ಪತ್ರಗಳನ್ನು ಕಡ್ಡಾಯವಾಗಿ ತೆಗೆದುಕೊಂಡು ಹೋಗಬೇಕು.

ಇದನ್ನೂ ಓದಿ: DCET 2024 : ಡಿಸಿಇಟಿಯಲ್ಲಿ ರ‍್ಯಾಂಕ್‌ ಪಡೆದ ವಿಕಲ ಚೇತನರಿಗೆ ಜುಲೈ 1ರಂದು ವೈದ್ಯಕೀಯ ತಪಾಸಣೆ

ಯುಜಿಸಿಇಟಿ ದಾಖಲೆಗಳ ಆನ್ ಲೈನ್ ಪರಿಶೀಲನೆ; ವೆಬ್‌ಸೈಟ್ ನಲ್ಲಿ ಮಾಹಿತಿ ಲಭ್ಯ

ಎಂಜಿನಿಯರಿಂಗ್, ವೈದ್ಯಕೀಯ ಸೇರಿದಂತೆ ಇನ್ನಿತರ ವೃತ್ತಿಪರ ಕೋರ್ಸ್ ಸೇರಲು ಬಯಸಿ ಅಭ್ಯರ್ಥಿಗಳು ಯುಜಿಸಿಇಟಿ-2024 ಆನ್‌ಲೈನ್ ಅರ್ಜಿಯಲ್ಲಿ ಕ್ಲೇಮ್ ಮಾಡಿದ್ದ ವಿವಿಧ ಮೀಸಲಾತಿಗಳನ್ನು
ಪರಿಗಣಿಸಿ ಆನ್‌ಲೈನ್ ಮೂಲಕ ಪರಿಶೀಲನೆ ನಡೆಸಿದ್ದು, ಅದರ ಮಾಹಿತಿಯನ್ನು ಕರ್ನಾಟಕ ಪರೀಕ್ಷಾ ಪ್ರಾಧಿಕಾರದ ವೆಬ್ ಸೈಟ್‌ನಲ್ಲಿ ಪ್ರಕಟಿಸಿದೆ.

ಅಭ್ಯರ್ಥಿಗಳು ಆನ್‌ಲೈನ್ ಅರ್ಜಿಯಲ್ಲಿ ನಮೂದಿಸಿದ SATS (ಸ್ಯಾಟ್ಸ್) ಸಂಖ್ಯೆ ಆಧರಿಸಿ ಅಭ್ಯರ್ಥಿಗಳ ವ್ಯಾಸಂಗ, ಕನ್ನಡ ಮಾಧ್ಯಮ, ಗ್ರಾಮೀಣ ವ್ಯಾಸಂಗದ ವಿವರಗಳನ್ನು ಪರಿಶೀಲಿಸಲಾಗಿದೆ. ಅದೇ ರೀತಿಯಾಗಿ, RD (ಆರ್‌ಡಿ) ಸಂಖ್ಯೆ ಆಧರಿಸಿ ಮೀಸಲಾತಿ (ಎಸ್‌ಸಿ, ಎಸ್‌ಟಿ, ಪ್ರವರ್ಗ-1, 2ಎ, 2ಬಿ, 3ಎ, 3ಬಿ) 371(ಜೆ), ಧಾರ್ಮಿಕ ಅಲ್ಪಸಂಖ್ಯಾತ, ಎನ್‌ಸಿಎಲ್‌ಸಿ (Non Creamy Layer Certificate) ಮತ್ತು ಇತರೆ ಮಾಹಿತಿಯನ್ನು ಆಯಾ ಇಲಾಖೆಯ ವೆಬ್‌ಸರ್ವೀಸ್ ಮೂಲಕ ಪರಿಶೀಲಿಸಲಾಗಿದೆ ಎಂದು ಕೆಇಎ ಕಾರ್ಯನಿರ್ವಾಹಕ ನಿರ್ದೇಶಕ ಎಚ್ ಪ್ರಸನ್ನ ಶನಿವಾರ ತಿಳಿಸಿದ್ದಾರೆ. ಅರ್ಹತಾ ಕಂಡಿಕೆ ಇ, ಎಫ್, ಜಿ, ಹೆಚ್ ಮತ್ತು ಒ ಕ್ಲಾಸ್ ಗಳಿಗೆ ಅನ್ವಯಿಸುವಂತೆ ಆಯಾ ಇಲಾಖೆಯವರು ಪರಿಶೀಲನೆ ನಂತರ ನೀಡಿದ ಅರ್ಹತೆಯನ್ನು ಪರಿಗಣಿಸಲಾಗಿದೆ ಎಂದು ಅವರು ಹೇಳಿದ್ದಾರೆ.

