ಬೆಂಗಳೂರು: ಕರ್ನಾಟಕ ರಾಜ್ಯ ಕೈಗಾರಿಕಾ ಮತ್ತು ಮೂಲಸೌಕರ್ಯ ಅಭಿವೃದ್ಧಿ ನಿಗಮ (KSIIDC) ನಿಯಮಿತವು 2022-23ನೇ ಆರ್ಥಿಕ ವರ್ಷದಲ್ಲಿ ತಾನು ಗಳಿಸಿರುವ ನಿವ್ವಳ ಲಾಭಾಂಶದಲ್ಲಿ ಶೇಕಡ 30ರಷ್ಟನ್ನು ಡಿವಿಡೆಂಡ್ (Dividend Declared) ಎಂದು ಘೋಷಿಸಿದೆ. ಈ ಬಾಬ್ತಿನ ₹19.84 ಕೋಟಿ ರೂ.ಗಳನ್ನು ಭಾರಿ ಮತ್ತು ಮಧ್ಯಮ ಕೈಗಾರಿಕಾ ಸಚಿವ ಎಂ.ಬಿ ಪಾಟೀಲ (M.B Patil) ಗುರುವಾರ ಚೆಕ್ ರೂಪದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯನವರಿಗೆ (CM Siddaramaiah) ವಿಧಾನಸೌಧದಲ್ಲಿ ಹಸ್ತಾಂತರಿಸಿದರು.
`ನಿಗಮದಲ್ಲಿ ಸರಕಾರವು 10 ರೂ. ಮುಖಬೆಲೆಯ 69.47 ಕೋಟಿಗೂ ಹೆಚ್ಚು ಷೇರುಗಳನ್ನು ಹೊಂದಿದ್ದು, 2022-23ರಲ್ಲಿ ಇವುಗಳ ಮೌಲ್ಯ 694.70 ಕೋಟಿ ರೂ.ಗಳಿಗೂ ಹೆಚ್ಚಾಗಿತ್ತು. ಫೆ.20ರಂದು ನಡೆದ ನಿಗಮದ ಆಡಳಿತ ಮಂಡಲಿಯ ಸಭೆಯಲ್ಲಿ ಇದರಲ್ಲಿ ಶೇಕಡ 30ರಷ್ಟನ್ನು ಡಿವಿಡೆಂಡ್ ಎಂದು ಘೋಷಿಸುವ ನಿರ್ಣಯವನ್ನು ಮಾಡಲಾಗಿತ್ತು. ಅದರಂತೆ, ಈ ಲಾಭಾಂಶವನ್ನು ಸರಕಾರಕ್ಕೆ ಹಸ್ತಾಂತರಿಸಲಾಗುತ್ತಿದೆ’ ಎಂದು ಸಚಿವ ಪಾಟೀಲ ತಿಳಿಸಿದರು.
ಮೂಲಸೌಕರ್ಯ ಇಲಾಖೆ ಕಾರ್ಯದರ್ಶಿ ಎನ್ ಮಂಜುಳಾ, ನಿಗಮದ ವ್ಯವಸ್ಥಾಪಕ ನಿರ್ದೇಶಕ ಡಾ. ಬಿ.ಸಿ ಸತೀಶ್, ಕಾರ್ಯನಿರ್ವಾಹಕ ನಿರ್ದೇಶಕ ಡಿ.ಪಿ ಪ್ರಕಾಶ ಮುಂತಾದವರಿದ್ದರು.
ಇದನ್ನೂ ಓದಿ : Highest Dividend Paying Stocks: 2022ರಲ್ಲಿ ಅತಿ ಹೆಚ್ಚು ಡಿವಿಡೆಂಡ್ ನೀಡಿದ ಷೇರುಗಳು
KREDL Dividends : ರಾಜ್ಯ ಸರ್ಕಾರಕ್ಕೆ 20.96 ಕೋಟಿ ಡಿವಿಡೆಂಡ್ ಸಲ್ಲಿಸಿದ ಕ್ರೆಡಲ್
ಬೆಂಗಳೂರು : ಕ್ರೆಡಲ್ ಸಂಸ್ಥೆಯು 2021-22ನೇ ಸಾಲಿನಲ್ಲಿ ಗಳಿಸಿದ್ದ 20.96 ಕೋಟಿ ರೂ. ಲಾಭಾಂಶವನ್ನು ಇಂಧನ ಸಚಿವ ಕೆ.ಜೆ ಜಾರ್ಜ್ ಅವರು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ (KREDL Dividends) ಕಳೆದ ವರ್ಷದ ಜುಲೈನಲ್ಲಿ ಹಸ್ತಾಂತರಿಸಿತ್ತು.
