Site icon Vistara News

DK Shivakumar : ಬೆಂಗಳೂರಿಗರಿಗೆ ಯಾವುದೇ ಕಾರಣಕ್ಕೂ ಭೂಮಿ ಮಾರಬೇಡಿ ಎಂದ ಡಿಕೆಶಿ!

DK Shivakumar Kanakapura

ಕನಕಪುರ: ಶಿವನಹಳ್ಳಿ ಗ್ರಾಮ ಹೆದ್ದಾರಿಯ ಪಕ್ಕದಲ್ಲಿದೆ, ಯಾವುದೇ ಕಾರಣಕ್ಕೂ ಭೂಮಿಯನ್ನು ಬೆಂಗಳೂರಿಗರಿಗೆ ಮಾರಾಟ ಮಾಡಬೇಡಿ ಎಂದು ಕನಕಪುರ ತಾಲೂಕಿನ ಈ ಗ್ರಾಮಸ್ಥರಲ್ಲಿ ಡಿಸಿಎಂ ಡಿ.ಕೆ.ಶಿವಕುಮಾರ್ (DK Shivakumar) ಅವರು ಮನವಿ ಮಾಡಿದರು. ಶಿವನಹಳ್ಳಿ ಗ್ರಾಮದ ವೀರಭದ್ರಸ್ವಾಮಿ ದೇವಸ್ಥಾನದ (Veerabhadra swamy temple) ಜೀರ್ಣೋದ್ಧಾರದ ಭೂಮಿ ಪೂಜೆ ಮತ್ತು ಶಿಲಾ ಪೂಜಾ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು “ಕೆಎಂಎಫ್ ಡೇರಿ ಇದೆ, ಕನಕಪುರ ಪಟ್ಟಣವಾಗಿ ಇಲ್ಲಿಯ ತನಕ ಬೆಳೆಯಲಿದೆ. ಆದ್ದರಿಂದ, ಎಲ್ಲರಲ್ಲಿ ಮನವಿ ಮಾಡುತ್ತೇನೆ, ಭೂಮಿ ಮಾರಾಟ ಮಾಡಬೇಡಿʼʼ ಎಂದು ಹೇಳಿದರು.

ʻʻನಿಮ್ಮ ಜೇಬಿಗೆ ನಾನು ನೇರವಾಗಿ ದುಡ್ಡು ಹಾಕಲು, ಮನೆ ಕಟ್ಟಿಸಿಕೊಡಲು ಆಗುವುದಿಲ್ಲ, ನಿಮ್ಮ ಆಸ್ತಿ ಮೌಲ್ಯಗಳನ್ನು ಹತ್ತು ಪಟ್ಟು ಹೆಚ್ಚು ಮಾಡುವ ಶಕ್ತಿ ದೇವರು ನೀಡಿದ್ದಾನೆ. ನಿಮ್ಮ ಮಕ್ಕಳು, ಮೊಮ್ಮಕ್ಕಳಿಗೆ ವಿದ್ಯೆ ನೀಡಬಹುದು ಅಷ್ಟೇ. ಕನಕಪುರದವರು ರಾಮನಗರ ಜಿಲ್ಲೆಯವರಲ್ಲ, ಬೆಂಗಳೂರು ಜಿಲ್ಲೆಯವರು ಎಂಬುದನ್ನು ನೆನಪಿನಲ್ಲಿ ಇಟ್ಟುಕೊಳ್ಳಿʼʼ ಎಂದು ಕಿವಿಮಾತು ಹೇಳಿದರು. ಪಿ.ಜಿ.ಆರ್‌ ಸಿಂಧ್ಯಾ ಅವರು ಕೂಡಾ ದಶಕಗಳಿಂದಲೂ ಭೂಮಿ ಮಾರಾಟ ಮಾಡುತ್ತಾ ಬಂದಿದ್ದರು ಎಂದು ಹೇಳಿದರು.

ʻʻಒಂದಲ್ಲ ಒಂದು ದಿನ ಇಲ್ಲಿನ ಗ್ರಾಮಗಳು ಬೆಂಗಳೂರು ಆಗೇ ಆಗುತ್ತವೆ, ಪ್ರತಿ ಅಡಿ ಲೆಕ್ಕದಲ್ಲಿ ಬೆಲೆ ಕಟ್ಟಲಾಗುತ್ತದೆ. ಆದ ಕಾರಣ ನನ್ನ ಮಾತನ್ನು ನೆನಪಿನಲ್ಲಿ ಇಟ್ಟುಕೊಳ್ಳಿ,ʼʼ ಎಂದು ಹೇಳಿದ ಡಿ.ಕೆ. ಶಿವಕುಮಾರ್‌ ಅವರು, ಕನಕಪುರ ಜಿಲ್ಲಾ ಕೇಂದ್ರ ಮಾಡುವ ಕುರಿತು ಸಾರ್ವಜನಿಕವಾಗಿ ಚರ್ಚೆ ಮಾಡಲು ಹೋಗುವುದಿಲ್ಲ ಎಂದರು.

