Site icon Vistara News

DK Shivakumar: ನನಗೆ ಸಿಬಿಐಗಿಂತ ಲೋಕಾಯುಕ್ತದಿಂದಲೇ ಹೆಚ್ಚಿನ ಹಿಂಸೆ; ಡಿ.ಕೆ.ಶಿವಕುಮಾರ್ ಆರೋಪ!

DK Shivakumar

ಬೆಂಗಳೂರು: ಅಕ್ರಮ ಆಸ್ತಿ ಗಳಿಕೆ ಪ್ರಕರಣವನ್ನು ರಾಜ್ಯ ಸರ್ಕಾರ ಸಿಬಿಐನಿಂದ ಲೋಕಾಯುಕ್ತಕ್ಕೆ ವರ್ಗಾವಣೆ ಮಾಡಿತ್ತು. ಆದರೆ ಸಿಬಿಐನವರು ತನಿಖೆಯನ್ನು ನಿಲ್ಲಿಸದೆ ಮುಂದುವರಿಸಿದ್ದಾರೆ. ನೂರಕ್ಕೂ ಹೆಚ್ಚು ನನ್ನ ಸ್ನೇಹಿತರು, ಕುಟುಂಬಸ್ಥರಿಗೆ ತುಂಬಾ ಕಿರುಕುಳ ನೀಡುತ್ತಿದ್ದಾರೆ. ಇದೇ ಕೆಲಸವನ್ನು ಲೋಕಾಯುಕ್ತ ಕೂಡ ಮುಂದುವರಿಸಿದೆ, ಅವರಿಂದಲೂ ಕಿರುಕುಳ ಆಗುತ್ತಿದೆ ಎಂದು ಡಿಸಿಎಂ ಡಿ.ಕೆ.ಶಿವಕುಮಾರ್ (DK Shivakumar) ಹೇಳಿದರು.

ಲೋಕಾಯುಕ್ತ ವಿಚಾರಣೆ ನಂತರ ಲೋಕಾಯುಕ್ತ ಕಚೇರಿ ಬಳಿ ಮಾಧ್ಯಮಗಳ ಪ್ರಶ್ನೆಗಳಿಗೆ ಗುರುವಾರ ಪ್ರತಿಕ್ರಿಯೆ ನೀಡಿದ ಅವರು, ಲೋಕಾಯುಕ್ತ ಕಳೆದ ಆರು ತಿಂಗಳಿನಿಂದ ತನಿಖೆ ಮಾಡುತ್ತಿದೆ. ಎರಡು ಗಂಟೆಗಳಿಗೂ ಹೆಚ್ಚು ಕಾಲ ನನ್ನನ್ನು ವಿಚಾರಣೆ ಮಾಡಿದರು. ಇವರಿಗಿಂತ ಸಿಬಿಐನವರೇ ಪರವಾಗಿಲ್ಲ. ಲೋಕಾಯುಕ್ತದವರು ವಿಚಿತ್ರ ಪ್ರಶ್ನೆಗಳನ್ನು ಕೇಳುತ್ತಿದ್ದಾರೆ. ಸಿಬಿಐನವರೇ ಇನ್ನು ನನಗೆ ಪ್ರಶ್ನೆಗಳನ್ನೇ ಕೇಳಿಲ್ಲ, ಒಂದು ದಿನವೂ ವಿಚಾರಣೆಗೆ ಕರೆಯಲಿಲ್ಲ. ಆದರೆ ಲೋಕಾಯುಕ್ತದವರು ಈಗ ಹಿಂಸೆ ಕೊಡುತ್ತಿದ್ದಾರೆ ಎಂದು ದೂರಿದರು.

ಇದನ್ನೂ ಓದಿ: CM Siddaramaiah: ಬುಡಕ್ಕೆ ನೀರು ಬಂದಾಗ ಬಿಜೆಪಿ ನಾಯಕರಿಗೆ ಜಾತಿ ನೆನಪಾಗುತ್ತದೆ! ಸಿದ್ದರಾಮಯ್ಯ ಗೇಲಿ

ಲೋಕಾಯುಕ್ತದ ಪ್ರಶ್ನೆಗಳಿಗೆ ಉತ್ತರಗಳನ್ನು ಕೊಟ್ಟಿದ್ದೇನೆ. ಒಂದಷ್ಟು ವಿಚಾರಗಳಲ್ಲಿ ಸ್ಪಷ್ಟನೆ ಪಡೆದುಕೊಳ್ಳಲು ಪ್ರಶ್ನೆಗಳನ್ನು ಕೇಳಿದ್ದು,ಇದಕ್ಕೆ ಸಂಬಂಧಿಸಿದಂತೆ ನನ್ನ ಬಳಿ ಇರುವ ಪೂರಕವಾದ ದಾಖಲೆಗಳನ್ನು ಸಲ್ಲಿಸುತ್ತೇನೆ ಎಂದು ಅವರು ಹೇಳಿದರು.

ಬುಧವಾರ (ಆ.21ರಂದು) ವಿಚಾರಣೆಗೆ ಹಾಜರಾಗಲು ನೋಟಿಸ್ ನೀಡಿದ್ದರು. ಆಲಮಟ್ಟಿ ಅಣೆಕಟ್ಟೆಗೆ ಬಾಗಿನ ಅರ್ಪಿಸುವ ಕಾರ್ಯಕ್ರಮವಿದ್ದ ಕಾರಣಕ್ಕೆ ಇಂದು (ಗುರುವಾರ) ಹಾಜರಾಗುತ್ತೇನೆ ಎಂದು ಮನವಿ ಮಾಡಿಕೊಂಡಿದ್ದೆ ಎಂದು ತಿಳಿಸಿದರು. ಯಾವ ದಾಖಲೆಗಳನ್ನು ಕೇಳಿದ್ದಾರೆ ಎಂದು ಪ್ರಶ್ನಿಸಿದಾಗ, ನಾನು ಅದನ್ನೆಲ್ಲಾ ಹೇಳಲು ಆಗುವುದಿಲ್ಲ ಎಂದರು. ಮತ್ತೊಮ್ಮೆ ವಿಚಾರಣೆಗೆ ಹಾಜರಾಗಬೇಕೆ ಎಂದು ಕೇಳಿದಾಗ, ಗೊತ್ತಿಲ್ಲ, ನಾನು ಕೊಟ್ಟಿರುವ ಉತ್ತರ, ದಾಖಲೆಗಳನ್ನು ಪರಿಶೀಲಿಸಿ ಮತ್ತೊಮ್ಮೆ ಕರೆಯುತ್ತಾರೆ ಎಂದು ತಿಳಿಸಿದರು.

ಇದನ್ನೂ ಓದಿ: Home Remedies: ಮಕ್ಕಳನ್ನು ಕಾಡುವ ಶೀತ-ಕೆಮ್ಮಿಗೆ ಮನೆಯಲ್ಲೇ ಇದೆ ಉಪಶಮನ

ದೆಹಲಿ ಭೇಟಿಯ ಬಗ್ಗೆ ಕೇಳಿದಾಗ “ನಾನು ಮತ್ತು ಮುಖ್ಯಮಂತ್ರಿಗಳು ಹೋಗುತ್ತಿದ್ದೇವೆ” ಎಂದು ಉತ್ತರಿಸಿದರು.

Exit mobile version