ಕರ್ನಾಟಕ ನವೀಕರಿಸಬಹುದಾದ ಇಂಧನ ಅಭಿವೃದ್ಧಿ ನಿಯಮಿತ (ಕ್ರೆಡಲ್) 2021-22ನೇ ಸಾಲಿನಲ್ಲಿ ಗಳಿಸಿದ್ದ 69.87 ಕೋಟಿ ರೂ. ಮೊತ್ತದ ನಿವ್ವಳ ಲಾಭದ ಮೇಲೆ ಶೇ.30 ಲಾಭಾಂಶ (ಡಿವೆಡೆಂಡ್)20.96 ಕೋಟಿ ರೂ. ಮೊತ್ತದ ಡಿಡಿಯನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ವಿಧಾನಸೌಧದಲ್ಲಿ ಸ್ವೀಕರಿಸಿದ್ದರು.
ಈ ಸಂದರ್ಭದಲ್ಲಿ ಅಪರ ಮುಖ್ಯ ಕಾರ್ಯದರ್ಶಿ ಗೌರವ್ ಗುಪ್ತ, ಕ್ರೆಡಲ್ ವ್ಯವಸ್ಥಾಪಕ ನಿರ್ದೇಶಕ ಕೆಪಿ ರುದ್ರಪ್ಪಯ್ಯ ಉಪಸ್ಥಿತರಿದ್ದರು. ಕಳೆದ ಸೆಪ್ಟೆಂಬರ್‌ನಲ್ಲಿ ನಡೆದ ಕ್ರೆಡಲ್‌ನ 101ನೇ ನಿರ್ದೇಶಕ ಮಂಡಳಿ ಸಭೆಯಲ್ಲಿ 2021-22ನೇ ಸಾಲಿನ ಲೆಕ್ಕಪತ್ರಗಳನ್ನು ಮಂಡಿಸಿತ್ತು. ಕಳೆದ ವರ್ಷ ಡಿಸೆಂಬರ್‌ನಲ್ಲಿ ನಡೆದ ಶೇರುದಾರರ 26ನೇ ಸಾಮಾನ್ಯ ಸಭೆಯಲ್ಲಿ ಇದಕ್ಕೆ ಅನುಮೋದನೆ ನೀಡಲಾಗಿತ್ತು. ಪವನ ವಿದ್ಯುತ್, ಸೌರ ವಿದ್ಯುತ್ ಸೇರಿದಂತೆ ನವೀಕರಿಸಬಹುದಾದ ಇಂಧನ ವಲಯದಲ್ಲಿ ಕ್ರೆಡಲ್ ಕಾರ್ಯನಿರ್ವಹಿಸುತ್ತಿದೆ. ಕರ್ನಾಟಕದಲ್ಲಿ 2023ರ ಏಪ್ರಿಲ್ ಅಂತ್ಯಕ್ಕೆ 1.55 ಲಕ್ಷ ಮೆಗಾ ವ್ಯಾಟ್ ಸಾಮರ್ಥ್ಯದಲ್ಲಿ ನವೀಕರಿಸಬಹುದಾದ ಇಂಧನ ವಲಯ ಪ್ರಗತಿ ಸಾಧಿಸಿತ್ತು. ಇದರಲ್ಲಿ ಪವನ, ಕಿರುಜಲ ವಿದ್ಯುತ್, ಬಯೊಮಾಸ್, ಸೌರಶಕ್ತಿ ವಿದ್ಯುತ್ ಉತ್ಪಾದನೆ ವಲಯ ಇತ್ತು.