ಭಕ್ತಿಗೆ ಎಲ್ಲಾ ದೇವರೂ ಒಂದೇ ಎಂದ ಶಿವಕುಮಾರ್‌

ಹಿಂದೂ ಧರ್ಮದಲ್ಲಿ ಸಾವಿರಾರು ದೇವರುಗಳನ್ನು ಪೂಜಿಸಿಕೊಂಡು ಬರುತ್ತಿರುವ ವಿಚಿತ್ರ ಆಚರಣೆ,‌ ನಂಬಿಕೆ ಮಾಡಿಕೊಂಡು ಬಂದಿದ್ದೇವೆ. ಬೇರೆಯವರೆಲ್ಲಾ ಒಂದೇ ದೇವರು ಪೂಜಿಸುತ್ತಾರೆ. ಭಕ್ತಿಗೆ ಯಾವುದೇ ದೇವರಿಲ್ಲ ಎಂದು ನುಡಿದರು.

ವೀರಭದ್ರ ಶಿವನ ಸ್ವರೂಪ, ದೇವರುಗಳನ್ನೇ ಕಾಪಾಡುವ ದೇವರು ಈತ. ಧರ್ಮ ಯಾವುದಾದರೂ ತತ್ವವೊಂದೇ, ನಾಮ ನೂರಾದರೂ ದೈವವೊಂದೇ, ಪೂಜೆ ಯಾವುದಾದರೂ ಭಕ್ತಿಯೊಂದೇ, ಕರ್ಮ ಯಾವುದಾದರೂ ನಿಷ್ಠೆಯೊಂದೆ, ದೇವನೊಬ್ಬ ನಾಮ ಹಲವು ಎನ್ನುವ ಮಾತಿನಂತೆ ನಾವು ನಡೆಯಬೇಕು ಎಂದು ತಿಳಿಸಿದರು.

ವೀರಭದ್ರ ದೇವಸ್ಥಾನ ಉಳಿಸಲು ಸಾಕಷ್ಟು ಪ್ರಯತ್ನ ಮಾಡಲಾಯಿತು. ಸಂಸದರಾದ ಡಿ.ಕೆ.ಶಿವಕುಮಾರ್ ಅವರು ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಬಳಿ ಮಾತನಾಡಿದರು, ಯೋಜನಾ ನಕ್ಷೆ ಬದಲಾಯಿಸಲು ಆಗಲಿಲ್ಲ. ಈಗ ಆ ದೇವರ ಅನುಗ್ರಹದಿಂದ ಹೊಸ ದೇವಸ್ಥಾನ ನಿರ್ಮಾಣವಾಗುತ್ತಿದೆ ಎಂದರು.

300ಕ್ಕೂ ಅಧಿಕ ದೇವಸ್ಥಾನ ಜೀರ್ಣೋದ್ಧಾರ ಮಾಡಿದ್ದೇನೆ ಎಂದ ಡಿಕೆಶಿ

ಎಲ್ಲರ ಕೈಗಳು ಇರುವುದು ಕಾಯಕ ಮಾಡಲು, ದಾನ‌ಮಾಡಲು, ಡಿ.ಕೆ.ಶಿವಕುಮಾರ್, ಪಿ.ಜಿ.ಆರ್.ಸಿಂಧ್ಯಾ ಎಲ್ಲರ ಕೈಗಳು ಇರುವುದೇ ದಾನ ಮಾಡಲು. ದೇವರ ಕೆಲಸ ಮಾಡುವುದು ನಮ್ಮೆಲ್ಲರ ಕರ್ತವ್ಯ. ಕನಕಪುರ ತಾಲೂಕಿನಲ್ಲಿ ಸುಮಾರು 300 ಕ್ಕೂ ಹೆಚ್ಚು ದೇವಸ್ಥಾನಗಳಿಗೆ ಹೊಸ ರೂಪ ಕೊಟ್ಟಿದ್ದೇವೆ. ನಾವು ಈ ಕ್ಷೇತ್ರದ ಪ್ರತಿನಿಧಿಯಾದ ಮೇಲೆ ಎಷ್ಟು ದೇವಾಲಯಗಳನ್ನು ಜೀರ್ಣೋದ್ಧಾರ ಮಾಡಿರುವ ಕುರಿತು ಪುಸ್ತಕವನ್ನೇ ಬರೆಯಬಹುದು ಎಂದರು.