SATS ಮತ್ತು RD ಸಂಖ್ಯೆ ಆಧರಿಸಿ ಮಾಡಲಾಗಿರುವ ಪರಿಶೀಲನೆಯ ವಿವರಗಳನ್ನು ಪ್ರಾಧಿಕಾರದ ವೆಬ್‌ಸೈಟಿನ ಲಿಂಕ್‌ನಲ್ಲಿ ನೀಡಲಾಗಿದೆ. ಅಭ್ಯರ್ಥಿಗಳು ನಿಗದಿತ ಲಿಂಕ್‌ನಲ್ಲಿ ತಮ್ಮ ಅರ್ಜಿ ಸಂಖ್ಯೆ ಮತ್ತು ಜನ್ಮ ದಿನಾಂಕ ನಮೂದಿಸಿ, ವಿವರಗಳನ್ನು ನೋಡಬಹುದು. ವೆರಿಫಿಕೇಶನ್ ಸ್ಲಿಪ್ ಡೌನ್‌ಲೋಡ್ ಮಾಡಿಕೊಳ್ಳಲು ಪ್ರಾಧಿಕಾರದ ವೆಬ್‌ಸೈಟಿನಲ್ಲಿ ಲಿಂಕ್‌ ಅನ್ನು ಸದ್ಯದಲ್ಲಿಯೇ ಸಕ್ರಿಯಗೊಳಿಸಲಾಗುವುದು ಎಂದು ಅವರು ತಿಳಿಸಿದ್ದಾರೆ.

ಮುಂದಿನ ಹಂತಗಳು:

ಅಭ್ಯರ್ಥಿಗಳು ಪ್ರಕಟಿಸಲಾಗುವ ವೇಳಾಪಟ್ಟಿಯನುಸಾರ ವೆರಿಫಿಕೇಶನ್ ಸ್ಲಿಪ್ ಡೌನ್‌ಲೋಡ್ ಮಾಡಿಕೊಳ್ಳಬೇಕು; ಆದ್ಯತಾ ಕ್ರಮದಲ್ಲಿ ಆಸಕ್ತಿ ಇರುವ ಕಾಲೇಜು ಮತ್ತು ಕೋರ್ಸುಗಳ ಪಟ್ಟಿ ಸಿದ್ದಪಡಿಸಿಟ್ಟುಕೊಳ್ಳಬೇಕು; ಮೊದಲನೇ ಸುತ್ತಿನ ವೇಳಾಪಟ್ಟಿ ಪ್ರಕಟಿಸಿದ ನಂತರ ಪ್ರಾಧಿಕಾರದ ವೆಬ್‌ಸೈಟಿನ ಲಿಂಕ್‌ನಲ್ಲಿ ಆಯ್ಕೆ (options) ಗಳನ್ನು ಆದ್ಯತಾ ಕ್ರಮದಲ್ಲಿ ದಾಖಲಿಸಬಹುದು ಎಂದು ಅವರು ವಿವರಿಸಿದರು.

ಅರ್ಹತಾ ಕಂಡಿಕೆಗಳಾದ ಬಿ, ಸಿ, ಡಿ, ಐ, ಜೆ, ಕೆ, ಎಲ್, ಎಮ್, ಎನ್, ಜೆಡ್, ಗಳನ್ನು ನಮೂದಿಸಿರುವ ಅಭ್ಯರ್ಥಿಗಳಿಗೆ ಆಫ್‌ಲೈನ್ ಪರಿಶೀಲನೆಗೆ ಹಾಜರಾಗಲು ಪ್ರತ್ಯೇಕ ವೇಳಾಪಟ್ಟಿ ನೀಡಿ ಪರಿಶೀಲನೆ ಮಾಡಲಾಗಿರುತ್ತದೆ ಮತ್ತು ಅರ್ಹ ಅಭ್ಯರ್ಥಿಗಳಿಗೆ ವೆರಿಫಿಕೇಶನ್ ಸ್ಲಿಪ್ ನೀಡಲಾಗಿದೆ. ಈ ಅಭ್ಯರ್ಥಿಗಳು ಮೇಲಿನ ಲಿಂಕ್‌ಅನ್ನು ಪರಿಶೀಲಿಸಬೇಕಾಗಿಲ್ಲ. ಆಫ್‌ಲೈನ್ ಪರಿಶೀಲನೆಗೆ ಗೈರು ಹಾಜರಾಗಿರುವ ಅಭ್ಯರ್ಥಿಗಳು ಸೀಟು ಹಂಚಿಕೆಗೆ ಅರ್ಹತೆ ಹೊಂದಿರುವುದಿಲ್ಲ ಎಂದು ಸ್ಪಷ್ಟಪಡಿಸಲಾಗಿದೆ.

Exit mobile version