ಬೆಂಗಳೂರು: ಮಧುಮೇಹದ ನಿಯಂತ್ರಣ ಹಾಗೂ ಜೀವನಶೈಲಿಯ ಕುರಿತು ಅರಿವು ಮೂಡಿಸುವ ಕಾರ್ಯಕ್ರಮವೊಂದನ್ನು ಬಿಜಿಎಸ್ ಗ್ಲೋಬಲ್ ಇನ್‌ಸ್ಟಿಟ್ಯೂಟ್ ಆಫ್ ಮೆಡಿಕಲ್ ಸೈನ್ಸಸ್‌ನ ಜರಲ್ ಮೆಡಿಸಿನ್ ವಿಭಾಗವು ನವೆಂಬರ್ 29 ರಂದು ಹಮ್ಮಿಕೊಂಡಿದೆ.
ಬಿಜಿಎಸ್ ಜಿಮ್ಸ್ ಆಸ್ಪತ್ರೆಯ ನೆಲ ಮಹಡಿಯಲ್ಲಿ ನಡೆಯುವ ಕಾರ್ಯಕ್ರಮದಲ್ಲಿ ಮಧುಮೇಹಕ್ಕೆ ಸಂಬಂಧಿಸಿದ ಹಲವು ಸಂಗತಿಗಳನ್ನು ಸರಳವಾಗಿ ತಿಳಿಸಿಕೊಡಲಾಗುತ್ತದೆ. ಮಧುಮೇಹಿಗಳು ಸೇವಿಸಬಹುದಾದ ಮತ್ತು ಸೇವಿಸಲೇಬಾರದ ಆಹಾರ ಪದಾರ್ಥಗಳ ಪ್ರದರ್ಶನವನ್ನೂ ಆಯೋಜಿಸಲಾಗುತ್ತಿದೆ.
ಯಾವ ಆಹಾರಗಳು ಮಧುಮೇಹಿಗಳಿಗೆ ಸೂಕ್ತ? ಅಲ್ಪ ಪ್ರಮಾಣದಲ್ಲಿ ಸೇವಿಸಬಹುದಾದ ಆಹಾರ ಪದಾರ್ಥಗಳು ಯಾವುವು? ಯಾವ ಆಹಾರಗಳನ್ನು ಸೇವಿಸಲೇಬಾರದು? ಎಂಬ ಪ್ರಶ್ನೆಗಳಿಗೆ ಆಹಾರ ಪದಾರ್ಥಗಳ ಸಹಿತ ಮಾಹಿತಿ ನೀಡಲಾಗುತ್ತದೆ. ತಜ್ಞ ವೈದ್ಯರು ಉಪಸ್ಥಿತರಿದ್ದು ಅಭಿಪ್ರಾಯ ಹಂಚಿಕೊಳ್ಳಲಿದ್ದಾರೆ. ಸೂಕ್ತ ಮಾರ್ಗದರ್ಶನ ನೀಡಲಿದ್ದಾರೆ.
ಜಗತ್ತಿನಲ್ಲಿ ಕಳೆದ 30 ವರ್ಷಗಳ ಅವಧಿಯಲ್ಲಿ ಮಧುಮೇಹದಿಂದ ಬಳಲುತ್ತಿರುವವರ ಸಂಖ್ಯೆಯು 108 ದಶಲಕ್ಷಗಳಿಂದ 420 ದಶಲಕ್ಷಕ್ಕೆ ಏರಿಕೆಯಾಗಿದೆ. ಹೆಚ್ಚುತ್ತಿರುವ ಮಧುಮೇಹಿಗಳ ಸಂಖ್ಯೆಯು ಆರೋಗ್ಯ ವ್ಯವಸ್ಥೆಯ ಮೇಲಿನ ಒತ್ತಡವನ್ನು ಹೆಚ್ಚಿಸಿದೆ. ಮಧುಮೇಹದ ಜತೆಗೆ ಜೀವಿಸುತ್ತಿರುವವರಿಗೆ ತಮ್ಮ ಸಮಸ್ಯೆಯ ಸ್ಥಿತಿಗತಿ ಕುರಿತು ಅರ್ಥ ಮಾಡಿಕೊಳ್ಳಲು ಹಾಗೂ ಆರೋಗ್ಯಯುತ ಜೀವನ ನಡೆಸುವ ನಿಟ್ಟಿನಲ್ಲಿ ಸ್ವಯಂ ನಿಯಂತ್ರಣ ಕ್ರಮಗಳನ್ನು ಕೈಗೊಳ್ಳುವುದಕ್ಕೆ ಪೂರಕವಾಗಿ ಈ ಕುರಿತ ಶಿಕ್ಷಣ ದೊರಕಿಸುವುದು ಅಗತ್ಯವಾಗಿದೆ.
ಹೀಗಾಗಿಯೇ ಮಧುಮೇಹದ ವಿರುದ್ಧದ ಹೋರಾಟದ ಕುರಿತು ಶಿಕ್ಷಣ ನೀಡುವುದು ಹಾಗೂ ಪ್ರಾಯೋಗಿಕವಾಗಿ ಜಾಗೃತಿ ಮೂಡಿಸುವುದಕ್ಕಾಗಿ ಈ ಕಾರ್ಯಕ್ರಮ ಆಯೋಜಿಸಲಾಗಿದೆ ಎಂದು ಬಿಜಿಎಸ್ ಗ್ಲೋಬಲ್ ಇನ್‌ಸ್ಟಿಟ್ಯೂಟ್ ಆಫ್ ಮೆಡಿಕಲ್ ಸೈನ್ಸಸ್‌ನ ಜನರಲ್ ಮೆಡಿಸಿನ್ ವಿಭಾಗ ಮುಖ್ಯಸ್ಥರಾದ ಡಾ. ಬಾಲಚಂದ್ರ ಜಿ. ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಇದನ್ನೂ ಓದಿ | Vistara Health | ಜೀವನಶೈಲಿ ಆಧರಿತ ಕಾಯಿಲೆಗಳಿಗೆ ಯುವಕರೇ ಹೆಚ್ಚು ಬಲಿ: ಡಾ. ಸಿ. ಎನ್. ಮಂಜುನಾಥ್ ಆತಂಕ