ಪ್ರಸ್ತುತ ವೀರಭದ್ರನ ದೇವಸ್ಥಾನಕ್ಕೆ ಎಷ್ಟು ಸಹಾಯ ಮಾಡುತ್ತೇನೆ ಎಂದು ಸಾರ್ವಜನಿಕವಾಗಿ ಹೇಳುವುದಿಲ್ಲ. ನಂತರ ಅದನ್ನೇ ಒಂದು ದೊಡ್ಡ ಸುದ್ದಿ ಮಾಡುತ್ತಾರೆ. ನಮಗೆ ವಿಚಾರ, ಆಚಾರ ಮುಖ್ಯ. ಪ್ರಚಾರವಲ್ಲ, ಈ ದೇವಸ್ಥಾನದಲ್ಲಿ ಪ್ರತಿ ಕುಟುಂಬದ ಹಣವಿರಬೇಕು ಎಂದು ತಿಳಿಸಿದರು.

ಇದನ್ನೂ ಓದಿ: HD Kumaraswamy : ಜಾರ್ಜ್‌ ಮನೆಯಲ್ಲಿ ನಡೆಸಿದ ಸಿದ್ದಲೀಲೆ ಬಹಿರಂಗವಾಗಲಿ; HDK ಸವಾಲು

ಉಪಮುಖ್ಯಮಂತ್ರಿ ಸ್ಥಾನ ಬೆಂಗಳೂರಿಗೆ ಸೀಮಿತ. ಇದು ನನ್ನ ಊರಿನ ಕೆಲಸ. ನಮ್ಮ ಕ್ಷೇತ್ರದ ಯಾವುದೇ ಕೆಲಸ ಇದ್ದರು ನಾವು ಹಿಂಜರಿಯುವುದಿಲ್ಲ, ಆದ ಕಾರಣ ಮೈಸೂರಿನಲ್ಲಿ ಪ್ರಮುಖ ಕೆಲಸವಿದ್ದರೂ ನಾನು ನಮ್ಮ ಕ್ಷೇತ್ರಕ್ಕೆ ಬಂದೆ ಎಂದು ಹೇಳಿದರು.

ಕಬ್ಬಾಳಮ್ಮನ ಗುಡಿಯನ್ನು ಮುಟ್ಟಬೇಡ ಎಂದಿದ್ದರು

ಕಬ್ಬಾಳಮ್ಮನ ದೇವಸ್ಥಾನ ಜೀರ್ಣೋದ್ಧಾರ ಮಾಡುವ ವೇಳೆ, ಒಂದಷ್ಟು ಜನ ದೇವಿಯನ್ನು ಮುಟ್ಟಬೇಡ, ಸುಟ್ಟು ಹೋಗುವೆ ಎಂದರು. ನಂತರ, ನಾನು ನೊಣವಿನಕೆರೆ ಸ್ವಾಮೀಜಿಗಳ ಬಳಿ ಈ ವಿಚಾರ ಪ್ರಸ್ತಾಪ ಮಾಡಿದಾಗ ಒಬ್ಬರ ಹೆಸರು ಸೂಚಿಸಿ ಇವರ ಕಡೆಯಿಂದ ನೆರವೇರಿ ಭಿನ್ನ ಮಾಡು ಎಂದರು. ಈಗ ಅದ್ಭುತವಾದ ದೇವಸ್ಥಾನ ನಿರ್ಮಾಣವಾಗಿದೆ ಎಂದರು.

ʻʻನಿಂಬೆಗಿಂ ಹುಳಿಯಿಲ್ಲ, ತುಂಬೆಗಿಂ ಕರಿದಿಲ್ಲ, ನಂಬಿಗೆಯಿಂತಧಿಕ ಗುಣವಿಲ್ಲ, ದೈವವುಂ ಶುಭವಿಂದಿಲ್ಲ ಸರ್ವಜ್ಞʼʼ ಎನ್ನುವ ಮಾತಿನಂತೆ ಶಿವನಿಗಿಂತ ದೊಡ್ಡ ದೇವರಿಲ್ಲ, ನಂಬಿಕೆಗಿಂತ ದೊಡ್ಡ ದೇವರಿಲ್ಲ, ಆದ ಕಾರಣ ಎಲ್ಲರೂ ನಂಬಿಕೆಯಿಟ್ಟು ಕೆಲಸ ಮಾಡಿ ಎಂದು ಹೇಳಿದರು.

Exit mobile version