ಬೆಂಗಳೂರು: ಕೈಗೆ ಗಾಜು ಚುಚ್ಚಿ ಗಾಯಗೊಂಡ ಯುವಕನೊಬ್ಬ ವೈದ್ಯರಿಂದ ಚಿಕಿತ್ಸೆ ಪಡೆದ ಬಳಿಕ ಬಲಿಯಾದ ಘಟನೆ ದಾಸರಹಳ್ಳಿಯಲ್ಲಿ ನಡೆದಿದೆ. ವೈದ್ಯರಿಂದ ನಿರ್ಲಕ್ಷ್ಯ ನಡೆದಿದೆ ಎಂದು ಪೋಷಕರು ಆರೋಪಿಸಿದ್ದಾರೆ.
ಸತೀಶ್ (24) ವೈದ್ಯರ ನಿರ್ಲಕ್ಷ್ಯಕ್ಕೆ ಬಲಿಯಾದ ಯುವಕ. ದಾಸರಹಳ್ಳಿಯ ಮಧು ಆಸ್ಪತ್ರೆ ವೈದ್ಯರ ಮೇಲೆ ಸತೀಶ್ ಕುಟುಂಬಸ್ಥರ ಆರೋಪ. ಕಳೆದ ಭಾನುವಾರ ಮದ್ಯ ಸೇವಿಸಿದ್ದ ಸತೀಶ್ ನೆಲಕ್ಕೆ ಬಿದ್ದಾಗ ಕೈಗೆ ಗಾಜು ಚುಚ್ಚಿ ರಕ್ತನಾಳ ಕತ್ತರಿಸಲ್ಪಟ್ಟಿತ್ತು. ರಕ್ತಸ್ರಾವ ಕೂಡ ಆಗಿ, ಹೆಚ್ಚಿನ ರಕ್ತ ಹೋಗಿತ್ತು. ಹೀಗಾಗಿ ಸತೀಶನನ್ನು ಭಾನುವಾರ ರಾತ್ರಿ ಮಧು ಆಸ್ಪತ್ರೆಗೆ ಕರೆದೊಯ್ಯಲಾಗಿತ್ತು. ಮಾಗಡಿ ರಸ್ತೆ ದಾಸರಹಳ್ಳಿಯಲ್ಲಿನ ಮಧು ಸೂಪರ್ ಸ್ಪೆಷಾಲಿಟಿ ಆಸ್ಪತ್ರೆ.ಯಲ್ಲಿ ವೈದ್ಯರು ಸರ್ಜರಿ ಮಾಡಬೇಕು ಎಂದಿದ್ದರು. ಸೋಮವಾರ ಸರ್ಜರಿ ಸಹ ಮಾಡಿದ್ದು, ಸತೀಶ ಕುಟುಂಬಸ್ಥರೊಂದಿಗೆ ಮಾತನಾಡಿದ್ದ. ಇದ್ದಕ್ಕಿದ್ದಂತೆ ಮಂಗಳವಾರ ಆತ ಸಾವನ್ನಪ್ಪಿದ್ದಾನೆ.
ಕೈಗೆ ಪೆಟ್ಟಾಗಿದೆ ಅಂತ ಆಸ್ಪತ್ರೆಗೆ ಕರೆದೊಯ್ದರೆ ವೈದ್ಯರು ಪ್ರಾಣವನ್ನೆ ತೆಗೆದಿದ್ದಾರೆ ಎಂದು ಕುಟುಂಬಸ್ಥರು ಆರೋಪಿಸಿದ್ದು, ಕೆಪಿ ಅಗ್ರಹಾರ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ.
ಇದನ್ನೂ ಓದಿ | Student suicide | ಪಾರಾಮೆಡಿಕಲ್ ವಿದ್ಯಾರ್ಥಿನಿ ಮನೆಯಲ್ಲಿ ನೇಣು ಬಿಗಿದುಕೊಂಡು ಆತ್ಮಹತ್ಯೆ